Ragi godhi dose recipe in Kannada | ರಾಗಿ ಗೋಧಿ ದೋಸೆ ಮಾಡುವ ವಿಧಾನ
ರಾಗಿ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು (ಅಳತೆ ಕಪ್ = 240 ಎಂಎಲ್ ):
- 1 ಕಪ್ ರಾಗಿ ಹಿಟ್ಟು
- 1 ಕಪ್ ಗೋಧಿಹಿಟ್ಟು
- 1/2 ಕಪ್ ಉದ್ದಿನಬೇಳೆ
- 1 ಟೀಸ್ಪೂನ್ ಮೆಂತ್ಯ
- 1/4 ಕಪ್ ಗಟ್ಟಿ ಅವಲಕ್ಕಿ
- ತುಪ್ಪ ಅಥವಾ ಎಣ್ಣೆ ದೋಸೆ ಮಾಡಲು
- 2 ಕಪ್ ನೀರು (ಹಿಟ್ಟು ಕಲಸಲು)
- ಉಪ್ಪು ರುಚಿಗೆ ತಕ್ಕಷ್ಟು.
ರಾಗಿ ಗೋಧಿ ದೋಸೆ ಮಾಡುವ ವಿಧಾನ:
- ಒಂದು ಪಾತ್ರೆಯಲ್ಲಿ ಉದ್ದಿನಬೇಳೆ, ಅವಲಕ್ಕಿ ಮತ್ತು ಮೆಂತೆಯನ್ನು ತೊಳೆದು 3 - 4 ಗಂಟೆಗಳ ಕಾಲ ನೆನೆಯಲು ಬಿಡಿ.
- ಉದ್ದಿನಬೇಳೆ ರುಬ್ಬುವ ಮೊದಲು, ಇನ್ನೊಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟು ತೆಗೆದುಕೊಳ್ಳಿ.
- ಅಗತ್ಯವಿದ್ದಷ್ಟು ನೀರು ಸೇರಿಸಿ, ಗಂಟಿಲ್ಲದಂತೆ ಹಿಟ್ಟನ್ನು ಕಲಸಿ ಪಕ್ಕಕ್ಕಿಡಿ.
- ನೆನೆಸಿದ ಉದ್ದಿನಬೇಳೆ, ಅವಲಕ್ಕಿ ಮತ್ತು ಮೆಂತೆಯನ್ನು ಮಿಕ್ಸಿಜಾರಿನಲ್ಲಿ ತೆಗೆದುಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ.
- ನುಣ್ಣನೆ ಅರೆದು, ರಾಗಿ ಮತ್ತು ಗೋಧಿ ಹಿಟ್ಟಿರುವ ಪಾತ್ರೆಗೆ ಹಾಕಿ.
- ಹಿಟ್ಟನ್ನು ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ, 8-10 ಘಂಟೆ ಕಾಲ ಹಿಟ್ಟು ಹುದುಗಲು ಬಿಡಿ.
- ಹುದುಗಿದ ನಂತರ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಹಿಟ್ಟು ಉದ್ದಿನ ದೋಸೆ ಹಿಟ್ಟಿನಂತಿರಲಿ.
- ದೋಸೆ ಹೆಂಚನ್ನು ಬಿಸಿಮಾಡಿ. ಎಣ್ಣೆ ಹಚ್ಚಿ, ಹಿಟ್ಟು ಸುರಿದು, ದೋಸೆ ಮಾಡಿ.
- ಮುಚ್ಚಳವನ್ನು ಮುಚ್ಚಿ ಬೇಯಿಸಿ.
- ಮುಚ್ಚಳವನ್ನು ತೆಗೆದು, ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಒಂದು ಬದಿ ಕಾಯಿಸಿದರೆ ಸಾಕು. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿರಿ.