ಶುಕ್ರವಾರ, ಡಿಸೆಂಬರ್ 18, 2015

Doddapathre chutney in Kannada | ದೊಡ್ಡಪತ್ರೆ ಚಟ್ನಿ


ದೊಡ್ಡಪತ್ರೆ ಚಟ್ನಿಯನ್ನು ದೊಡ್ಡಪತ್ರೆ ಎಲೆ, ಹುರಿದ ಕಡ್ಲೆಬೇಳೆ, ಉದ್ದಿನಬೇಳೆ, ಒಣಮೆಣಸಿನ ಕಾಯಿ, ತೆಂಗಿನ ತುರಿ ಮತ್ತು ಹುಣಿಸೆಹಣ್ಣು ಹಾಕಿ ತಯಾರಿಸಲಾಗುತ್ತದೆ. ಕಡ್ಲೆಬೇಳೆ ಮತ್ತು ಉದ್ದಿನಬೇಳೆಗಳಲ್ಲಿ ಯಾವುದಾದರೂ ಒಂದನ್ನು ಹಾಕಿದರೂ ಸಾಕಾಗುತ್ತದೆ. ಈ ಸರಳವಾದ ಚಟ್ನಿ ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.
ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 3 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

 1. 2 ಹಿಡಿ ದೊಡ್ಡಪತ್ರೆ ಎಲೆಗಳು
 2. 1 ಹಿಡಿ ಕರಿಬೇವಿನ ಎಲೆಗಳು
 3. 2 ಟೀಸ್ಪೂನ್ ಕಡ್ಲೆಬೇಳೆ
 4. 2 ಟೀಸ್ಪೂನ್ ಉದ್ದಿನಬೇಳೆ
 5. 2-4 ಒಣ ಮೆಣಸಿನಕಾಯಿ
 6. ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
 7. 1 ಕಪ್ ತೆಂಗಿನ ತುರಿ
 8. 1 ಟೀಸ್ಪೂನ್ ಅಡುಗೆ ಎಣ್ಣೆ
 9. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

 1. 1 ಒಣ ಮೆಣಸಿನಕಾಯಿ
 2. 1/2 ಟೀಸ್ಪೂನ್ ಸಾಸಿವೆ
 3. 1/2 ಟೀಸ್ಪೂನ್ ಉದ್ದಿನಬೇಳೆ
 4. 2 ಟೀಸ್ಪೂನ್ ಅಡುಗೆ ಎಣ್ಣೆ

ದೊಡ್ಡಪತ್ರೆ ಚಟ್ನಿ ಮಾಡುವ ವಿಧಾನ:

 1. ದೊಡ್ಡಪತ್ರೆ ಎಲೆಗಳನ್ನು ತೊಳೆದಿಟ್ಟು ಕೊಳ್ಳಿ. ಒಂದು ಬಾಣಲೆ ಬಿಸಿಮಾಡಿ, ಅದಕ್ಕೆ ಎಣ್ಣೆ, ಕೆಂಪು ಮೆಣಸಿನಕಾಯಿ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆ ಸೇರಿಸಿ ಹುರಿಯಿರಿ. ಬೇಳೆಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ, ಉರಿಯನ್ನು ಕಡಿಮೆ ಮಾಡಿ ಕರಿಬೇವಿನ ಎಲೆ ಸೇರಿಸಿ, ಒಂದು ನಿಮಿಷ ಹುರಿಯಿರಿ.
 2. ಈಗ ಅದೇ ಬಾಣಲೆಗೆ ದೊಡ್ಡಪತ್ರೆ ಎಲೆಗಳನ್ನು ಹಾಕಿ, ಎಲೆಗಳು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
 3. ಹುರಿದ ಪದಾರ್ಥಗಳನ್ನು ತೆಂಗಿನತುರಿ, ಉಪ್ಪು ಮತ್ತು ಹುಣಿಸೆ ಹಣ್ಣಿನೊಂದಿಗೆ ಅರೆಯಿರಿ. ಒಣಮೆಣಸು, ಸಾಸಿವೆ, ಉದ್ದಿನಬೇಳೆಯ ಒಗ್ಗರಣೆ ಕೊಡಿ. ಬಿಸಿ ಬಿಸಿ ಅನ್ನದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...