10 minute sambar recipe in Kannada | 10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ
10 ನಿಮಿಷದಲ್ಲಿ ಸಾಂಬಾರ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1 ಈರುಳ್ಳಿ
1 ಕ್ಯಾರಟ್
1 ಟೊಮೇಟೊ
1 ದೊಣ್ಣೆಮೆಣಸು
ದೊಡ್ಡ ಚಿಟಿಕೆ ಅರಿಶಿನ ಪುಡಿ
ಉಪ್ಪು ನಿಮ್ಮ ರುಚಿ ಪ್ರಕಾರ
1/2 ಟೀಸ್ಪೂನ್ ಬೆಲ್ಲ (ಬೇಕಾದಲ್ಲಿ)
ಗೋಲಿ ಗಾತ್ರದ ಹುಣಿಸೇಹಣ್ಣು
ಸ್ವಲ್ಪ ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ಅಡುಗೆ ಎಣ್ಣೆ
ಮಸಾಲೆಗೆ ಬೇಕಾಗುವ ಪದಾರ್ಥಗಳು:
1/4 ಕಪ್ ತೆಂಗಿನ ತುರಿ
2 ಒಣ ಮೆಣಸಿನಕಾಯಿ
1 ಟೀಸ್ಪೂನ್ ಕಡ್ಲೆಬೇಳೆ
1 ಟೀಸ್ಪೂನ್ ಉದ್ದಿನ ಬೇಳೆ
3 ಟೀಸ್ಪೂನ್ ತೊಗರಿಬೇಳೆ
2 ಟೀಸ್ಪೂನ್ ಕೊತ್ತಂಬರಿ ಬೀಜ
1/4 ಟೀಸ್ಪೂನ್ ಜೀರಿಗೆ
10 - 12 ಮೆಂತ್ಯ ಕಾಳು
1 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಕೆಂಪು ಮೆಣಸಿನಕಾಯಿ
5 - 6 ಕರಿಬೇವು
1/4 ಟೀಸ್ಪೂನ್ ಸಾಸಿವೆ
ಒಂದು ಚಿಟಿಕೆ ಇಂಗು
1 ಟೀಸ್ಪೂನ್ ಅಡುಗೆ ಎಣ್ಣೆ
10 ನಿಮಿಷದಲ್ಲಿ ಸಾಂಬಾರ್ ಮಾಡುವ ವಿಧಾನ:
ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕಡ್ಲೆಬೇಳೆ, ತೊಗರಿಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು 1 ಟೀಸ್ಪೂನ್ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವರೆಗೆ ಹುರಿಯಿರಿ.
ಹುರಿದ ಪದಾರ್ಥಗಳನ್ನು ಪಕ್ಕಕ್ಕಿಟ್ಟು ಅದೇ ಬಾಣಲೆಯಲ್ಲಿ ಇನ್ನೊಂದು ಚಮಚ ಎಣ್ಣೆ ಬಿಸಿ ಮಾಡಿ.
ಮೊದಲಿಗೆ ಕತ್ತರಿಸಿದ ಈರುಳ್ಳಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
ಆಮೇಲೆ ತೆಳುವಾಗಿ ಹೆಚ್ಚಿದ ಕ್ಯಾರಟ್ ಸೇರಿಸಿ ಹುರಿಯಿರಿ.
ನಂತರ ಕತ್ತರಿಸಿದ ದೊಣ್ಣೆಮೆಣಸು ಸೇರಿಸಿ ಹುರಿಯಿರಿ.
ಕೊನೆಯಲ್ಲಿ ಕತ್ತರಿಸಿದ ಟೊಮೇಟೊ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.
ಚಿಟಿಕೆ ಅರಶಿನ ಪುಡಿ, ಉಪ್ಪು ಮತ್ತು 1 ಕಪ್ ನೀರು ಸೇರಿಸಿ ಕುದಿಸಿ.
ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಬೇಯಲು ಬಿಡಿ.
ಆ ಸಮಯದಲ್ಲಿ ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
ಅರೆದ ಮಸಾಲೆಯನ್ನು ಬೇಯುತ್ತಿರುವ ತರಕಾರಿಗೆ ಹಾಕಿ.
ಅಗತ್ಯವಿದ್ದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಬೆಲ್ಲ ಸೇರಿಸಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ.
ಒಂದು ನಿಮಿಷ ಕುದಿಸಿ ಸ್ಟವ್ ಆಫ್ ಮಾಡಿ.
ಒಣ ಮೆಣಸು, ಸಾಸಿವೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ. ದೋಸೆ ಅಥವಾ ಇಡ್ಲಿಯೊಂದಿಗೂ ಬಡಿಸಬಹುದು.
Idli - Dose batter recipe in Kannada | ಇಡ್ಲಿ ಮತ್ತು ದೋಸೆ ಹಿಟ್ಟು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ದೋಸೆ ಅಕ್ಕಿ
1 ಕಪ್ ಕುಸುಬುಲಕ್ಕಿ ಅಥವಾ ಇಡ್ಲಿ ಅಕ್ಕಿ
1/2 ಕಪ್ ಉದ್ದಿನ ಬೇಳೆ (ಚಳಿಗಾಲ ಆದ್ರೆ ಸ್ವಲ್ಪ ಜಾಸ್ತಿ ಮಾಡಿ)
1 ಟೀಸ್ಪೂನ್ ಮೆಂತೆ
1/4 - 1/2 ಕಪ್ ಗಟ್ಟಿ ಅವಲಕ್ಕಿ
ಉಪ್ಪು ನಿಮ್ಮ ರುಚಿ ಪ್ರಕಾರ
ಇಡ್ಲಿ ಮತ್ತು ದೋಸೆ ಹಿಟ್ಟು ಮಾಡುವ ವಿಧಾನ:
ಎರಡು ರೀತಿಯ ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು ಬೇರೆ ಪಾತ್ರೆಯಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ.
ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿಡಿ.
ನಂತರ ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು.
ಆಮೇಲೆ ನೆನೆಸಿದ ಅಕ್ಕಿಯ ನೀರು ಬಸಿದು, ಸ್ವಲ್ಪ ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ಮಾತ್ರ ನೀರು ಸೇರಿಸಿ. ಗಮನಿಸಿ, ಹೆಚ್ಚು ನೀರು ಸೇರಿಸಬೇಡಿ ಮತ್ತು ಸ್ವಲ್ಪ ತರಿ ತರಿ ಇದ್ದರೆ ಸಾಕು.
ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ. ಚಳಿಗಾಲ ಸಮಯ ಆದಲ್ಲಿ ಸುಮಾರು 12 ಗಂಟೆ ಬೇಕಾಗಬಹುದು.
ಹುದುಗುವಿಕೆಯ ನಂತರ ಅಗತ್ಯವಿದ್ದಷ್ಟು ಹಿಟ್ಟು ತೆಗೆದುಕೊಂಡು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.
ನಂತರ ದೋಸೆ ಮಾಡಲು, ಅಗತ್ಯವಿದ್ದಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರು ಮತ್ತು ಅಗತ್ಯವಿದ್ದಷ್ಟು ಉಪ್ಪು ಹಾಕಿ ದೋಸೆ ಮಾಡಿ.
ಅದೇ ದೋಸೆ ಹಿಟ್ಟಲ್ಲಿ ಈರುಳ್ಳಿ ದೋಸೆ ಮಾಡಿ. ಈರುಳ್ಳಿ ದೋಸೆ ಮಾಡಲು, ಎರಡು ಸೌಟು ಹಿಟ್ಟು ಹಾಕಿ, ಮೇಲಿಂದ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಮತ್ತು ತುರಿದ ಕ್ಯಾರಟ್ ಹಾಕಿ ಎರಡು ಬದಿ ಕಾಯಿಸಿ.
ಪಡ್ಡು ಮಾಡಲು ದೋಸೆ ಹಿಟ್ಟಿಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಹಸಿಮೆಣಸು ಹಾಕಿ ಪಡ್ಡು ಹೆಂಚಲ್ಲಿ ಪಡ್ಡು ಮಾಡಿ.
Khara chapathi recipe in Kannada | ಖಾರ ಚಪಾತಿ ಮಾಡುವ ವಿಧಾನ
ಖಾರ ಚಪಾತಿ ವಿಡಿಯೋ
ಹಿಟ್ಟಿಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಗೋಧಿ ಹಿಟ್ಟು
1/2 ಟೀಸ್ಪೂನ್ ಗರಂ ಮಸಾಲಾ
1/2 ಟೀಸ್ಪೂನ್ ಅಚ್ಚಖಾರದ ಪುಡಿ
ದೊಡ್ಡ ಚಿಟಿಕೆ ಅರಿಶಿನ
1/2 ಟೀಸ್ಪೂನ್ ಜೀರಿಗೆ ಪುಡಿ
1/4 ಟೀಸ್ಪೂನ್ ಓಮ
5 - 6 ಚಮಚ ತುಪ್ಪ ಅಥವಾ ಎಣ್ಣೆ
1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ಮಸಾಲೆಗೆ ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
4 ಟೇಬಲ್ ಚಮಚ ಹುರಿದ ಶೇಂಗಾ ಅಥವಾ ಕಡ್ಲೆಕಾಯಿ
1/4 ಟೀಸ್ಪೂನ್ ಗರಂ ಮಸಾಲಾ
1/4 ಟೀಸ್ಪೂನ್ ಮಾವಿನಕಾಯಿ ಪುಡಿ
1/4 ಟೀಸ್ಪೂನ್ ಉಪ್ಪು
ಖಾರ ಚಪಾತಿ ಮಾಡುವ ವಿಧಾನ:
ಒಂದು ಬಟ್ಟಲಿನಲ್ಲಿ ಗೋಧಿ ಹಿಟ್ಟು ತೆಗೆದುಕೊಳ್ಳಿ.
ಅದಕ್ಕೆ ಜೀರಿಗೆ ಪುಡಿ, ಉಪ್ಪು, ಅರಿಶಿನ, ಅಚ್ಚಖಾರದ ಪುಡಿ ಮತ್ತು ಗರಂ ಮಸಾಲಾ ಪುಡಿ ಹಾಕಿ.
ಒಂದು ಚಮಚ ತುಪ್ಪ ಮತ್ತು ಓಮ ಹಾಕಿ ಚೆನ್ನಾಗಿ ತಿಕ್ಕಿ ಕಲಸಿ.
ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತ ಮೆತ್ತಗಿನ ಚಪಾತಿ ಹಿಟ್ಟು ತಯಾರಿಸಿಕೊಳ್ಳಿ.
ಕೊನೆಯಲ್ಲಿ 1 ಚಮಚ ತುಪ್ಪ ಹಾಕಿ, ಪುನಃ ಒಮ್ಮೆ ಕಲಸಿ.
ಮುಚ್ಚಳ ಮುಚ್ಚಿ 20 ನಿಮಿಷ ಪಕ್ಕಕ್ಕಿಡಿ.
ಆ ಸಮಯದಲ್ಲಿ ಒಂದು ಮಿಕ್ಸಿ ಜಾರಿನಲ್ಲಿ, ಹುರಿದ ಶೇಂಗಾ, ಗರಂ ಮಸಾಲಾ, ಉಪ್ಪು ಮತ್ತು ಮಾವಿನಕಾಯಿ ಪುಡಿ ತೆಗೆದುಕೊಂಡು ನುಣ್ಣಗೆ ಪುಡಿ ಮಾಡಿ. ಇದನ್ನು ನಾವು ಚಪಾತಿಯೊಳಗೆ ಹಾಕಲಿದ್ದೇವೆ.
ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಸಣ್ಣ ವೃತ್ತಾಕಾರವಾಗಿ ಲಟ್ಟಿಸಿ.
ಮೇಲಿನಿಂದ ಸ್ವಲ್ಪ ತುಪ್ಪ ಮತ್ತು ಶೇಂಗಾ ಮಸಾಲೆ ಹರಡಿ.
ತ್ರಿಕೋನಾಕಾರವಾಗಿ ಮಡಿಸಿ, ಲಟ್ಟಿಸಿ.
ಒಂದು ಹೆಂಚು ಅಥವಾ ತವಾ ತೆಗೆದುಕೊಂಡು ಬಿಸಿ ಮಾಡಿ. ಲಟ್ಟಿಸಿದ ಚಪಾತಿಯನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ.
ಬಿಸಿ ಬಿಸಿಯಾಗಿರುವಾಗಲೇ ತಿನ್ನಲು ಕೊಡಿ. ಬೇಕಾದಲ್ಲಿ ಉಪ್ಪಿನಕಾಯಿ ಮತ್ತು ಮೊಸರು ಜೊತೆ ಬಡಿಸಿ.
Devasthana style sambar recipe in Kannada | ದೇವಸ್ಥಾನ ಶೈಲಿಯ ಸಾಂಬಾರ್ ಮಾಡುವ ವಿಧಾನ
ದೇವಸ್ಥಾನ ಶೈಲಿಯ ಸಾಂಬಾರ್ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
2 ಕಪ್ ತರಕಾರಿ (ಚೀನಿಕಾಯಿ, ಆಲೂಗಡ್ಡೆ, ಸೋರೆಕಾಯಿ, ಬೀನ್ಸ್, ಕ್ಯಾರಟ್, ಕುಂಬಕಾಯಿ, ಟೊಮೇಟೊ, ಸೌತೆಕಾಯಿ, ನುಗ್ಗೆಕಾಯಿ ಇತ್ಯಾದಿ)
1/4 ಕಪ್ ತೊಗರಿಬೇಳೆ
1/4 ಟೀಸ್ಪೂನ್ ಅರಿಶಿನ ಪುಡಿ
2 ಟೀಸ್ಪೂನ್ ಕಲ್ಲುಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
1 ಟೀಸ್ಪೂನ್ ಬೆಲ್ಲ
ಗೋಲಿ ಗಾತ್ರದ ಹುಣಿಸೇಹಣ್ಣು
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಸಾಲೆಗೆ ಬೇಕಾಗುವ ಪದಾರ್ಥಗಳು:
1/2 ಕಪ್ ತೆಂಗಿನ ತುರಿ
2 - 4 ಒಣ ಮೆಣಸಿನಕಾಯಿ
3/4 ಟೀಸ್ಪೂನ್ ಕಡ್ಲೆಬೇಳೆ
1 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕೊತ್ತಂಬರಿ ಬೀಜ
1/2 ಟೀಸ್ಪೂನ್ ಜೀರಿಗೆ
7 - 8 ಮೆಂತ್ಯ ಕಾಳು
ಒಂದು ಚಿಟಿಕೆ ಇಂಗು
ಸ್ವಲ್ಪ ಕರಿಬೇವು
1/2 ಟೀಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
1 ಕೆಂಪು ಮೆಣಸಿನಕಾಯಿ
5 - 6 ಕರಿಬೇವು
1/4 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಅಡುಗೆ ಎಣ್ಣೆ
ದೇವಸ್ಥಾನ ಶೈಲಿಯ ಸಾಂಬಾರ್ ಮಾಡುವ ವಿಧಾನ:
ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ. ಬೇಗ ಬೇಯುವ ತರಕಾರಿಯನ್ನು ಸ್ವಲ್ಪ ದೊಡ್ಡದಾಗಿ ಕತ್ತರಿಸಿ.
ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. 1/2 ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಬೇಳೆಯನ್ನು ಬೇಯಿಸಿ.
ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ತರಕಾರಿ ಮತ್ತು ಸ್ವಲ್ಪ ಉಪ್ಪು ಹಾಕಿ. 1 ಲೋಟ ನೀರು ಹಾಕಿ ಬೇಯಿಸಿ.
ಆ ಸಮಯದಲ್ಲಿ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕಡ್ಲೆಬೇಳೆ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಮೆಂತೆಯನ್ನು 1/2 ಟೀಸ್ಪೂನ್ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಬೇಳೆಗಳು ಕಂದು ಬಣ್ಣಕ್ಕೆ ಬರುವರೆಗೆ ಹುರಿಯಿರಿ.
ಸ್ಟವ್ ಆಫ್ ಮಾಡಿ, ಕರಿಬೇವು ಮತ್ತು ಇಂಗು ಸೇರಿಸಿ ಹುರಿಯಿರಿ.
ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. ಬೆಲ್ಲ, ಉಪ್ಪು ಮತ್ತು ಹುಣಿಸೆ ರಸ ಸೇರಿಸಿ. ನಿಮ್ಮ ರುಚಿ ಪ್ರಕಾರ ಉಪ್ಪು, ಸಿಹಿ ಮತ್ತು ಹುಳಿಯನ್ನು ಸರಿಮಾಡಿಕೊಳ್ಳಿ.
ಬೇಕಾದಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ. ಸ್ಟವ್ ಆಫ್ ಮಾಡಿ.
ಒಣ ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.
Instant crispy dose recipe in Kannada | ದಿಢೀರ್ ದೋಸೆ ಮಾಡುವ ವಿಧಾನ
ದಿಢೀರ್ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ರವೆ
1/4 ಕಪ್ ಗೋಧಿ ಹಿಟ್ಟು
1 ಕಪ್ ಮೊಸರು
1/4 ಚಮಚ ಅಡುಗೆ ಸೋಡಾ
ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
ಉಪ್ಪು ರುಚಿಗೆ ತಕ್ಕಷ್ಟು
ದಿಢೀರ್ ದೋಸೆ ಮಾಡುವ ವಿಧಾನ:
ರವೆಯನ್ನು ಮಿಕ್ಸಿಯಲ್ಲಿ ನುಣ್ಣನೆ ಆದರೆ ಸ್ವಲ್ಪ ತರಿ-ತರಿ ಯಾಗಿ ಪುಡಿ ಮಾಡಿಕೊಳ್ಳಿ.
ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಂಡು ಗೋಧಿ ಹಿಟ್ಟು ಮತ್ತು ಮೊಸರು ಸೇರಿಸಿ.
ಅಗತ್ಯವಿದ್ದಷ್ಟು ನೀರು ಸೇರಿಸಿ (ಸುಮಾರು ಅರ್ಧ ಕಪ್), ಗಂಟಿಲ್ಲದಂತೆ ಮಗುಚಿ ದೋಸೆ ಹಿಟ್ಟು ತಯಾರಿಸಿ.
ಹದಿನೈದು ನಿಮಿಷ ನೆನೆಯಲು ಬಿಡಿ.
ಆಮೇಲೆ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ. ಚೆನ್ನಾಗಿ ಕಲಸಿ.
ಅಗತ್ಯವಿದ್ದಲ್ಲಿ ನೀರು ಸೇರಿಸಿ. ಹಿಟ್ಟು ತೆಳುವಾದ ಉದ್ದಿನ ದೋಸೆ ಹಿಟ್ಟಿನಂತಿರಲಿ.
ಕಬ್ಬಿಣದ ದೋಸೆ ಹೆಂಚು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ.
ಬಿಸಿ ದೋಸೆ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ. ಉದ್ದಿನ ದೋಸೆಯಂತೆ ತೆಳ್ಳಗೆ ತಿಕ್ಕಿ ದೋಸೆ ಮಾಡಿ.
ಮುಚ್ಚಳ ಮುಚ್ಚಿ ಬೇಯಿಸಿ.
ಹತ್ತು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.
Sabbakki idli recipe in Kannada | ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ
ಸಬ್ಬಕ್ಕಿ ಇಡ್ಲಿ ವೀಡಿಯೊ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1/2 ಕಪ್ ಸಬ್ಬಕ್ಕಿ
1/2 ಕಪ್ ಇಡ್ಲಿರವೇ
1 ಕಪ್ ಮೊಸರು (ಸ್ವಲ್ಪ ಹುಳಿ ಇರಲಿ)
ಉಪ್ಪು ನಿಮ್ಮ ರುಚಿ ಪ್ರಕಾರ
ಹೆಚ್ಚುವರಿ ಪದಾರ್ಥಗಳು (ಬೇಕಾದಲ್ಲಿ): ( ಅಳತೆ ಕಪ್ = 240 ಎಂಎಲ್ )
2 ಟೇಬಲ್ ಚಮಚ ತೆಂಗಿನತುರಿ
1 ಟೇಬಲ್ ಚಮಚ ಕೊತ್ತಂಬರಿ ಸೊಪ್ಪು
2 ಚಮಚ ಎಣ್ಣೆ
1/2 ಚಮಚ ಸಾಸಿವೆ
2 ಟೇಬಲ್ ಚಮಚ ಗೋಡಂಬಿ
ಸಣ್ಣಗೆ ಕತ್ತರಿಸಿದ ಹಸಿಮೆಣಸು ಸ್ವಲ್ಪ
ಸಣ್ಣಗೆ ಕತ್ತರಿಸಿದ ಕರಿಬೇವು ಸ್ವಲ್ಪ
ಸಬ್ಬಕ್ಕಿ ಇಡ್ಲಿ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಸಬ್ಬಕ್ಕಿ, ಇಡ್ಲಿ ರವೆ ಮತ್ತು ಮೊಸರನ್ನು ತೆಗೆದುಕೊಳ್ಳಿ.
ಅಗತ್ಯವಿದ್ದಲ್ಲಿ ಸ್ವಲ್ಪ ನೀರನ್ನು ಸೇರಿಸಿ, ಹಿಟ್ಟನ್ನು ಕಲಸಿ. 7 - 8 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
ಹಿಟ್ಟು ಹುಳಿ ಬಂದ ಮೇಲೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಚೆನ್ನಾಗಿ ಕಲಸಿ.
ಅಗತ್ಯವಿದ್ದಷ್ಟು ನೀರು ಸೇರಿಸಿ, ಹಿಟ್ಟನ್ನು ದಪ್ಪ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಈ ಹಿಟ್ಟಿನಿಂದ ಸಾದಾ ಇಡ್ಲಿ ಮಾಡಬಹುದು. ಅಥವಾ...
ತೆಂಗಿನತುರಿ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
ಎಣ್ಣೆ, ಸಾಸಿವೆ, ಗೋಡಂಬಿ, ಹಸಿಮೆಣಸು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸೇರಿಸಿ. ಚೆನ್ನಾಗಿ ಕಲಸಿ. ಇಡ್ಲಿಹಿಟ್ಟು ತಯಾರಾಯಿತು.
ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ. ಒಂದೆರಡು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ. ಖಾರ ಚಟ್ನಿ ಯೊಂದಿಗೆ ಬಡಿಸಿ.