ಮಂಗಳವಾರ, ಫೆಬ್ರವರಿ 9, 2016

Apple sweet idli recipe in Kannada | ಸೇಬು ಹಣ್ಣಿನ ಸಿಹಿ ಇಡ್ಲಿ ಮಾಡುವ ವಿಧಾನ


ಸೇಬು ಹಣ್ಣಿನ ಸಿಹಿ ಇಡ್ಲಿ ಮಾಡುವ ವಿಧಾನ

ಹಂತ ಹಂತವಾದ ಚಿತ್ರ ವಿವರಣೆಯೊಂದಿಗೆ ಸೇಬುಹಣ್ಣಿನ ಇಡ್ಲಿಯ ಪಾಕವಿಧಾನ ಇಲ್ಲಿದೆ. ಸೇಬುಹಣ್ಣಿನ ಸಿಹಿ ಇಡ್ಲಿಯನ್ನು ತುರಿದ ಸೇಬು, ಸಕ್ಕರೆ ಮತ್ತು ಇಡ್ಲಿ ರವಾ (ಅಕ್ಕಿ ರವೆ ) ಬಳಸಿಕೊಂಡು ತಯಾರಿಸಲಾಗುತ್ತದೆ. ಸೇಬುಹಣ್ಣಿನ ಸೀಸನ್. ಕಡಿಮೆಗೆ ಸಿಕ್ಕಿತೆಂದು ಒಂದಷ್ಟು ತಂದೆ. ಕೊನೆಗೆ ಹೇಗಾದರೂ ಮುಗಿಸಬೇಕಿತ್ತು. ಆದ್ದರಿಂದ, ಸ್ವಲ್ಪ ಯೋಚನೆ ಮಾಡಿ ನನ್ನ ಮಗನಿಗೆ ೧೦ ಘಂಟೆಯ ಸ್ನಾಕ್ಸ್ ಸಮಯಕ್ಕೆ ಈ ರೀತಿಯ ಇಡ್ಲಿ ತಯಾರಿಸಿದೆ. ಏನಾಶ್ಚರ್ಯ? ಹೇಗಾಗುವುದೋ ಎಂದು ಕೊಂಡು ಮಾಡಿದ ಸೇಬುಹಣ್ಣಿನ ಸಿಹಿ ಇಡ್ಲಿ ಬಹಳ ರುಚಿಕರವಾಗಿತ್ತು. ನನ್ನ ಮಗ ತುಪ್ಪದೊಂದಿಗೆ 2 ಇಡ್ಲಿಯನ್ನು ಖುಷಿಯಿಂದ ತಿಂದ. ನನಗಂತೂ ಬಹಳ ಖುಷಿಯಾಯಿತು. ಒಬ್ಬ ತಾಯಿಗೆ ಇದಕ್ಕಿಂತ ಸಂತಸದ ಸಂಗತಿ ಬೇರೇನಿದೆ?
ಇದೊಂದು ದಿಡೀರ್ ಇಡ್ಲಿಯಾಗಿದ್ದು, ಹಿಟ್ಟು ಹುದುಗ ಬೇಕಾಗಿಲ್ಲ. ಹಾಗಾಗಿ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಈ ಇಡ್ಲಿಯನ್ನು ತುರಿದ ಸೇಬುಹಣ್ಣು, ಸಕ್ಕರೆ ಮತ್ತು ಇಡ್ಲಿ ರವಾ ಬಳಸಿಕೊಂಡು ಮಾಡಲಾಗುತ್ತದೆ. ಎಲ್ಲ ಕಲಸಿ ಬೇರೆ ಇಡ್ಲಿಗಳಂತೆ ಬೇಯಿಸಿದರಾಯಿತು.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಕಪ್ ತುರಿದ ಸೇಬು ಹಣ್ಣು
  2. 1/4 ಕಪ್ ಸಕ್ಕರೆ(ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  3. 1 ಕಪ್ ಇಡ್ಲಿ ರವಾ (ಸ್ವಲ್ಪ ಹೆಚ್ಚು ಕಡಿಮೆ ಸೇಬು ಹಣ್ಣನ್ನು ಅವಲಂಬಿಸಿ)
  4. ಒಂದು ಚಿಟಿಕೆ ಏಲಕ್ಕಿ ಪುಡಿ
  5. ಒಂದು ಚಿಟಿಕೆ ಉಪ್ಪು

ಸೇಬುಹಣ್ಣಿನ ಸಿಹಿ ಇಡ್ಲಿ:

  1. ಸೇಬು ಹಣ್ಣು ತುರಿದು ಒಂದು ಪಾತ್ರೆಗೆ ಹಾಕಿ. ಇಡ್ಲಿ ರವೆ ಹಾಕಿ ಕಲಸಿ. ನೀರು ಹಾಕುವುದು ಬೇಡ.
  2. ಈಗ ಸಕ್ಕರೆ, ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ.
  3. ಈಗ ಇಡ್ಲಿ ತಟ್ಟೆ ತೆಗೆದುಕೊಂಡು, ಸ್ವಲ್ಪ ಸ್ವಲ್ಪ ಮಿಶ್ರಣವನ್ನು ಹಾಕಿ, ಕೈಯಲ್ಲಿ ಒತ್ತಿ, ಇಡ್ಲಿ ರೂಪಕ್ಕೆ ತನ್ನಿ. 12 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಇಡ್ಲಿ ಬಿಸಿಯಾಗಿರುವಾಗಲೇ ಜೇನುತುಪ್ಪ ಅಥವಾ ತುಪ್ಪದೊಂದಿಗೆ ಬಡಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...