ಬುಧವಾರ, ಡಿಸೆಂಬರ್ 2, 2015

Heerekayi dose in Kannada | ಹೀರೆಕಾಯಿ ದೋಸೆ


ಹೀರೆಕಾಯಿ ದೋಸೆ ಮಾಡುವ ವಿಧಾನ 

ಹೀರೇಕಾಯಿ ದೋಸೆ ಒಂದು ಇತರ ದೋಸೆಗಳಿಗಿಂತ ವಿಭಿನ್ನವಾಗಿದೆ. ಸಾಂಬಾರ್ ಪದಾರ್ಥಗಳನ್ನು ಉಪಯೋಗಿಸಿ ವಿಶೇಷ ವಾಗಿ ತಯಾರಿಸಲಾದ ದೋಸೆ ಹಿಟ್ಟಿನಲ್ಲಿ ವೃತ್ತಾಕಾರದ ಗಾಲಿಗಳನ್ನು ಅದ್ದಿ ತವಾ ಮೇಲೆ ಇಟ್ಟು ಈ ದೋಸೆ ಮಾಡಲಾಗುತ್ತದೆ. ಈ ದೋಸೆಯನ್ನು ಬೆಳಗ್ಗಿನ ಉಪಾಹಾರ ಅಥವಾ ಸಂಜೆಯ ತಿಂಡಿಯಂತೆ ತಿನ್ನಬಹುದು. ಹೀರೇಕಾಯಿ ದೋಸೆಯನ್ನು " ಹೀರೇಕಾಯಿ ಚಟ್ಟಿ " ಎಂದು ಸಹ ಕರೆಯಲಾಗುತ್ತದೆ.
ಹೀರೇಕಾಯಿ ಅತ್ಯಂತ ಹೆಚ್ಚು ನಾರಿನಂಶ ಹೊಂದಿರುವ ತರಕಾರಿಯಾಗಿದ್ದು ಅನೇಕ ಆರೋಗ್ಯಕಾರ ಅಂಶಗಳನ್ನು ಹೊಂದಿದೆ. ಇದು ದೇಹದ ಸಕ್ಕರೆ ಅಂಶ ಹತೋಟಿಯಲ್ಲಿಡಲು, ರಕ್ತ ಶುದ್ದೀಕರಣ ಮಾಡಲು ಮತ್ತು ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಈ ದೋಸೆ ಮಾಡುವಾಗ ಹೀರೇಕಾಯಿ ಸಿಪ್ಪೆ ತೆಗೆಯಬೇಕಾಗುತ್ತದೆ. ಹಾಗೆ ತೆಗೆದ ಸಿಪ್ಪೆಯಿಂದ ರುಚಿಕರ ಚಟ್ನಿ ತಯಾರಿಸಬಹುದು. ಹಾಗಾಗಿ ಈ ದೋಸೆ ಯೊಂದಿಗೆ ಹೀರೇಕಾಯಿ ಸಿಪ್ಪೆ ಚಟ್ನಿ ಯನ್ನು ಸಹ ನಾವು ಪೋಸ್ಟ್ ಮಾಡಿದ್ದೇವೆ. ನೀವು ದೋಸೆಯೊಂದಿಗೆ ಚಟ್ನಿಯನ್ನು ಕೂಡ ಮಾಡಬಹುದು.

ತಯಾರಿ ಸಮಯ: 5 ಗಂಟೆ
ಅಡುಗೆ ಸಮಯ: 30 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ದೊಡ್ಡ ಹೀರೇಕಾಯಿ (ಎಳೆಯದು)
  2. 4 ಕಪ್ ದೋಸೆ ಅಕ್ಕಿ
  3. 3-4 ಒಣ ಮೆಣಸಿನಕಾಯಿ
  4. 3 ಕೊತ್ತಂಬರಿ ಬೀಜ
  5. 1/2 ಜೀರಿಗೆ
  6. 1 ತೆಂಗಿನ ತುರಿ (ಬೇಕಾದಲ್ಲಿ)
  7. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  8. ಉಪ್ಪು ರುಚಿಗೆ ತಕ್ಕಷ್ಟು
  9. 2 ಕಪ್ ನೀರು (ಅಂದಾಜು)

ಹೀರೇಕಾಯಿ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ಕನಿಷ್ಟ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು. ನಂತರ ಅದನ್ನು ರುಬ್ಬುವಾಗ ಕೊತ್ತಂಬರಿ ಬೀಜ, ಒಣ ಮೆಣಸಿನಕಾಯಿ, ತೆಂಗಿನತುರಿ, ಜೀರಿಗೆ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಬೇಕು. ಹಿಟ್ಟು ದೋಸೆ ಹಿಟ್ಟಿನಷ್ಟು ದಪ್ಪವಿರಲಿ.
  2. ಹೀರೆಕಾಯಿಯ ಮೊನಚಾದ ಅಂಚನ್ನು ಹೆರೆಸಿ, ಚೆನ್ನಾಗಿ ತೊಳೆಯಿರಿ. ನಂತರ ಹೀರೇಕಾಯಿ ಸಿಪ್ಪೆಯನ್ನು ಸ್ವಲ್ಪ ದಪ್ಪನಾಗಿ ತೆಗೆದಿಟ್ಟು ಕೊಳ್ಳಿ. ಸಿಪ್ಪೆ ತೆಗೆದ ಹೀರೆಕಾಯಿಯನ್ನು ಅತ್ಯಂತ ತೆಳುವಾದ ಗಾಲಿಗಳನ್ನಾಗಿ ಮಾಡಿಟ್ಟು ಕೊಳ್ಳಿ.
  3. ಕಬ್ಬಿಣದ ಹೆಂಚು ಅಥವಾ ನಾನ್ ಸ್ಟಿಕ್ ದೋಸೆ ಪ್ಯಾನ್ ತೆಗೆದುಕೊಳ್ಳಿ. ಒಲೆ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿಕೊಳ್ಳಿ. ಕಬ್ಬಿಣದ ಹೆಂಚಾದಲ್ಲಿ ಎಣ್ಣೆ ಹಚ್ಚಿ. ನಂತರ ಹೆಚ್ಚಿದ ಗಾಲಿಗಳನ್ನು ರುಬ್ಬಿದ ಹಿಟ್ಟಿನಲ್ಲಿ ಅದ್ದಿ ದೋಸೆ ಕಾವಲಿಯಲ್ಲಿ ಇಡುತ್ತಾ ದೋಸೆ ರೂಪಕ್ಕೆ ತನ್ನಿ. ಈ ಹಂತದಲ್ಲಿ ನೀವು ಸಾಕಷ್ಟು ವೇಗವಾಗಿ ಇರಬೇಕು. ಮಧ್ಯದಲ್ಲಿ ಉಳಿದ ಜಾಗ ತುಂಬಲು ತುಂಬಲು ಸ್ವಲ್ಪ ಹಿಟ್ಟು ಹಾಕಿ.
  4. ಮೇಲಿನಿಂದ ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳ ಮುಚ್ಚಿ. ಹೀಗೆ ಮಾಡುವುದರಿಂದ ದೋಸೆ ಮೃದುವಾಗುವುದು.
  5. ಸುಮಾರು ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆಗೆದು, 1 ಚಮಚ ಎಣ್ಣೆ ಹಾಕಿ. ನಿಧಾನವಾಗಿ ದೋಸೆಯನ್ನು ಮಗುಚಿ ಇನ್ನೊಂದು ಕಡೆಯೂ ಬೇಯಿಸಿ. ಮುಚ್ಚಳ ಮುಚ್ಚುವ ಅಗತ್ಯವಿಲ್ಲ. ಬಿಸಿಯಾಗಿರುವಾಗಲೇ ತಿನ್ನಲು ಕೊಡಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...