ಮೂಲಂಗಿಯಲ್ಲಿ ಸಿ ವಿಟಮಿನ್ ಹೇರಳವಾಗಿದ್ದು, ಅನೇಕ ಖಾಯಿಲೆಗಳಿಗೆ ರಾಮಬಾಣವಾಗಿದೆ. ಮೂಲಂಗಿಯ ನಿಯಮಿತ ಸೇವನೆಯು ಮಲಬದ್ದತೆ, ಅರಶಿನ ಕಾಮಾಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಹೀಗೆ ಅನೇಕ ಖಾಯಿಲೆಗಳನ್ನು ದೂರವಿಡಲು ಸಹಕಾರಿಯಾಗಿದೆ. ಕ್ಯಾಪ್ಸಿಕಂ ಬಹಳ ರುಚಿಕರ ತರಕಾರಿಯಾಗಿದ್ದು, ಅತ್ಯಂತ ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇದರಲ್ಲಿ ಬಹಳಷ್ಟು ವಿಟಮಿನ್ ಗಳು ಇದ್ದು, ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎನ್ನಲಾಗಿದೆ. ಹಾಗೂ ದಾಳಿಂಬೆಯಲ್ಲಿ ರೋಗನಿರೋಧಕ ಶಕ್ತಿ ಮತ್ತು ಅನೇಕ ಪೋಷಕಾಂಶಗಳಿದ್ದು ಆರೋಗ್ಯದಾಯಕವೆನಿಸಿಕೊಂಡಿದೆ. ಹಾಗಾಗಿ ಈ ಮೂರು ಪದಾರ್ಥಗಳನ್ನು ಸೇರಿಸಿ ಮಾಡಿದ ರುಚಿಕರ ರಾಯಿತವನ್ನು ನೀವು ಒಮ್ಮೆಯಾದರೂ ಮಾಡಿ ನೋಡಿ.
ತಯಾರಿ ಸಮಯ: 15 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್)
- 1 ಮಧ್ಯಮ ಗಾತ್ರದ ಮೂಲಂಗಿ
- 1/2 ದಾಳಿಂಬೆ
- 1/2 ಕ್ಯಾಪ್ಸಿಕಂ
- 1/2 - 1 ಕಪ್ ತೆಂಗಿನ ತುರಿ
- 1/2 - 1 ಕಪ್ ಗಟ್ಟಿ ಮೊಸರು
- 1/2 ಕಪ್ ನೀರು
- ಉಪ್ಪು ರುಚಿಗೆ ತಕ್ಕಷ್ಟು
- 1 ಒಣ ಮೆಣಸಿನಕಾಯಿ
- 1/4 ಟೀಸ್ಪೂನ್ ಸಾಸಿವೆ
- 2 ಟೀಸ್ಪೂನ್ ಅಡುಗೆ ಎಣ್ಣೆ
ಮೂಲಂಗಿ-ಕ್ಯಾಪ್ಸಿಕಂ-ದಾಳಿಂಬೆ ರಾಯಿತ ಮಾಡುವ ವಿಧಾನ:
- ಕ್ಯಾಪ್ಸಿಕಂ ನ್ನು ಹೆಚ್ಚಿ ಒಂದು ಬಾಣಲೆಗೆ ಹಾಕಿ. 1 ಟೀಸ್ಪೂನ್ ಎಣ್ಣೆ ಹಾಕಿ, ಮಧ್ಯಮ ಉರಿಯಲ್ಲಿ ಹುರಿದು, ತಣ್ಣಗಾಗಲು ಬಿಡಿ.
- ಮೂಲಂಗಿ ತುರಿದು, ದಾಳಿಂಬೆ ಬೀಜ ಬಿಡಿಸಿಕೊಂಡು ಒಂದು ಪಾತ್ರೆಗೆ ಹಾಕಿ. ತೆಂಗಿನಕಾಯಿ ಯನ್ನು ನುಣ್ಣಗೆ ರುಬ್ಬಿ ಸೇರಿಸಿ. ಮೊಸರು, ನೀರು ಮತ್ತು ಉಪ್ಪು ಹಾಕಿ ಕಲಸಿ.
- ಈಗ ಹುರಿದು ತಣ್ಣಗಾದ ಕ್ಯಾಪ್ಸಿಕಂ ಸೇರಿಸಿ. ಎಣ್ಣೆ, ಒಣ ಮೆಣಸು ಮತ್ತು ಸಾಸಿವೆ ಒಗ್ಗರಣೆ ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ