ಶುಕ್ರವಾರ, ಡಿಸೆಂಬರ್ 4, 2015

Aloo Parota recipe in Kannada | ಆಲೂ ಪರೋಟ ಮಾಡುವ ವಿಧಾನ


ಆಲೂ ಪರೋಟ ಮಾಡುವ ವಿಧಾನ

ಆಲೂ ಪರಾಟ ಅಥವಾ ಆಲೂ ಪರೋಟ ಉತ್ತರ ಭಾರತದ ಅಡುಗೆಯಾಗಿದೆ. ಆದರೂ ನಾವು ಅದನ್ನು ಕರ್ನಾಟಕದ ಅಡುಗೆಗಳೊಂದಿಗೆ ಸೇರಿಸಿದ್ದೇವೆ. ಏಕೆಂದರೆ ಈಗಿನ ದಿನಗಳಲ್ಲಿ ಆಲೂ ಪರಾಟ ಕರ್ನಾಟಕದಾದ್ಯಂತ ಚೆನ್ನಾಗಿ ಆಚರಣೆಯಲ್ಲಿದೆ. ಉತ್ತರ ಭಾರತೀಯರು ನಮ್ಮ ದೋಸೆ , ಇಡ್ಲಿ ಮತ್ತು ಸಾಂಬಾರ್ ಹೇಗೆ ಇಷ್ಟ ಪಡುತ್ತಾರೋ ಹಾಗೆ ನಾವು ಅವರ ಪರಾಟ, ರೋಟಿ ಮತ್ತು ನಾರ್ತ್ ಇಂಡಿಯನ್ ಕರೀ ಗಳನ್ನು ಇಷ್ಟ ಪಡುತ್ತೇವೆ.
ಆದರೆ ಇಲ್ಲಿ ಹೇಳಲೇ ಬೇಕಾದ ವಿಷಯವೆಂದರೆ ಕರ್ನಾಟಕದಲ್ಲಿ ಹೆಚ್ಚಿನ ಉತ್ತರ ಭಾರತೀಯ ಅಡುಗೆಗಳನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ಸ್ವಲ್ಪ ಬದಲಾಯಿಸಲಾಗಿದೆ. ದಕ್ಷಿಣ ಭಾರತದವರಾದ ನಮಗೆ ಮೂಲ ಪಾಕವಿಧಾನಕ್ಕಿಂತ ಬದಲಾಯಿಸಿದ ಪಾಕವಿಧಾನವೇ ಹೆಚ್ಚು ರುಚಿಕರವೆನ್ನಿಸುತ್ತದೆ. ಆದರೆ ಅವರಿಗೂ ಸಹ ನಮ್ಮ ಅಡುಗೆಗಳ ಬಗ್ಗೆ ಹೀಗೇ ಅನ್ನಿಸಬಹುದು. ಏನಾದರಾಗಲಿ ಈಗ ಆಲೂ ಪರೊಟದ ಪಾಕವಿಧಾನ ಹೇಗೆಂದು ತಿಳಿಯೋಣ. ಗಮನಿಸಿ ಈ ಪಾಕವಿಧಾನದಲ್ಲಿ ಯಾವುದೇ ರೆಡೀಮೇಡ್ ಪುಡಿ ಅಥವಾ ಈರುಳ್ಳಿ ಅಥವಾ ಗರಂ ಮಸಾಲಾ ಉಪಯೋಗಿಸಿಲ್ಲ, ಬದಲಿಗೆ ತಾಜಾ ಮಸಾಲೆಗಳನ್ನು ಬಳಸಲಾಗುತ್ತದೆ. ಆದರೆ ಇದು ನಿಜವಾಗಿಯೂ ಬಹಳ ರುಚಿಯಾಗಿದ್ದು, ಒಮ್ಮೆಯಾದರೂ ಈ ರೀತಿ ಮಾಡಿ ನೋಡಿ. ನಿಮಗೆ ಖಂಡಿತ ಇಷ್ಟವಾಗುವುದು.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 40 ನಿಮಿಷ
ಪ್ರಮಾಣ : 8 no

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

 1. 2 ದೊಡ್ಡ ಆಲೂಗಡ್ಡೆ
 2. 3 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
 3. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
 4. ಒಂದು ದೊಡ್ಡ ಚಿಟಿಕೆ ಇಂಗು
 5. 1/2 ಟೀಸ್ಪೂನ್ ಸಾಸಿವೆ
 6. 1/2 ಟೀಸ್ಪೂನ್ ಜೀರಿಗೆ
 7. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
 8. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ
 9. 2 ಟೀಸ್ಪೂನ್ ಕತ್ತರಿಸಿದ ಕರಿಬೇವಿನ ಸೊಪ್ಪು
 10. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತುಂಬರಿ ಸೊಪ್ಪು
 11. 2 ಟೇಬಲ್ ಸ್ಪೂನ್ ಕತ್ತರಿಸಿದ ಮೆಂತೆ ಸೊಪ್ಪು (ಬೇಕಾದಲ್ಲಿ)
 12. 2 ಟೀಸ್ಪೂನ್ ಅಡುಗೆ ಎಣ್ಣೆ
 13. ಉಪ್ಪು ರುಚಿಗೆ ತಕ್ಕಷ್ಟು.

ಆಲೂ ಪರೋಟ ಮಾಡುವ ವಿಧಾನ:

 1. ಗೋಧಿಹಿಟ್ಟನ್ನು ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಮುಚ್ಚಿಡಿ. ಆಲೂಗಡ್ಡೆ ತೊಳೆದು ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಕುಕ್ಕರ್‌ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ.
 2. ಪರೊಟಕ್ಕೆ ತುಂಬಲು ಬೇಕಾದ ಮಸಾಲಾ ತಯಾರಿಸಲು ಬೇರೆ ಎಲ್ಲಾ ಪದಾರ್ಥಗಳನ್ನು ಸಿದ್ಧಮಾಡಿಟ್ಟುಕೊಳ್ಳಿ. ಆಲೂಗಡ್ಡೆ ಬೆಂದಮೇಲೆ ಸಿಪ್ಪೆ ತೆಗೆದು ಕೈ ಅಥವಾ ಒಂದು ಫೋರ್ಕ್ ಬಳಸಿ ಚೆನ್ನಾಗಿ ಪುಡಿ ಮಾಡಿ.
 3. ಆಲೂ ಪರಾಟದ ಮಸಾಲಾ ಮಾಡಲು, ಮೊದಲಿಗೆ ಒಲೆ ಹತ್ತಿಸಿ ಮಧ್ಯಮ ಉರಿಯಲ್ಲಿಡಿ. ಒಲೆ ಮೇಲೆ ಬಾಣಲೆ ಇರಿಸಿ, ಎಣ್ಣೆ ಮತ್ತು ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಜೀರಿಗೆ ಹಾಕಿ ತಕ್ಷಣ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಕೈಯಾಡಿಸಿ.
 4. ನಂತರ ಕತ್ತರಿಸಿದ ಕರಿಬೇವಿನ ಸೊಪ್ಪು ಹಾಕಿ. ಕೂಡಲೇ ಕೊತ್ತುಂಬರಿ ಸೊಪ್ಪು, ಮೆಂತೆ ಸೊಪ್ಪು ಮತ್ತು ಇಂಗು ಸೇರಿಸಿ ಮಗುಚಿ. ಒಲೆ ಆರಿಸಿ.
 5. ಈಗ ಅದೇ ಬಾಣಲೆಗೆ ಪುಡಿಮಾಡಿದ ಆಲೂಗಡ್ಡೆ, ಮತ್ತು ಉಪ್ಪು ಸೇರಿಸಿಚೆನ್ನಾಗಿ ಮಗುಚಿ.
 6. ಈಗ ಆಲೂ ಪರೋಟ ಮಾಡಲು, ಗೋಧಿ ಹಿಟ್ಟನ್ನು ಮುಟ್ಟಿಕೊಂಡು, ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಎರಡೂ ಕೈ ಬೆರಳುಗಳನ್ನು ಬಳಸಿ ಒಂದು ಬಟ್ಟಲಿನ ಆಕಾರ ಮಾಡಿ. ಆ ಬಟ್ಟಲಿನ ಅಕಾರದೊಳಗೆ ಒಂದು ಸಣ್ಣ ನಿಂಬೆ ಗಾತ್ರದ ಮಸಾಲಾ ಇರಿಸಿ.
 7. ಎಚ್ಚರಿಕೆಯಿಂದ ತುದಿಗಳನ್ನು ಒಟ್ಟಿಗೆ ತಂದು ಮಸಾಲೆಯನ್ನು ಒಳಗೆ ಸೇರಿಸಿ. ಹೊರಗಿನ ಹಿಟ್ಟು ಹೆಚ್ಚು ಕಡಿಮೆ ಎಲ್ಲ ಕಡೆ ಒಂದೇ ದಪ್ಪವಿರುವಂತೆ ಜಾಗ್ರತೆವಹಿಸಿ. ನಿಧಾನವಾಗಿ ಅದನ್ನು ಒತ್ತಿ ಸ್ವಲ್ಪ ಚಪ್ಪಟೆ ಮಾಡಿ.
 8. ಸಾಕಷ್ಟು ಗೋಧಿ ಹಿಟ್ಟನ್ನು ಬಳಸಿ ಚಪ್ಪಟೆ ಮಾಡಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
 9. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಬೇಕಾದಲ್ಲಿ ಖಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಮೊಸರು ಮತ್ತು ಉಪ್ಪಿನಕಾಯಿ ಜೊತೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...