ದೊಡ್ಡಪತ್ರೆ ಈರುಳ್ಳಿ ಚಟ್ನಿ ಬಹಳ ರುಚಿಕರವಾದ ಚಟ್ನಿಯಾಗಿದ್ದು, ಈ ಚಟ್ನಿಯನ್ನು ದೊಡ್ಡಪತ್ರೆ ಎಲೆಗಳು, ಈರುಳ್ಳಿ ಮತ್ತು ತೆಂಗಿನ ಕಾಯಿ ಬಳಸಿಕೊಂಡು ತಯಾರಿಸಲಾಗುತ್ತದೆ. ಬಲುರುಚಿ ಮತ್ತು ಆರೋಗ್ಯಕರವಾದ ಈ ಚಟ್ನಿಯನ್ನು ಒಮ್ಮೆಯಾದರೂ ಮಾಡಿ ನೋಡಿ. ನಿಮಗೆ ಖಂಡಿತ ಇಷ್ಟವಾಗುವುದು. ನಾನು ಈ ಚಟ್ನಿಯನ್ನು ಮೈಸೂರಿನಲ್ಲಿರುವ ನನ್ನ ಪ್ರೀತಿಯ ಸರೋಜ ಆಂಟಿಯಿಂದ ಕಲಿತೆ. ಅವರು ಹೇಳುವ ಪ್ರಕಾರ ಈ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿ ರಾಗಿ ಮುದ್ದೆಯೊಂದಿಗೂ ಬಡಿಸಬಹುದು. ದೊಡ್ಡಪತ್ರೆ ಈರುಳ್ಳಿ ಚಟ್ನಿಯನ್ನು ಸ್ವಲ್ಪ ತುಪ್ಪದೊಂದಿಗೆ ಬಿಸಿ ಅನ್ನದೊಂದಿಗೆ ತಿಂದರಂತೂ ಬಹಳ ರುಚಿಕರವಾಗಿರುತ್ತದೆ.
ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: ಇಬ್ಬರಿಗೆ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: ಇಬ್ಬರಿಗೆ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )
- 15-20 ದೊಡ್ಡಪತ್ರೆ ಎಲೆಗಳು
- 1 ದೊಡ್ಡ ಈರುಳ್ಳಿ (1/2 ಅರೆಯಲು ಮತ್ತು 1/2 ಹುರಿಯಲು)
- ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
- 1 ಕಪ್ ತೆಂಗಿನತುರಿ
- 1 ಟೀಸ್ಪೂನ್ ಸಾರಿನ ಪುಡಿ / ಸಾಂಬಾರ್ ಪುಡಿ / (1/2 ಟೀಸ್ಪೂನ್ ಧನಿಯಾ ಪುಡಿ + 1/2 ಟೀಸ್ಪೂನ್ ಅಚ್ಚಖಾರದ ಪುಡಿ + 1/4 ಟೀಸ್ಪೂನ್ ಜೀರಿಗೆ ಪುಡಿ)
- 3 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ದೊಡ್ಡಪತ್ರೆ ಈರುಳ್ಳಿ ಚಟ್ನಿ ಮಾಡುವ ವಿಧಾನ:
- ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ. ಒಂದು ಬಾಣಲೆಯನ್ನು ಬಿಸಿಮಾಡಿ, 1 ಟೀಸ್ಪೂನ್ ಎಣ್ಣೆಯಲ್ಲಿ ದೊಡ್ಡಪತ್ರೆ ಎಲೆಗಳನ್ನು ಬಾಡಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಬಾಡಿಸಿದ ಎಲೆ, ತೆಂಗಿನತುರಿ, ಸಾರಿನ ಪುಡಿ, ಹುಣಿಸೆ ಹಣ್ಣು ಮತ್ತು ಅರ್ಧ ಈರುಳ್ಳಿಯನ್ನು ಹಾಕಿ ಅರೆದು ಕೊಳ್ಳಿ.
- ಉಳಿದ ಅರ್ಧ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಒಂದು ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
- ಈಗ ಅದೇ ಬಾಣಲೆಗೆ ಅರೆದ ಮಿಶ್ರಣವನ್ನು ಸೇರಿಸಿ, ಉಪ್ಪು ಹಾಕಿ, ನಿಮಗೆ ಬೇಕಾದ ಹದಕ್ಕೆ ನೀರು ಸೇರಿಸಿ. ಕುಡಿಯಲು ಶುರುವಾದ ಕೂಡಲೇ ಸ್ಟೋವ್ ಆಫ್ ಮಾಡಿ. ಬಿಸಿ ಅನ್ನ ಅಥವಾ ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ