Tomato dosa recipe in Kannada | ಟೊಮೇಟೊ ದೋಸೆ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ (ದೋಸೆ ಅಕ್ಕಿ ಆಥವಾ ಸೋನಾ ಮಸೂರಿ)
2 ದೊಡ್ಡ ಟೊಮೇಟೊ
2 ಟೇಬಲ್ ಚಮಚ ತೊಗರಿಬೇಳೆ
1 ಟೀಸ್ಪೂನ್ ಕೊತ್ತಂಬರಿ ಬೀಜ ಅಥವಾ ಧನಿಯಾ
1/2 ಟೀಸ್ಪೂನ್ ಜೀರಿಗೆ
1 - 2 ಕೆಂಪು ಮೆಣಸಿನಕಾಯಿ
1cm ಗಾತ್ರದ ಶುಂಠಿ
7 - 8 ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ
2 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
ಉಪ್ಪು ರುಚಿಗೆ ತಕ್ಕಷ್ಟು
ಟೊಮೇಟೊ ದೋಸೆ ಮಾಡುವ ವಿಧಾನ:
ಅಕ್ಕಿ ಮತ್ತು ತೊಗರಿಬೇಳೆಯನ್ನು ತೊಳೆದು ಕನಿಷ್ಠ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ರಾತ್ರೆಯಿಡೀ ಬೇಕಾದರೂ ನೆನೆಸಬಹುದು.
ನಂತರ ನೀರನ್ನು ಬಗ್ಗಿಸಿ, ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ. ಒಂದು ಪಾತ್ರೆಗೆ ಬಗ್ಗಿಸಿ.
ನಂತರ ಕತ್ತರಿಸಿದ ಟೊಮೇಟೊ, ಕೊತ್ತಂಬರಿ ಬೀಜ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ಶುಂಠಿಯನ್ನು ಮಿಕ್ಸರ್ ಗ್ರೈಂಡರ್ ನಲ್ಲಿ ಅರೆಯಿರಿ.
ಅಕ್ಕಿ ಹಿಟ್ಟು ಇರುವ ಪಾತ್ರೆಗೆ ಹಾಕಿ.
ಈಗ ರುಚಿಗೆ ತಕ್ಕಷ್ಟು ಉಪ್ಪು, ಸಣ್ಣದಾಗಿ ಕೊಚ್ಚಿದ ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
ಚೆನ್ನಾಗಿ ಕಲಸಿ ಉದ್ದಿನ ದೋಸೆ ಹಿಟ್ಟಿಗಿಂತ ಸ್ವಲ್ಪ ತೆಳುವಾದ ಹಿಟ್ಟನ್ನು ತಯಾರಿಸಿ. ಸಮಯವಿದ್ದರೆ ಒಂದು 30 ನಿಮಿಷ ಹಿಟ್ಟನ್ನು ಹಾಗೆ ಬಿಡಿ.
ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ ಬಿಸಿ ಮಾಡಿ. ಕಬ್ಬಿಣದ ದೋಸೆ ಕಾವಲಿಯಾದಲ್ಲಿ ಎಣ್ಣೆ ಹಚ್ಚಿ. ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ.
ಸ್ವಲ್ಪ ಹೊತ್ತು ಮುಚ್ಚಳವನ್ನು ಮುಚ್ಚಿ.
ನಂತರ ಮುಚ್ಚಳ ತೆರೆದು, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ ಎರಡು ಬದಿ ಕಾಯಿಸಿ. ಬೆಣ್ಣೆ ಮತ್ತು ಕಾಯಿ ಚಟ್ನಿ ಯೊಂದಿಗೆ ಬಡಿಸಿ.
Ragi laddu or ragi unde recipe | ರಾಗಿ ಲಾಡು ಮಾಡುವ ವಿಧಾನ
ragi unde or ladoo video Kannada
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ರಾಗಿ ಹಿಟ್ಟು
1/4 ಕಪ್ ಕೊಬ್ಬರಿ ತುರಿ
3/4 ಕಪ್ ಬೆಲ್ಲ ಪುಡಿ ಮಾಡಿದ್ದು
1/4 ಕಪ್ ನೀರು
2 ಟೇಬಲ್ ಚಮಚ ತುಪ್ಪ
2 ಟೇಬಲ್ ಚಮಚ ಗೋಡಂಬಿ ಚೂರು
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ರಾಗಿ ಲಾಡು ಮಾಡುವ ವಿಧಾನ:
ಒಂದು ಬಾಣಲೆಯಲ್ಲಿ 1 ಟೇಬಲ್ ಚಮಚ ತುಪ್ಪ ಬಿಸಿ ಮಾಡಿ, ಗೋಡಂಬಿಯನ್ನು ಹುರಿದು ಪಕ್ಕಕ್ಕಿಡಿ.
ನಂತರ ಅದೇ ಬಾಣಲೆಗೆ ಇನ್ನೊಂದು ಟೇಬಲ್ ಚಮಚ ತುಪ್ಪ ಮತ್ತು ರಾಗಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಬಣ್ಣ ಬದಲಾವಣೆ ಅಥವಾ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ.
ನಂತರ ಕೊಬ್ಬರಿ ತುರಿಯನ್ನು ಸೇರಿಸಿ ಇನ್ನೊಂದು ನಿಮಿಷ ಹುರಿದು, ಗೋಡಂಬಿಯೊಂದಿಗೆ ಪಕ್ಕಕ್ಕಿಡಿ.
ಒಂದು ದಪ್ಪ ತಳದ ಬಾಣಲೆಗೆ ಬೆಲ್ಲ ಮತ್ತು ನೀರನ್ನು ಹಾಕಿ ಕುದಿಸಿ. ಒಂದೆಳೆ ಪಾಕ ಮಾಡಿ. ಏಲಕ್ಕಿ ಪುಡಿಯನ್ನೂ ಸೇರಿಸಿ. ಗಮನಿಸಿ ಪಾಕ ಹೆಚ್ಚಾಗ ಬಾರದು. ಒಂದೆಳೆ ಪಾಕ ಬಂದ ಕೂಡಲೇ ಸ್ಟವ್ ಆಫ್ ಮಾಡಿ.
ಕೂಡಲೇ ಬೆಲ್ಲದ ಪಾಕವನ್ನು ಹುರಿದ ರಾಗಿ ಹಿಟ್ಟು, ಕೊಬ್ಬರಿ ತುರಿ ಮತ್ತು ಗೋಡಂಬಿ ಮಿಶ್ರಣದ ಮೇಲೆ ಸುರಿಯಿರಿ.
ಸ್ವಲ್ಪ ಬಿಸಿ ಆರಿದ ಮೇಲೆ ಉಂಡೆಗಳನ್ನು ಮಾಡಿ ಸವಿಯಿರಿ. ಈ ಉಂಡೆ ಅಥವಾ ರಾಗಿ ಲಾಡು ಬಿಸಿಯಲ್ಲಿ ಸ್ವಲ್ಪ ಮೆತ್ತಗಿದ್ದು, ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ.