ಮಂಗಳವಾರ, ಡಿಸೆಂಬರ್ 1, 2015

Bengaluru hotel style idli sambar in Kannada | ಬೆಂಗಳೂರು ಶೈಲಿಯ ಇಡ್ಲಿ ಸಾಂಬಾರ್


ಬೆಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ 

ಇಡ್ಲಿ - ಸಾಂಬಾರ್ ಕರ್ನಾಟಕದ ಬಹಳ ಸಾಮಾನ್ಯ ಉಪಹಾರ ವಾಗಿದ್ದು, ಸಾಂಬಾರ್ ಮತ್ತು ಚಟ್ನಿ ಮಾಡುವ ವಿಧಾನ ಒಂದು ಸ್ಥಳದಿಂದ ಇನ್ನೊಂದಕ್ಕೆ ಬದಲಾಗುತ್ತವೆ . ನೀವು ಎಂದಾದರೂ ಬೆಂಗಳೂರು ಹೋಟೆಲ್‌ಗಳಲ್ಲಿ ಅಥವಾ ದರ್ಶಿನಿಗಳಲ್ಲಿ ( ಫಾಸ್ಟ್ ಫುಡ್ ) ಇಡ್ಲಿ - ಸಾಂಬಾರ್ ತಿಂದಿದ್ದರೆ, ಇಡ್ಲಿ ಎಷ್ಟು ರುಚಿಕರವಾಗಿದೆ ಎನ್ನುವಿರಿ...ಕಾರಣ ಅವರು ಇಡ್ಲಿ ಜೊತೆಗೆ ನೀಡುವ ಸಾಂಬಾರ್ ಇಡ್ಲಿಯ ರುಚಿಯನ್ನು ಅಷ್ಟರ ಮಟ್ಟಿಗೆ ಹೆಚ್ಚಿಸುತ್ತದೆ... ಕರ್ನಾಟಕದ ಇತರ ಪ್ರದೇಶಗಳಲ್ಲೂ ಸಾಂಬಾರ್ ರುಚಿಕರವಾಗಿರುತ್ತದೆ ಆದರೆ ಸ್ವಲ್ಪ ಭಿನ್ನವಾಗಿ ಇರುತ್ತದೆ ಬೇರೆ ಸಾಂಬಾರ್ ಗಳ ಪಾಕವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಸುಲಭ ಮತ್ತು ಸರಳವಾದ ಸಾಂಬಾರ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ. 

ಇಡ್ಲಿ ಸಾಂಬಾರ್ ವಿಡಿಯೋ 


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

 1. 1/2 ಕಪ್ ಸಾಂಬಾರ್ ಈರುಳ್ಳಿ ಅಥವಾ 1 ದೊಡ್ಡ ಈರುಳ್ಳಿ
 2. 1 ಕ್ಯಾರೆಟ್
 3. 1 ಸಣ್ಣ ಆಲೂಗಡ್ಡೆ(ಬೇಕಾದಲ್ಲಿ)
 4. 1 ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
 5. 1 ದೊಡ್ಡ ನೆಲ್ಲಿಕಾಯಿ ಗಾತ್ರದ ಬೆಲ್ಲ
 6. 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
 7. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆಗೆ ಬೇಕಾಗುವ ಪದಾರ್ಥಗಳು:

 1. 1/4 ಕಪ್ ತೆಂಗಿನ ತುರಿ
 2. 2-3 ಒಣ ಮೆಣಸಿನ ಕಾಯಿ
 3. 2 ಟೀಸ್ಪೂನ್ ತೊಗರಿ ಬೇಳೆ
 4. 1 ಟೀಸ್ಪೂನ್ ಕಡ್ಲೆ ಬೇಳೆ
 5. 2 ಟೀಸ್ಪೂನ್ ಕೊತ್ತಂಬರಿ ಬೀಜ
 6. 1/4 ಟೀಸ್ಪೂನ್ ಮೆಂತೆ
 7. 5-6 ಕಾಳು ಮೆಣಸು
 8. 1/2 ಬೆರಳುದ್ದ ಚಕ್ಕೆ
 9. ಒಂದು ದೊಡ್ಡ ಚಿಟಿಕೆ ಇಂಗು
 10. 1 ಹಸಿ ಮೆಣಸಿನ ಕಾಯಿ
 11. 4-5 ಕರಿ ಬೇವಿನ ಎಲೆ
 12. 1 ಟೊಮ್ಯಾಟೋ
 13. 2 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

 1. 1 ಒಣ ಮೆಣಸಿನ ಕಾಯಿ
 2. 1/4 ಟೀಸ್ಪೂನ್ ಸಾಸಿವೆ
 3. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ:

 1. ಕ್ಯಾರೆಟ್, ಆಲೂಗಡ್ಡೆ ಮತ್ತು ಈರುಳ್ಳಿ ಗಳನ್ನು ಸ್ವಚ್ಛ ಗೊಳಿಸಿ ಹೆಚ್ಚಿಕೊಳ್ಳಿ. ಒಂದು ಕುಕ್ಕರ್ ನಲ್ಲಿ ಈ ತರಕಾರಿಗಳನ್ನು ಹಾಕಿ ನೀರು ಮತ್ತು ಸ್ವಲ್ಪ ಉಪ್ಪಿನೊಂದಿಗೆ 2 ವಿಷಲ್ ಮಾಡಿ ಬೇಯಿಸಿಕೊಳ್ಳಿ.
 2. ಒಂದು ಬಾಣಲೆ ಯನ್ನು ಸ್ಟೋವ್ ಮೇಲೆ ಇಡಿ. ಉರಿ ಕಡಿಮೆ ಇರಲಿ. 1 ಟೀಸ್ಪೂನ್ ಎಣ್ಣೆ ಹಾಕಿ ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಅದೇ ಬಾಣಲೆಗೆ ತೊಗರಿಬೇಳೆ , ಕಡ್ಲೆ ಬೇಳೆ ಮತ್ತು ಕೊತ್ತುಂಬರಿ ಬೀಜಗಳನ್ನು ಸೇರಿಸಿ ಹುರಿಯಿರಿ. ಬೇಳೆಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ಮೆಂತ್ಯ , ಕಾಳು ಮೆಣಸು ಮತ್ತು ಚಕ್ಕೆ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
 3. ಈಗ ಇಂಗು , ಕರಿಬೇವಿನ ಸೊಪ್ಪು ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ಕೊನೆಯಲ್ಲಿ ಕತ್ತರಿಸಿದ ಟೊಮೆಟೊ ಸೇರಿಸಿ, 10 ಸೆಕೆಂಡ್ ಗಳ ಕಾಲ ಹುರಿದು ಸ್ಟೌವ್ ಆಫ್ ಮಾಡಿ.
 4. ಹುರಿದ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ, ತೆಂಗಿನ ತುರಿ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆಯಿರಿ.
 5. ತರಕಾರಿಗಳು ಬೆಂದ ಮೇಲೆ ಅದೇ ಕುಕ್ಕರ್ಗೆ ಅರೆದ ಮಸಾಲಾ ಹಾಕಿ. ಉಪ್ಪು , ಬೆಲ್ಲ ಮತ್ತು ಹುಣಸೆ ರಸ ಸೇರಿಸಿ ಒಂದು ಕುದಿ ಬರಿಸಿ.
 6. ನಂತರ ಕೊತ್ತಂಬರಿ ಸೊಪ್ಪು ಹಾಕಿ, ಒಮ್ಮೆ ಮಗುಚಿ ಸ್ಟೋವ್ ಆಫ್ ಮಾಡಿ. ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

2 ಕಾಮೆಂಟ್‌ಗಳು:

Related Posts Plugin for WordPress, Blogger...