ಬುಧವಾರ, ಡಿಸೆಂಬರ್ 9, 2015

Masale majjige in kannada | ಮಸಾಲೆ ಮಜ್ಜಿಗೆ


ಮಸಾಲೆ ಮಜ್ಜಿಗೆ ಮಾಡುವ ವಿಧಾನ 

ಮಸಾಲೆ ಮಜ್ಜಿಗೆ ಬೇಸಿಗೆ ಕಾಲದಲ್ಲಿ ಮನಸ್ಸಿಗೆ ಉಲ್ಲಾಸ ಮತ್ತು ದೇಹವನ್ನು ತಂಪಾಗಿಸುವ ರುಚಿಕರ ಪಾನೀಯವಾಗಿದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದನ್ನು ಸಾದಾ ಮೊಸರು, ಹಸಿರು ಮೆಣಸಿನಕಾಯಿ, ಕೊತ್ತುಂಬರಿ ಸೊಪ್ಪು ಮತ್ತು ಶುಂಠಿ ಸೇರಿಸಿ ಮಾಡಲಾಗುತ್ತದೆ. ನಿಮ್ಮ ರುಚಿಯನ್ನು ಅವಲಂಬಿಸಿ ಪುಡಿಮಾಡಿದ ಕಾಳುಮೆಣಸು ಅಥವಾ ಬೆಳ್ಳುಳ್ಳಿ ಸೇರಿಸಬಹುದು. ಮಸಾಲೆ ಮಜ್ಜಿಗೆ ಸಿದ್ಧಪಡಿಸುವಾಗ ಒಗ್ಗರಣೆ ಹಾಕುವುದು ಮತ್ತು ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸುವುದು ಕೂಡ ಚಾಲ್ತಿಯಲ್ಲಿದೆ.
ಮಸಾಲೆ ಮಜ್ಜಿಗೆಯನ್ನು ರಾಮನವಮಿ ಹಬ್ಬದ ಸಮಯದಲ್ಲಿ ಕೋಸಂಬರಿ ಮತ್ತು ಬೆಲ್ಲದ ಪಾನಕ ದೊಂದಿಗೆ ಹಂಚುವ ಸಂಪ್ರದಾಯವಿದೆ. ಊಟವಾದ ಕೂಡಲೇ ಒಂದು ಲೋಟ ಮಸಾಲೆ ಮಜ್ಜಿಗೆ ಕೊಟ್ಟರೆ ಸಂತೋಷದಿಂದ ಬಾಯಿಚಪ್ಪರಿಸಿ ಕುಡಿಯುವ ಮಂದಿ ಅದೆಷ್ಟು ಜನರಿಲ್ಲ?

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 2 ಕಪ್

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 250 ಎಂಎಲ್ )

  1. 1 ಕಪ್ ಗಟ್ಟಿ ಮೊಸರು
  2. 2 ಕಪ್ ನೀರು
  3. 1/2 ಟೀಸ್ಪೂನ್ ಹೆಚ್ಚಿದ ಹಸಿ ಮೆಣಸಿನಕಾಯಿ
  4. 1/2 ಟೀಸ್ಪೂನ್ ಹೆಚ್ಚಿದ ಶುಂಠಿ
  5. 1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆ ಮಜ್ಜಿಗೆ ಮಾಡುವ ವಿಧಾನ

  1. ಹಸಿ ಮೆಣಸಿನಕಾಯಿ, ಶುಂಠಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಹೆಚ್ಚಿ ಕೊಂಡು, ಗುದ್ದಿ ಪುಡಿ ಮಾಡಿ ಕೊಳ್ಳಿ.
  2. ಒಂದು ಪಾತ್ರೆಗೆ ಮೊಸರು, ನೀರು, ಉಪ್ಪು ಮತ್ತು ಗುದ್ದಿದ ಮಸಾಲೆ ಸೇರಿಸಿ ಕಡಗೋಲಿನಿಂದ ಅಥವಾ ಒಂದು ಪಾತ್ರೆಯಿಂದ ಇನ್ನೊಂದಕ್ಕೆ ಎತ್ತಿ ಹಾಕುತ್ತಾ ಚೆನ್ನಾಗಿ ಬೆರೆಸಿ. ನಿಮಗಿಷ್ಟವಿದ್ದಲ್ಲಿ ಸೋಸಿ ಅಥವಾ ಹಾಗೇ ಕುಡಿಯಲು ಕೊಡಿ.

ಮಂಗಳವಾರ, ಡಿಸೆಂಬರ್ 8, 2015

Hagalakayi sihi gojju | ಹಾಗಲಕಾಯಿ ಸಿಹಿ ಗೊಜ್ಜು

ಹಾಗಲಕಾಯಿ ಸಿಹಿ ಗೊಜ್ಜು ಮಾಡುವ ವಿಧಾನ 

ಹಾಗಲಕಾಯಿ ಸಿಹಿ ಗೊಜ್ಜು ಒಂದು ಸರಳ ಮತ್ತು ರುಚಿಕರ ಅಡುಗೆಯಾಗಿದೆ. ಹಾಗಲಕಾಯಿಯನ್ನು ಇಷ್ಟಪಡದೇ ಇರುವವರಿಗೆ ಇದೊಂದು ಹೇಳಿಮಾಡಿಸಿದ ಅಡುಗೆಯಾಗಿದ್ದು, ಇದರ ಉಪ್ಪು, ಹುಳಿ, ಖಾರ, ಕಹಿ ಮತ್ತು ಸಿಹಿ ಮಿಶ್ರಿತ ರುಚಿ ಬಾಯಲ್ಲಿ ನೀರೂರಿಸುತ್ತದೆ. ಒಮ್ಮೆ ತಿಂದರೆ ಇನ್ನೊಮ್ಮೆ ತಿನ್ನಬೇಕೆನಿಸುತ್ತದೆ.
ರುಚಿ ಮಾತ್ರವಲ್ಲ. ಹಾಗಲಕಾಯಿ ಆರೋಗ್ಯಕ್ಕೆ ಸಹ ಬಹಳ ಒಳ್ಳೆಯದು. ಹಾಗಲಕಾಯಿ ರಕ್ತ ಸಮಸ್ಯೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಯೋಜನಕಾರಿ, ಕಾಲರಾ, ಮಧುಮೇಹ, ಕಣ್ಣಿನ ಸಮಸ್ಯೆ, ಸಂಧಿವಾತ, ಸೋರಿಯಾಸಿಸ್, ಉಸಿರಾಟದ ತೊಂದರೆಗಳು ಮತ್ತು ಪೈಲ್ಸ್ ಹೀಗೆ ಹತ್ತು ಹಲವು ತೊಂದರೆಗಳನ್ನು ದೂರವಿಡಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿಯನ್ನು ನಿಯಮಿತವಾಗಿ ಬಳಸುವುದರಿಂದ ರೋಗ ನಿರೋಧಕ ಶಕ್ತಿ ಮತ್ತು ದೇಹದ ಶಕ್ತಿ ಹೆಚ್ಚುತ್ತದೆ. ಆಲ್ಕೊಹಾಲ್ ಬಳಕೆಯಿಂದ ಆದ ತೊಂದರೆಗಳನ್ನು ಸರಿಪಡಿಸುತ್ತದೆ ಮತ್ತು ರಕ್ತ ಶುದ್ಧೀಕರಿಸುತ್ತದೆ. ಹಾಗಾಗಿ ಹಾಗಲಕಾಯಿಯನ್ನು ನಿಮ್ಮ ಆಹಾರ ಪದ್ದತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು.

ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಹಾಗಲಕಾಯಿ
  2. 2 ದೊಡ್ಡ ನಿಂಬೆ ಗಾತ್ರದ ಬೆಲ್ಲ
  3. 1 ನಿಂಬೆ ಗಾತ್ರದ ಹುಣಿಸೆಹಣ್ಣು
  4. 4 ಟೀಸ್ಪೂನ್ ಅಡುಗೆ ಎಣ್ಣೆ
  5. 1/2 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಉದ್ದಿನ ಬೇಳೆ
  7. 1 ಟೀಸ್ಪೂನ್ ಕಡ್ಲೆಬೇಳೆ
  8. 1/4 ಟೀಸ್ಪೂನ್ ಅರಶಿನ ಪುಡಿ
  9. 4-5 ಕರೀ ಬೇವಿನ ಎಲೆ
  10. 1-2 ಹಸಿ ಮೆಣಸಿನ ಕಾಯಿ
  11. 1 ಟೀಸ್ಪೂನ್ ಸಾರಿನ ಹುಡಿ (1/2 ಟೀಸ್ಪೂನ್ ಅಚ್ಚ ಖಾರದ ಪುಡಿ+ 1/2 ಟೀಸ್ಪೂನ್ ಧನಿಯಾ ಪುಡಿ+ 1/4 ಟೀಸ್ಪೂನ್ ಜೀರಿಗೆ ಪುಡಿ)
  12. 1/4 ಕಪ್ ತೆಂಗಿನ ತುರಿ
  13. ಉಪ್ಪು ರುಚಿಗೆ ತಕ್ಕಷ್ಟು.

ಹಾಗಲಕಾಯಿ ಸಿಹಿ ಗೊಜ್ಜು ಮಾಡುವ ವಿಧಾನ:

  1. ಹಾಗಲಕಾಯಿಯನ್ನು ತೊಳೆದು ಉದ್ದವಾಗಿ ಕತ್ತರಿಸಿ. ಬೀಜಗಳು ತೆಗೆದು ಸಣ್ಣ ಅಥವಾ ತೆಳುವಾದ ತುಂಡುಗಳಾಗಿ ಹೆಚ್ಚಿ. 10 ನಿಮಿಷಗಳ ಕಾಲ ಉಪ್ಪು ನೀರಿನಲ್ಲಿ ನೆನೆಸಿಡಿ(1/2 ಚಮಚ ಉಪ್ಪು ಮತ್ತು ನೀರು).
  2. ಬಾಣಲೆ ಬಿಸಿ ಮಾಡಿ, ಎಣ್ಣೆ, 1/2 ಚಮಚ ಸಾಸಿವೆ, ಉದ್ದಿನ ಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ.
  3. ಈಗ ನೀರನ್ನು ಹಿಂಡಿ ತೆಗೆದು ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ. 2 ನಿಮಿಷ ಹುರಿಯಿರಿ. ಅರಿಶಿನ ಪುಡಿ ಸೇರಿಸಿ ಪುನಃ ಕೆಲವು ನಿಮಿಷಗಳ ಕಾಲ ಹುರಿಯಿರಿ. ನಂತರ ಉಪ್ಪು , ಬೆಲ್ಲ , ಹುಣಸೆ ರಸ ಮತ್ತು ಸ್ವಲ್ಪ ನೀರು ಹಾಕಿ. ಕುದಿಯಲು ಶುರುವಾದ ಕೂಡಲೇ ಉರಿ ಕಡಿಮೆ ಮಾಡಿ. ಮುಚ್ಚಳವನ್ನು ಮುಚ್ಚಬೇಡಿ. ಆಗಾಗ್ಯೆ ಮಗುಚುತ್ತಾ ಇರಿ. ಈ ಹಂತ ಸುಮಾರು 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
  4. ನೀರಾರುತ್ತಾ ಬಂದಾಗ ಸಾರಿನ ಪುಡಿ ಮತ್ತು ತೆಂಗಿನತುರಿ ಸೇರಿಸಿ, ಚೆನ್ನಾಗಿ ಕಲಸಿ. ಬಿಸಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಸೋಮವಾರ, ಡಿಸೆಂಬರ್ 7, 2015

Mangalore buns recipe in Kannada | ಮಂಗಳೂರು ಬನ್ಸ್


ಮಂಗಳೂರು ಬನ್ಸ್ ಮಾಡುವ ವಿಧಾನ 

" ಮಂಗಳೂರು ಬನ್ಸ್" ಕರ್ನಾಟಕದ ಉಡುಪಿ - ಮಂಗಳೂರು ಪ್ರದೇಶದ ಒಂದು ಜನಪ್ರಿಯವಾದ ಬೆಳಗ್ಗಿನ ಉಪಹಾರ ಅಥವಾ ಚಹಾ ಸಮಯದ ತಿಂಡಿಯಾಗಿದೆ. ಮಂಗಳೂರು ಬನ್ಸ್ ನಲ್ಲಿ ಮೈದಾ ಮತ್ತು ಬಾಳೆ ಹಣ್ಣು ಮುಖ್ಯ ಪದಾರ್ಥಗಳಾಗಿವೆ. ಇದೊಂದು ಸಿಹಿ ಮತ್ತು ಮೃದುವಾದ ಪೂರಿ ಯಾಗಿದ್ದು, ಸಾಮಾನ್ಯ ಪೂರಿಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಮಂಗಳೂರು ಬನ್ಸ್ ಗೆ ಕನಿಷ್ಟ 4-6 ಘಂಟೆ ಹಿಟ್ಟು ಹುದುಗುವ ಸಮಯವಿದೆ. ಮಂಗಳೂರು ಬನ್ಸ್ ಸಾಮಾನ್ಯವಾಗಿ ತೆಂಗಿನ ಕಾಯಿ ಚಟ್ನಿ ಮತ್ತು ಸಾಂಬಾರ್ ನೊಂದಿಗೆ ಬಡಿಸಲಾಗುತ್ತದೆ. ಆದರೆ ಇದು ಯಾವುದೇ ಇಲ್ಲದೆಯೂ ಹಾಗೆ ತಿನ್ನಲು ಸಹ ಬಹಳ ರುಚಿಯಾಗಿರುತ್ತದೆ. ಈ ಬನ್ಸ್ ಗಳನ್ನು ಒಂದೆರಡು ದಿನಗಳ ಕಾಲ ಇಟ್ಟು ತಿನ್ನಬಹುದು.
ಮಂಗಳೂರ್ ಬನ್ಸ್ ಗಳಲ್ಲಿ ಮೈದಾ ಮತ್ತು ಬೇಕಿಂಗ್ ಸೋಡಾ ಬಳಸಲಾಗುತ್ತದೆ. ಆದ್ದರಿಂದ ನೀವು ಆರೋಗ್ಯದ ಬಗ್ಗೆ ತುಂಬಾ ಗಮನ ಹರಿಸುವವರಾದಲ್ಲಿ ಮೈದಾ ಬದಲಿಗೆ ಗೋಧಿ ಹಿಟ್ಟು ಬಳಸಿ. ಅಡಿಗೆ ಸೋಡಾದ ಪ್ರಮಾಣ ಕಡಿಮೆ ಮಾಡಲು ಹುಳಿ ಮೊಸರು ಬಳಸಿ ಮತ್ತು ಹೆಚ್ಚು ಸಮಯ ಹಿಟ್ಟು ಹುದುಗಲು ಬಿಡಿ. ಆದರೆ ಒಮ್ಮೆಯಾದರೂ ಈ ರುಚಿಕರವಾದ ಮಂಗಳೂರು ಬನ್ಸ್ ಮಾಡಿ ತಿನ್ನಿ.

ತಯಾರಿ ಸಮಯ: 5 ಗಂಟೆ
ಅಡುಗೆ ಸಮಯ: 10 ನಿಮಿಷ
ಪ್ರಮಾಣ : 6

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 1 ಚೆನ್ನಾಗಿ ಹಣ್ಣಾದ ಬಾಳೆಹಣ್ಣು
  2. 2 ಕಪ್ ಮೈದಾ ಹಿಟ್ಟು
  3. 3 - 5 ಟೀಸ್ಪೂನ್ ಸಕ್ಕರೆ
  4. 1/4 ಟೀಸ್ಪೂನ್ ಅಡುಗೆ ಸೋಡಾ
  5. 5 ಟೀಸ್ಪೂನ್ ಹುಳಿ ಮೊಸರು (ಹುಳಿ ಮೊಸರು ಅಲ್ಲದಿದ್ದಲ್ಲಿ ಸೋಡಾ 1/2 ಚಮಚ)
  6. 1 ಟೀಸ್ಪೂನ್ ಜೀರಿಗೆ
  7. ಉಪ್ಪು ರುಚಿಗೆ ತಕ್ಕಷ್ಟು.

ಮಂಗಳೂರ್ ಬನ್ಸ್ ಮಾಡುವ ವಿಧಾನ:

  1. ಬಾಳೆಹಣ್ಣು ಸಿಪ್ಪೆ ಸುಲಿದು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಗಂಟು ಇಲ್ಲದಂತೆ ಹಿಚುಕಿ. ನಂತರ ಅದೇ ಬಟ್ಟಲಿಗೆ ಸಕ್ಕರೆ, ಮೊಸರು, ಅಡಿಗೆ ಸೋಡಾ, ಉಪ್ಪು ಮತ್ತು ಜೀರಿಗೆ ಸೇರಿಸಿ ಚೆನ್ನಾಗಿ ಕಲಸಿ.
  2. ಈಗ ಸ್ವಲ್ಪ ಸ್ವಲ್ಪವೇ ಮೈದಾ ಹಿಟ್ಟು ಸೇರಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಮುಚ್ಚಳ ಮುಚ್ಚಿ ಹಿಟ್ಟು ಹುದುಗಲು ಕನಿಷ್ಟ 4 ಗಂಟೆಗಳ ಕಾಲ ಬಿಡಿ ( ಸಾಧ್ಯವಾದರೆ ಒಂದು ರಾತ್ರಿ ಹಿಟ್ಟು ಹುದುಗಲು ಬಿಡಿ). ನಿಮಗೆ ಹೆಚ್ಚು ಮೃದು ಮತ್ತು ಉಬ್ಬಿದ ಮಂಗಳೂರು ಬನ್ ಬೇಕಾದಲ್ಲಿ ಹೆಚ್ಚು ಸಮಯ ಹುದುಗಲು ಬಿಡಿ.
  3. ಹಿಟ್ಟು ಹುದುಗಿದ ನಂತರ ಹಿಟ್ಟು ತುಂಬಾ ಮೃದು ಎನಿಸಿದರೆ 1 ಅಥವಾ 2 ಟೀಸ್ಪೂನ್ ಮೈದಾ ಹಿಟ್ಟು ಸೇರಿಸಿ ಪುನಃ ಚೆನ್ನಾಗಿ ಕಲಸಿ. ಒಂದು ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಪೂರಿಯಂತೆ ಲಟ್ಟಿಸಿ ಆದರೆ ಸ್ವಲ್ಪ ದಪ್ಪನಾಗಿರಲಿ. ಎಲ್ಲ ಪೂರಿಯನ್ನು ಲಟ್ಟಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
  4. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಲಟ್ಟಿಸಿಕೊಂಡ ಪೂರಿಯನ್ನು ಒಂದೊಂದಾಗಿ ಚಿನ್ನದ ಹೊಂಬಣ್ಣ ಬರುವವರೆಗೆ ಕಾಯಿಸಿ. ಬಿಸಿಯಾಗಿರುವಾಗಲೇ ಚಟ್ನೀ ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಹಾಗೆ ತಿನ್ನಲು ಸಹ ಬಲು ರುಚಿಯಾಗಿರುತ್ತದೆ.

Related Posts Plugin for WordPress, Blogger...