ಮಂಗಳವಾರ, ಡಿಸೆಂಬರ್ 22, 2015

Genasina happala in Kannada | ಗೆಣಸಿನ ಹಪ್ಪಳ


 ಗೆಣಸಿನ ಹಪ್ಪಳ ಮಾಡುವ ವಿಧಾನ 

ಮನೆಯಲ್ಲೇ ಗೆಣಸಿನ ಹಪ್ಪಳ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ನಾನು ಹಪ್ಪಳ ಮಾಡುವಾಗ ಸಾಧಾರಣವಾಗಿ ಅರೆವಾಸಿ ಸಾದಾ ಹಪ್ಪಳ, ಇನ್ನರ್ಧ ಮಸಾಲೆ ಹಪ್ಪಳಗಳನ್ನು ಮಾಡುತ್ತೇನೆ. ಹಾಗೆಯೇ ಇಲ್ಲಿ ಕೂಡ ಸಾದಾ ಮತ್ತು ಮಸಾಲೆ ಹಪ್ಪಳ ಮಾಡುವ ವಿಧಾನಗಳೆರಡನ್ನೂ ವಿವರಿಸಿದ್ದೇನೆ.
ಈ ರೀತಿಯ ಹಪ್ಪಳ ಮಾಡಲು ಗೆಣಸು ಅಥವಾ ಆಲೂಗಡ್ಡೆಯನ್ನು ಬಳಸಬಹುದು. ಎರಡೂ ತುಂಬಾ ರುಚಿಯಾಗಿರುತ್ತದೆ. ಆದರೆ ಆಲೂಗಡ್ಡೆ ಹಪ್ಪಳಕ್ಕೆ ಹೋಲಿಸಿದರೆ ಗೆಣಸಿನ ಹಪ್ಪಳ ಸ್ವಲ್ಪ ಗಟ್ಟಿ ಇರುತ್ತದೆ. ಮನೆಯಲ್ಲಿ ಹಪ್ಪಳ ಮಾಡುವುದು ಬಹಳ ಮಜವಾಗಿರುತ್ತದೆ. ಅದರಲ್ಲೂ ಮಕ್ಕಳಿದ್ದರೆ ಅವರಿಗೆ ಖಂಡಿತ ಖುಷಿಯಾಗುವುದು. ಆದ್ದರಿಂದ ಹಪ್ಪಳ ಮಾಡುವುದು ಹೇಗೆಂದು ತಿಳಿದು ಮನೆಯಲ್ಲಿ ಮಾಡಿ ಆನಂದಿಸಿ.!!.

ತಯಾರಿ ಸಮಯ: 30 ನಿಮಿಷ + 3 ದಿನ ಒಣಗಲು
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 10 ಹಪ್ಪಳ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1/2 ಕೆಜಿ ಸಿಹಿಗೆಣಸು
  2. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  3. 1/2 1/2 ಟೀಸ್ಪೂನ್ ಜೀರಿಗೆ
  4. ಒಂದು ದೊಡ್ಡ ಚಿಟಿಕೆ ಇಂಗು
  5. 2 ಟೀಸ್ಪೂನ್ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು
  7. 2 ಚಿಕ್ಕ ಪ್ಲಾಸ್ಟಿಕ್ ಹಾಳೆಗಳು
  8. 1 ದೊಡ್ಡ ಪ್ಲಾಸ್ಟಿಕ್ ಹಾಳೆ

ಗೆಣಸಿನ ಹಪ್ಪಳ ಮಾಡುವ ವಿಧಾನ:

  1. ಗೆಣಸನ್ನು ತೊಳೆದು ದೊಡ್ಡ ತುಂಡುಗಳಾಗಿ ಕತ್ತರಿಸಿ. ಬೇಕಾದಷ್ಟು ನೀರು ಮತ್ತು ಉಪ್ಪು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ಬೆಂದಮೇಲೆ ಸಿಪ್ಪೆ ತೆಗೆದು ಎರಡು ಭಾಗಗಳಾಗಿ ವಿಂಗಡಿಸಿ. ಒಂದು ಭಾಗ ಸಾದಾ ಹಪ್ಪಳಕ್ಕಿರಲಿ. ಇನ್ನೊಂದು ಭಾಗಕ್ಕೆ, ಅಚ್ಚ ಖಾರದ ಪುಡಿ, ಜೀರಿಗೆ ಮತ್ತು ಇಂಗು ಸೇರಿಸಿ.
  2. ಈಗ ಎರಡು ಭಾಗಗಳನ್ನು ನೀರು ಬೆರೆಸದೇ ಅರೆದು ಕೊಳ್ಳಿ ಇಲ್ಲವೇ ಗುದ್ದಿ ಕೊಳ್ಳಿ. ಅಂಗೈಗೆ ಎಣ್ಣೆ ಸವರಿ ಕೊಂಡು ನಿಂಬೆ ಗಾತ್ರದ ಉಂಡೆ ಮಾಡಿ ಕೊಳ್ಳಿ.
  3. ಒಂದು ಸಣ್ಣ ಪ್ಲಾಸ್ಟಿಕ್ ಹಾಳೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ನಂತರ ಒಂದು ಉಂಡೆಯನ್ನು ಇರಿಸಿ ಎಣ್ಣೆ ಹಚ್ಚಿದ ಮತ್ತೊಂದು ಸಣ್ಣ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ. ಈಗ ಒಂದು ಅಗಲವಾದ ಪಾತ್ರೆ ಅಥವಾ ಮಣೆಯಿಂದ ಒತ್ತಿ. ಜಾಗ್ರತೆಯಿಂದ ಮೇಲಿನ ಪ್ಲಾಸ್ಟಿಕ್ ಹಾಳೆಯನ್ನು ತೆಗೆಯಿರಿ.
  4. ದೊಡ್ಡ ಪ್ಲಾಸ್ಟಿಕ್ ಹಾಳೆಗೆ ಒತ್ತಿದ ಹಪ್ಪಳವನ್ನು ಸಣ್ಣ ಪ್ಲಾಸ್ಟಿಕ್ ಸಮೇತ ಹಾಕಿ, ಸಣ್ಣ ಪ್ಲಾಸ್ಟಿಕನ್ನು ಜಾಗ್ರತೆಯಿಂದ ತೆಗೆಯಿರಿ. ಎಲ್ಲ ಹಪ್ಪಳವನ್ನು ಇದೆ ರೀತಿ ಮಾಡಿ. ನಂತರ ಬಿಸಿಲಿನಲ್ಲಿಟ್ಟು ಒಣಗಿಸಿ. 3-4 ಗಂಟೆಗಳ ನಂತರ ಎಚ್ಚರಿಕೆಯಿಂದ ಹಪ್ಪಳ ಗಳನ್ನು ತಿರುವಿ ಹಾಕಿ. ಒಳ್ಳೆ ಬಿಸಿಲಿನಲ್ಲಿ 3 ದಿನಗಳ ಕಾಲ ಒಣಗಿಸ ಬೇಕಾಗುತ್ತದೆ. ಒಣಗಿದ ನಂತರ ಎಣ್ಣೆ ಅಥವಾ ಓವೆನ್ ನಲ್ಲಿ ಕಾಯಿಸಿ. ಬೇರೆ ಹಪ್ಪಳ ಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಸಮಯ ಕಾಯಿಸ ಬೇಕಾಗುತ್ತದೆ. ತಣ್ಣಗಾದ ಮೇಲೆ ಬಡಿಸಿ ಏಕೆಂದರೆ ಬಿಸಿ ಹಪ್ಪಳ ಗರಿ ಗರಿಯಾಗಿರುವುದಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...