ಹುರಿಗಡಲೆ (ಕಡ್ಲೆ ಪಪ್ಪು) ಉಂಡೆ ಅಥವಾ ಪುಟಾಣಿ ಉಂಡಿ ಉತ್ತರ ಕರ್ನಾಟಕದ ಸಿಹಿತಿನಿಸಾಗಿದ್ದು, ಈ ಉಂಡೆಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ಜೊತೆಗೆ ಈ ಉಂಡೆಗೆ ಅತಿ ಕಡಿಮೆ ತುಪ್ಪ ಸಾಕಾಗುತ್ತದೆ. ಇದು ಇಷ್ಟು ಸರಳವಾದ ಉಂಡೆಯಾದರೂ ತಿನ್ನಲು ಮಾತ್ರ ತುಂಬಾ ರುಚಿಯಾಗಿದ್ದು, ಬೇಸನ್ ಲಡ್ಡುವಿನ ರುಚಿಗೆ ಹೋಲುತ್ತದೆ.
ಹುರಿಗಡಲೆ ಉಂಡೆ ತುಂಬಾ ಆರೋಗ್ಯಕರ ಹಾಗೂ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ಕಬ್ಬಿಣದ ಸತ್ವ ಹೊಂದಿದ್ದು, ಅತಿ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಈ ಉಂಡೆ ಮಕ್ಕಳಿಗೆ ಇಷ್ಟವಾಗುತ್ತದೆ. ಹಾಗೂ ಇದು ಮಕ್ಕಳಿಗೆ ಬಹಳ ಒಳ್ಳೆಯದೆಂದು ಕೇಳಿದ್ದೇನೆ. ಹಾಗಾಗಿ ತಪ್ಪದೆ ನಿಮ್ಮ ಮಕ್ಕಳಿಗೆ ಇದನ್ನು ಮಾಡಿ ಕೊಡಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 10 ಲಡ್ದುಗಳು
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 10 ಲಡ್ದುಗಳು
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
- 1 ಕಪ್ ಹುರಿಗಡಲೆ / ಪುಟಾಣಿ / ಕಡ್ಲೆ ಪಪ್ಪು
- 3/4 ಕಪ್ ಸಕ್ಕರೆ
- 1/4 ಕಪ್ ತುಪ್ಪ (ನಾನು ಇನ್ನೂ ಕಡಿಮೆ ಉಪಯೋಗಿಸಿದ್ದೇನೆ.)
- ಒಂದು ಸಣ್ಣ ಚಿಟಿಕೆ ಏಲಕ್ಕಿ ಪುಡಿ
- 2 ಟೇಬಲ್ ಸ್ಪೂನ್ ತುಂಡು ಮಾಡಿದ ಗೋಡಂಬಿ
ಹುರಿಗಡಲೆ ಉಂಡೆ ಅಥವಾ ಪುಟಾಣಿ ಉಂಡಿ ಮಾಡುವ ವಿಧಾನ:
- ಒಂದು ಮಿಕ್ಸಿ ಜಾರಿಗೆ ಸಕ್ಕರೆ ಮತ್ತು ಏಲಕ್ಕಿ ಹಾಕಿ ಪುಡಿ ಮಾಡಿ ಒಂದು ಬಟ್ಟಲಿಗೆ ಹಾಕಿ. ನಂತರ ಹುರಿಗಡಲೆಯನ್ನು ಪುಡಿ ಮಾಡಿ ಅದೇ ಬಟ್ಟಲಿಗೆ ಹಾಕಿ ಕಲಸಿ.
- ಒಂದು ಸಣ್ಣ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿಯನ್ನು ಹುರಿಯಿರಿ. ಈ ಬಿಸಿತುಪ್ಪ ಮತ್ತು ಗೋಡಂಬಿಯನ್ನು ಪುಡಿಮಾಡಿದ ಸಕ್ಕರೆ ಮತ್ತು ಹುರಿಗಡಲೆ ಮೇಲೆ ಹಾಕಿ.
- ಒಂದು ಚಮಚ ತೆಗೆದುಕೊಂಡು ಚೆನ್ನಾಗಿ ಕಲಸಿ. ನಂತರ ಕೈ ಮುಷ್ಟಿಯಲ್ಲಿ ಸ್ವಲ್ಪ ಸ್ವಲ್ಪ ತೆಗೆದುಕೊಂಡು, ಚೆನ್ನಾಗಿ ಒತ್ತಿ ಉಂಡೆಗಳನ್ನು ಮಾಡಿ. ಉಂಡೆ ಮಾಡಲು ಕಷ್ಟವಾದಲ್ಲಿ ಸ್ವಲ್ಪ ತುಪ್ಪ ಸೇರಿಸಿ ಪುನಃ ಪ್ರಯತ್ನಿಸಿ. ಡಬ್ಬದಲ್ಲಿ ತುಂಬಿಸಿಟ್ಟಲ್ಲಿ, ಈ ಉಂಡೆ 10 ದಿನಗಳ ಕಾಲ ಉಳಿಯಬಲ್ಲದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ