Kotte kadubu recipe in Kannada | ಕೊಟ್ಟೆ ಕಡುಬು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 3 ಕಪ್ ಇಡ್ಲಿ ರವ ಅಥವಾ ಉಪ್ಪಿಟ್ಟಿನ ರವೇ
- 1 ಕಪ್ ಉದ್ದಿನ ಬೇಳೆ
- 1/4 - 1/2 ಟೀಸ್ಪೂನ್ ಮೆಂತ್ಯ
- 0 - 1/2 ಕಪ್ ಅವಲಕ್ಕಿ
- ಉಪ್ಪು ನಿಮ್ಮ ರುಚಿ ಪ್ರಕಾರ
- 16 - 20 ಹಲಸಿನ ಎಲೆಗಳು
ಕೊಟ್ಟೆ ಕಡುಬು ಮಾಡುವ ವಿಧಾನ:
- ಉದ್ದಿನಬೇಳೆ ಮತ್ತು ಮೆಂತ್ಯವನ್ನು ತೊಳೆದು ಒಳ್ಳೆಯ ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. ಉತ್ತಮ ಫಲಿತಾಂಶಕ್ಕಾಗಿ ಇಡೀ ಉದ್ದಿನ ಬೇಳೆ ಬಳಸಿ.
- ಅವಲಕ್ಕಿಯನ್ನು ಬಳಸುತ್ತೀರಾದರೆ ಅದನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಾನು ಗ್ರೈಂಡರ್ ಬಳಸುವುದರಿಂದ ಅವಲಕ್ಕಿ ಸೇರಿಸುವುದಿಲ್ಲ.
- 4 - 5 ಗಂಟೆಗಳ ನಂತರ ನೆನೆಸಿಟ್ಟ ಬೇಳೆಯ ನೀರನ್ನು ಬಸಿದು ಪಕ್ಕಕ್ಕಿಡಿ. ಅರೆಯುವಾಗ ಈ ನೀರು ಉಪಯೋಗಿಸಿದಲ್ಲಿ ಹಿಟ್ಟು ಚೆನ್ನಾಗಿ ಹುದುಗಲು ಸಹಾಯವಾಗುತ್ತದೆ.
- ಈಗ ಗ್ರೈಂಡರ್ ಗೆ ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿ (ಬಳಸುತ್ತೀರಾದಲ್ಲಿ) ಹಾಕಿ.
- ಏತನ್ಮಧ್ಯೆ, ಇಡ್ಲಿ ರವೆಗೆ ಬೆಚ್ಚಗಿನ ನೀರು ಹಾಕಿ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕೆ ಹೊಂದಿಸಿ. ಉಪ್ಪಿಟ್ಟಿನ ರವೇ ಬಳಸುವುದಾದಲ್ಲಿ, ಒಂದೈದು ನಿಮಿಷ ಸಣ್ಣ ಹುರಿದು, ಬಿಸಿ ಕಡಿಮೆ ಆದ ಮೇಲೆ ಸೇರಿಸಬೇಕು.
- ಈಗ ಗ್ರೈಂಡರ್ ನಲ್ಲಿರುವ ಬೇಳೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುವ ಮೂಲಕ ನಯವಾಗಿ ಅರೆಯಿರಿ. ಅರೆಯಲು ಬೇಳೆ ನೆನೆಸಿದ ನೀರು ಉಪಯೋಗಿಸಿ. ಮಿಕ್ಸರ್ ಗ್ರೈಂಡರ್ನಲ್ಲಿ ರುಬ್ಬುವ ಸಂದರ್ಭದಲ್ಲಿ ತಣ್ಣೀರು ಸೇರಿಸಲು ಪ್ರಯತ್ನಿಸಿ. ಏಕೆಂದರೆ ಮಿಕ್ಸಿಯಲ್ಲಿ ಅರೆಯುವಾಗ ಹಿಟ್ಟು ಬಿಸಿಯಾಗುತ್ತದೆ. ಆಗ ಹಿಟ್ಟು ಚೆನ್ನಾಗಿ ಹುದುಗುವುದಿಲ್ಲ.
- ಉದ್ದಿನ ಬೇಳೆ ಅರೆದು ಮುಗಿಯುವ ಸಂದರ್ಭದಲ್ಲಿ ತೊಳೆದಿಟ್ಟ ಇಡ್ಲಿ ರವಾ ಸೇರಿಸಿ, 5 ನಿಮಿಷ ರುಬ್ಬುವುದನ್ನು ಮುಂದುವರೆಸಿ. ಬೇಕೆನಿಸಿದರೆ ನೀರು ಸೇರಿಸಿ. ಇಡ್ಲಿ ಹಿಟ್ಟು ಸೌಟಿನಿಂದ ದಪ-ದಪನೆ ಬೀಳುವಷ್ಟು ಗಟ್ಟಿಯಾಗಿರಬೇಕು. ನೀವು ಮಿಕ್ಸರ್ ಗ್ರೈಂಡರ್ ಬಳಸುತ್ತಿದ್ದರೆ, ತೊಳೆದಿಟ್ಟ ಇಡ್ಲಿ ರವಾ ಇರುವ ಪಾತ್ರೆ ಗೆ ಅರೆದ ಉದ್ದಿನ ಹಿಟ್ಟನ್ನು ಹಾಕಿ, ನಂತರ ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ.
- ಒಂದು ದೊಡ್ಡ ಪಾತ್ರೆಯಲ್ಲಿ ಚೆನ್ನಾಗಿ ಕಲಸಿದ ಹಿಟ್ಟನ್ನು ಅಥವಾ ಗ್ರೈಂಡರ್ ನಲ್ಲಿ ಅರೆದ ಹಿಟ್ಟನ್ನು ಸುರಿಯಿರಿ.
- ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ.
- ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಹಲಸಿನ ಎಲೆಗಳನ್ನು ಸ್ವಚ್ಛಗೊಳಿಸಿ, ನಾಲ್ಕು ಎಲೆಗಳನ್ನು ತೆಗೆದುಕೊಂಡು ಕೊಟ್ಟೆ ತಯಾರಿಸಿ.
- ಮಾಡಲು ಕಷ್ಟವಾದಲ್ಲಿ ಲೋಟದೊಳಗೆ ಎಲೆಗಳನ್ನು ಇಟ್ಟು ಕೊಟ್ಟೆ ಮಾಡಬಹುದು. ಹೀಗೆ ಎಲ್ಲ ಕೊಟ್ಟೆಗಳನ್ನು ಮಾಡಿಟ್ಟುಕೊಳ್ಳಿ.
- ಅದಕ್ಕೆ ಇಡ್ಲಿ ಹಿಟ್ಟನ್ನು ಹಾಕಿ.
- 15 - 20 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಕಡುಬಿನ ಗಾತ್ರದ ಮೇಲೆ ಸಮಯ ಬದಲಾಗಬಹುದು..ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ