ಶನಿವಾರ, ಫೆಬ್ರವರಿ 13, 2016

Menthe soppina parota (chapathi) | ಮೆಂತೆ ಸೊಪ್ಪಿನ ಪರೋಟ (ಚಪಾತಿ)


ಮೆಂತೆ ಸೊಪ್ಪಿನ ಪರೋಟ (ಚಪಾತಿ) ಮಾಡುವ ವಿಧಾನ 

ಮೆಂತೆ ಸೊಪ್ಪಿನ ಪರೋಟ ಮಾಡುವ ವಿಧಾನವನ್ನು ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಮೆಂತೆ ಸೊಪ್ಪಿನ ಪರೋಟವನ್ನು ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಅಚ್ಚ ಖಾರದ ಪುಡಿ ಉಪಯೋಗಿಸಿ ಮಾಡಲಾಗುತ್ತದೆ. ಮೆಂತೆ ಸೊಪ್ಪಿನ ಪರೋಟ ಮಾಡಲು ಬಹಳ ಸುಲಭವಾಗಿದ್ದು, ಆಲೂ ಪರೋಟ ಅಥವಾ ಬೇರೆ ಪರೋಟಗಳಂತೆ ಮಸಾಲೆ ತುಂಬಿಸಿ ಮಾಡಲಾಗುವುದಿಲ್ಲ. ಮೆಂತೆ ಸೊಪ್ಪು ಮತ್ತು ಬೇರೆಲ್ಲ ಮಸಾಲೆಗಳನ್ನು ಗೋಧಿ ಹಿಟ್ಟಿನೊಂದಿಗೆ ಕಲಸಿ, ಚಪಾತಿ ಹಿಟ್ಟಿನಂತೆ ಹಿಟ್ಟನ್ನು ತಯಾರಿಸಿ, ಮಾಮೂಲಿ ಚಪಾತಿಯಂತೆ ತಯಾರಿಸಲಾಗುತ್ತದೆ.
ಮೆಂತೆ ಸೊಪ್ಪಿನ ಪರೋಟವನ್ನು ಕೆಲವೇ ಕೆಲವು ಮಸಾಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. ಏಕೆಂದರೆ ಪರೊಟಕ್ಕೆ ಬೇಕಾದ ರುಚಿ ಮತ್ತು ಸ್ವಾದ ಮೆಂತೆ ಸೊಪ್ಪೊಂದೇ ಕೊಡಬಲ್ಲದು. ಜೊತೆಗೆ ಉಪಯೋಗಿಸಿದ ಶುಂಠಿ ಮತ್ತು ಬೆಳ್ಳುಳ್ಳಿಗಳು ಈ ರುಚಿ ಮತ್ತು ಸ್ವಾದವನ್ನು ಹೆಚ್ಚಿಸುತ್ತವೆ. ಈ ಮೆಂತೆ ಸೊಪ್ಪಿನ ಪರೋಟ ವನ್ನು ನೀವು ಬೆಣ್ಣೆ ಅಥವಾ ಮೊಸರು ಅಥವಾ ನಿಮ್ಮಿಷ್ಟದ ಯಾವುದೇ ಪಲ್ಯ ಅಥವಾ ಗೊಜ್ಜಿನೊಂದಿಗೆ ಬಡಿಸಬಹುದು.
ಮೆಂತೆ ಸೊಪ್ಪಿನಲ್ಲಿ ಜೀವಸತ್ವಗಳು, ಪ್ರೋಟೀನ್ ಮತ್ತು ಖನಿಜಗಳು ಹೇರಳವಾಗಿವೆ. ಮೆಂತೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫಾಸ್ಫರಸ್, ಕಬ್ಬಿಣ, ಅಧಿಕ ನಾರಿನಂಶ, ವಿಟಮಿನ್ ಕೆ ಹೀಗೆ ಹತ್ತು ಹಲವು ಅಂಶಗಳಿವೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: ೩ ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

 1. 3 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
 2. 1 ಕಟ್ಟು ಮೆಂತೆ ಸೊಪ್ಪು
 3. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
 4. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ
 5. 1 ಟೀಸ್ಪೂನ್ ಅಚ್ಚ ಖಾರದ ಪುಡಿ
 6. 1/4 ಟೀಸ್ಪೂನ್ ಅರಶಿನ ಪುಡಿ
 7. ಉಪ್ಪು ರುಚಿಗೆ ತಕ್ಕಷ್ಟು
 8. 5-6 ಟೀಸ್ಪೂನ್ ಅಡುಗೆ ಎಣ್ಣೆ

ಮೆಂತೆ ಸೊಪ್ಪಿನ ಪರೋಟ ಮಾಡುವ ವಿಧಾನ:

 1. ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು ಚೆನ್ನಾಗಿ ತೊಳೆಯಿರಿ. ಮೆಂತೆ ಸೊಪ್ಪು, ಶುಂಠಿ ಮತ್ತು ಬೆಳ್ಳುಳ್ಳಿ ಯನ್ನು ಸಣ್ಣದಾಗಿ ಹೆಚ್ಚಿ ಕೊಳ್ಳಿ.
 2. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಹೆಚ್ಚಿದ ಮೆಂತೆ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಅಚ್ಚ ಖಾರದ ಪುಡಿ ಮತ್ತು ಅರಶಿನ ಪುಡಿ ಹಾಕಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿಯಾಗಿಯೇ ಇರಲಿ. ಮೇಲಿನಿಂದ ೨ ಚಮಚ ಎಣ್ಣೆ ಹಾಕಿ, ಪುನಃ ಒಮ್ಮೆ ಕಲಸಿ ಒಂದು ಹತ್ತು ನಿಮಿಷ ಮುಚ್ಚಿಡಿ.
 3. ಈಗ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
 4. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿಯಾಗಿರುವಾಗಲೇ ಮೊಸರು ಅಥವಾ ಬೆಣ್ಣೆ ಅಥವಾ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...