ಮಂಗಳವಾರ, ಡಿಸೆಂಬರ್ 22, 2015

Genasina happala in Kannada | ಗೆಣಸಿನ ಹಪ್ಪಳ


 ಗೆಣಸಿನ ಹಪ್ಪಳ ಮಾಡುವ ವಿಧಾನ 

ಮನೆಯಲ್ಲೇ ಗೆಣಸಿನ ಹಪ್ಪಳ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ನಾನು ಹಪ್ಪಳ ಮಾಡುವಾಗ ಸಾಧಾರಣವಾಗಿ ಅರೆವಾಸಿ ಸಾದಾ ಹಪ್ಪಳ, ಇನ್ನರ್ಧ ಮಸಾಲೆ ಹಪ್ಪಳಗಳನ್ನು ಮಾಡುತ್ತೇನೆ. ಹಾಗೆಯೇ ಇಲ್ಲಿ ಕೂಡ ಸಾದಾ ಮತ್ತು ಮಸಾಲೆ ಹಪ್ಪಳ ಮಾಡುವ ವಿಧಾನಗಳೆರಡನ್ನೂ ವಿವರಿಸಿದ್ದೇನೆ.
ಈ ರೀತಿಯ ಹಪ್ಪಳ ಮಾಡಲು ಗೆಣಸು ಅಥವಾ ಆಲೂಗಡ್ಡೆಯನ್ನು ಬಳಸಬಹುದು. ಎರಡೂ ತುಂಬಾ ರುಚಿಯಾಗಿರುತ್ತದೆ. ಆದರೆ ಆಲೂಗಡ್ಡೆ ಹಪ್ಪಳಕ್ಕೆ ಹೋಲಿಸಿದರೆ ಗೆಣಸಿನ ಹಪ್ಪಳ ಸ್ವಲ್ಪ ಗಟ್ಟಿ ಇರುತ್ತದೆ. ಮನೆಯಲ್ಲಿ ಹಪ್ಪಳ ಮಾಡುವುದು ಬಹಳ ಮಜವಾಗಿರುತ್ತದೆ. ಅದರಲ್ಲೂ ಮಕ್ಕಳಿದ್ದರೆ ಅವರಿಗೆ ಖಂಡಿತ ಖುಷಿಯಾಗುವುದು. ಆದ್ದರಿಂದ ಹಪ್ಪಳ ಮಾಡುವುದು ಹೇಗೆಂದು ತಿಳಿದು ಮನೆಯಲ್ಲಿ ಮಾಡಿ ಆನಂದಿಸಿ.!!.

ತಯಾರಿ ಸಮಯ: 30 ನಿಮಿಷ + 3 ದಿನ ಒಣಗಲು
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 10 ಹಪ್ಪಳ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1/2 ಕೆಜಿ ಸಿಹಿಗೆಣಸು
  2. 1/2 ಟೀಸ್ಪೂನ್ ಅಚ್ಚಖಾರದ ಪುಡಿ
  3. 1/2 1/2 ಟೀಸ್ಪೂನ್ ಜೀರಿಗೆ
  4. ಒಂದು ದೊಡ್ಡ ಚಿಟಿಕೆ ಇಂಗು
  5. 2 ಟೀಸ್ಪೂನ್ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು
  7. 2 ಚಿಕ್ಕ ಪ್ಲಾಸ್ಟಿಕ್ ಹಾಳೆಗಳು
  8. 1 ದೊಡ್ಡ ಪ್ಲಾಸ್ಟಿಕ್ ಹಾಳೆ

ಗೆಣಸಿನ ಹಪ್ಪಳ ಮಾಡುವ ವಿಧಾನ:

  1. ಗೆಣಸನ್ನು ತೊಳೆದು ದೊಡ್ಡ ತುಂಡುಗಳಾಗಿ ಕತ್ತರಿಸಿ. ಬೇಕಾದಷ್ಟು ನೀರು ಮತ್ತು ಉಪ್ಪು ಹಾಕಿ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿ. ಬೆಂದಮೇಲೆ ಸಿಪ್ಪೆ ತೆಗೆದು ಎರಡು ಭಾಗಗಳಾಗಿ ವಿಂಗಡಿಸಿ. ಒಂದು ಭಾಗ ಸಾದಾ ಹಪ್ಪಳಕ್ಕಿರಲಿ. ಇನ್ನೊಂದು ಭಾಗಕ್ಕೆ, ಅಚ್ಚ ಖಾರದ ಪುಡಿ, ಜೀರಿಗೆ ಮತ್ತು ಇಂಗು ಸೇರಿಸಿ.
  2. ಈಗ ಎರಡು ಭಾಗಗಳನ್ನು ನೀರು ಬೆರೆಸದೇ ಅರೆದು ಕೊಳ್ಳಿ ಇಲ್ಲವೇ ಗುದ್ದಿ ಕೊಳ್ಳಿ. ಅಂಗೈಗೆ ಎಣ್ಣೆ ಸವರಿ ಕೊಂಡು ನಿಂಬೆ ಗಾತ್ರದ ಉಂಡೆ ಮಾಡಿ ಕೊಳ್ಳಿ.
  3. ಒಂದು ಸಣ್ಣ ಪ್ಲಾಸ್ಟಿಕ್ ಹಾಳೆಯನ್ನು ತೆಗೆದುಕೊಂಡು ಎಣ್ಣೆ ಹಚ್ಚಿ. ನಂತರ ಒಂದು ಉಂಡೆಯನ್ನು ಇರಿಸಿ ಎಣ್ಣೆ ಹಚ್ಚಿದ ಮತ್ತೊಂದು ಸಣ್ಣ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ. ಈಗ ಒಂದು ಅಗಲವಾದ ಪಾತ್ರೆ ಅಥವಾ ಮಣೆಯಿಂದ ಒತ್ತಿ. ಜಾಗ್ರತೆಯಿಂದ ಮೇಲಿನ ಪ್ಲಾಸ್ಟಿಕ್ ಹಾಳೆಯನ್ನು ತೆಗೆಯಿರಿ.
  4. ದೊಡ್ಡ ಪ್ಲಾಸ್ಟಿಕ್ ಹಾಳೆಗೆ ಒತ್ತಿದ ಹಪ್ಪಳವನ್ನು ಸಣ್ಣ ಪ್ಲಾಸ್ಟಿಕ್ ಸಮೇತ ಹಾಕಿ, ಸಣ್ಣ ಪ್ಲಾಸ್ಟಿಕನ್ನು ಜಾಗ್ರತೆಯಿಂದ ತೆಗೆಯಿರಿ. ಎಲ್ಲ ಹಪ್ಪಳವನ್ನು ಇದೆ ರೀತಿ ಮಾಡಿ. ನಂತರ ಬಿಸಿಲಿನಲ್ಲಿಟ್ಟು ಒಣಗಿಸಿ. 3-4 ಗಂಟೆಗಳ ನಂತರ ಎಚ್ಚರಿಕೆಯಿಂದ ಹಪ್ಪಳ ಗಳನ್ನು ತಿರುವಿ ಹಾಕಿ. ಒಳ್ಳೆ ಬಿಸಿಲಿನಲ್ಲಿ 3 ದಿನಗಳ ಕಾಲ ಒಣಗಿಸ ಬೇಕಾಗುತ್ತದೆ. ಒಣಗಿದ ನಂತರ ಎಣ್ಣೆ ಅಥವಾ ಓವೆನ್ ನಲ್ಲಿ ಕಾಯಿಸಿ. ಬೇರೆ ಹಪ್ಪಳ ಗಳಿಗೆ ಹೋಲಿಸಿದರೆ ಸ್ವಲ್ಪ ಹೆಚ್ಚು ಸಮಯ ಕಾಯಿಸ ಬೇಕಾಗುತ್ತದೆ. ತಣ್ಣಗಾದ ಮೇಲೆ ಬಡಿಸಿ ಏಕೆಂದರೆ ಬಿಸಿ ಹಪ್ಪಳ ಗರಿ ಗರಿಯಾಗಿರುವುದಿಲ್ಲ.

ಶನಿವಾರ, ಡಿಸೆಂಬರ್ 19, 2015

Doddapatre recipes in kannada | ದೊಡ್ಡಪತ್ರೆಯ ಹಲವಾರು ಅಡುಗೆಗಳು ಮತ್ತು ಔಷಧೀಯ ಗುಣಗಳು

ದೊಡ್ಡಪತ್ರೆಯ ಹಲವಾರು ಅಡುಗೆಗಳು ಮತ್ತು ಔಷಧೀಯ ಗುಣಗಳು

ಎಲ್ಲರಿಗೂ ನಮಸ್ಕಾರ!! ಒಂದು ಸಣ್ಣ ವಿರಾಮದ ನಂತರ, ಔಷಧೀಯ ಗುಣಗಳಿಗೆ ಪ್ರಸಿದ್ಧವಾಗಿರುವ "ದೊಡ್ಡಪತ್ರೆ" ಅಥವಾ "ಸಾಂಬ್ರಾಣಿ ಸೊಪ್ಪು" ಅಥವಾ "ಸಾಂಬಾರ್ ಬಳ್ಳಿ" ಯಿಂದ ತಯಾರಿಸಬಹುದಾದ ಹಲವು ಪಾಕವಿಧಾನಗಳ ಸಂಗ್ರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ. ದೊಡ್ಡಪತ್ರೆ ಎಲೆಗಳು ಮೃದುವಾಗಿದ್ದು, ದಪ್ಪನಾಗಿದ್ದು, ಓರೆಗಾನೊ ರೀತಿಯ ಸವಾಸನೆಯನ್ನು ಹೊಂದಿದೆ. ಭಾರತದಲ್ಲಿ ಈ ಸಸ್ಯ ಬೇರೆ ಬೇರೆ ಹೆಸರಿನಲ್ಲಿ ಚಿರಪರಿಚಿತವಾಗಿದ್ದು ಹಿಂದಿಯಲ್ಲಿ ಅಜ್ವೈನ್ ಅಥವಾ ಪತ್ತರ್ಚೂರ್ ಎಂದು, ಮರಾಠಿಯಲ್ಲಿ ಓವ ಪಾನ್ ಎಂದು, ಮಲಯಾಳಂನಲ್ಲಿ ಪನಿಕೂರ್ಕಾ ಎಂದು, ತಮಿಳಿನಲ್ಲಿ ಓಮವಲ್ಲಿ ಅಥವಾ ಕರ್ಪೂರ ವಲ್ಲಿ ಎಂದು, ತೆಲುಗಿನಲ್ಲಿ ವಾಮು ಆಕು ಎಂದು, ಸಂಸ್ಕೃತದಲ್ಲಿ ಪಾಷಾನಬೇಡಿ ಎಂದು ಕರೆಯುತ್ತಾರೆ. ಈ ಸಸ್ಯ ಬಹಳ ಬೇಗ ಬೆಳೆಯುತ್ತದೆ ಮತ್ತು ಇದಕ್ಕೆ ಸ್ವಲ್ಪ ನೀರು ಸಾಕಾಗುತ್ತದೆ. ಯಾವುದೇ ರೀತಿಯ ಹವಾಮಾನದಲ್ಲಿ ಸಹ ಇದು ಬೆಳೆಯಬಲ್ಲದು. ನನ್ನ ಮನೆಯ ಬಾಲ್ಕನಿಯಲ್ಲಿ ದೊಡ್ಡಪತ್ರೆಯ ಸಸ್ಯವಿದ್ದು, ಅದರ ಚಿತ್ರ ಮತ್ತು ಅದರ ಎಲೆಗಳನ್ನು ಉಪಯೋಗಿಸಿ ಕೊಂಡು ತಯಾರಿಸಲಾದ ಅಡುಗೆಗಳ ಚಿತ್ರವನ್ನು ಇಲ್ಲಿ ನೀವು ಕಾಣಬಹುದು.




ಈ ಸಸ್ಯವನ್ನು ಭಾರತದ ಅನೇಕ ಮನೆಗಳಲ್ಲಿ ಬೆಳೆಸಲಾಗುತ್ತದೆ ಮತ್ತು ಬಳಸಲಾಗುತ್ತದೆ ಆದರೆ ಈ ಸಸ್ಯದ ಮೂಲ ಆಫ್ರಿಕ ಎನ್ನಲಾಗಿದೆ. ಸಸ್ಯದ ವೈಜ್ಞಾನಿಕ ಹೆಸರು "ಪ್ಲೆಕ್ಟ್ರಾಂತುಸ್ ಅಂಬೊನಿಕೂಸ್" ಆಗಿದೆ. ಇದನ್ನು ಇಂಡಿಯನ್ ಬೋರಾಗ್ (ಭಾರತ), ಮೆಕ್ಸಿಕನ್ ಮಿಂಟ್ (ಅಮೇರಿಕ), ಫ್ರೆಂಚ್ ತೈಮ್ (ದಕ್ಷಿಣ ಆಫ್ರಿಕಾ) , ಸ್ಪ್ಯಾನಿಷ್ ತೈಮ್(ಅಮೇರಿಕ), ಇಂಡಿಯನ್ ಮಿಂಟ್(ಆಫ್ರಿಕಾ, ಅಮೇರಿಕ), ಕಂಟ್ರೀ ಬೋರಾಗ್ (ಆಫ್ರಿಕಾ, ಭಾರತ, ಅಮೇರಿಕ) ಎಂದು ಸಹ ಕರೆಯಲಾಗುತ್ತದೆ. ಈ ಎಲೆಗಳನ್ನು ವಿವಿಧ ಅಡುಗೆಗಳಲ್ಲಿ ರುಚಿ ಮತ್ತು ಸುವಾಸನೆಗಾಗಿ ಬಳಸಲಾಗುತ್ತದೆ.
ದೊಡ್ಡಪತ್ರೆ ಎಲೆಗಳನ್ನು ಕೆಮ್ಮು, ಗಂಟಲು ನೋವು, ಕಟ್ಟಿಕೊಂಡ ಮೂಗು, ಸೋಂಕುಗಳು, ಸಂಧಿವಾತ, ಜ್ವರ, ತೀವ್ರ ಉಬ್ಬಸ, ಬಿಕ್ಕಳಿಕೆ, ಕಫ, ಸೆಳವು, ಅಪಸ್ಮಾರ , ಚರ್ಮದ ಹುಣ್ಣುಗಳು, ಕೀಟದ ಕಡಿತ, ಚರ್ಮದ ಅಲರ್ಜಿ, ಗಾಯಗಳು, ಭೇದಿ ಹೀಗೆ ಅನೇಕ ರೋಗಗಳ ಚಿಕಿತ್ಸೆಗೆ ಸಾಂಪ್ರದಾಯಿಕ ಔಷಧಿಯಾಗಿ ಉಪಯೋಗಿಸುತ್ತಾರೆ. ಜೊತೆಗೆ ಕ್ಯಾನ್ಸರ್ ನಿರ್ಮೂಲನೆಗೆ, ಕಿಡ್ನಿ ಆರೋಗ್ಯಕ್ಕಾಗಿ, ಜೀರ್ಣಶಕ್ತಿ ವೃದ್ಧಿಸಲು ಮತ್ತು ಯಕೃತ್ತಿನ ಆರೋಗ್ಯ ಸುಧಾರಿಸಲು ಸಹ ಈ ಎಲೆಗಳನ್ನು ಉಪಯೋಗಿಸುತ್ತಾರೆ. ಈ ಲೇಖನದ ಕೊನೆಯಲ್ಲಿ ಔಷಧೀಯ ಉಪಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀವು ಓದಬಹುದು. ಈಗ ದೊಡ್ಡಪತ್ರೆ ಎಲೆಗಳಿಂದ ಮಾಡಬಹುದಾದ ವಿವಿಧ ಅಡುಗೆಗಳನ್ನು ನೋಡೋಣ.

ದೊಡ್ಡಪತ್ರೆ ಎಳ್ಳು ಚಟ್ನಿ

ದೊಡ್ಡಪತ್ರೆ ಚಟ್ನಿಯನ್ನು ದೊಡ್ಡಪತ್ರೆ ಎಲೆ, ಹುರಿದ ಎಳ್ಳು, ಒಣಮೆಣಸಿನ ಕಾಯಿ, ಬೆಳ್ಳುಳ್ಳಿ, ತೆಂಗಿನ ತುರಿ, ಬೆಲ್ಲ ಮತ್ತು ಹುಣಿಸೆಹಣ್ಣು ಹಾಕಿ ತಯಾರಿಸಲಾಗುತ್ತದೆ. ಎಳ್ಳು ಮತ್ತು ಬೆಲ್ಲ ಹಾಕಿ ಮಾಡುವುದರಿಂದ ಈ ಚಟ್ನಿ ಒಂದು ವಿಶೇಷವಾದ ರುಚಿಯನ್ನು ಹೊಂದಿರುತ್ತದೆ. ಈ ಸರಳವಾದ ಚಟ್ನಿ ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.....[Read more »]

ದೊಡ್ಡಪತ್ರೆ ಬಜ್ಜಿ


ತುಂಬಾ ಸರಳವಾದ, ದೊಡ್ಡಪತ್ರೆ ಎಲೆಗಳಿಂದ ತಯಾರಿಸಿದ ಬಜ್ಜಿ ಅಥವಾ ಬೋಂಡಾ ಇಲ್ಲಿ ವಿವರಿಸಲಾಗಿದೆ.
 ಬಹಳ ಕಡಿಮೆ ಸಮಯದಲ್ಲಿ ರುಚಿಕರ ಬಜ್ಜಿಗಳನ್ನು ತಯಾರಿಸಬಹುದು. ಒಮ್ಮೆ ಪ್ರಯತ್ನಿಸಿ ನೋಡಿ!!....[Read more »]

ದೊಡ್ಡಪತ್ರೆ ಈರುಳ್ಳಿ ಚಟ್ನಿ

ದೊಡ್ಡಪತ್ರೆ ಈರುಳ್ಳಿ ಚಟ್ನಿ ಬಹಳ ರುಚಿಕರವಾದ ಚಟ್ನಿಯಾಗಿದ್ದು, ಈ ಚಟ್ನಿಯನ್ನು ದೊಡ್ಡಪತ್ರೆ ಎಲೆಗಳು, ಈರುಳ್ಳಿ ಮತ್ತು ತೆಂಗಿನ ಕಾಯಿ ಬಳಸಿಕೊಂಡು ತಯಾರಿಸಲಾಗುತ್ತದೆ. ಬಲುರುಚಿ ಮತ್ತು ಆರೋಗ್ಯಕರವಾದ ಈ ಚಟ್ನಿಯನ್ನು ಒಮ್ಮೆಯಾದರೂ ಮಾಡಿ ನೋಡಿ. ನಿಮಗೆ ಖಂಡಿತ ಇಷ್ಟವಾಗುವುದು. ....[Read more »]

ದೊಡ್ಡಪತ್ರೆ ತಂಬುಳಿ

ದೊಡ್ಡಪತ್ರೆ ಎಲೆಗಳಿಂದ ತಯಾರಿಸಲಾದ ರುಚಿಕರ ಮತ್ತು ಆರೋಗ್ಯಕರ ತಂಬುಳಿಯನ್ನು ಇಲ್ಲಿ ವಿವರಿಸಲಾಗಿದೆ. ಮೊಸರು, ತೆಂಗಿನಕಾಯಿ, ಜೀರಿಗೆ ಮತ್ತು ಕಾಳುಮೆಣಸು ಹಾಕಿ ತಯಾರಿಸಬಹುದಾದ ಈ ತಂಬುಳಿ ಅಥವಾ ಚಟ್ನಿ ಯನ್ನು ಅನ್ನ, ದೋಸೆ ಅಥವಾ ಇಡ್ಲಿಯೊಂದಿಗೆ ಸವಿಯಬಹುದು....[Read more »]

ದೊಡ್ಡಪತ್ರೆ ರಸಂ

ದೊಡ್ಡಪತ್ರೆ ಸಾರು ಅಥವಾ ರಸಂ ಅತ್ಯಂತ ಸುಲಭವಾಗಿ ತಯಾರಿಸ ಬಲ್ಲ ಸಾರುಗಳಲ್ಲೊಂದಾಗಿದೆ. ಈ ಸಾರು ಬೇಳೆ, ತೆಂಗಿನಕಾಯಿ ಅಥವಾ ಸಾರಿನ ಪುಡಿ ಇದ್ಯಾವುದನ್ನೂ ಹಾಕದೇ ಮಾಡುವಂತಹ ಅಪರೂಪದ ಸಾರಾಗಿದೆ. ಕಡಿಮೆ ಸಮಯದಲ್ಲಿ, ಸುಲಭವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಸಾರನ್ನು ಮಾಡಿ ಸವಿಯಿರಿ.....[Read more »]

ದೊಡ್ಡಪತ್ರೆ ಹಸಿ ತಂಬುಳಿ


ದೊಡ್ಡಪತ್ರೆ ಹಸಿ ಎಲೆಗಳಿಂದ ತಯಾರಿಸಲಾದ ಸರಳ ಮತ್ತು ರುಚಿಕರ ತಂಬುಳಿ ಅಥವಾ ರಾಯಿತ ಇಲ್ಲಿದೆ. ಮೊಸರು ಮತ್ತು ತೆಂಗಿನಕಾಯಿ ಹಾಕಿ ತಯಾರಿಸಬಹುದಾದ ಈ ತಂಬುಳಿಯನ್ನು ಅನ್ನದ ಜೊತೆ ಸವಿಯಲು ಬಲುರುಚಿ.....[Read more »]

ದೊಡ್ಡಪತ್ರೆ ಚಟ್ನಿ


ದೊಡ್ಡಪತ್ರೆ ಚಟ್ನಿಯನ್ನು ದೊಡ್ಡಪತ್ರೆ ಎಲೆ, ಹುರಿದ ಕಡ್ಲೆಬೇಳೆ, ಉದ್ದಿನಬೇಳೆ, ಒಣಮೆಣಸಿನ ಕಾಯಿ, ತೆಂಗಿನ ತುರಿ ಮತ್ತು ಹುಣಿಸೆಹಣ್ಣು ಹಾಕಿ ತಯಾರಿಸಲಾಗುತ್ತದೆ. ಕಡ್ಲೆಬೇಳೆ ಮತ್ತು ಉದ್ದಿನಬೇಳೆಗಳಲ್ಲಿ ಯಾವುದಾದರೂ ಒಂದನ್ನು ಹಾಕಿದರೂ ಸಾಕಾಗುತ್ತದೆ. ಈ ಸರಳವಾದ ಚಟ್ನಿ ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.....[Read more »]

ದೊಡ್ಡಪತ್ರೆಯ ಸಾಂಪ್ರದಾಯಿಕ ಔಷಧೀಯ ಉಪಯೋಗಗಳು:

ಶೀತ, ಜ್ವರ ಮತ್ತು ಉಸಿರಾಟದ ತೊಂದರೆ:

  • ತೊಳೆದು ಸ್ವಚ್ಛ ಮಾಡಿದ ದೊಡ್ಡಪತ್ರೆ ಎಲೆಗಳನ್ನು ನಿಧಾನವಾಗಿ ಜಗಿದು ತಿನ್ನಿ.
  • ದೊಡ್ಡಪತ್ರೆ ಎಲೆ, ಒಣ ಶುಂಠಿ, ಕಾಳು ಮೆಣಸು, ಬೆಲ್ಲ ಮತ್ತು ತುಳಸಿ ಎಲೆಗಳನ್ನು ಉಪಯೋಗಿಸಿ ಕಷಾಯ ತಯಾರಿಸಿ ಕುಡಿಯಿರಿ.
  • 5-6 ದೊಡ್ಡಪತ್ರೆ ಎಲೆಗಳನ್ನು ಸ್ಟೋವ್ ಅಥವಾ ಬಾಣಲೆಯಲ್ಲಿ ಬಾಡಿಸಿಕೊಂಡು ರಸವನ್ನು ಹಿಂಡಿ ತೆಗೆಯಿರಿ. ರಸದ ಅರ್ಧ ಭಾಗದಷ್ಟು ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಚಿಕ್ಕ ಮಕ್ಕಳಿಗೆ ಇದು ಬಹಳ ಪರಿಣಾಮಕಾರಿ.

  • ಚರ್ಮದ ಸೋಂಕು ಮತ್ತು ಕೀಟದ ಕಡಿತ:

  • ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುವುದು.

  • ಬೇರೆ ರೀತಿಯ ಆರೋಗ್ಯ ಸಮಸ್ಯೆ:

  • ದೊಡ್ಡಪತ್ರೆ ಎಲೆ ಮತ್ತು ಸಕ್ಕರೆ ಹಾಕಿ ಟೀ ಅಥವಾ ಕಷಾಯ ತಯಾರಿಸಿ ಕುಡಿಯಿರಿ.
  • ದೊಡ್ಡಪತ್ರೆ ಎಲೆಗಳನ್ನು ಮೇಲೆ ಪಟ್ಟಿ ಮಾಡಿದ ಅಡುಗೆಗಳನ್ನು ಮಾಡುವ ಮೂಲಕ ಅಥವಾ ಬೇರೆ ಅಡುಗೆಗಳೊಂದಿಗೆ ಸುವಾಸನೆಗೆ ಸೇರಿಸುವ ಮೂಲಕ ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಳ್ಳಿ.

  • ಶುಕ್ರವಾರ, ಡಿಸೆಂಬರ್ 18, 2015

    Doddapathre chutney in Kannada | ದೊಡ್ಡಪತ್ರೆ ಚಟ್ನಿ


    ದೊಡ್ಡಪತ್ರೆ ಚಟ್ನಿಯನ್ನು ದೊಡ್ಡಪತ್ರೆ ಎಲೆ, ಹುರಿದ ಕಡ್ಲೆಬೇಳೆ, ಉದ್ದಿನಬೇಳೆ, ಒಣಮೆಣಸಿನ ಕಾಯಿ, ತೆಂಗಿನ ತುರಿ ಮತ್ತು ಹುಣಿಸೆಹಣ್ಣು ಹಾಕಿ ತಯಾರಿಸಲಾಗುತ್ತದೆ. ಕಡ್ಲೆಬೇಳೆ ಮತ್ತು ಉದ್ದಿನಬೇಳೆಗಳಲ್ಲಿ ಯಾವುದಾದರೂ ಒಂದನ್ನು ಹಾಕಿದರೂ ಸಾಕಾಗುತ್ತದೆ. ಈ ಸರಳವಾದ ಚಟ್ನಿ ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.
    ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 15 ನಿಮಿಷ
    ಪ್ರಮಾಣ : 3 ಜನರಿಗೆ

    ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

    1. 2 ಹಿಡಿ ದೊಡ್ಡಪತ್ರೆ ಎಲೆಗಳು
    2. 1 ಹಿಡಿ ಕರಿಬೇವಿನ ಎಲೆಗಳು
    3. 2 ಟೀಸ್ಪೂನ್ ಕಡ್ಲೆಬೇಳೆ
    4. 2 ಟೀಸ್ಪೂನ್ ಉದ್ದಿನಬೇಳೆ
    5. 2-4 ಒಣ ಮೆಣಸಿನಕಾಯಿ
    6. ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
    7. 1 ಕಪ್ ತೆಂಗಿನ ತುರಿ
    8. 1 ಟೀಸ್ಪೂನ್ ಅಡುಗೆ ಎಣ್ಣೆ
    9. ಉಪ್ಪು ರುಚಿಗೆ ತಕ್ಕಷ್ಟು.

    ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

    1. 1 ಒಣ ಮೆಣಸಿನಕಾಯಿ
    2. 1/2 ಟೀಸ್ಪೂನ್ ಸಾಸಿವೆ
    3. 1/2 ಟೀಸ್ಪೂನ್ ಉದ್ದಿನಬೇಳೆ
    4. 2 ಟೀಸ್ಪೂನ್ ಅಡುಗೆ ಎಣ್ಣೆ

    ದೊಡ್ಡಪತ್ರೆ ಚಟ್ನಿ ಮಾಡುವ ವಿಧಾನ:

    1. ದೊಡ್ಡಪತ್ರೆ ಎಲೆಗಳನ್ನು ತೊಳೆದಿಟ್ಟು ಕೊಳ್ಳಿ. ಒಂದು ಬಾಣಲೆ ಬಿಸಿಮಾಡಿ, ಅದಕ್ಕೆ ಎಣ್ಣೆ, ಕೆಂಪು ಮೆಣಸಿನಕಾಯಿ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆ ಸೇರಿಸಿ ಹುರಿಯಿರಿ. ಬೇಳೆಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ, ಉರಿಯನ್ನು ಕಡಿಮೆ ಮಾಡಿ ಕರಿಬೇವಿನ ಎಲೆ ಸೇರಿಸಿ, ಒಂದು ನಿಮಿಷ ಹುರಿಯಿರಿ.
    2. ಈಗ ಅದೇ ಬಾಣಲೆಗೆ ದೊಡ್ಡಪತ್ರೆ ಎಲೆಗಳನ್ನು ಹಾಕಿ, ಎಲೆಗಳು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
    3. ಹುರಿದ ಪದಾರ್ಥಗಳನ್ನು ತೆಂಗಿನತುರಿ, ಉಪ್ಪು ಮತ್ತು ಹುಣಿಸೆ ಹಣ್ಣಿನೊಂದಿಗೆ ಅರೆಯಿರಿ. ಒಣಮೆಣಸು, ಸಾಸಿವೆ, ಉದ್ದಿನಬೇಳೆಯ ಒಗ್ಗರಣೆ ಕೊಡಿ. ಬಿಸಿ ಬಿಸಿ ಅನ್ನದೊಂದಿಗೆ ಬಡಿಸಿ.

    Doddapathre rasam in kannada | Sambrani soppina saaru | ದೊಡ್ಡಪತ್ರೆ ರಸಂ


    ದೊಡ್ಡಪತ್ರೆ ಸಾರು ಅಥವಾ ರಸಂ ಅತ್ಯಂತ ಸುಲಭವಾಗಿ ತಯಾರಿಸ ಬಲ್ಲ ಸಾರುಗಳಲ್ಲೊಂದಾಗಿದೆ. ಈ ಸಾರು ಬೇಳೆ, ತೆಂಗಿನಕಾಯಿ ಅಥವಾ ಸಾರಿನ ಪುಡಿ ಇದ್ಯಾವುದನ್ನೂ ಹಾಕದೇ ಮಾಡುವಂತಹ ಅಪರೂಪದ ಸಾರಾಗಿದೆ. ಕಡಿಮೆ ಸಮಯದಲ್ಲಿ, ಸುಲಭವಾದ, ರುಚಿಕರವಾದ ಮತ್ತು ಆರೋಗ್ಯಕರವಾದ ಸಾರನ್ನು ಮಾಡಿ ಸವಿಯಿರಿ. ನಿಮಗೆ ಇಷ್ಟವಿದ್ದಲ್ಲಿ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ, ಚಪಾತಿ ಅಥವಾ ದೋಸೆಯೊಂದಿಗೆ ಗೊಜ್ಜಿನಂತೆಯೂ ಉಪಯೋಗಿಸಬಹುದು.
    ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 15 ನಿಮಿಷ
    ಪ್ರಮಾಣ: 3 ಜನರಿಗೆ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

    1. 15-20 ದೊಡ್ಡಪತ್ರೆ ಎಲೆಗಳು
    2. 2 ಮಧ್ಯಮ ಗಾತ್ರದ ಟೊಮ್ಯಾಟೋ
    3. 1/2 ನಿಂಬೆ ಗಾತ್ರದ ಹುಣಿಸೆಹಣ್ಣು
    4. 1/2 ನಿಂಬೆ ಗಾತ್ರದ ಬೆಲ್ಲ
    5. 1/2 ಟೀಸ್ಪೂನ್ ಜೀರಿಗೆ
    6. 1/2 ಟೀಸ್ಪೂನ್ ಸಾಸಿವೆ
    7. 1 ಒಣಮೆಣಸಿನ ಕಾಯಿ
    8. 1/2 ಟೀಸ್ಪೂನ್ ಗುದ್ದಿದ ಕಾಳುಮೆಣಸು
    9. 1/4 ಅರಶಿನ
    10. 1 ಹಸಿರು ಮೆಣಸಿನಕಾಯಿ
    11. 4-5 ಕರಿಬೇವಿನ ಎಲೆ
    12. 2 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
    13. ಉಪ್ಪು ರುಚಿಗೆ ತಕ್ಕಷ್ಟು.

    ದೊಡ್ಡಪತ್ರೆ ರಸಂ ಮಾಡುವ ವಿಧಾನ:

    1. ದೊಡ್ಡಪತ್ರೆ ಎಲೆ ಮತ್ತು ಟೊಮೆಟೊ ತೊಳೆದು ಸಣ್ಣದಾಗಿ ಕತ್ತರಿಸಿ. ಒಂದು ಬಾಣಲೆಯನ್ನು ಬಿಸಿಮಾಡಿ, ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ ಮತ್ತು ಜೀರಿಗೆ ಸೇರಿಸಿ ಒಗ್ಗರಣೆ ಮಾಡಿ. ಸಾಸಿವೆ ಸಿಡಿದ ಕೂಡಲೇ ಹಸಿರು ಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಹಾಕಿ. ನಂತರ ಪುಡಿಮಾಡಿದ ಕಾಳುಮೆಣಸು ಮತ್ತು ಅರಿಶಿನ ಪುಡಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಮಗುಚಿ.
    2. ಕತ್ತರಿಸಿದ ಟೊಮೆಟೊ ಸೇರಿಸಿ ಟೊಮ್ಯಾಟೊ ಮೃದು ಆಗುವ ತನಕ ಹುರಿಯಿರಿ. ನಂತರ ಕತ್ತರಿಸಿದ ಎಲೆಗಳನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.
    3. ಈಗ ಉಪ್ಪು , ಹುಣಸೆ ರಸ, ಬೆಲ್ಲ ಮತ್ತು ನೀರು ಸೇರಿಸಿ ಕುದಿಸಿ. ಬಿಸಿ ಅನ್ನದೊಂದಿಗೆ ಬಡಿಸಿ. ಕಡಿಮೆ ನೀರು ಬಳಸಿಕೊಂಡು ಗೊಜ್ಜಿನಂತೆ ಮಾಡಿದಲ್ಲಿ ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ.

    Doddapathre onion chutney in Kannada | ದೊಡ್ಡಪತ್ರೆ ಈರುಳ್ಳಿ ಚಟ್ನಿ


    ದೊಡ್ಡಪತ್ರೆ ಈರುಳ್ಳಿ ಚಟ್ನಿ ಬಹಳ ರುಚಿಕರವಾದ ಚಟ್ನಿಯಾಗಿದ್ದು, ಈ ಚಟ್ನಿಯನ್ನು ದೊಡ್ಡಪತ್ರೆ ಎಲೆಗಳು, ಈರುಳ್ಳಿ ಮತ್ತು ತೆಂಗಿನ ಕಾಯಿ ಬಳಸಿಕೊಂಡು ತಯಾರಿಸಲಾಗುತ್ತದೆ. ಬಲುರುಚಿ ಮತ್ತು ಆರೋಗ್ಯಕರವಾದ ಈ ಚಟ್ನಿಯನ್ನು ಒಮ್ಮೆಯಾದರೂ ಮಾಡಿ ನೋಡಿ. ನಿಮಗೆ ಖಂಡಿತ ಇಷ್ಟವಾಗುವುದು. ನಾನು ಈ ಚಟ್ನಿಯನ್ನು ಮೈಸೂರಿನಲ್ಲಿರುವ ನನ್ನ ಪ್ರೀತಿಯ ಸರೋಜ ಆಂಟಿಯಿಂದ ಕಲಿತೆ. ಅವರು ಹೇಳುವ ಪ್ರಕಾರ ಈ ಚಟ್ನಿಯನ್ನು ಸ್ವಲ್ಪ ತೆಳ್ಳಗೆ ಮಾಡಿ ರಾಗಿ ಮುದ್ದೆಯೊಂದಿಗೂ ಬಡಿಸಬಹುದು. ದೊಡ್ಡಪತ್ರೆ ಈರುಳ್ಳಿ ಚಟ್ನಿಯನ್ನು ಸ್ವಲ್ಪ ತುಪ್ಪದೊಂದಿಗೆ ಬಿಸಿ ಅನ್ನದೊಂದಿಗೆ ತಿಂದರಂತೂ ಬಹಳ ರುಚಿಕರವಾಗಿರುತ್ತದೆ.
    ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 15 ನಿಮಿಷ
    ಪ್ರಮಾಣ: ಇಬ್ಬರಿಗೆ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

    1. 15-20 ದೊಡ್ಡಪತ್ರೆ ಎಲೆಗಳು
    2. 1 ದೊಡ್ಡ ಈರುಳ್ಳಿ (1/2 ಅರೆಯಲು ಮತ್ತು 1/2 ಹುರಿಯಲು)
    3. ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
    4. 1 ಕಪ್ ತೆಂಗಿನತುರಿ
    5. 1 ಟೀಸ್ಪೂನ್ ಸಾರಿನ ಪುಡಿ / ಸಾಂಬಾರ್ ಪುಡಿ / (1/2 ಟೀಸ್ಪೂನ್ ಧನಿಯಾ ಪುಡಿ + 1/2 ಟೀಸ್ಪೂನ್ ಅಚ್ಚಖಾರದ ಪುಡಿ + 1/4 ಟೀಸ್ಪೂನ್ ಜೀರಿಗೆ ಪುಡಿ)
    6. 3 ಟೀಸ್ಪೂನ್ ಅಡುಗೆ ಎಣ್ಣೆ
    7. ಉಪ್ಪು ರುಚಿಗೆ ತಕ್ಕಷ್ಟು.

    ದೊಡ್ಡಪತ್ರೆ ಈರುಳ್ಳಿ ಚಟ್ನಿ ಮಾಡುವ ವಿಧಾನ:

    1. ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ. ಒಂದು ಬಾಣಲೆಯನ್ನು ಬಿಸಿಮಾಡಿ, 1 ಟೀಸ್ಪೂನ್ ಎಣ್ಣೆಯಲ್ಲಿ ದೊಡ್ಡಪತ್ರೆ ಎಲೆಗಳನ್ನು ಬಾಡಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಬಾಡಿಸಿದ ಎಲೆ, ತೆಂಗಿನತುರಿ, ಸಾರಿನ ಪುಡಿ, ಹುಣಿಸೆ ಹಣ್ಣು ಮತ್ತು ಅರ್ಧ ಈರುಳ್ಳಿಯನ್ನು ಹಾಕಿ ಅರೆದು ಕೊಳ್ಳಿ.
    2. ಉಳಿದ ಅರ್ಧ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಒಂದು ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
    3. ಈಗ ಅದೇ ಬಾಣಲೆಗೆ ಅರೆದ ಮಿಶ್ರಣವನ್ನು ಸೇರಿಸಿ, ಉಪ್ಪು ಹಾಕಿ, ನಿಮಗೆ ಬೇಕಾದ ಹದಕ್ಕೆ ನೀರು ಸೇರಿಸಿ. ಕುಡಿಯಲು ಶುರುವಾದ ಕೂಡಲೇ ಸ್ಟೋವ್ ಆಫ್ ಮಾಡಿ. ಬಿಸಿ ಅನ್ನ ಅಥವಾ ಚಪಾತಿ ಅಥವಾ ದೋಸೆಯೊಂದಿಗೆ ಬಡಿಸಿ.


    ಬುಧವಾರ, ಡಿಸೆಂಬರ್ 16, 2015

    Doddapathre hasi thambuli | ದೊಡ್ಡಪತ್ರೆ ಹಸಿ ತಂಬುಳಿ


    ದೊಡ್ಡಪತ್ರೆ ಹಸಿ ಎಲೆಗಳಿಂದ ತಯಾರಿಸಲಾದ ಸರಳ ಮತ್ತು ರುಚಿಕರ ತಂಬುಳಿ ಅಥವಾ ರಾಯಿತ ಇಲ್ಲಿದೆ. ಮೊಸರು ಮತ್ತು ತೆಂಗಿನಕಾಯಿ ಹಾಕಿ ತಯಾರಿಸಬಹುದಾದ ಈ ತಂಬುಳಿಯನ್ನು ಅನ್ನದ ಜೊತೆ ಸವಿಯಲು ಬಲುರುಚಿ. ವಿಶಿಷ್ಟ ರುಚಿ ಹೊಂದಿದ ಈ ಅಡುಗೆಯನ್ನು ಹೇಳಿಕೊಟ್ಟ ಅತ್ತೆಗೆ ಧನ್ಯವಾದಗಳು.
    ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 5 ನಿಮಿಷ
    ಪ್ರಮಾಣ: ಇಬ್ಬರಿಗೆ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

    1. 15-20 ದೊಡ್ಡಪತ್ರೆ ಎಲೆಗಳು
    2. 1/2 ಕಪ್ ತೆಂಗಿನತುರಿ
    3. 1 ಕಪ್ ಮೊಸರು
    4. 1 ಒಣ ಮೆಣಸಿನಕಾಯಿ
    5. 1 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
    6. 1/4 ಟೀಸ್ಪೂನ್ ಸಾಸಿವೆ
    7. ಉಪ್ಪು ರುಚಿಗೆ ತಕ್ಕಷ್ಟು.

    ದೊಡ್ಡಪತ್ರೆ ಹಸಿ ತಂಬುಳಿ ಮಾಡುವ ವಿಧಾನ:

    1. ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ, ಸಣ್ಣಗೆ ಕತ್ತರಿಸಿ. ಕತ್ತರಿಸಿದ ಎಲೆಗಳನ್ನು ಒಂದು ಪಾತ್ರೆಗೆ ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ, 5 ನಿಮಿಷಗಳ ಕಾಲ ಹಾಗೆ ಬಿಡಿ.
    2. ತೆಂಗಿನಕಾಯಿಯನ್ನು ಅರೆದು ಅದೇ ಪಾತ್ರೆಗೆ ಹಾಕಿ. ಮೊಸರು ಮತ್ತು ನೀರು ಸೇರಿಸಿ ಮಗುಚಿ. ಒಂದು ಚಮಚ ಎಣ್ಣೆ ಅಥವಾ ತುಪ್ಪದಲ್ಲಿ ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

    Doddapathre thambuli | ದೊಡ್ಡಪತ್ರೆ ತಂಬುಳಿ


    ದೊಡ್ಡಪತ್ರೆ ಎಲೆಗಳಿಂದ ತಯಾರಿಸಲಾದ ರುಚಿಕರ ಮತ್ತು ಆರೋಗ್ಯಕರ ತಂಬುಳಿಯನ್ನು ಇಲ್ಲಿ ವಿವರಿಸಲಾಗಿದೆ. ಮೊಸರು, ತೆಂಗಿನಕಾಯಿ, ಜೀರಿಗೆ ಮತ್ತು ಕಾಳುಮೆಣಸು ಹಾಕಿ ತಯಾರಿಸಬಹುದಾದ ಈ ತಂಬುಳಿ ಅಥವಾ ಚಟ್ನಿ ಯನ್ನು ಅನ್ನ, ದೋಸೆ ಅಥವಾ ಇಡ್ಲಿಯೊಂದಿಗೆ ಸವಿಯಬಹುದು.
    ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.
    Doddapatre tambuli video
    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 0 ನಿಮಿಷ
    ಪ್ರಮಾಣ: 2 ಇಬ್ಬರಿಗೆ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

    1. 15-20 ದೊಡ್ಡಪತ್ರೆ ಎಲೆಗಳು
    2. 1/2 ಟೀಸ್ಪೂನ್ ಜೀರಿಗೆ
    3. 1/2 ಟೀಸ್ಪೂನ್ ಕಾಳು ಮೆಣಸು
    4. 1/2 ಕಪ್ ತೆಂಗಿನತುರಿ
    5. 1 ಕಪ್ ಮೊಸರು
    6. 1/2 ಒಣ ಮೆಣಸಿನಕಾಯಿ
    7. 2 ಟೀಸ್ಪೂನ್ ಅಡುಗೆ ಎಣ್ಣೆ
    8. 1/4 ಟೀಸ್ಪೂನ್ ಸಾಸಿವೆ
    9. ಉಪ್ಪು ರುಚಿಗೆ ತಕ್ಕಷ್ಟು.

    ದೊಡ್ಡಪತ್ರೆ ತಂಬುಳಿ ಪಾಕವಿಧಾನ:

    1. ದೊಡ್ಡಪತ್ರೆ ಎಲೆಗಳನ್ನು ತೊಳೆದು, ನೀರಾರಸಿ, ಕತ್ತರಿಸಿ. ಒಂದು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಅಥವಾ ತುಪ್ಪ ಹಾಕಿ ಜೀರಿಗೆ ಮತ್ತು ಕಾಳುಮೆಣಸನ್ನು ಹುರಿಯಿರಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಸೊಪ್ಪು ಹಾಕಿ.
    2. ಸೊಪ್ಪು ಬಾಡಿದ ಕೂಡಲೇ ತೆಂಗಿನತುರಿ ಹಾಕಿ ಸ್ಟೋವ್ ಆಫ್ ಮಾಡಿ.
    3. ಹುರಿದ ಎಲೆ, ಜೀರಿಗೆ ಮತ್ತು ಕಾಳುಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ತೆಂಗಿನ ತುರಿಯೊಂದಿಗೆ ಅರೆಯಿರಿ. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ಬೇಕಾದಷ್ಟು ನೀರು ಹಾಕಿ. ಎಣ್ಣೆ, ಒಣಮೆಣಸು ಮತ್ತು ಸಾಸಿವೆ ಒಗ್ಗರಣೆ ಕೊಡಿ. ಅನ್ನ, ದೋಸೆ ಅಥವಾ ಇಡ್ಲಿಯೊಂದಿಗೆ ಬಡಿಸಿ.

    ಗುರುವಾರ, ಡಿಸೆಂಬರ್ 10, 2015

    Doddapathre bajji in kannada | Sambrani soppina bonda | ದೊಡ್ಡಪತ್ರೆ ಬಜ್ಜಿ


    ತುಂಬಾ ಸರಳವಾದ, ದೊಡ್ಡಪತ್ರೆ ಎಲೆಗಳಿಂದ ತಯಾರಿಸಿದ ಬಜ್ಜಿ ಅಥವಾ ಬೋಂಡಾ ಇಲ್ಲಿ ವಿವರಿಸಲಾಗಿದೆ. ಬಹಳ ಕಡಿಮೆ ಸಮಯದಲ್ಲಿ ರುಚಿಕರ ಬಜ್ಜಿಗಳನ್ನು ತಯಾರಿಸಬಹುದು. ಒಮ್ಮೆ ಪ್ರಯತ್ನಿಸಿ ನೋಡಿ!!
    ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

    ತಯಾರಿ ಸಮಯ: 5 ನಿಮಿಷ
    ಅಡುಗೆ ಸಮಯ : 10 ನಿಮಿಷ
    ಪ್ರಮಾಣ: 2 ಜನರಿಗೆ

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

    1. 1.5 ಕಪ್ ಕಡ್ಲೆಹಿಟ್ಟು
    2. 15 ದೊಡ್ಡಪತ್ರೆ ಎಲೆಗಳು
    3. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
    4. 2 ಟೀಸ್ಪೂನ್ ಅಕ್ಕಿ ಪುಡಿ
    5. ಒಂದು ಸಣ್ಣ ಚಿಟಿಕೆ ಅಡುಗೆ ಸೋಡಾ
    6. ಒಂದು ದೊಡ್ಡ ಚಿಟಿಕೆ ಇಂಗು
    7. ಎಣ್ಣೆ ಬಜ್ಜಿ ಕಾಯಿಸಲು
    8. ಉಪ್ಪು ರುಚಿಗೆ ತಕ್ಕಷ್ಟು.

    ದೊಡ್ಡಪತ್ರೆ ಬಜ್ಜಿ ಪಾಕವಿಧಾನ:

    1. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಇಂಗು, ಸೋಡಾ ಮತ್ತು ಉಪ್ಪನ್ನು ಹಾಕಿ. ಸ್ವಲ್ಪ ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.
    2. ದೊಡ್ಡಪತ್ರೆ ಎಲೆಗಳನ್ನು ತೊಳೆದಿಟ್ಟು ಕೊಳ್ಳಿ. ಸಿದ್ಧ ಪಡಿಸಿದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕಾಯಿಸಿ. ಬಿಸಿ ಬಿಸಿ ದೊಡ್ಡಪತ್ರೆ ಬಜ್ಜಿ ಸವಿಯಲು ಸಿದ್ಧ.

    ಬುಧವಾರ, ಡಿಸೆಂಬರ್ 9, 2015

    Masale majjige in kannada | ಮಸಾಲೆ ಮಜ್ಜಿಗೆ


    ಮಸಾಲೆ ಮಜ್ಜಿಗೆ ಮಾಡುವ ವಿಧಾನ 

    ಮಸಾಲೆ ಮಜ್ಜಿಗೆ ಬೇಸಿಗೆ ಕಾಲದಲ್ಲಿ ಮನಸ್ಸಿಗೆ ಉಲ್ಲಾಸ ಮತ್ತು ದೇಹವನ್ನು ತಂಪಾಗಿಸುವ ರುಚಿಕರ ಪಾನೀಯವಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದನ್ನು ಸಾದಾ ಮೊಸರು, ಹಸಿರು ಮೆಣಸಿನಕಾಯಿ, ಕೊತ್ತುಂಬರಿ ಸೊಪ್ಪು ಮತ್ತು ಶುಂಠಿ ಸೇರಿಸಿ ಮಾಡಲಾಗುತ್ತದೆ. ನಿಮ್ಮ ರುಚಿಯನ್ನು ಅವಲಂಬಿಸಿ ಪುಡಿಮಾಡಿದ ಕಾಳುಮೆಣಸು ಅಥವಾ ಬೆಳ್ಳುಳ್ಳಿ ಸೇರಿಸಬಹುದು. ಮಸಾಲೆ ಮಜ್ಜಿಗೆ ಸಿದ್ಧಪಡಿಸುವಾಗ ಒಗ್ಗರಣೆ ಹಾಕುವುದು ಮತ್ತು ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸುವುದು ಕೂಡ ಚಾಲ್ತಿಯಲ್ಲಿದೆ.
    ಮಸಾಲೆ ಮಜ್ಜಿಗೆಯನ್ನು ರಾಮನವಮಿ ಹಬ್ಬದ ಸಮಯದಲ್ಲಿ ಕೋಸಂಬರಿ ಮತ್ತು ಬೆಲ್ಲದ ಪಾನಕ ದೊಂದಿಗೆ ಹಂಚುವ ಸಂಪ್ರದಾಯವಿದೆ. ಊಟವಾದ ಕೂಡಲೇ ಒಂದು ಲೋಟ ಮಸಾಲೆ ಮಜ್ಜಿಗೆ ಕೊಟ್ಟರೆ ಸಂತೋಷದಿಂದ ಬಾಯಿಚಪ್ಪರಿಸಿ ಕುಡಿಯುವ ಮಂದಿ ಅದೆಷ್ಟು ಜನರಿಲ್ಲ?

    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 0 ನಿಮಿಷ
    ಪ್ರಮಾಣ: 2 ಕಪ್

    ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 250 ಎಂಎಲ್ )

    1. 1 ಕಪ್ ಗಟ್ಟಿ ಮೊಸರು
    2. 2 ಕಪ್ ನೀರು
    3. 1/2 ಟೀಸ್ಪೂನ್ ಹೆಚ್ಚಿದ ಹಸಿ ಮೆಣಸಿನಕಾಯಿ
    4. 1/2 ಟೀಸ್ಪೂನ್ ಹೆಚ್ಚಿದ ಶುಂಠಿ
    5. 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
    6. ಉಪ್ಪು ರುಚಿಗೆ ತಕ್ಕಷ್ಟು.

    ಮಸಾಲೆ ಮಜ್ಜಿಗೆ ಮಾಡುವ ವಿಧಾನ

    1. ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಹೆಚ್ಚಿ ಕೊಂಡು, ಗುದ್ದಿ ಪುಡಿ ಮಾಡಿ ಕೊಳ್ಳಿ.
    2. ಒಂದು ಪಾತ್ರೆಗೆ ಮೊಸರು, ನೀರು, ಉಪ್ಪು ಮತ್ತು ಗುದ್ದಿದ ಮಸಾಲೆ ಸೇರಿಸಿ ಕಡಗೋಲಿನಿಂದ ಅಥವಾ ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಎತ್ತಿ ಹಾಕುತ್ತಾ ಚೆನ್ನಾಗಿ ಬೆರೆಸಿ. ನಿಮಗಿಷ್ಟವಿದ್ದಲ್ಲಿ ಸೋಸಿ ಅಥವಾ ಹಾಗೇ ಕುಡಿಯಲು ಕೊಡಿ.

    ಮಂಗಳವಾರ, ಡಿಸೆಂಬರ್ 8, 2015

    Hagalakayi sihi gojju | ಹಾಗಲಕಾಯಿ ಸಿಹಿ ಗೊಜ್ಜು

    ಹಾಗಲಕಾಯಿ ಸಿಹಿ ಗೊಜ್ಜು ಮಾಡುವ ವಿಧಾನ 

    ಹಾಗಲಕಾಯಿ ಸಿಹಿ ಗೊಜ್ಜು ಒಂದು ಸರಳ ಮತ್ತು ರುಚಿಕರ ಅಡುಗೆಯಾಗಿದೆ. ಹಾಗಲಕಾಯಿಯನ್ನು ಇಷ್ಟಪಡದೇ ಇರುವವರಿಗೆ ಇದೊಂದು ಹೇಳಿಮಾಡಿಸಿದ ಅಡುಗೆಯಾಗಿದ್ದು, ಇದರ ಉಪ್ಪು, ಹುಳಿ, ಖಾರ, ಕಹಿ ಮತ್ತು ಸಿಹಿ ಮಿಶ್ರಿತ ರುಚಿ ಬಾಯಲ್ಲಿ ನೀರೂರಿಸುತ್ತದೆ. ಒಮ್ಮೆ ತಿಂದರೆ ಇನ್ನೊಮ್ಮೆ ತಿನ್ನಬೇಕೆನಿಸುತ್ತದೆ.
    ರುಚಿ ಮಾತ್ರವಲ್ಲ. ಹಾಗಲಕಾಯಿ ಆರೋಗ್ಯಕ್ಕೆ ಸಹ ಬಹಳ ಒಳ್ಳೆಯದು. ಹಾಗಲಕಾಯಿ ರಕ್ತ ಸಮಸ್ಯೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಯೋಜನಕಾರಿ, ಕಾಲರಾ, ಮಧುಮೇಹ, ಕಣ್ಣಿನ ಸಮಸ್ಯೆ, ಸಂಧಿವಾತ, ಸೋರಿಯಾಸಿಸ್, ಉಸಿರಾಟದ ತೊಂದರೆಗಳು ಮತ್ತು ಪೈಲ್ಸ್ ಹೀಗೆ ಹತ್ತು ಹಲವು ತೊಂದರೆಗಳನ್ನು ದೂರವಿಡಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಮತ್ತು ದೇಹದ ಶಕ್ತಿ ಹೆಚ್ಚುತ್ತದೆ. ಆಲ್ಕೊಹಾಲ್ ಬಳಕೆಯಿಂದ ಆದ ತೊಂದರೆಗಳನ್ನು ಸರಿಪಡಿಸುತ್ತದೆ ಮತ್ತು ರಕ್ತ ಶುದ್ಧೀಕರಿಸುತ್ತದೆ. ಹಾಗಾಗಿ ಹಾಗಲಕಾಯಿಯನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.

    ತಯಾರಿ ಸಮಯ: 20 ನಿಮಿಷ
    ಅಡುಗೆ ಸಮಯ : 30 ನಿಮಿಷ
    ಪ್ರಮಾಣ : 4 ಜನರಿಗೆ

    ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

    1. 1 ಮಧ್ಯಮ ಗಾತ್ರದ ಹಾಗಲಕಾಯಿ
    2. 2 ದೊಡ್ಡ ನಿಂಬೆ ಗಾತ್ರದ ಬೆಲ್ಲ
    3. 1 ನಿಂಬೆ ಗಾತ್ರದ ಹುಣಿಸೆಹಣ್ಣು
    4. 4 ಟೀಸ್ಪೂನ್ ಅಡುಗೆ ಎಣ್ಣೆ
    5. 1/2 ಟೀಸ್ಪೂನ್ ಸಾಸಿವೆ
    6. 1 ಟೀಸ್ಪೂನ್ ಉದ್ದಿನ ಬೇಳೆ
    7. 1 ಟೀಸ್ಪೂನ್ ಕಡ್ಲೆಬೇಳೆ
    8. 1/4 ಟೀಸ್ಪೂನ್ ಅರಶಿನ ಪುಡಿ
    9. 4-5 ಕರೀ ಬೇವಿನ ಎಲೆ
    10. 1-2 ಹಸಿ ಮೆಣಸಿನ ಕಾಯಿ
    11. 1 ಟೀಸ್ಪೂನ್ ಸಾರಿನ ಹುಡಿ (1/2 ಟೀಸ್ಪೂನ್ ಅಚ್ಚ ಖಾರದ ಪುಡಿ+ 1/2 ಟೀಸ್ಪೂನ್ ಧನಿಯಾ ಪುಡಿ+ 1/4 ಟೀಸ್ಪೂನ್ ಜೀರಿಗೆ ಪುಡಿ)
    12. 1/4 ಕಪ್ ತೆಂಗಿನ ತುರಿ
    13. ಉಪ್ಪು ರುಚಿಗೆ ತಕ್ಕಷ್ಟು.

    ಹಾಗಲಕಾಯಿ ಸಿಹಿ ಗೊಜ್ಜು ಮಾಡುವ ವಿಧಾನ:

    1. ಹಾಗಲಕಾಯಿಯನ್ನು ತೊಳೆದು ಉದ್ದವಾಗಿ ಕತ್ತರಿಸಿ. ಬೀಜಗಳು ತೆಗೆದು ಸಣ್ಣ ಅಥವಾ ತೆಳುವಾದ ತುಂಡುಗಳಾಗಿ ಹೆಚ್ಚಿ. 10 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ನೆನೆಸಿಡಿ(1/2 ಚಮಚ ಉಪ್ಪು ಮತ್ತು ನೀರು).
    2. ಬಾಣಲೆ ಬಿಸಿ ಮಾಡಿ, ಎಣ್ಣೆ, 1/2 ಚಮಚ ಸಾಸಿವೆ, ಉದ್ದಿನ ಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ.
    3. ಈಗ ನೀರನ್ನು ಹಿಂಡಿ ತೆಗೆದು ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ. 2 ನಿಮಿಷ ಹುರಿಯಿರಿ. ಅರಿಶಿನ ಪುಡಿ ಸೇರಿಸಿ ಪುನಃ ಕೆಲವು ನಿಮಿಷಗಳ ಕಾಲ ಹುರಿಯಿರಿ. ನಂತರ ಉಪ್ಪು , ಬೆಲ್ಲ , ಹುಣಸೆ ರಸ ಮತ್ತು ಸ್ವಲ್ಪ ನೀರು ಹಾಕಿ. ಕುದಿಯಲು ಶುರುವಾದ ಕೂಡಲೇ ಉರಿ ಕಡಿಮೆ ಮಾಡಿ. ಮುಚ್ಚಳವನ್ನು ಮುಚ್ಚಬೇಡಿ. ಆಗಾಗ್ಯೆ ಮಗುಚುತ್ತಾ ಇರಿ. ಈ ಹಂತ ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
    4. ನೀರಾರುತ್ತಾ ಬಂದಾಗ ಸಾರಿನ ಪುಡಿ ಮತ್ತು ತೆಂಗಿನತುರಿ ಸೇರಿಸಿ, ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

    ಸೋಮವಾರ, ಡಿಸೆಂಬರ್ 7, 2015

    Mangalore buns recipe in Kannada | ಮಂಗಳೂರು ಬನ್ಸ್


    ಮಂಗಳೂರು ಬನ್ಸ್ ಮಾಡುವ ವಿಧಾನ 

    " ಮಂಗಳೂರು ಬನ್ಸ್" ಕರ್ನಾಟಕದ ಉಡುಪಿ - ಮಂಗಳೂರು ಪ್ರದೇಶದ ಒಂದು ಜನಪ್ರಿಯವಾದ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಮಂಗಳೂರು ಬನ್ಸ್ ನಲ್ಲಿ ಮೈದಾ ಮತ್ತು ಬಾಳೆ ಹಣ್ಣು ಮುಖ್ಯ ಪದಾರ್ಥಗಳಾಗಿವೆ. ಇದೊಂದು ಸಿಹಿ ಮತ್ತು ಮೃದುವಾದ ಪೂರಿ ಯಾಗಿದ್ದು, ಸಾಮಾನ್ಯ ಪೂರಿಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಮಂಗಳೂರು ಬನ್ಸ್ ಗೆ ಕನಿಷ್ಟ 4-6 ಘಂಟೆ ಹಿಟ್ಟು ಹುದುಗುವ ಸಮಯವಿದೆ. ಮಂಗಳೂರು ಬನ್ಸ್ ಸಾಮಾನ್ಯವಾಗಿ ತೆಂಗಿನ ಕಾಯಿ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಲಾಗುತ್ತದೆ. ಆದರೆ ಇದು ಯಾವುದೇ ಇಲ್ಲದೆಯೂ ಹಾಗೆ ತಿನ್ನಲು ಸಹ ಬಹಳ ರುಚಿಯಾಗಿರುತ್ತದೆ. ಈ ಬನ್ಸ್ ಗಳನ್ನು ಒಂದೆರಡು ದಿನಗಳ ಕಾಲ ಇಟ್ಟು ತಿನ್ನಬಹುದು.
    ಮಂಗಳೂರ್ ಬನ್ಸ್ ಗಳಲ್ಲಿ ಮೈದಾ ಮತ್ತು ಬೇಕಿಂಗ್ ಸೋಡಾ ಬಳಸಲಾಗುತ್ತದೆ. ಆದ್ದರಿಂದ ನೀವು ಆರೋಗ್ಯದ ಬಗ್ಗೆ ತುಂಬಾ ಗಮನ ಹರಿಸುವವರಾದಲ್ಲಿ ಮೈದಾ ಬದಲಿಗೆ ಗೋಧಿ ಹಿಟ್ಟು ಬಳಸಿ. ಅಡಿಗೆ ಸೋಡಾದ ಪ್ರಮಾಣ ಕಡಿಮೆ ಮಾಡಲು ಹುಳಿ ಮೊಸರು ಬಳಸಿ ಮತ್ತು ಹೆಚ್ಚು ಸಮಯ ಹಿಟ್ಟು ಹುದುಗಲು ಬಿಡಿ. ಆದರೆ ಒಮ್ಮೆಯಾದರೂ ಈ ರುಚಿಕರವಾದ ಮಂಗಳೂರು ಬನ್ಸ್ ಮಾಡಿ ತಿನ್ನಿ.

    ತಯಾರಿ ಸಮಯ: 5 ಗಂಟೆ
    ಅಡುಗೆ ಸಮಯ: 10 ನಿಮಿಷ
    ಪ್ರಮಾಣ : 6

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

    1. 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು
    2. 2 ಕಪ್ ಮೈದಾ ಹಿಟ್ಟು
    3. 3 - 5 ಟೀಸ್ಪೂನ್ ಸಕ್ಕರೆ
    4. 1/4 ಟೀಸ್ಪೂನ್ ಅಡುಗೆ ಸೋಡಾ
    5. 5 ಟೀಸ್ಪೂನ್ ಹುಳಿ ಮೊಸರು (ಹುಳಿ ಮೊಸರು ಅಲ್ಲದಿದ್ದಲ್ಲಿ ಸೋಡಾ 1/2 ಚಮಚ)
    6. 1 ಟೀಸ್ಪೂನ್ ಜೀರಿಗೆ
    7. ಉಪ್ಪು ರುಚಿಗೆ ತಕ್ಕಷ್ಟು.

    ಮಂಗಳೂರ್ ಬನ್ಸ್ ಮಾಡುವ ವಿಧಾನ:

    1. ಬಾಳೆಹಣ್ಣು ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಗಂಟು ಇಲ್ಲದಂತೆ ಹಿಚುಕಿ. ನಂತರ ಅದೇ ಬಟ್ಟಲಿಗೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಉಪ್ಪು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಕಲಸಿ.
    2. ಈಗ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮುಚ್ಚಳ ಮುಚ್ಚಿ ಹಿಟ್ಟು ಹುದುಗಲು ಕನಿಷ್ಟ 4 ಗಂಟೆಗಳ ಕಾಲ ಬಿಡಿ ( ಸಾಧ್ಯವಾದರೆ ಒಂದು ರಾತ್ರಿ ಹಿಟ್ಟು ಹುದುಗಲು ಬಿಡಿ). ನಿಮಗೆ ಹೆಚ್ಚು ಮೃದು ಮತ್ತು ಉಬ್ಬಿದ ಮಂಗಳೂರು ಬನ್ ಬೇಕಾದಲ್ಲಿ ಹೆಚ್ಚು ಸಮಯ ಹುದುಗಲು ಬಿಡಿ.
    3. ಹಿಟ್ಟು ಹುದುಗಿದ ನಂತರ ಹಿಟ್ಟು ತುಂಬಾ ಮೃದು ಎನಿಸಿದರೆ 1 ಅಥವಾ 2 ಟೀಸ್ಪೂನ್ ಮೈದಾ ಹಿಟ್ಟು ಸೇರಿಸಿ ಪುನಃ ಚೆನ್ನಾಗಿ ಕಲಸಿ. ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಪೂರಿಯಂತೆ ಲಟ್ಟಿಸಿ ಆದರೆ ಸ್ವಲ್ಪ ದಪ್ಪನಾಗಿರಲಿ. ಎಲ್ಲ ಪೂರಿಯನ್ನು ಲಟ್ಟಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
    4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಲಟ್ಟಿಸಿಕೊಂಡ ಪೂರಿಯನ್ನು ಒಂದೊಂದಾಗಿ ಚಿನ್ನದ ಹೊಂಬಣ್ಣ ಬರುವವರೆಗೆ ಕಾಯಿಸಿ. ಬಿಸಿಯಾಗಿರುವಾಗಲೇ ಚಟ್ನೀ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಹಾಗೆ ತಿನ್ನಲು ಸಹ ಬಲು ರುಚಿಯಾಗಿರುತ್ತದೆ.

    ಶನಿವಾರ, ಡಿಸೆಂಬರ್ 5, 2015

    Hurigadale unde | Putani undi | ಹುರಿಗಡಲೆ ಉಂಡೆ | ಪುಟಾಣಿ ಉಂಡಿ


    ಹುರಿಗಡಲೆ ಉಂಡೆ ಮಾಡುವ ವಿಧಾನ 

    ಹುರಿಗಡಲೆ (ಕಡ್ಲೆ ಪಪ್ಪು) ಉಂಡೆ ಅಥವಾ ಪುಟಾಣಿ ಉಂಡಿ ಉತ್ತರ ಕರ್ನಾಟಕದ ಸಿಹಿತಿನಿಸಾಗಿದ್ದು, ಈ ಉಂಡೆಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ಜೊತೆಗೆ ಈ ಉಂಡೆಗೆ ಅತಿ ಕಡಿಮೆ ತುಪ್ಪ ಸಾಕಾಗುತ್ತದೆ. ಇದು ಇಷ್ಟು ಸರಳವಾದ ಉಂಡೆಯಾದರೂ ತಿನ್ನಲು ಮಾತ್ರ ತುಂಬಾ ರುಚಿಯಾಗಿದ್ದು, ಬೇಸನ್ ಲಡ್ಡುವಿನ ರುಚಿಗೆ ಹೋಲುತ್ತದೆ.
    ಹುರಿಗಡಲೆ ಉಂಡೆ ತುಂಬಾ ಆರೋಗ್ಯಕರ ಹಾಗೂ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದು ಕಬ್ಬಿಣದ ಸತ್ವ ಹೊಂದಿದ್ದು, ಅತಿ ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ಈ ಉಂಡೆ ಮಕ್ಕಳಿಗೆ ಇಷ್ಟವಾಗುತ್ತದೆ. ಹಾಗೂ ಇದು ಮಕ್ಕಳಿಗೆ ಬಹಳ ಒಳ್ಳೆಯದೆಂದು ಕೇಳಿದ್ದೇನೆ. ಹಾಗಾಗಿ ತಪ್ಪದೆ ನಿಮ್ಮ ಮಕ್ಕಳಿಗೆ ಇದನ್ನು ಮಾಡಿ ಕೊಡಿ.

    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 5 ನಿಮಿಷ
    ಪ್ರಮಾಣ : 10 ಲಡ್ದುಗಳು

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

    1. 1 ಕಪ್ ಹುರಿಗಡಲೆ / ಪುಟಾಣಿ / ಕಡ್ಲೆ ಪಪ್ಪು
    2. 3/4 ಕಪ್ ಸಕ್ಕರೆ
    3. 1/4 ಕಪ್ ತುಪ್ಪ (ನಾನು ಇನ್ನೂ ಕಡಿಮೆ ಉಪಯೋಗಿಸಿದ್ದೇನೆ.)
    4. ಒಂದು ಸಣ್ಣ ಚಿಟಿಕೆ ಏಲಕ್ಕಿ ಪುಡಿ
    5. 2 ಟೇಬಲ್ ಸ್ಪೂನ್ ತುಂಡು ಮಾಡಿದ ಗೋಡಂಬಿ

    ಹುರಿಗಡಲೆ ಉಂಡೆ ಅಥವಾ ಪುಟಾಣಿ ಉಂಡಿ ಮಾಡುವ ವಿಧಾನ:

    1. ಒಂದು ಮಿಕ್ಸಿ ಜಾರಿಗೆ ಸಕ್ಕರೆ ಮತ್ತು ಏಲಕ್ಕಿ ಹಾಕಿ ಪುಡಿ ಮಾಡಿ ಒಂದು ಬಟ್ಟಲಿಗೆ ಹಾಕಿ. ನಂತರ ಹುರಿಗಡಲೆಯನ್ನು ಪುಡಿ ಮಾಡಿ ಅದೇ ಬಟ್ಟಲಿಗೆ ಹಾಕಿ ಕಲಸಿ.
    2. ಒಂದು ಸಣ್ಣ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿಯನ್ನು ಹುರಿಯಿರಿ. ಈ ಬಿಸಿತುಪ್ಪ ಮತ್ತು ಗೋಡಂಬಿಯನ್ನು ಪುಡಿಮಾಡಿದ ಸಕ್ಕರೆ ಮತ್ತು ಹುರಿಗಡಲೆ ಮೇಲೆ ಹಾಕಿ.
    3. ಒಂದು ಚಮಚ ತೆಗೆದುಕೊಂಡು ಚೆನ್ನಾಗಿ ಕಲಸಿ. ನಂತರ ಕೈ ಮುಷ್ಟಿಯಲ್ಲಿ ಸ್ವಲ್ಪ ಸ್ವಲ್ಪ ತೆಗೆದುಕೊಂಡು, ಚೆನ್ನಾಗಿ ಒತ್ತಿ ಉಂಡೆಗಳನ್ನು ಮಾಡಿ. ಉಂಡೆ ಮಾಡಲು ಕಷ್ಟವಾದಲ್ಲಿ ಸ್ವಲ್ಪ ತುಪ್ಪ ಸೇರಿಸಿ ಪುನಃ ಪ್ರಯತ್ನಿಸಿ. ಡಬ್ಬದಲ್ಲಿ ತುಂಬಿಸಿಟ್ಟಲ್ಲಿ, ಈ ಉಂಡೆ 10 ದಿನಗಳ ಕಾಲ ಉಳಿಯಬಲ್ಲದು.

    ಶುಕ್ರವಾರ, ಡಿಸೆಂಬರ್ 4, 2015

    Aloo Parota recipe in Kannada | ಆಲೂ ಪರೋಟ ಮಾಡುವ ವಿಧಾನ


    ಆಲೂ ಪರೋಟ ಮಾಡುವ ವಿಧಾನ

    ಆಲೂ ಪರಾಟ ಅಥವಾ ಆಲೂ ಪರೋಟ ಉತ್ತರ ಭಾರತದ ಅಡುಗೆಯಾಗಿದೆ. ಆದರೂ ನಾವು ಅದನ್ನು ಕರ್ನಾಟಕದ ಅಡುಗೆಗಳೊಂದಿಗೆ ಸೇರಿಸಿದ್ದೇವೆ. ಏಕೆಂದರೆ ಈಗಿನ ದಿನಗಳಲ್ಲಿ ಆಲೂ ಪರಾಟ ಕರ್ನಾಟಕದಾದ್ಯಂತ ಚೆನ್ನಾಗಿ ಆಚರಣೆಯಲ್ಲಿದೆ. ಉತ್ತರ ಭಾರತೀಯರು ನಮ್ಮ ದೋಸೆ , ಇಡ್ಲಿ ಮತ್ತು ಸಾಂಬಾರ್ ಹೇಗೆ ಇಷ್ಟ ಪಡುತ್ತಾರೋ ಹಾಗೆ ನಾವು ಅವರ ಪರಾಟ, ರೋಟಿ ಮತ್ತು ನಾರ್ತ್ ಇಂಡಿಯನ್ ಕರೀ ಗಳನ್ನು ಇಷ್ಟ ಪಡುತ್ತೇವೆ.
    ಆದರೆ ಇಲ್ಲಿ ಹೇಳಲೇ ಬೇಕಾದ ವಿಷಯವೆಂದರೆ ಕರ್ನಾಟಕದಲ್ಲಿ ಹೆಚ್ಚಿನ ಉತ್ತರ ಭಾರತೀಯ ಅಡುಗೆಗಳನ್ನು ದಕ್ಷಿಣ ಭಾರತೀಯ ಶೈಲಿಯಲ್ಲಿ ಸ್ವಲ್ಪ ಬದಲಾಯಿಸಲಾಗಿದೆ. ದಕ್ಷಿಣ ಭಾರತದವರಾದ ನಮಗೆ ಮೂಲ ಪಾಕವಿಧಾನಕ್ಕಿಂತ ಬದಲಾಯಿಸಿದ ಪಾಕವಿಧಾನವೇ ಹೆಚ್ಚು ರುಚಿಕರವೆನ್ನಿಸುತ್ತದೆ. ಆದರೆ ಅವರಿಗೂ ಸಹ ನಮ್ಮ ಅಡುಗೆಗಳ ಬಗ್ಗೆ ಹೀಗೇ ಅನ್ನಿಸಬಹುದು. ಏನಾದರಾಗಲಿ ಈಗ ಆಲೂ ಪರೊಟದ ಪಾಕವಿಧಾನ ಹೇಗೆಂದು ತಿಳಿಯೋಣ. ಗಮನಿಸಿ ಈ ಪಾಕವಿಧಾನದಲ್ಲಿ ಯಾವುದೇ ರೆಡೀಮೇಡ್ ಪುಡಿ ಅಥವಾ ಈರುಳ್ಳಿ ಅಥವಾ ಗರಂ ಮಸಾಲಾ ಉಪಯೋಗಿಸಿಲ್ಲ, ಬದಲಿಗೆ ತಾಜಾ ಮಸಾಲೆಗಳನ್ನು ಬಳಸಲಾಗುತ್ತದೆ. ಆದರೆ ಇದು ನಿಜವಾಗಿಯೂ ಬಹಳ ರುಚಿಯಾಗಿದ್ದು, ಒಮ್ಮೆಯಾದರೂ ಈ ರೀತಿ ಮಾಡಿ ನೋಡಿ. ನಿಮಗೆ ಖಂಡಿತ ಇಷ್ಟವಾಗುವುದು.

    ತಯಾರಿ ಸಮಯ: 10 ನಿಮಿಷ
    ಅಡುಗೆ ಸಮಯ : 40 ನಿಮಿಷ
    ಪ್ರಮಾಣ : 8 no

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

    1. 2 ದೊಡ್ಡ ಆಲೂಗಡ್ಡೆ
    2. 3 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
    3. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
    4. ಒಂದು ದೊಡ್ಡ ಚಿಟಿಕೆ ಇಂಗು
    5. 1/2 ಟೀಸ್ಪೂನ್ ಸಾಸಿವೆ
    6. 1/2 ಟೀಸ್ಪೂನ್ ಜೀರಿಗೆ
    7. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
    8. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ
    9. 2 ಟೀಸ್ಪೂನ್ ಕತ್ತರಿಸಿದ ಕರಿಬೇವಿನ ಸೊಪ್ಪು
    10. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತುಂಬರಿ ಸೊಪ್ಪು
    11. 2 ಟೇಬಲ್ ಸ್ಪೂನ್ ಕತ್ತರಿಸಿದ ಮೆಂತೆ ಸೊಪ್ಪು (ಬೇಕಾದಲ್ಲಿ)
    12. 2 ಟೀಸ್ಪೂನ್ ಅಡುಗೆ ಎಣ್ಣೆ
    13. ಉಪ್ಪು ರುಚಿಗೆ ತಕ್ಕಷ್ಟು.

    ಆಲೂ ಪರೋಟ ಮಾಡುವ ವಿಧಾನ:

    1. ಗೋಧಿಹಿಟ್ಟನ್ನು ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಮುಚ್ಚಿಡಿ. ಆಲೂಗಡ್ಡೆ ತೊಳೆದು ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಕುಕ್ಕರ್‌ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ.
    2. ಪರೊಟಕ್ಕೆ ತುಂಬಲು ಬೇಕಾದ ಮಸಾಲಾ ತಯಾರಿಸಲು ಬೇರೆ ಎಲ್ಲಾ ಪದಾರ್ಥಗಳನ್ನು ಸಿದ್ಧಮಾಡಿಟ್ಟುಕೊಳ್ಳಿ. ಆಲೂಗಡ್ಡೆ ಬೆಂದಮೇಲೆ ಸಿಪ್ಪೆ ತೆಗೆದು ಕೈ ಅಥವಾ ಒಂದು ಫೋರ್ಕ್ ಬಳಸಿ ಚೆನ್ನಾಗಿ ಪುಡಿ ಮಾಡಿ.
    3. ಆಲೂ ಪರಾಟದ ಮಸಾಲಾ ಮಾಡಲು, ಮೊದಲಿಗೆ ಒಲೆ ಹತ್ತಿಸಿ ಮಧ್ಯಮ ಉರಿಯಲ್ಲಿಡಿ. ಒಲೆ ಮೇಲೆ ಬಾಣಲೆ ಇರಿಸಿ, ಎಣ್ಣೆ ಮತ್ತು ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಜೀರಿಗೆ ಹಾಕಿ ತಕ್ಷಣ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಕೈಯಾಡಿಸಿ.
    4. ನಂತರ ಕತ್ತರಿಸಿದ ಕರಿಬೇವಿನ ಸೊಪ್ಪು ಹಾಕಿ. ಕೂಡಲೇ ಕೊತ್ತುಂಬರಿ ಸೊಪ್ಪು, ಮೆಂತೆ ಸೊಪ್ಪು ಮತ್ತು ಇಂಗು ಸೇರಿಸಿ ಮಗುಚಿ. ಒಲೆ ಆರಿಸಿ.
    5. ಈಗ ಅದೇ ಬಾಣಲೆಗೆ ಪುಡಿಮಾಡಿದ ಆಲೂಗಡ್ಡೆ, ಮತ್ತು ಉಪ್ಪು ಸೇರಿಸಿಚೆನ್ನಾಗಿ ಮಗುಚಿ.
    6. ಈಗ ಆಲೂ ಪರೋಟ ಮಾಡಲು, ಗೋಧಿ ಹಿಟ್ಟನ್ನು ಮುಟ್ಟಿಕೊಂಡು, ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಎರಡೂ ಕೈ ಬೆರಳುಗಳನ್ನು ಬಳಸಿ ಒಂದು ಬಟ್ಟಲಿನ ಆಕಾರ ಮಾಡಿ. ಆ ಬಟ್ಟಲಿನ ಅಕಾರದೊಳಗೆ ಒಂದು ಸಣ್ಣ ನಿಂಬೆ ಗಾತ್ರದ ಮಸಾಲಾ ಇರಿಸಿ.
    7. ಎಚ್ಚರಿಕೆಯಿಂದ ತುದಿಗಳನ್ನು ಒಟ್ಟಿಗೆ ತಂದು ಮಸಾಲೆಯನ್ನು ಒಳಗೆ ಸೇರಿಸಿ. ಹೊರಗಿನ ಹಿಟ್ಟು ಹೆಚ್ಚು ಕಡಿಮೆ ಎಲ್ಲ ಕಡೆ ಒಂದೇ ದಪ್ಪವಿರುವಂತೆ ಜಾಗ್ರತೆವಹಿಸಿ. ನಿಧಾನವಾಗಿ ಅದನ್ನು ಒತ್ತಿ ಸ್ವಲ್ಪ ಚಪ್ಪಟೆ ಮಾಡಿ.
    8. ಸಾಕಷ್ಟು ಗೋಧಿ ಹಿಟ್ಟನ್ನು ಬಳಸಿ ಚಪ್ಪಟೆ ಮಾಡಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
    9. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಬೇಕಾದಲ್ಲಿ ಖಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಮೊಸರು ಮತ್ತು ಉಪ್ಪಿನಕಾಯಿ ಜೊತೆ ಬಡಿಸಿ.

    ಬುಧವಾರ, ಡಿಸೆಂಬರ್ 2, 2015

    Heerekayi dose in Kannada | ಹೀರೆಕಾಯಿ ದೋಸೆ


    ಹೀರೆಕಾಯಿ ದೋಸೆ ಮಾಡುವ ವಿಧಾನ 

    ಹೀರೇಕಾಯಿ ದೋಸೆ ಒಂದು ಇತರ ದೋಸೆಗಳಿಗಿಂತ ವಿಭಿನ್ನವಾಗಿದೆ. ಸಾಂಬಾರ್ ಪದಾರ್ಥಗಳನ್ನು ಉಪಯೋಗಿಸಿ ವಿಶೇಷ ವಾಗಿ ತಯಾರಿಸಲಾದ ದೋಸೆ ಹಿಟ್ಟಿನಲ್ಲಿ ವೃತ್ತಾಕಾರದ ಗಾಲಿಗಳನ್ನು ಅದ್ದಿ ತವಾ ಮೇಲೆ ಇಟ್ಟು ಈ ದೋಸೆ ಮಾಡಲಾಗುತ್ತದೆ. ಈ ದೋಸೆಯನ್ನು ಬೆಳಗ್ಗಿನ ಉಪಾಹಾರ ಅಥವಾ ಸಂಜೆಯ ತಿಂಡಿಯಂತೆ ತಿನ್ನಬಹುದು. ಹೀರೇಕಾಯಿ ದೋಸೆಯನ್ನು " ಹೀರೇಕಾಯಿ ಚಟ್ಟಿ " ಎಂದು ಸಹ ಕರೆಯಲಾಗುತ್ತದೆ.
    ಹೀರೇಕಾಯಿ ಅತ್ಯಂತ ಹೆಚ್ಚು ನಾರಿನಂಶ ಹೊಂದಿರುವ ತರಕಾರಿಯಾಗಿದ್ದು ಅನೇಕ ಆರೋಗ್ಯಕಾರ ಅಂಶಗಳನ್ನು ಹೊಂದಿದೆ. ಇದು ದೇಹದ ಸಕ್ಕರೆ ಅಂಶ ಹತೋಟಿಯಲ್ಲಿಡಲು, ರಕ್ತ ಶುದ್ದೀಕರಣ ಮಾಡಲು ಮತ್ತು ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಈ ದೋಸೆ ಮಾಡುವಾಗ ಹೀರೇಕಾಯಿ ಸಿಪ್ಪೆ ತೆಗೆಯಬೇಕಾಗುತ್ತದೆ. ಹಾಗೆ ತೆಗೆದ ಸಿಪ್ಪೆಯಿಂದ ರುಚಿಕರ ಚಟ್ನಿ ತಯಾರಿಸಬಹುದು. ಹಾಗಾಗಿ ಈ ದೋಸೆ ಯೊಂದಿಗೆ ಹೀರೇಕಾಯಿ ಸಿಪ್ಪೆ ಚಟ್ನಿ ಯನ್ನು ಸಹ ನಾವು ಪೋಸ್ಟ್ ಮಾಡಿದ್ದೇವೆ. ನೀವು ದೋಸೆಯೊಂದಿಗೆ ಚಟ್ನಿಯನ್ನು ಕೂಡ ಮಾಡಬಹುದು.

    ತಯಾರಿ ಸಮಯ: 5 ಗಂಟೆ
    ಅಡುಗೆ ಸಮಯ: 30 ನಿಮಿಷ
    ಪ್ರಮಾಣ : 4 ಜನರಿಗೆ

    ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

    1. 2 ದೊಡ್ಡ ಹೀರೇಕಾಯಿ (ಎಳೆಯದು)
    2. 4 ಕಪ್ ದೋಸೆ ಅಕ್ಕಿ
    3. 3-4 ಒಣ ಮೆಣಸಿನಕಾಯಿ
    4. 3 ಕೊತ್ತಂಬರಿ ಬೀಜ
    5. 1/2 ಜೀರಿಗೆ
    6. 1 ತೆಂಗಿನ ತುರಿ (ಬೇಕಾದಲ್ಲಿ)
    7. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
    8. ಉಪ್ಪು ರುಚಿಗೆ ತಕ್ಕಷ್ಟು
    9. 2 ಕಪ್ ನೀರು (ಅಂದಾಜು)

    ಹೀರೇಕಾಯಿ ದೋಸೆ ಮಾಡುವ ವಿಧಾನ:

    1. ಅಕ್ಕಿಯನ್ನು ಕನಿಷ್ಟ ನಾಲ್ಕು ಗಂಟೆ ನೆನೆಸಿಟ್ಟುಕೊಳ್ಳಬೇಕು. ನಂತರ ಅದನ್ನು ರುಬ್ಬುವಾಗ ಕೊತ್ತಂಬರಿ ಬೀಜ, ಒಣ ಮೆಣಸಿನಕಾಯಿ, ತೆಂಗಿನತುರಿ, ಜೀರಿಗೆ, ಹುಣಸೆ ಹಣ್ಣು ಮತ್ತು ಉಪ್ಪು ಹಾಕಿ ನುಣ್ಣಗೆ ರುಬ್ಬಬೇಕು. ಹಿಟ್ಟು ದೋಸೆ ಹಿಟ್ಟಿನಷ್ಟು ದಪ್ಪವಿರಲಿ.
    2. ಹೀರೆಕಾಯಿಯ ಮೊನಚಾದ ಅಂಚನ್ನು ಹೆರೆಸಿ, ಚೆನ್ನಾಗಿ ತೊಳೆಯಿರಿ. ನಂತರ ಹೀರೇಕಾಯಿ ಸಿಪ್ಪೆಯನ್ನು ಸ್ವಲ್ಪ ದಪ್ಪನಾಗಿ ತೆಗೆದಿಟ್ಟು ಕೊಳ್ಳಿ. ಸಿಪ್ಪೆ ತೆಗೆದ ಹೀರೆಕಾಯಿಯನ್ನು ಅತ್ಯಂತ ತೆಳುವಾದ ಗಾಲಿಗಳನ್ನಾಗಿ ಮಾಡಿಟ್ಟು ಕೊಳ್ಳಿ.
    3. ಕಬ್ಬಿಣದ ಹೆಂಚು ಅಥವಾ ನಾನ್ ಸ್ಟಿಕ್ ದೋಸೆ ಪ್ಯಾನ್ ತೆಗೆದುಕೊಳ್ಳಿ. ಒಲೆ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿಕೊಳ್ಳಿ. ಕಬ್ಬಿಣದ ಹೆಂಚಾದಲ್ಲಿ ಎಣ್ಣೆ ಹಚ್ಚಿ. ನಂತರ ಹೆಚ್ಚಿದ ಗಾಲಿಗಳನ್ನು ರುಬ್ಬಿದ ಹಿಟ್ಟಿನಲ್ಲಿ ಅದ್ದಿ ದೋಸೆ ಕಾವಲಿಯಲ್ಲಿ ಇಡುತ್ತಾ ದೋಸೆ ರೂಪಕ್ಕೆ ತನ್ನಿ. ಈ ಹಂತದಲ್ಲಿ ನೀವು ಸಾಕಷ್ಟು ವೇಗವಾಗಿ ಇರಬೇಕು. ಮಧ್ಯದಲ್ಲಿ ಉಳಿದ ಜಾಗ ತುಂಬಲು ತುಂಬಲು ಸ್ವಲ್ಪ ಹಿಟ್ಟು ಹಾಕಿ.
    4. ಮೇಲಿನಿಂದ ಸ್ವಲ್ಪ ನೀರು ಚಿಮುಕಿಸಿ, ಮುಚ್ಚಳ ಮುಚ್ಚಿ. ಹೀಗೆ ಮಾಡುವುದರಿಂದ ದೋಸೆ ಮೃದುವಾಗುವುದು.
    5. ಸುಮಾರು ೧೦ ಸೆಕೆಂಡ್ ಗಳ ನಂತರ ಮುಚ್ಚಳ ತೆಗೆದು, 1 ಚಮಚ ಎಣ್ಣೆ ಹಾಕಿ. ನಿಧಾನವಾಗಿ ದೋಸೆಯನ್ನು ಮಗುಚಿ ಇನ್ನೊಂದು ಕಡೆಯೂ ಬೇಯಿಸಿ. ಮುಚ್ಚಳ ಮುಚ್ಚುವ ಅಗತ್ಯವಿಲ್ಲ. ಬಿಸಿಯಾಗಿರುವಾಗಲೇ ತಿನ್ನಲು ಕೊಡಿ.

    Related Posts Plugin for WordPress, Blogger...