ಗುರುವಾರ, ಜೂನ್ 13, 2019

Pani puri recipe in Kannada | ಪಾನಿ ಪುರಿ ಮಾಡುವ ವಿಧಾನ

Pani puri recipe in Kannada

Pani puri recipe in Kannada | ಪಾನಿ ಪುರಿ ಮಾಡುವ ವಿಧಾನ 


ಪಾನೀ ಪುರಿ ವಿಡಿಯೋ

ಪೂರಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಸಣ್ಣ ರವೇ ಅಥವಾ ಚಿರೋಟಿ ರವೇ 
  2. 1 ಟೇಬಲ್ ಚಮಚ ಮೈದಾ ಹಿಟ್ಟು
  3. 1/2 ಟೀಸ್ಪೂನ್ ಉಪ್ಪು 
  4. 1/4 ಟೀಸ್ಪೂನ್ ಅಡುಗೆ ಸೋಡಾ
  5. 1 ಟೀಸ್ಪೂನ್  ಅಡುಗೆ ಎಣ್ಣೆ
  6. ಸುಮಾರು ಅರ್ಧ ಕಪ್ ನೀರು 
  7. ಎಣ್ಣೆ ಪೂರಿ ಕಾಯಿಸಲು

ಆಲೂ ಮಸಾಲೆ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ದೊಡ್ಡ ಆಲೂಗಡ್ಡೆ
  2. 1/4 ಟೀಸ್ಪೂನ್ ಉಪ್ಪು 
  3. 1/4 ಟೀಸ್ಪೂನ್ ಅಚ್ಚಖಾರದ ಪುಡಿ
  4. 1/2 ಟೀಸ್ಪೂನ್ ಚಾಟ್ ಮಸಾಲಾ 

ಪಾನಿ ಮಾಡಲು ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಹಿಡಿ ಪುದಿನ ಸೊಪ್ಪು 
  2. 1 ಹಿಡಿ ಕೊತ್ತಂಬರಿ ಸೊಪ್ಪು
  3. 2 - 4 ಹಸಿರುಮೆಣಸಿನಕಾಯಿ
  4. 1/2 ಟೀಸ್ಪೂನ್ ಬ್ಲಾಕ್ ಸಾಲ್ಟ್ ಅಥವಾ ಸೈನ್ದವ ಲವಣ
  5. 1 ಟೀಸ್ಪೂನ್ ಚಾಟ್ ಮಸಾಲಾ
  6. ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
  7. ರುಚಿಗೆ ತಕ್ಕಷ್ಟು ಬೆಲ್ಲ
  8. 1/2 ಟೀಸ್ಪೂನ್ ನಿಂಬೆಹಣ್ಣಿನ ರಸ ಅಥವಾ ಆಮಚೂರ್ ಪುಡಿ
  9. ಉಪ್ಪು ರುಚಿಗೆ ತಕ್ಕಷ್ಟು
  10. 1 ದೊಡ್ಡ ಈರುಳ್ಳಿ ಕತ್ತರಿಸಿದ್ದು (ಸರ್ವ್ ಮಾಡಲು ಅಥವಾ ಬಡಿಸಲು)

ಪಾನಿ ಪುರಿ ಮಾಡುವ ವಿಧಾನ:

  1. ಮೊದಲಿಗೆ ಪೂರಿ ಮಾಡಿಕೊಳ್ಳೋಣ. ಒಂದು ಪಾತ್ರೆಯಲ್ಲಿ  ಚಿರೋಟಿ ರವೇ, ಮೈದಾ ಹಿಟ್ಟು, ಉಪ್ಪು ಮತ್ತು ಸೋಡಾ ತೆಗೆದುಕೊಳ್ಳಿ. 
  2. ಒಂದು ಚಮಚ ಎಣ್ಣೆ ಹಾಕಿ ಚೆನ್ನಾಗಿ ತಿಕ್ಕಿ ಕಲಸಿ. 
  3. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾದ ಹಿಟ್ಟನ್ನು ತಯಾರಿಸಿಕೊಳ್ಳಿ. 
  4. ಒದ್ದೆಬಟ್ಟೆಯನ್ನು ಮುಚ್ಚಿ ಮೂವತ್ತು ನಿಮಿಷ ನೆನೆಯಲು ಬಿಡಿ. 
  5. ನಂತ್ರ ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಅಥವಾ ಸ್ವಲ್ಪ ರವೇ ಸೇರಿಸಿ, ಚೆನ್ನಾಗಿ ನಾದಿ (ಸುಮಾರು ಐದು ನಿಮಿಷ) ಮೃದು ಆದರೆ ಗಟ್ಟಿಯಾದ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರಲಿ. 
  6. ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ತೆಳ್ಳನೆ ಚಪಾತಿ ಲಟ್ಟಿಸಿ. ಮಾಮೂಲಿ ಚಪಾತಿಗಿಂತ ಸ್ವಲ್ಪ ತೆಳ್ಳಗಿರಲಿ. 
  7. ಒಂದು ಲೋಟ ಅಥವಾ ಮುಚ್ಚಳದಿಂದ ಸಣ್ಣ ಸಣ್ಣ ಪೂರಿಗಳನ್ನು ಒತ್ತಿ ತೆಗೆದು, ಬಿಸಿಯಾದ ಎಣ್ಣೆಯಲ್ಲಿ ಕಾಯಿಸಿ. ಗುಳ್ಳೆಗಳು ನಿಂತ ಮೇಲೆ ಸಣ್ಣ ಉರಿಯಲ್ಲಿ ಹತ್ತು ಹದಿನೈದು ಸೆಕೆಂಡ್ ಕಾಯಿಸುವುದರಿಂದ ಪೂರಿ ಗರಿ ಗರಿ ಆಗುವುದು. 
  8. ಆಲೂ ಮಸಾಲೆ ಮಾಡಲು ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆಯನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಚೆನ್ನಾಗಿ ಹಿಸುಕಿ ಅಥವಾ ಮ್ಯಾಶ್ ಮಾಡಿ. 
  9. ಉಪ್ಪು, ಅಚ್ಚಖಾರದ ಪುಡಿ ಮತ್ತು ಚಾಟ್ ಮಸಾಲಾ ಸೇರಿಸಿ, ಕಲಸಿ ಪಕ್ಕಕ್ಕಿಡಿ. 
  10. ಪಾನಿ ಮಾಡಲು ಪುದಿನ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಹಸಿರುಮೆಣಸನ್ನು ಮಿಕ್ಸಿಯಲ್ಲಿ ಅಗತ್ಯವಿದ್ದಷ್ಟು ನೀರು ಸೇರಿಸಿ ನುಣ್ಣನೆ ಅರೆಯಿರಿ. 
  11. ಅರೆದ ನಂತ್ರ ಸೋಸಿ, ಸೈನ್ದವ ಲವಣ, ಚಾಟ್ ಮಸಾಲಾ, ಹುಣಿಸೆಹಣ್ಣಿನ ರಸ, ಬೆಲ್ಲ ಮತ್ತು ನಿಂಬೆರಸ ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು-ಹುಳಿ-ಸಿಹಿ-ಖಾರ ಹೊಂದಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಕಲಕಿ. 
  12. ಆಮೇಲೆ ಸಣ್ಣಗೆ ಕತ್ತರಿಸಿದ ಈರುಳ್ಳಿ ಜೊತೆಯಲ್ಲಿ ಪೂರಿ, ಆಲೂಮಸಾಲೆ ಮತ್ತು ಪಾನಿಯನ್ನು ಬಡಿಸಿ. 
  13. ಪೂರಿಯ ತೆಳುವಾದ ಭಾಗವನ್ನು ತೂತು ಮಾಡಿ, ಆಲೂ ಮಸಾಲೆ, ಈರುಳ್ಳಿ ತುಂಬಿಸಿ, ಪಾನಿಯನ್ನೂ ತುಂಬಿಸಿ, ಸವಿದು ಆನಂದಿಸಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...