ದೊಡ್ಡಪತ್ರೆ ಸಾರು ಅಥವಾ ರಸಂ ಅತ್ಯಂತ ಸುಲಭವಾಗಿ ತಯಾರಿಸ ಬಲ್ಲ ಸಾರುಗಳಲ್ಲೊಂದಾಗಿದೆ. ಈ ಸಾರು ಬೇಳೆ, ತೆಂಗಿನಕಾಯಿ ಅಥವಾ ಸಾರಿನ ಪುಡಿ ಇದ್ಯಾವುದನ್ನೂ ಹಾಕದೇ ಮಾಡುವಂತಹ ಅಪರೂಪದ ಸಾರಾಗಿದೆ. ಕಡಿಮೆ ಸಮಯದಲ್ಲಿ, ಸುಲಭವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಸಾರನ್ನು ಮಾಡಿ ಸವಿಯಿರಿ. ನಿಮಗೆ ಇಷ್ಟವಿದ್ದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ, ಚಪಾತಿ ಅಥವಾ ದೋಸೆಯೊಂದಿಗೆ ಗೊಜ್ಜಿನಂತೆಯೂ ಉಪಯೋಗಿಸಬಹುದು.
ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: 3 ಜನರಿಗೆ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: 3 ಜನರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 15-20 ದೊಡ್ಡಪತ್ರೆ ಎಲೆಗಳು
- 2 ಮಧ್ಯಮ ಗಾತ್ರದ ಟೊಮ್ಯಾಟೋ
- 1/2 ನಿಂಬೆ ಗಾತ್ರದ ಹುಣಿಸೆಹಣ್ಣು
- 1/2 ನಿಂಬೆ ಗಾತ್ರದ ಬೆಲ್ಲ
- 1/2 ಟೀಸ್ಪೂನ್ ಜೀರಿಗೆ
- 1/2 ಟೀಸ್ಪೂನ್ ಸಾಸಿವೆ
- 1 ಒಣಮೆಣಸಿನ ಕಾಯಿ
- 1/2 ಟೀಸ್ಪೂನ್ ಗುದ್ದಿದ ಕಾಳುಮೆಣಸು
- 1/4 ಅರಶಿನ
- 1 ಹಸಿರು ಮೆಣಸಿನಕಾಯಿ
- 4-5 ಕರಿಬೇವಿನ ಎಲೆ
- 2 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
- ಉಪ್ಪು ರುಚಿಗೆ ತಕ್ಕಷ್ಟು.
ದೊಡ್ಡಪತ್ರೆ ರಸಂ ಮಾಡುವ ವಿಧಾನ:
- ದೊಡ್ಡಪತ್ರೆ ಎಲೆ ಮತ್ತು ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ ಮತ್ತು ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ. ನಂತರ ಪುಡಿಮಾಡಿದ ಕಾಳುಮೆಣಸು ಮತ್ತು ಅರಿಶಿನ ಪುಡಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಮಗುಚಿ.
- ಕತ್ತರಿಸಿದ ಟೊಮೆಟೊ ಸೇರಿಸಿ ಟೊಮ್ಯಾಟೊ ಮೃದು ಆಗುವ ತನಕ ಹುರಿಯಿರಿ. ನಂತರ ಕತ್ತರಿಸಿದ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
- ಈಗ ಉಪ್ಪು , ಹುಣಸೆ ರಸ, ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ. ಬಿಸಿ ಅನ್ನದೊಂದಿಗೆ ಬಡಿಸಿ. ಕಡಿಮೆ ನೀರು ಬಳಸಿಕೊಂಡು ಗೊಜ್ಜಿನಂತೆ ಮಾಡಿದಲ್ಲಿ ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ.
ತುಂಬಾ ಚೆನ್ನಾಗಿದೆ
ಪ್ರತ್ಯುತ್ತರಅಳಿಸಿ