ಬುಧವಾರ, ಡಿಸೆಂಬರ್ 2, 2015

Heerekayi sippe chutney in Kannada | ಹೀರೆಕಾಯಿ ಸಿಪ್ಪೆ ಚಟ್ನಿ


 ಹೀರೆಕಾಯಿ ಸಿಪ್ಪೆ ಚಟ್ನಿ ಮಾಡುವ ವಿಧಾನ 

ಹೀರೇಕಾಯಿ ಸಿಪ್ಪೆ ಚಟ್ನಿ ತುಂಬಾ ಸರಳ ಮತ್ತು ರುಚಿಕರ ಚಟ್ನಿಯಾಗಿದ್ದು ಅನ್ನದೊಂದಿಗೆ ಚೆನ್ನಾಗಿ ಸೇರುತ್ತದೆ. ನಾವು ಸಾಧಾರಣವಾಗಿ ಹೀರೆಕಾಯಿಯ ತೊವ್ವೆ, ಸಾಂಬಾರ್, ಬೋಂಡಾ ( ಬಜ್ಜಿ ) ಅಥವಾ ದೋಸೆ ಮಾಡುವಾಗ ಸಿಪ್ಪೆ ತೆಗೆಯುತ್ತೇವೆ. ನೀವು ಆ ಸಿಪ್ಪೆ ಎಸೆಯುತ್ತೀರಾದರೆ, ಒಮ್ಮೆ ಈ ಚಟ್ನಿ ಪ್ರಯತ್ನಿಸಿ. ನಿಜವಾಗಲೂ ಇದು ಬಹಳ ರುಚಿಕರವಾದ ಚಟ್ನೀ. ಈ ಚಟ್ನಿ ಯ ಜೊತೆಗೆ ನಾವು ಹೀರೇಕಾಯಿ ದೋಸೆ ಮಾಡುವ ವಿಧಾನವನ್ನು ಪೋಸ್ಟ್ ಮಾಡಿದ್ದೇವೆ. ಆದ್ದರಿಂದ ನೀವು ದೋಸೆ ಮತ್ತು ಚಟ್ನಿ ಎರಡನ್ನೂ ಒಟ್ಟಿಗೆ ಪ್ರಯತ್ನಿಸಬಹುದು.
ಹೀರೇಕಾಯಿ ಅತ್ಯಂತ ಹೆಚ್ಚು ನಾರಿನಂಶ ಹೊಂದಿರುವ ತರಕಾರಿಯಾಗಿದ್ದು ಅನೇಕ ಆರೋಗ್ಯಕಾರ ಅಂಶಗಳನ್ನು ಹೊಂದಿದೆ. ಇದು ದೇಹದ ಸಕ್ಕರೆ ಅಂಶ ಹತೋಟಿಯಲ್ಲಿಡಲು, ರಕ್ತ ಶುದ್ದೀಕರಣ ಮಾಡಲು ಮತ್ತು ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಯಾವುದೇ ತರಕಾರಿಯಲ್ಲಿ ಸಿಪ್ಪೆಯು ಗರಿಷ್ಠ ಪೋಷಕಾಂಶಗಳನ್ನು ಹೊಂದಿರುತ್ತದೆ. ಹಾಗಾಗಿ ಸಿಪ್ಪೆಯನ್ನು ಎಸೆಯದೆ ಈ ಚಟ್ನಿ ಪ್ರಯತ್ನಿಸಿ. ನಿಮಗಿದು ಖಂಡಿತ ಇಷ್ಟವಾಗುವುದು.
ನಾನು ಈ ಚಟ್ನಿಗೆ ಒಗ್ಗರಣೆ ಹಾಕುವುದಿಲ್ಲ. ನಿಮಗೆ ಬೇಕೆನಿಸಿದರೆ 1/4 ಚಮಚ ಸಾಸಿವೆ, 1/2 ಒಣಮೆಣಸು ಉಪಯೋಗಿಸಿ ಒಗ್ಗರಣೆ ಮಾಡಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

 1. 1 ಹೀರೇಕಾಯಿ
 2. 1 ಕಪ್ ತೆಂಗಿನ ತುರಿ
 3. 1-2 ಒಣ ಮೆಣಸಿನಕಾಯಿ / ಹಸಿ ಮೆಣಸಿನಕಾಯಿ
 4. 4 ಟೀಸ್ಪೂನ್ ಉದ್ದಿನ ಬೇಳೆ
 5. 1/4 ಟೀಸ್ಪೂನ್ ಸಾಸಿವೆ
 6. 1 ಟೀಸ್ಪೂನ್ ಅಡುಗೆ ಎಣ್ಣೆ
 7. 1/2 ನೆಲ್ಲಿಕಾಯಿ ಗಾತ್ರ ಹುಣಿಸೆ ಹಣ್ಣು
 8. ಉಪ್ಪು ರುಚಿಗೆ ತಕ್ಕಷ್ಟು.

ಹೀರೇಕಾಯಿ ಸಿಪ್ಪೆ ಚಟ್ನಿ ಮಾಡುವ ವಿಧಾನ:

 1. ಹೀರೆಕಾಯಿಯ ಮೊನಚಾದ ಅಂಚನ್ನು ಹೆರೆಸಿ, ಚೆನ್ನಾಗಿ ತೊಳೆಯಿರಿ. ನಂತರ ಹೀರೇಕಾಯಿ ಸಿಪ್ಪೆಯನ್ನು ಸ್ವಲ್ಪ ದಪ್ಪನಾಗಿ ತೆಗೆದು 1 ಇಂಚು ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ. ಸ್ವಲ್ಪವೇ ಸ್ವಲ್ಪ ನೀರು ಸೇರಿಸಿ ಒಂದು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೇಯಿಸಿಕೊಳ್ಳಿ .
 2. ಒಂದು ಬಾಣಲೆಗೆ ಎಣ್ಣೆ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ, ಉದ್ದಿನಬೇಳೆ ಹೊಂಬಣ್ಣ ಬರುವ ವರೆಗೆ ಹುರಿಯಿರಿ.
 3. ಬೇಯಿಸಿದ ಹೀರೇಕಾಯಿ ಸಿಪ್ಪೆ ತಣ್ಣಗಾಗುವ ವರೆಗೆ ಕಾದು, ಒಂದು ಮಿಕ್ಸೀ ಜಾರಿಗೆ ಸಿಪ್ಪೆ ಮತ್ತು ತೆಂಗಿನ ತುರಿ ಸೇರಿಸಿ ಅರೆದು ಕೊಳ್ಳಿ. ಅದಕ್ಕೆ ಉಪ್ಪು , ಹುಣಸೆ ಹಣ್ಣು ಮತ್ತು ಹುರಿದ ಮಸಾಲೆ ಸೇರಿಸಿ ಪುನಃ 10 ಸೆಕೆಂಡುಗಳ ಕಾಲ ಅರೆಯಿರಿ. ಈ ರುಚಿಕರವಾದ ಚಟ್ನಿಯನ್ನು. ಬಿಸಿಯಾದ ಅನ್ನದೊಂದಿಗೆ ಅಥವಾ ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...