ಸೋಮವಾರ, ಫೆಬ್ರವರಿ 29, 2016

Udupi tomato saaru in Kannada | ಉಡುಪಿ ರಸಂ | ಉಡುಪಿ ಟೊಮ್ಯಾಟೋ ಸಾರು


ಉಡುಪಿ ಟೊಮ್ಯಾಟೋ ಸಾರು ಮಾಡುವ ವಿಧಾನ 

ಉಡುಪಿ ಶೈಲಿಯ ರಸಂ ಅಥವಾ ಟೊಮ್ಯಾಟೋ ಸಾರಿನ ಪಾಕ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಬಡಿಸುವ ಸಾರಿನ ಪಾಕವಿಧಾನ ಇದಾಗಿರುವುದರಿಂದ ಇದನ್ನು ಉಡುಪಿ ಸಮಾರಾಧನೆ ಸಾರು ಎಂದೂ ಕರೆಯಲಾಗುತ್ತದೆ. ಇದೊಂದು ಈರುಳ್ಳಿ-ಬೆಳ್ಳುಳ್ಳಿ ರಹಿತ ಸಾತ್ವಿಕ ಸಾರಾಗಿದ್ದು, ಬಹಳ ರುಚಿಕರವಾಗಿರುತ್ತದೆ. 

ನಿನ್ನೆ ನಾನು ನಿಮಗೆ ಉಡುಪಿ ಸಾರಿನ ಪುಡಿ ಮಾಡುವುದು ಹೇಗೆಂದು ತಿಳಿಸಿದ್ದೆ. ನೀವೀಗಾಗಲೇ ಸಾರಿನ ಪುಡಿ ಮಾಡಿರಬಹುದು. ಇಲ್ಲವಾದಲ್ಲಿ ಸಾರಿನ ಪುಡಿ ಮಾಡಿ ಕೊಳ್ಳಿ. ಏಕೆಂದರೆ ಇದೊಂದು ಬಹಳ ರುಚಿಕರವಾದ ಟೊಮ್ಯಾಟೋ ಸಾರು. ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಬಾಯಿ ಚಪ್ಪರಿಸಿಕೊಂಡು ಸವಿಯುವಂತಹ ಈ ರುಚಿಕರ ಸಾರನ್ನು ಮಾಡಿ ನೋಡಿ. ಹೇಗಿತ್ತೆಂದು ತಿಳಿಸಿ.

ಉಡುಪಿ ಟೊಮ್ಯಾಟೋ ಸಾರು ವಿಡಿಯೋ


ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120ಎಂ ಎಲ್)

4 ಟೇಬಲ್ ಚಮಚ ತೊಗರಿಬೇಳೆ (ಅಥವಾ ಒಂದು ಕೈ)
2 ಸಣ್ಣಗೆ ಕತ್ತರಿಸಿದ ಟೊಮ್ಯಾಟೊ
1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
1 - 2 ಟೀಸ್ಪೂನ್ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
1 ಹಸಿರು ಮೆಣಸಿನಕಾಯಿ
2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
1.5 ಟೀಸ್ಪೂನ್ ಉಡುಪಿ ರಸಂ ಪುಡಿ ಅಥವಾ ಸಾರಿನ ಪುಡಿ
ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

1/2 ಚಮಚ ಸಾಸಿವೆ
1/2 ಟೀಸ್ಪೂನ್ ಜೀರಿಗೆ
ಇಂಗು ಒಂದು ದೊಡ್ಡ ಚಿಟಿಕೆ
5 - 6 ಕರಿಬೇವಿನ ಎಲೆ
2 ಟೀಸ್ಪೂನ್ ತುಪ್ಪ / ಅಡುಗೆ ಎಣ್ಣೆ

ಉಡುಪಿ ಶೈಲಿಯ ರಸಂ ಅಥವಾ ಟೊಮ್ಯಾಟೋ ಸಾರು ತಯಾರಿಸುವ ವಿಧಾನ:

  1. ಕುಕ್ಕರ್ ನಲ್ಲಿ ತೊಗರಿಬೇಳೆ ತೆಗೆದುಕೊಂಡು ತೊಳೆಯಿರಿ. 1 ಕಪ್ ನೀರು, ಅರಿಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ.
  2. ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳವನ್ನು ತೆರೆಯಿರಿ. ತೊಗರಿಬೇಳೆ ಅರ್ಧ ಬೆಂದಿರುವುದನ್ನು ನೀವು ನೋಡಬಹುದು.
  3. ಈಗ ಬೇಳೆಯೊಂದಿಗೆ ಕತ್ತರಿಸಿದ ಟೊಮ್ಯಾಟೊ, ಉಪ್ಪು ಮತ್ತು ಸೀಳಿದ ಹಸಿರುಮೆಣಸಿನಕಾಯಿ ಹಾಕಿ. 
  4. ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಮತ್ತು ಪುನಃ 2 ವಿಷಲ್ ಮಾಡಿ.
  5. ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳ ತೆರೆಯಿರಿ. ಮತ್ತು ಈಗ ನೀವು ತೊಗರಿಬೇಳೆ ಮತ್ತು ಟೊಮ್ಯಾಟೊ ಎರಡೂ ಚೆನ್ನಾಗಿ ಬೆಂದಿರುವುದನ್ನು ಗಮನಿಸಿ.
  6. ಈಗ ಅದೇ ಕುಕ್ಕರ್ ಗೆ ಸುಮಾರು 4 ಕಪ್ ನೀರು (500 ಎಂ ಎಲ್) ಮತ್ತು 1 ಟೀ ಚಮಚ ಉಪ್ಪನ್ನು (ಅಥವಾ ನಿಮ್ಮ ರುಚಿ ಪ್ರಕಾರ) ಕುಕ್ಕರ್ ಗೆ ಹಾಕಿ ಸ್ಟೋವ್ ಆನ್ ಮಾಡಿ.
  7. ನಂತರ 1 - 2 ಚಮಚ ಪುಡಿ ಬೆಲ್ಲವನ್ನು ಸಾರಿರುವ ಕುಕ್ಕರ್ ಗೆ ಹಾಕಿ.
  8. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣನ್ನು ನೀರಲ್ಲಿ ನೆನೆಸಿ, ಕಿವುಚಿ, ರಸ ತೆಗೆದು ಸಾರಿರುವ ಕುಕ್ಕರ್ ಗೆ ಸೇರಿಸಿ.
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸಾರಿರುವ ಕುಕ್ಕರ್‌ಗೆ ಸೇರಿಸಿ.
  10. ಈಗ ಸುಮಾರು 1.5 ಟೀಸ್ಪೂನ್ ಉಡುಪಿ ರಸಂ ಪುಡಿ ಅಥವಾ ಸಾರಿನ ಪುಡಿಯನ್ನು ಸೇರಿಸಿ. (ಸಾರಿನ ಪುಡಿ ಮಾಡುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ಕಿಸಿ)
  11. ಸಾರು ಚೆನ್ನಾಗಿ ಗಳ ಗಳನೇ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೌವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು, ಹುಳಿ, ಸಿಹಿ ಮತ್ತು ಖಾರವನ್ನು ಈ ಹಂತದಲ್ಲಿ ರುಚಿನೋಡಿ ಸರಿಮಾಡಿಕೊಳ್ಳಬಹುದು. 
  12. ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ಮಾಡಿ. 
  13. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಸಾತ್ವಿಕ ಉಡುಪಿ ರಸಂ ಅಥವಾ ಉಡುಪಿ ಟೊಮ್ಯಾಟೋ ಸಾರು ಸವಿಯಲು ಸಿದ್ಧ. ಬಿಸಿಯಾದ ಅನ್ನದೊಂದಿಗೆ ಬಡಿಸಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Udupi saaru or rasam recipeUdupi saaru or rasam recipeUdupi saaru or rasam recipe

ಭಾನುವಾರ, ಫೆಬ್ರವರಿ 28, 2016

Udupi rasam powder recipe | Udupi saaru pudi recipe | ಉಡುಪಿ ಸಾರಿನ ಪುಡಿ ಮಾಡುವ ವಿಧಾನ


ಉಡುಪಿ ಸಾರಿನ ಪುಡಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ಸಾರಿನ ಪುಡಿಯನ್ನು ಒಣ ಮೆಣಸಿನಕಾಯಿ, ಧನಿಯಾ, ಜೆರಿಗೆ, ಮೆಂತೆ, ಇಂಗು ಮತ್ತು ಕರಿಬೇವಿನ ಎಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. 

ಉಡುಪಿ ಅಥವಾ ಮಂಗಳೂರು ಪ್ರದೇಶದಲ್ಲಿ ಟೊಮ್ಯಾಟೋ ಸಾರನ್ನು ಇದೆ ಸಾರಿನ ಪುಡಿ ಉಪಯೋಗಿಸಿ ಮಾಡಲಾಗುತ್ತದೆ. ಸಾರು ಮಾತ್ರವಲ್ಲದೇ ಪಲ್ಯ - ಗೊಜ್ಜುಗಳಲ್ಲೂ ಕೆಲವೊಮ್ಮೆ ಈ ಸಾರಿನ ಪುಡಿಯನ್ನು ಉಪಯೋಗಿಸುತ್ತಾರೆ.

ಉಡುಪಿ ಸಾರಿನ ಪುಡಿ ವಿಡಿಯೋ


ತಯಾರಿ ಸಮಯ: 2 ನಿಮಿಷ
ಅಡುಗೆ ಸಮಯ: 15 ನಿಮಿಷ
ಪ್ರಮಾಣ: 1 ಕಪ್ ಸಾರಿನ ಪುಡಿ

ಬೇಕಾಗುವ ಪದಾರ್ಥಗಳು: (ಅಳತೆ ಕಪ್  = 240 ಎಂ ಎಲ್)
  1. 15 - 20 ಒಣ ಮೆಣಸಿನಕಾಯಿ
  2. 1 ಕಪ್ ಧನಿಯಾ ಅಥವಾ ಕೊತ್ತಂಬರಿ ಬೀಜ
  3. 1/4 ಕಪ್ ಜೀರಿಗೆ
  4. 1 ಟೇಬಲ್ ಚಮಚ ಮೆಂತೆ
  5. 1/2 ಚಮಚ ಇಂಗು
  6. 8-10 ಕರಿಬೇವಿನ ಎಲೆ
  7. 1 ಚಮಚ ಅಡುಗೆ ಎಣ್ಣೆ 

ಉಡುಪಿ ಸಾರಿನ ಪುಡಿ ತಯಾರಿಸುವ ವಿಧಾನ:
  1. ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ಗಮನಿಸಿ ಇದು ಅಂದಾಜಿನ ಮೇಲೆ ನೀಡಿದ ಅಳತೆಯಾಗಿದ್ದು, ಸಾಧಾರಣವಾಗಿ ಸಾರಿನ ಪುಡಿ ಮಾಡುವಾಗ ಕೈ ಅಳತೆ ಉಪಯೋಗಿಸುತ್ತಾರೆ. ಅಳತೆ ಸ್ವಲ್ಪ ಹೆಚ್ಚು ಕಡಿಮೆ ಆದಲ್ಲಿ, ರುಚಿಯಲ್ಲಿ ಬಾರಿ ವ್ಯತ್ಯಾಸ ಕಂಡು ಬರುವುದಿಲ್ಲ.
  2. ಈಗ ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಒಂದು ಚಮಚ ಎಣ್ಣೆ ಹಾಕಿ, ಒಣ ಮೆಣಸಿನಕಾಯಿಯನ್ನು ಹುರಿದು ತೆಗೆದಿಟ್ಟು ಕೊಳ್ಳಿ.
  3. ನಂತರ ಅದೇ ಬಾಣಲೆಗೆ ಧನಿಯಾ, ಜೀರಿಗೆ, ಮೆಂತೆಯನ್ನು ಒಂದಾದ ಮೇಲೊಂದರಂತೆ ಹಾಕಿ, ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಡಿ. 
  4. ಮಸಾಲೆಗಳ ಸುವಾಸನೆ ಬರುವವರೆಗೆ ಅಥವಾ ಮಸಾಲೆಗಳ ಬಣ್ಣ ಸ್ವಲ್ಪ ಬದಲಾವಣೆ ಆಗುವವರೆಗೆ ಅಥವಾ ಜೀರಿಗೆ ಮತ್ತು ಮೆಂತೆ ಉಬ್ಬುವವರೆಗೆ ಹುರಿಯಿರಿ.
  5. ಈಗ ಅದೇ ಬಾಣಲೆಗೆ ಇಂಗು ಮತ್ತು ಕರಿಬೇವಿನ ಎಲೆ ಹಾಕಿ, ಎಲೆಗಳು ಬಾಡುವವರೆಗೆ ಹುರಿಯಿರಿ
  6. ಹುರಿದ ಎಲ್ಲ ಮಸಾಲೆಗಳು ತಣ್ಣಗಾಗುವವರೆಗೆ ಕಾದು, ನೀರಿನ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.
  7. ಘಮಘಮಿಸುವ ಉಡುಪಿ ಸಾರಿನ ಪುಡಿ ತಯಾರಾಯಿತು. ಈಗ ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸದ್ಯದಲ್ಲೇ ಈ ಪುಡಿ ಉಪಯೋಗಿಸಿ ಸಾರು ಮಾಡುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.


ಗುರುವಾರ, ಫೆಬ್ರವರಿ 25, 2016

Ananas hannina payasa recipe | ಅನಾನಸ್ ಹಣ್ಣಿನ ಪಾಯಸ

Pineapple or ananas payasa recipe

ರುಚಿಕರ ಅನಾನಸ್ ಹಣ್ಣಿನ ಪಾಯಸವನ್ನು ಇಲ್ಲಿ ವಿವರಿಸಲಾಗಿದೆ. ಈ ಪಾಯಸವನ್ನು ಅನಾನಸ್ ಹಣ್ಣು, ಬೆಲ್ಲ ಮತ್ತು ತೆಂಗಿನ ಕಾಯಿ ಹಾಲನ್ನು ಉಪಯೋಗಿಸಿ ಮಾಡಲಾಗುತ್ತದೆ. ತೆಂಗಿನ ಕಾಯಿ ಹಾಲನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು, ಇಲ್ಲವಾದಲ್ಲಿ ಅಂಗಡಿಯಿಂದಲೂ ಕೊಂಡು ಕೊಳ್ಳಬಹುದು.

ಈ ಪಾಯಸವನ್ನು ನಾನು ನನ್ನ ಅತ್ತೆಯಿಂದ ಕಲಿತೆ. ನನ್ನತ್ತೆ ಅನೇಕ ರೀತಿಯ ಪಾಯಸ ಮಾಡುತ್ತಾರೆ. ಹಲಸಿನ ಹಣ್ಣಿನ ಪಾಯಸ, ಗೆಣಸಿನ ಪಾಯಸ, ಗಸಗಸೆ ಪಾಯಸ, ಕ್ಯಾರೆಟ್ ಪಾಯಸ, ಮುಳ್ಳುಸೌತೆ ಪಾಯಸ, ಗೋಧಿ ಪಾಯಸ ಹೀಗೆ ಪಟ್ಟಿ ಮುಂದುವರೆಯುತ್ತದೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್  = 120 ಎಂ ಎಲ್)
  1. 1 ಮಧ್ಯಮ ಗಾತ್ರದ ಅನಾನಸ್ / 2 ಕಪ್ ಸಣ್ಣದಾಗಿ ಹೆಚ್ಚಿದ ಅನಾನಸ್
  2. 2 ಕಪ್ ಬೆಲ್ಲ (ನಿಮ್ಮ ರುಚಿ ಪ್ರಕಾರ)
  3. 4 ಕಪ್ ಹಾಲು ತೆಂಗಿನಕಾಯಿ.
  4. 3 ಟೀಸ್ಪೂನ್ ಅಕ್ಕಿ ಹಿಟ್ಟು
  5. 2 ಟೀಸ್ಪೂನ್ ತುಪ್ಪ
  6. 8-10 ಗೋಡಂಬಿ
  7. 8-10 ಒಣದ್ರಾಕ್ಷಿ
  8. 2 ಕಪ್ ನೀರು
  9. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  10. ಒಂದು ಚಿಟಿಕೆ ಉಪ್ಪು


ಅನಾನಸ್ ಹಣ್ಣಿನ ಪಾಯಸ ಮಾಡುವ ವಿಧಾನ:

  1. ಒಂದು ಮಧ್ಯಮ ಗಾತ್ರದ ಚೆನ್ನಾಗಿ ಹಣ್ಣಾಗಿರುವ ಅನಾನಸ್ ತೆಗೆದುಕೊಂಡು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ.
  2. ಈಗ ಅನಾನಸ್ ಹಣ್ಣನ್ನು ಉದ್ದಕ್ಕೆ ಕತ್ತರಿಸಿ ಮಧ್ಯಭಾಗದ ಗಟ್ಟಿ ದಿಂಡು ಅಥವಾ ತಿರುಳನ್ನು ತೆಗೆಯಿರಿ.
  3. ಈಗ ಅನಾನಸ್ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ.
  4. ಒಂದು ಪಾತ್ರೆಯಲ್ಲಿ 2 ಕಪ್ ಪುಡಿ ಮಾಡಿದ ಬೆಲ್ಲ  ಮತ್ತು  2 ಕಪ್ ನೀರು ತೆಗೆದುಕೊಂಡು ಕುದಿಯಲು ಇಡಿ.
  5. ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ಈ ಬೆಲ್ಲದ ನೀರನ್ನು ನಾವು ಸ್ವಲ್ಪ ಸಮಯದ ನಂತರ ಬಳಸಲಿದ್ದೇವೆ.
  6. ಈಗ ಒಂದು ದಪ್ಪ ತಳದ ಪಾತ್ರೆಯಲ್ಲಿ 2 ಟೀಸ್ಪೂನ್ ತುಪ್ಪ ತೆಗೆದುಕೊಂಡು ಗೋಡಂಬಿ ಹುರಿದು ಪಕ್ಕಕ್ಕಿಡಿ.
  7. ಈಗ ಅದೇ ಪಾತ್ರೆಯಲ್ಲಿ ಒಣದ್ರಾಕ್ಷಿ ಹುರಿದು ಪಕ್ಕಕ್ಕಿಡಿ.
  8. ನಂತರ ಆ ಪಾತ್ರೆಗೆ ಸಣ್ಣದಾಗಿ ಹೆಚ್ಚಿದ ಅನಾನಸ್ ತುಂಡುಗಳನ್ನು ಹಾಕಿ ಹುರಿಯಲು ಪ್ರಾರಂಭಿಸಿ.
  9. ಮಧ್ಯಮ ಜ್ವಾಲೆಯಯಲ್ಲಿ 5 ನಿಮಿಷ ಅನಾನಸ್ ಹಣ್ಣನ್ನು ಹುರಿಯಿರಿ. ಆಗ ಅನಾನಸ್ ಹಣ್ಣಿನ ಚೂರು ಮೃದುವಾಗುತ್ತದೆ ಮತ್ತು ಸ್ವಲ್ಪ ಬಣ್ಣ ಬದಲಾವಣೆಯನ್ನು ನೀವು ಗಮನಿಸಬಹುದು.
  10. ಈಗ ಹುರಿದ ಅನಾನಸ್ಗೆ ಬೆಲ್ಲದ ನೀರು ಸೇರಿಸಿ. ಒಂದು ಜರಡಿ ಬಳಸಿಕೊಂಡು ಬೆಲ್ಲದ ನೀರನ್ನು ಸೋಸಿ ಹಾಕಿದಲ್ಲಿ ಬೆಲ್ಲದ  ಕಲ್ಮಶಗಳನ್ನು ತೆಗೆಯಬಹುದು.
  11. ಬೆಲ್ಲದ ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಉರಿ ಕಡಿಮೆ ಮಾಡಿ ಅನಾನಸ್ ನ್ನು ಬೆಲ್ಲದ ನೀರಿನಲ್ಲಿ ಬೇಯಲು ಬಿಡಿ.
  12. ಸುಮಾರು 10 ರಿಂದ 15 ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ. ಅನಾನಸ್ ಚೂರುಗಳು ಬೆಂದು ಇನ್ನಷ್ಟು ಮೃದುವಾಗುತ್ತದೆ.
  13. ಈಗ ತೆಂಗಿನ ಕಾಯಿ ಹಾಲನ್ನು ಹಾಕಿ. ತೆಂಗಿನ ಕಾಯಿ ಹಾಲನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಥವಾ ಅಂಗಡಿಯಿಂದ ಖರೀದಿಸಬಹುದು. ನಾನು 4 ಕಪ್ ತೆಂಗಿನ ತುರಿ ಮತ್ತು 4 ಕಪ್ ನೀರು ಬಳಸಿಕೊಂಡು ಕಾಯಿ ಹಾಲನ್ನು ತಯಾರಿಸಿದ್ದೇನೆ. ಕಾಯಿಹಾಲು ತಯಾರಿ ವಿಧಾನವನ್ನು ನಾನೀಗಾಗಲೇ ವಿವರಿಸಿದ್ದೇನೆ.
  14. ಈಗ ಒಂದು ಬಟ್ಟಲಿನಲ್ಲಿ 3 ಟೀಸ್ಪೂನ್ ಅಕ್ಕಿ ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ.
  15. ಈ ಅಕ್ಕಿ ಹಿಟ್ಟು ಪೇಸ್ಟ್ ನ್ನು ಪಾಯಸಕ್ಕೆ ಸೇರಿಸಿ. ಅಕ್ಕಿ ಹಿಟ್ಟು ಪೇಸ್ಟ್ ಸೇರಿಸುವುದರಿಂದ ಪಾಯಸಕ್ಕೆ ಒಳ್ಳೆ ರುಚಿ ಬರುತ್ತದೆ. ಈ ಹಂತದ ನಂತರ ನೀವು ಪಾಯಸವನ್ನು ಆಗಾಗ್ಯೆ ಮಗುಚುತ್ತಾ ಇರಬೇಕಾಗುತ್ತದೆ.
  16. ಈಗ ಒಂದು ದೊಡ್ಡ ಚಿಟಿಕೆ ಉಪ್ಪು ಸೇರಿಸಿ. ಉಪ್ಪು ಸೇರಿಸಿದಲ್ಲಿ ಪಾಯಸದ ರುಚಿ ಎದ್ದು ಬರುತ್ತದೆ.
  17. ನಂತರ ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ. ಪಾಯಸ ಕುಡಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ನೆನಪಿಡಿ ತೆಂಗಿನ ಕಾಯಿ ಹಾಲು ಸೇರಿಸಿದ ನಂತರ ತುಂಬಾ ಹೊತ್ತು ಪಾಯಸ ಮಗುಚ ಬಾರದು. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಶುಕ್ರವಾರ, ಫೆಬ್ರವರಿ 19, 2016

Goli baje - Mangalore bajji in kannada | ಗೋಳಿಬಜೆ ಮಾಡುವ ವಿಧಾನ | ಮಂಗಳೂರು ಬಜ್ಜಿ ಮಾಡುವ ವಿಧಾನ


 ಗೋಳಿಬಜೆ ಮಾಡುವ ವಿಧಾನ

ಗೋಳಿಬಜೆ ಅಥವಾ ಮಂಗಳೂರು ಬಜ್ಜಿ ಸಂಜೆ ಸಮಯದಲ್ಲಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಕುರುಕಲು ತಿಂಡಿಯಾಗಿದೆ. ಇದನ್ನು ಮೈದಾ ಹಿಟ್ಟು, ಮೊಸರು ಮತ್ತು ಕೆಲವು ಮಸಾಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. ಇದೊಂದು ಮಂಗಳೂರಿನಲ್ಲಿ ಹುಟ್ಟಿದ ತಿಂಡಿಯಾಗಿದ್ದು ಮಂಗಳೂರಿನಲ್ಲಿ ಗೋಳಿಬಜೆ ಎಂದು ಕರೆಯುತ್ತಾರೆ. ಬೇರೆ ಪ್ರದೇಶಗಳಲ್ಲಿ ಮಂಗಳೂರು ಬಜ್ಜಿ ಅಥವಾ ಮಂಗಳೂರು ಬೋಂಡಾ ಎಂಬ ಹೆಸರಿನಿಂದ ಕರೆಯುತ್ತಾರೆ. ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳಲ್ಲಿ ಮೈಸೂರ್ ಬೋಂಡಾ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ತಯಾರಿ ಸಮಯ: 3 ಘಂಟೆ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು - ವಿಧಾನ 1: ( ಅಳತೆ ಕಪ್ = 120 ಎಂಎಲ್ )

  1. 1 ಕಪ್ ಮೈದಾ ಹಿಟ್ಟು
  2. 1/2 ಕಪ್ ಮೊಸರು
  3. 1/2 ಟೀಸ್ಪೂನ್ ಜೀರಿಗೆ
  4. 1/2 ಟೀಸ್ಪೂನ್ ಸಕ್ಕರೆ
  5. 1/8 ಟೀಸ್ಪೂನ್ ಅಡುಗೆ ಸೋಡಾ
  6. 1 ಟೀಸ್ಪೂನ್ ಅಕ್ಕಿ ಹಿಟ್ಟು (ಗರಿ ಗರಿಯಾಗಲು - ಬೇಕಾದಲ್ಲಿ)
  7. ಉಪ್ಪು ರುಚಿಗೆ ತಕ್ಕಷ್ಟು
ಬೇಕಾಗುವ ಪದಾರ್ಥಗಳು - ವಿಧಾನ 2: ( ಅಳತೆ ಕಪ್ = 120 ಎಂಎಲ್ )
  1. 1 ಕಪ್ ಮೈದಾ ಹಿಟ್ಟು
  2. 1/2 ಕಪ್ ಮೊಸರು
  3. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  4. 1/2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಸೊಪ್ಪು
  5. 1/2 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ
  6. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ತೆಂಗಿನಕಾಯಿ ಚೂರುಗಳು
  7. 1/8 ಟೀಸ್ಪೂನ್ ಅಡುಗೆ ಸೋಡಾ
  8. 1 ಟೀಸ್ಪೂನ್ ಅಕ್ಕಿ ಹಿಟ್ಟು (ಗರಿ ಗರಿಯಾಗಲು - ಬೇಕಾದಲ್ಲಿ)
  9. ಉಪ್ಪು ರುಚಿಗೆ ತಕ್ಕಷ್ಟು

ಗೋಳಿ ಬಜೆ ಅಥವಾ ಮಂಗಳೂರು ಬಜ್ಜಿ ಮಾಡುವ ವಿಧಾನ 1:

  1. ಮೈದಾ ಹಿಟ್ಟನ್ನು ಒಂದು ದೊಡ್ಡ ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ ಸಕ್ಕರೆ, ಉಪ್ಪು, ಜೀರಿಗೆ ಮತ್ತು ಸೋಡಾ ಹಾಕಿ.
  2. ಈಗ ಅದಕ್ಕೆ 1/2 ಕಪ್ ಮೊಸರು ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ಚಪಾತಿಗಿಂತ ಮೆತ್ತಗೆ ಮತ್ತು ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ಜಾಸ್ತಿ ಗಟ್ಟಿಯಾದಲ್ಲಿ ಗೋಳಿಬಜೆ ಗಟ್ಟಿಯಾಗುವುದು ಮತ್ತು ಹಿಟ್ಟು ತೆಳ್ಳಗಾದಲ್ಲಿ ಗೋಳಿಬಜೆ ಎಣ್ಣೆ ಹೀರಿಕೊಳ್ಳುವುದು. ಆದ್ದರಿಂದ ಬೇಕಾದಲ್ಲಿ ಹಿಟ್ಟನ್ನು ಹದಗೊಳಿಸಲು 1 ರಿಂದ 2 ಟೀಸ್ಪೂನ್ ನೀರು ಅಥವಾ ಹಿಟ್ಟು ಉಪಯೋಗಿಸಿ.
  3. ಗಂಟು ಇಲ್ಲದಂತೆ ಚೆನ್ನಾಗಿ ಕಲಸಿದ ಮೇಲೆ, ಒಂದು ಮುಚ್ಚಳ ಮುಚ್ಚಿ ಹಿಟ್ಟನ್ನು 2-3 ಘಂಟೆ ಹುದುಗಲು ಬಿಡಬೇಕು. ಸಮಯವಿಲ್ಲವಾದಲ್ಲಿ ಒಂದರ್ಧ ಘಂಟೆ ಬಿಟ್ಟು ಮಾಡಬಹುದು. ಆದರೆ ಗೋಳಿಬಜೆ ಚೆನ್ನಾಗಿ ಬರಲು 2-3 ಘಂಟೆ ಬಿಟ್ಟರೆ ಒಳ್ಳೆಯದು.
  4. ಒಂದು ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ನಿಮ್ಮ ಬೆರಳುಗಳ ಸಹಾಯದಿಂದ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಎಣ್ಣೆಯಲ್ಲಿ ಜಾಗ್ರತೆಯಿಂದ ಚಿವುಟಿದಂತೆ ಹಾಕಿ.
  5. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ, ಆಗಾಗ್ಯೆ ತಿರುವುತ್ತಾ ಕಾಯಿಸಿ. ಕಾಯಿ ಚಟ್ನಿ ಮತ್ತು ಚಹದೊಂದಿಗೆ ಸವಿಯಿರಿ.

ಗೋಳಿ ಬಜೆ ಅಥವಾ ಮಂಗಳೂರು ಬಜ್ಜಿ ಮಾಡುವ ವಿಧಾನ 2:

  1. ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಎಲೆ ಮತ್ತು ತೆಂಗಿನಕಾಯಿಯನ್ನು ಕತ್ತರಿಸಿ ಕೊಳ್ಳಿ. ಹಾಗೆ ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  2. ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ ಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಕತ್ತರಿಸಿದ ಶುಂಠಿ, ಹಸಿರುಮೆಣಸು, ಕರಿಬೇವಿನ ಎಲೆ, ತೆಂಗಿನಕಾಯಿ ಚೂರು, ಉಪ್ಪು ಮತ್ತು ಅಡುಗೆ ಸೋಡಾ ಹಾಕಿ. ಈಗ ಅದಕ್ಕೆ 1/2 ಕಪ್ ಮೊಸರು ಹಾಕಿ ಚೆನ್ನಾಗಿ ಕಲಸಿ. ಹಿಟ್ಟು ಚಪಾತಿಗಿಂತ ಮೆತ್ತಗೆ ಮತ್ತು ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಹಿಟ್ಟು ಜಾಸ್ತಿ ಗಟ್ಟಿಯಾದಲ್ಲಿ ಗೋಳಿಬಜೆ ಗಟ್ಟಿಯಾಗುವುದು ಮತ್ತು ಹಿಟ್ಟು ತೆಳ್ಳಗಾದಲ್ಲಿ ಗೋಳಿಬಜೆ ಎಣ್ಣೆ ಹೀರಿಕೊಳ್ಳುವುದು. ಆದ್ದರಿಂದ ಬೇಕಾದಲ್ಲಿ ಹಿಟ್ಟನ್ನು ಹದಗೊಳಿಸಲು 1 ರಿಂದ 2 ಟೀಸ್ಪೂನ್ ನೀರು ಅಥವಾ ಹಿಟ್ಟು ಉಪಯೋಗಿಸಿ.
  3. ಗಂಟು ಇಲ್ಲದಂತೆ ಚೆನ್ನಾಗಿ ಕಲಸಿದ ಮೇಲೆ, ಒಂದು ಮುಚ್ಚಳ ಮುಚ್ಚಿ ಹಿಟ್ಟನ್ನು 2-3 ಘಂಟೆ ಹುದುಗಲು ಬಿಡಬೇಕು. ಸಮಯವಿಲ್ಲವಾದಲ್ಲಿ ಒಂದರ್ಧ ಘಂಟೆ ಬಿಟ್ಟು ಮಾಡಬಹುದು. ಆದರೆ ಗೋಳಿಬಜೆ ಚೆನ್ನಾಗಿ ಬರಲು 2-3 ಘಂಟೆ ಬಿಟ್ಟರೆ ಒಳ್ಳೆಯದು.
  4. ಒಂದು ಬಾಣಲೆಯಲ್ಲಿ ಎಣ್ಣೆ ತೆಗೆದುಕೊಂಡು ಬಿಸಿ ಮಾಡಿ. ನಿಮ್ಮ ಬೆರಳುಗಳ ಸಹಾಯದಿಂದ ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಎಣ್ಣೆಯಲ್ಲಿ ಜಾಗ್ರತೆಯಿಂದ ಚಿವುಟಿದಂತೆ ಹಾಕಿ.
  5. ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ, ಆಗಾಗ್ಯೆ ತಿರುವುತ್ತಾ ಕಾಯಿಸಿ. ಕಾಯಿ ಚಟ್ನಿ ಮತ್ತು ಚಹದೊಂದಿಗೆ ಸವಿಯಿರಿ.

ಗುರುವಾರ, ಫೆಬ್ರವರಿ 18, 2016

Kallangadi hannina bili bhagada chutney | ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಚಟ್ನಿ


ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಚಟ್ನಿ ಮಾಡುವ ವಿಧಾನ 

ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಚಟ್ನಿ ತುಂಬಾ ಸರಳ ಮತ್ತು ರುಚಿಕರ ಚಟ್ನಿಯಾಗಿದ್ದು ಅನ್ನದೊಂದಿಗೆ ಚೆನ್ನಾಗಿ ಸೇರುತ್ತದೆ. ನಾವು ಸಾಧಾರಣವಾಗಿ ಕಲ್ಲಂಗಡಿ ಹಣ್ಣಿನ ಜೂಸ್ ಮಾಡುವಾಗ ಅಥವಾ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ತಿನ್ನುವಾಗ ಅದರ ಬಿಳಿಭಾಗವನ್ನು ತೆಗೆಯುತ್ತೇವೆ. ಹಾಗೆ ತೆಗೆದ ಬಿಳಿಭಾಗವನ್ನು ನೀವು ಎಸೆಯುತ್ತೀರಾದರೆ, ಒಮ್ಮೆ ಈ ಚಟ್ನಿ ಪ್ರಯತ್ನಿಸಿ. ಇದು ಬಹಳ ರುಚಿಕರವಾಗಿರುತ್ತದೆ.
ಕಲ್ಲಂಗಡಿ ಹಣ್ಣಿನ ಬಿಳಿ ಭಾಗದಲ್ಲಿ ಅನೇಕ ಆರೋಗ್ಯಕರ ಅಂಶಗಳಿವೆ. ಹಾಗಾಗಿ ಅದನ್ನು ಬಿಸಾಡುವ ಬದಲು ಈ ಚಟ್ನಿ ಅಥವಾ ಇನ್ನಾವುದೇ ರೂಪದಲ್ಲಿ ತಿನ್ನುವುದು ಆರೋಗ್ಯದ ದೃಷ್ಟಿಯಲ್ಲೂ ಮತ್ತು ಪರಿಸರದ ದೃಷ್ಟಿಯಲ್ಲೂ ಒಳ್ಳೆಯದು.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 4 ಜನರಿಗೆ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
  1. 4 ಕಪ್ ಕಲ್ಲಂಗಡಿ ಹಣ್ಣಿನ ಬಿಳಿ ಭಾಗ
  2. 1 ಕಪ್ ತೆಂಗಿನ ತುರಿ
  3. 1-2 ಒಣ ಮೆಣಸಿನಕಾಯಿ / ಹಸಿ ಮೆಣಸಿನಕಾಯಿ
  4. 4 ಟೀಸ್ಪೂನ್ ಉದ್ದಿನ ಬೇಳೆ
  5. 1/4 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಅಡುಗೆ ಎಣ್ಣೆ
  7. 1/2 ನೆಲ್ಲಿಕಾಯಿ ಗಾತ್ರ ಹುಣಿಸೆ ಹಣ್ಣು
  8. ಉಪ್ಪು ರುಚಿಗೆ ತಕ್ಕಷ್ಟು.
ಕಲ್ಲಂಗಡಿ ಹಣ್ಣಿನ ಬಿಳಿ ಭಾಗದ ಚಟ್ನಿ ಮಾಡುವ ವಿಧಾನ:
  1. ಕಲ್ಲಂಗಡಿ ಹಣ್ಣನ್ನು ತೊಳೆದು ಕತ್ತರಿಸಿ. ಹಣ್ಣಿನ ಬಿಳಿಭಾಗವನ್ನು ತೆಗೆದುಕೊಂಡು 1 ಇಂಚು ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ. ಸ್ವಲ್ಪವೇ ಸ್ವಲ್ಪ ನೀರು ಮತ್ತು ಉಪ್ಪು ಸೇರಿಸಿ ಒಂದು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೇಯಿಸಿಕೊಳ್ಳಿ.
  2. ಒಂದು ಬಾಣಲೆಗೆ ಎಣ್ಣೆ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ, ಉದ್ದಿನಬೇಳೆ ಹೊಂಬಣ್ಣ ಬರುವ ವರೆಗೆ ಹುರಿಯಿರಿ.
  3. ಬೇಯಿಸಿದ ಬಿಳಿಭಾಗ ತಣ್ಣಗಾಗುವ ವರೆಗೆ ಕಾದು, ಒಂದು ಮಿಕ್ಸೀ ಜಾರಿಗೆ ಬೇಯಿಸಿದ ಬಿಳಿಭಾಗ ಮತ್ತು ತೆಂಗಿನ ತುರಿ ಸೇರಿಸಿ ಅರೆದು ಕೊಳ್ಳಿ. ಅದಕ್ಕೆ ಹುಣಸೆ ಹಣ್ಣು ಮತ್ತು ಹುರಿದ ಮಸಾಲೆ ಸೇರಿಸಿ ಪುನಃ 10 ಸೆಕೆಂಡುಗಳ ಕಾಲ ಅರೆಯಿರಿ. ಈ ರುಚಿಕರವಾದ ಚಟ್ನಿಯನ್ನು ಬಿಸಿಯಾದ ಅನ್ನದೊಂದಿಗೆ ಅಥವಾ ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಿ.

ಬುಧವಾರ, ಫೆಬ್ರವರಿ 17, 2016

kallangadi hannina juice | ಕಲ್ಲಂಗಡಿ ಹಣ್ಣಿನ ಜೂಸ್


ಕಲ್ಲಂಗಡಿ ಹಣ್ಣಿನ ಜೂಸ್ ಮಾಡುವ ವಿಧಾನ 

ಕಲ್ಲಂಗಡಿ ಹಣ್ಣಿನ ಜೂಸ್ ಬಹಳಷ್ಟು ಪೋಷಕಾಂಶಗಳನ್ನು ಹೊಂದಿದ್ದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಪಾನೀಯವಾಗಿದೆ. ಬಿಸಿ ಬೇಸಿಗೆಯ ದಿನಗಳಲ್ಲಿ ಕಲ್ಲಂಗಡಿ ಜೂಸ್ ನಮ್ಮ ದಾಹ ತಣಿಸುತ್ತದೆ. ಈ ಕಲ್ಲಂಗಡಿ ಜೂಸ್ ನಲ್ಲಿ ಉಪಯೋಗಿಸಲಾದ ಉಪ್ಪು ಮತ್ತು ಕರಿ ಮೆಣಸು ಜೂಸ್ ನ ರುಚಿಯನ್ನು ಹೆಚ್ಚಿಸುತ್ತದೆ. ಈ ರೀತಿಯಲ್ಲದೇ ನೀವು ಶುಂಠಿ ಅಥವಾ ಪುದೀನ ಎಲೆಗಳು ಅಥವಾ ದಾಳಿಂಬೆಯನ್ನು ಜೊತೆಯಲ್ಲಿ ಸೇರಿಸಿ ಸಹ ಕಲ್ಲಂಗಡಿ ಹಣ್ಣಿನ ಜೂಸ್ ತಯಾರಿಸಬಹುದು. ಆದರೆ ಈ ಜೂಸ್ ಅತ್ಯಂತ ಸರಳವಾಗಿದ್ದು ಹೆಚ್ಚು ರುಚಿಕರವಾಗಿರುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ಅನೇಕ ಆರೋಗ್ಯಕರ ಅಂಶಗಳಿದ್ದು, ಇದು ಮೂತ್ರಪಿಂಡ ಅಸ್ವಸ್ಥತೆ ತಡೆಗಟ್ಟುವಿಕೆ, ಅಧಿಕ ರಕ್ತದೊತ್ತಡ, ಕ್ಯಾನ್ಸರ್, ಮಧುಮೇಹ, ಹೃದಯ ರೋಗ, ಉಷ್ಣ ಸಂಬಂಧಿ ಖಾಯಿಲೆಗಳು ಮತ್ತು ಇಳಿ ವಯಸ್ಸಿನಲ್ಲಿ ಬರುವ ಕಣ್ಣಿನ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ. ಕಲ್ಲಂಗಡಿ ಹಣ್ಣಿನ ನಿಯಮಿತ ಸೇವನೆ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 1 ಕಪ್

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಕಪ್ ಕಲ್ಲಂಗಡಿ ಹಣ್ಣಿನ ತುಂಡುಗಳು
  2. 1 - 2 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  3. 1 ಚಿಟಿಕೆ ಕಾಳು ಮೆಣಸಿನ ಪುಡಿ / 1 ಕಾಳು ಮೆಣಸು
  4. 1 ಚಿಟಿಕೆ ಉಪ್ಪು

ಕಲ್ಲಂಗಡಿ ಹಣ್ಣಿನ ಜೂಸ್ ಮಾಡುವ ವಿಧಾನ:

  1. ಕಲ್ಲಂಗಡಿ ಹಣ್ಣನ್ನು ತೊಳೆದು ಕತ್ತರಿಸಿ. ಕೆಂಪು ಭಾಗವನ್ನು ತೆಗೆದು ಕೊಂಡು ಸಣ್ಣ ತುಂಡುಗಳಾಗಿ ಮಾಡಿ, ಬೀಜವನ್ನು ತೆಗೆಯಿರಿ.
  2. ಈಗ ಬೀಜ ತೆಗೆದ ಕಲ್ಲಂಗಡಿ ಹಣ್ಣಿನ ತುಂಡುಗಳನ್ನು ಮಿಕ್ಸಿ ಜಾರಿಗೆ ಹಾಕಿ. ಸಕ್ಕರೆ, ಕಾಳು ಮೆಣಸಿನ ಪುಡಿ ಮತ್ತು ಉಪ್ಪು ಹಾಕಿ.
  3. ನಯವಾದ ಜೂಸ್ ಆಗುವಂತೆ ಅರೆಯಿರಿ. ನಿಮಗೆ ಇಷ್ಟವಿದ್ದಲ್ಲಿ ಸೋಸ ಬಹುದು, ನಾನು ಸೋಸುವುದಿಲ್ಲ. ತಣ್ಣಗಿನ ಜೂಸ್ ಬೇಕಾದಲ್ಲಿ ಐಸ್ ಕ್ಯೂಬ್ಸ್ ಹಾಕಿ ಕುಡಿಯಲು ಕೊಡಿ.

ಸೋಮವಾರ, ಫೆಬ್ರವರಿ 15, 2016

Tomato bath in kannada | Tomato rice in kannada | ಟೊಮ್ಯಾಟೋ ಬಾತ್ ಮಾಡುವ ವಿಧಾನ | ಟೊಮ್ಯಾಟೋ ರೈಸ್ ಮಾಡುವ ವಿಧಾನ


ಟೊಮ್ಯಾಟೋ ಬಾತ್ ಮಾಡುವ ವಿಧಾನ

ಟೊಮ್ಯಾಟೋ ಬಾತ್ ಅಥವಾ ಟೊಮ್ಯಾಟೋ ರೈಸ್ ಅಥವಾ ಟೊಮ್ಯಾಟೋ ಪಲಾವ್ ನ್ನು ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಇದೊಂದು ಕರ್ನಾಟಕದ ಜನಪ್ರಿಯ ಬೆಳಗ್ಗಿನ ಉಪಹಾರವಾಗಿದ್ದು ಇದನ್ನು ಮಕ್ಕಳು ಸಹ ಬಹಳ ಇಷ್ಟಪಡುತ್ತಾರೆ. ಟೊಮ್ಯಾಟೋ ಬಾತ್ ಬಹಳ ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು, ಇದನ್ನು ಬೆಳಗ್ಗಿನ ಉಪಹಾರ ಅಥವಾ ಊಟದ ಸಮಯದಲ್ಲಿ ಬಡಿಸಬಹುದು. ಈ ಟೊಮ್ಯಾಟೋ ಬಾತ್ ಸಾಧಾರಣವಾಗಿ ಬೆಂಗಳೂರು-ಮೈಸೂರು ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಇದನ್ನು ಅಕ್ಕಿ, ಈರುಳ್ಳಿ, ಟೊಮ್ಯಾಟೋ ಮತ್ತು ಕೆಲವು ಮಸಾಲೆ ಪದಾರ್ಥಗಳನ್ನು ಉಪಯೋಗಿಸಿ ಕೊಂಡು ತಯಾರಿಸಲಾಗುತ್ತದೆ.
ಸಾಧಾರಣವಾಗಿ ಕರ್ನಾಟಕದಲ್ಲಿ, ಟೊಮ್ಯಾಟೋ ಬಾತ್ ನ್ನು ಎರಡು ರೀತಿಯಲ್ಲಿ ತಯಾರಿಸುತ್ತಾರೆ. ಒಂದು ಮಸಾಲೆ ಅರೆದು, ಮತ್ತು ಇನ್ನೊಂದು ಅರೆಯದೇ ನೇರವಾಗಿ ಮಸಾಲೆ ಮತ್ತು ಮಾಸಲಾ ಪುಡಿಗಳನ್ನು ಉಪಯೋಗಿಸಿ ಮಾಡುವುದು. ಈಗ ನಾನು ಇಲ್ಲಿ ವಿವರಿಸುವ ಟೊಮ್ಯಾಟೋ ಬಾತ್ ಮಸಾಲೆ ಅರೆದು ಮಾಡುವ ವಿಧಾನವಾಗಿದ್ದು, ಬಹಳ ರುಚಿಕರವಾಗಿರುತ್ತದೆ. ಹಾಗೂ ಇದನ್ನು ಪ್ರೆಶರ್ ಕುಕ್ಕರ್ ಉಪಯೋಗಿಸಿ ಮಾಡಲಾಗುತ್ತದೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 2 ಕಪ್ ಅಕ್ಕಿ (ಸೋನಾ ಮಸೂರಿ)
  2. 2 ದೊಡ್ಡ ಈರುಳ್ಳಿ
  3. 4 ದೊಡ್ಡ ಟೊಮ್ಯಾಟೋ
  4. 1/2 ಟೀಸ್ಪೂನ್ ಸಾಸಿವೆ
  5. 2 ಚಕ್ರ ಮೊಗ್ಗು / ಪುಲಾವ್ ಎಲೆ
  6. 1/4 ಟೀಸ್ಪೂನ್ ಅರಶಿನ ಪುಡಿ
  7. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  8. 8-10 ಟೀಸ್ಪೂನ್ ಅಡುಗೆ ಎಣ್ಣೆ
  9. 4 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  10. 2 ಟೀಸ್ಪೂನ್ ಕಲ್ಲುಪ್ಪು(ಅಥವಾ ನಿಮ್ಮ ರುಚಿಗೆ ತಕ್ಕಷ್ಟು)

ಬೇಕಾಗುವ ಪದಾರ್ಥಗಳು (ಮಸಾಲೆ ಅರೆಯಲು):

  1. 1 ಕಪ್ ತೆಂಗಿನತುರಿ
  2. 2ಸೆಮೀ ಉದ್ದದ ಶುಂಠಿ
  3. 5-6 ಎಸಳು ಬೆಳ್ಳುಳ್ಳಿ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಜೀರಿಗೆ
  6. 2-4 ಒಣ ಮೆಣಸಿನಕಾಯಿ
  7. 1 ಬೆರಳುದ್ದ ಚಕ್ಕೆ
  8. 8-10 ಲವಂಗ
  9. 1 ಏಲಕ್ಕಿ
  10. 1 ಕಪ್ ನೀರು ಅರೆಯಲು

ಟೊಮ್ಯಾಟೋ ಬಾತ್ | ಟೊಮ್ಯಾಟೋ ರೈಸ್ ಮಾಡುವ ವಿಧಾನ:

  1. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
  2. ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ. ಈಗ ಒಂದು 3ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಹಾಕಿ. 1/2 ಟೀಸ್ಪೂನ್ ಸಾಸಿವೆ ಮತ್ತು ಚಕ್ರ ಮೊಗ್ಗು ಹಾಕಿ, ಹುರಿಯಿರಿ.
  3. ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ.
  4. ಅರಶಿನ ಮತ್ತು ಉಪ್ಪು ಹಾಕಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಅರೆದ ಮಸಾಲೆ ಹಾಕಿ, ಮಸಾಲೆಯ ಹಸಿ ವಾಸನೆ ಹೋಗುವವರೆಗೆ ಅಂದರೆ ಒಂದೆರಡು ನಿಮಿಷ ಹುರಿಯಿರಿ.
  5. ಮಸಾಲೆ ಹುರಿಯುತ್ತಿರುವಾಗಲೇ 2 ಕಪ್ ಅಕ್ಕಿ ತೊಳೆದು ಹಾಕಿ. 4 ಕಪ್ ನೀರು ಹಾಕಿ(ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ). 2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ.
  6. ಒಮ್ಮೆ ಚೆನ್ನಾಗಿ ಮಗುಚಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಮೊಸರು ಬಜ್ಜಿ ಯೊಂದಿಗೆ ಅಥವಾ ಕಾಯಿ ಚಟ್ನಿಯೊಂದಿಗೆ ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.

ಶನಿವಾರ, ಫೆಬ್ರವರಿ 13, 2016

Menthe soppina parota (chapathi) | ಮೆಂತೆ ಸೊಪ್ಪಿನ ಪರೋಟ (ಚಪಾತಿ)


ಮೆಂತೆ ಸೊಪ್ಪಿನ ಪರೋಟ (ಚಪಾತಿ) ಮಾಡುವ ವಿಧಾನ 

ಮೆಂತೆ ಸೊಪ್ಪಿನ ಪರೋಟ ಮಾಡುವ ವಿಧಾನವನ್ನು ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಮೆಂತೆ ಸೊಪ್ಪಿನ ಪರೋಟವನ್ನು ಸಣ್ಣಗೆ ಹೆಚ್ಚಿದ ಮೆಂತೆ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಮತ್ತು ಅಚ್ಚ ಖಾರದ ಪುಡಿ ಉಪಯೋಗಿಸಿ ಮಾಡಲಾಗುತ್ತದೆ. ಮೆಂತೆ ಸೊಪ್ಪಿನ ಪರೋಟ ಮಾಡಲು ಬಹಳ ಸುಲಭವಾಗಿದ್ದು, ಆಲೂ ಪರೋಟ ಅಥವಾ ಬೇರೆ ಪರೋಟಗಳಂತೆ ಮಸಾಲೆ ತುಂಬಿಸಿ ಮಾಡಲಾಗುವುದಿಲ್ಲ. ಮೆಂತೆ ಸೊಪ್ಪು ಮತ್ತು ಬೇರೆಲ್ಲ ಮಸಾಲೆಗಳನ್ನು ಗೋಧಿ ಹಿಟ್ಟಿನೊಂದಿಗೆ ಕಲಸಿ, ಚಪಾತಿ ಹಿಟ್ಟಿನಂತೆ ಹಿಟ್ಟನ್ನು ತಯಾರಿಸಿ, ಮಾಮೂಲಿ ಚಪಾತಿಯಂತೆ ತಯಾರಿಸಲಾಗುತ್ತದೆ.
ಮೆಂತೆ ಸೊಪ್ಪಿನ ಪರೋಟವನ್ನು ಕೆಲವೇ ಕೆಲವು ಮಸಾಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. ಏಕೆಂದರೆ ಪರೊಟಕ್ಕೆ ಬೇಕಾದ ರುಚಿ ಮತ್ತು ಸ್ವಾದ ಮೆಂತೆ ಸೊಪ್ಪೊಂದೇ ಕೊಡಬಲ್ಲದು. ಜೊತೆಗೆ ಉಪಯೋಗಿಸಿದ ಶುಂಠಿ ಮತ್ತು ಬೆಳ್ಳುಳ್ಳಿಗಳು ಈ ರುಚಿ ಮತ್ತು ಸ್ವಾದವನ್ನು ಹೆಚ್ಚಿಸುತ್ತವೆ. ಈ ಮೆಂತೆ ಸೊಪ್ಪಿನ ಪರೋಟ ವನ್ನು ನೀವು ಬೆಣ್ಣೆ ಅಥವಾ ಮೊಸರು ಅಥವಾ ನಿಮ್ಮಿಷ್ಟದ ಯಾವುದೇ ಪಲ್ಯ ಅಥವಾ ಗೊಜ್ಜಿನೊಂದಿಗೆ ಬಡಿಸಬಹುದು.
ಮೆಂತೆ ಸೊಪ್ಪಿನಲ್ಲಿ ಜೀವಸತ್ವಗಳು, ಪ್ರೋಟೀನ್ ಮತ್ತು ಖನಿಜಗಳು ಹೇರಳವಾಗಿವೆ. ಮೆಂತೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫಾಸ್ಫರಸ್, ಕಬ್ಬಿಣ, ಅಧಿಕ ನಾರಿನಂಶ, ವಿಟಮಿನ್ ಕೆ ಹೀಗೆ ಹತ್ತು ಹಲವು ಅಂಶಗಳಿವೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: ೩ ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 3 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
  2. 1 ಕಟ್ಟು ಮೆಂತೆ ಸೊಪ್ಪು
  3. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
  4. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ
  5. 1 ಟೀಸ್ಪೂನ್ ಅಚ್ಚ ಖಾರದ ಪುಡಿ
  6. 1/4 ಟೀಸ್ಪೂನ್ ಅರಶಿನ ಪುಡಿ
  7. ಉಪ್ಪು ರುಚಿಗೆ ತಕ್ಕಷ್ಟು
  8. 5-6 ಟೀಸ್ಪೂನ್ ಅಡುಗೆ ಎಣ್ಣೆ

ಮೆಂತೆ ಸೊಪ್ಪಿನ ಪರೋಟ ಮಾಡುವ ವಿಧಾನ:

  1. ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು ಚೆನ್ನಾಗಿ ತೊಳೆಯಿರಿ. ಮೆಂತೆ ಸೊಪ್ಪು, ಶುಂಠಿ ಮತ್ತು ಬೆಳ್ಳುಳ್ಳಿ ಯನ್ನು ಸಣ್ಣದಾಗಿ ಹೆಚ್ಚಿ ಕೊಳ್ಳಿ.
  2. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಹೆಚ್ಚಿದ ಮೆಂತೆ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಅಚ್ಚ ಖಾರದ ಪುಡಿ ಮತ್ತು ಅರಶಿನ ಪುಡಿ ಹಾಕಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಹಿಟ್ಟು ಸ್ವಲ್ಪ ಗಟ್ಟಿಯಾಗಿಯೇ ಇರಲಿ. ಮೇಲಿನಿಂದ ೨ ಚಮಚ ಎಣ್ಣೆ ಹಾಕಿ, ಪುನಃ ಒಮ್ಮೆ ಕಲಸಿ ಒಂದು ಹತ್ತು ನಿಮಿಷ ಮುಚ್ಚಿಡಿ.
  3. ಈಗ ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು, ಗೋಧಿ ಹಿಟ್ಟು ಮುಟ್ಟಿಸಿಕೊಂಡು ಚಪಾತಿಯಂತೆ ವೃತ್ತಾಕಾರವಾಗಿ ಲಟ್ಟಿಸಿ.
  4. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ ಎರಡು ಬದಿ ಖಾಯಿಸಿ. ಖಾಯಿಸುವಾಗ ಎರಡೂ ಬದಿಯೂ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿ ಬಿಸಿಯಾಗಿರುವಾಗಲೇ ಮೊಸರು ಅಥವಾ ಬೆಣ್ಣೆ ಅಥವಾ ನಿಮ್ಮಿಷ್ಟದ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.

ಗುರುವಾರ, ಫೆಬ್ರವರಿ 11, 2016

Beetroot palya recipe in Kannada | ಬೀಟ್‌ರೂಟ್ ಪಲ್ಯ ಮಾಡುವ ವಿಧಾನ

 

ಬೀಟ್‌ರೂಟ್ ಪಲ್ಯ ಮಾಡುವ ವಿಧಾನ

ಬೀಟ್‌ರೂಟ್ ಪಲ್ಯದ ಪಾಕವಿಧಾನವನ್ನು ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಬೀಟ್ರೂಟ್ ಪಲ್ಯವನ್ನು ತುರಿದ ಬೀಟ್ರೂಟ್, ತೆಂಗಿನಕಾಯಿ ತುರಿ ಮತ್ತು ಕೆಲವು ಮಸಾಲೆಗಳು ಬಳಸಿಕೊಂಡು ತಯಾರಿಸಲಾಗುತ್ತದೆ. ಈ ಪಲ್ಯವನ್ನು ಅನ್ನ ಅಥವಾ ಚಪಾತಿ ಜೊತೆ ಬಡಿಸಬಹುದು.
ಕೆಲವು ತರಕಾರಿಗಳು ಸ್ವಾಭಾವಿಕವಾಗಿ ರುಚಿಕರವಾಗಿರುತ್ತದೆ. ಮತ್ತು ಅವುಗಳಿಂದ ಅಡುಗೆ ತಯಾರಿಸುವಾಗ ಹೆಚ್ಚಿನ ಮಾಸಲಾ ಪದಾರ್ಥಗಳನ್ನು ಸೇರಿಸುವ ಅಗತ್ಯವೂ ಇರುವುದಿಲ್ಲ. ಅಥವಾ ಹಾಗೇನಾದರೂ ಬಹಳಷ್ಟು ಮಸಾಲೆಗಳನ್ನು ಬಳಸಿದಲ್ಲಿ ಆ ತರಕಾರಿಯ ಸ್ವಾಭಾವಿಕ ರುಚಿ ಮತ್ತು ಸ್ವಾದ ಕಡಿಮೆಯಾಗಿ ಮಸಾಲೆ ರುಚಿಯೇ ಎದ್ದು ಕಾಣುವುದು. ಇದಕ್ಕೆ ಈಗ ನಾನು ವಿವರಿಸಲಿರುವ ಬೀಟ್ರೂಟ್ ಪಲ್ಯವೇ ಉದಾಹರಣೆ. ಇದು ಬಹಳ ಸುಲಭ ಮತ್ತು ಆರೋಗ್ಯಕರ ಅಡುಗೆಯಾಗಿದ್ದು ಇದಕ್ಕೆ ಹೆಚ್ಚಿನ ಮಸಾಲೆಗಳನ್ನು ಬಳಸಲಾಗುವುದಿಲ್ಲ.
ಬೀಟ್ರೂಟ್ ಪೋಷಕಾಂಶಗಳು ಮತ್ತು ಅನೇಕ ಔಷಧೀಯ ಮೌಲ್ಯಗಳನ್ನು ಹೊಂದಿರುವ ಒಂದು ಸಂಪೂರ್ಣ ತರಕಾರಿ. ಬೀಟ್ರೂಟ್ನಲ್ಲಿ ಪೊಟ್ಯಾಷಿಯಂ, ಮೆಗ್ನೀಷಿಯಂ, ಕಬ್ಬಿಣ, ವಿಟಮಿನ್ ಎ, ಬಿ 6 ಮತ್ತು ಸಿ, ಫೋಲಿಕ್ ಆಮ್ಲ, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಆಂಟಿ ಆಕ್ಸಿಡೆಂಟ್ಸ್ ಮತ್ತು ನಾರಿನಂಶ ಹೇರಳವಾಗಿವೆ. ಅನೇಕ ಅಧ್ಯಯನಗಳು ಬೀಟ್ರೂಟ್ನ ನಿಯಮಿತ ಬಳಕೆ ಬೊಜ್ಜು, ಮಧುಮೇಹ ಮತ್ತು ಹೃದಯ ರೋಗದ ಅಪಾಯವನ್ನು ತಡೆಗಟ್ಟಬಹುದೆಂದು ತಿಳಿಸಿವೆ. ಅಲ್ಲದೆ ಬೀಟ್‌ರೂಟ್ ದೇಹದ ತೂಕ ಕಡಿಮೆ ಮಾಡಲು, ಚರ್ಮದ ಕಾಂತಿಗೆ ಮತ್ತು ಸೊಂಪಾದ ಕೂದಲಿಗೆ ಸಹಕಾರಿ ಎನ್ನಲಾಗಿದೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಬೀಟ್ರೂಟ್ ಸೇವನೆ ಮಾಡುವುದು ಒಳ್ಳೆಯದು.
ಬೀಟ್‌ರೂಟ್ ಪಲ್ಯ ವೀಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಮಧ್ಯಮ ಗಾತ್ರದ ಬೀಟ್ರೂಟ್
  2. 1 ಟೀಸ್ಪೂನ್ ಉದ್ದಿನ ಬೇಳೆ
  3. 1 ಟೀಸ್ಪೂನ್ ಕಡ್ಲೆ ಬೇಳೆ
  4. 4 ಟೀಸ್ಪೂನ್ ಅಡುಗೆ ಎಣ್ಣೆ
  5. 1/2 ಟೀಸ್ಪೂನ್ ಸಾಸಿವೆ
  6. 1 ಚಿಟಿಕೆ ಅರಿಶಿನ ಪುಡಿ
  7. 4 - 5 ಕರಿಬೇವಿನ ಎಲೆ
  8. 1-2 ಹಸಿರು ಮೆಣಸಿನ ಕಾಯಿ
  9. 1/2 ಕಪ್ ತೆಂಗಿನ ತುರಿ
  10. ಉಪ್ಪು ರುಚಿಗೆ ತಕ್ಕಷ್ಟು
  11. 1/4 ಕಪ್ ನೀರು

ಬೀಟ್‌ರೂಟ್ ಪಲ್ಯ ಮಾಡುವ ವಿಧಾನ:

  1. ಬೀಟ್‌ರೂಟನ್ನು ಸಿಪ್ಪೆ ತೆಗೆದು, ತೊಳೆದು, ತುರಿಯಿರಿ.
  2. ಒಂದು ಬಾಣಲೆ ತೆಗೆದುಕೊಂಡು, ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕತ್ತರಿಸಿದ ಹಸಿರುಮೆಣಸಿನಕಾಯಿ, ಅರಶಿನ ಮತ್ತು ಕರಿಬೇವಿನ ಎಲೆ ಹಾಕಿ.
  3. ತುರಿದ ಬೀಟ್‌ರೂಟ್, ಉಪ್ಪು ಮತ್ತು ನೀರು ಹಾಕಿ ಮಗುಚಿ. ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಿಸಿ. ಆಗೊಮ್ಮೆ ಈಗೊಮ್ಮೆ ಮಗುಚಲು ಮರೆಯದಿರಿ.
  4. ಬೀಟ್‌ರೂಟ್ ಬೇಯುವವರೆಗೆ ಕಾಯಿರಿ. ಸುಮಾರು ಹತ್ತು ನಿಮಿಷ ಬೇಕಾಗುತ್ತದೆ. ನಂತರ ತೆಂಗಿನತುರಿ ಹಾಕಿ ಮಗುಚಿ. ಬಿಸಿಯಾದ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.

ಮಂಗಳವಾರ, ಫೆಬ್ರವರಿ 9, 2016

Apple sweet idli recipe in Kannada | ಸೇಬು ಹಣ್ಣಿನ ಸಿಹಿ ಇಡ್ಲಿ ಮಾಡುವ ವಿಧಾನ


ಸೇಬು ಹಣ್ಣಿನ ಸಿಹಿ ಇಡ್ಲಿ ಮಾಡುವ ವಿಧಾನ

ಹಂತ ಹಂತವಾದ ಚಿತ್ರ ವಿವರಣೆಯೊಂದಿಗೆ ಸೇಬುಹಣ್ಣಿನ ಇಡ್ಲಿಯ ಪಾಕವಿಧಾನ ಇಲ್ಲಿದೆ. ಸೇಬುಹಣ್ಣಿನ ಸಿಹಿ ಇಡ್ಲಿಯನ್ನು ತುರಿದ ಸೇಬು, ಸಕ್ಕರೆ ಮತ್ತು ಇಡ್ಲಿ ರವಾ (ಅಕ್ಕಿ ರವೆ ) ಬಳಸಿಕೊಂಡು ತಯಾರಿಸಲಾಗುತ್ತದೆ. ಸೇಬುಹಣ್ಣಿನ ಸೀಸನ್. ಕಡಿಮೆಗೆ ಸಿಕ್ಕಿತೆಂದು ಒಂದಷ್ಟು ತಂದೆ. ಕೊನೆಗೆ ಹೇಗಾದರೂ ಮುಗಿಸಬೇಕಿತ್ತು. ಆದ್ದರಿಂದ, ಸ್ವಲ್ಪ ಯೋಚನೆ ಮಾಡಿ ನನ್ನ ಮಗನಿಗೆ ೧೦ ಘಂಟೆಯ ಸ್ನಾಕ್ಸ್ ಸಮಯಕ್ಕೆ ಈ ರೀತಿಯ ಇಡ್ಲಿ ತಯಾರಿಸಿದೆ. ಏನಾಶ್ಚರ್ಯ? ಹೇಗಾಗುವುದೋ ಎಂದು ಕೊಂಡು ಮಾಡಿದ ಸೇಬುಹಣ್ಣಿನ ಸಿಹಿ ಇಡ್ಲಿ ಬಹಳ ರುಚಿಕರವಾಗಿತ್ತು. ನನ್ನ ಮಗ ತುಪ್ಪದೊಂದಿಗೆ 2 ಇಡ್ಲಿಯನ್ನು ಖುಷಿಯಿಂದ ತಿಂದ. ನನಗಂತೂ ಬಹಳ ಖುಷಿಯಾಯಿತು. ಒಬ್ಬ ತಾಯಿಗೆ ಇದಕ್ಕಿಂತ ಸಂತಸದ ಸಂಗತಿ ಬೇರೇನಿದೆ?
ಇದೊಂದು ದಿಡೀರ್ ಇಡ್ಲಿಯಾಗಿದ್ದು, ಹಿಟ್ಟು ಹುದುಗ ಬೇಕಾಗಿಲ್ಲ. ಹಾಗಾಗಿ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಈ ಇಡ್ಲಿಯನ್ನು ತುರಿದ ಸೇಬುಹಣ್ಣು, ಸಕ್ಕರೆ ಮತ್ತು ಇಡ್ಲಿ ರವಾ ಬಳಸಿಕೊಂಡು ಮಾಡಲಾಗುತ್ತದೆ. ಎಲ್ಲ ಕಲಸಿ ಬೇರೆ ಇಡ್ಲಿಗಳಂತೆ ಬೇಯಿಸಿದರಾಯಿತು.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಕಪ್ ತುರಿದ ಸೇಬು ಹಣ್ಣು
  2. 1/4 ಕಪ್ ಸಕ್ಕರೆ(ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  3. 1 ಕಪ್ ಇಡ್ಲಿ ರವಾ (ಸ್ವಲ್ಪ ಹೆಚ್ಚು ಕಡಿಮೆ ಸೇಬು ಹಣ್ಣನ್ನು ಅವಲಂಬಿಸಿ)
  4. ಒಂದು ಚಿಟಿಕೆ ಏಲಕ್ಕಿ ಪುಡಿ
  5. ಒಂದು ಚಿಟಿಕೆ ಉಪ್ಪು

ಸೇಬುಹಣ್ಣಿನ ಸಿಹಿ ಇಡ್ಲಿ:

  1. ಸೇಬು ಹಣ್ಣು ತುರಿದು ಒಂದು ಪಾತ್ರೆಗೆ ಹಾಕಿ. ಇಡ್ಲಿ ರವೆ ಹಾಕಿ ಕಲಸಿ. ನೀರು ಹಾಕುವುದು ಬೇಡ.
  2. ಈಗ ಸಕ್ಕರೆ, ಉಪ್ಪು ಮತ್ತು ಏಲಕ್ಕಿ ಪುಡಿ ಹಾಕಿ ಕಲಸಿ.
  3. ಈಗ ಇಡ್ಲಿ ತಟ್ಟೆ ತೆಗೆದುಕೊಂಡು, ಸ್ವಲ್ಪ ಸ್ವಲ್ಪ ಮಿಶ್ರಣವನ್ನು ಹಾಕಿ, ಕೈಯಲ್ಲಿ ಒತ್ತಿ, ಇಡ್ಲಿ ರೂಪಕ್ಕೆ ತನ್ನಿ. 12 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಇಡ್ಲಿ ಬಿಸಿಯಾಗಿರುವಾಗಲೇ ಜೇನುತುಪ್ಪ ಅಥವಾ ತುಪ್ಪದೊಂದಿಗೆ ಬಡಿಸಿ.

ಶುಕ್ರವಾರ, ಫೆಬ್ರವರಿ 5, 2016

Masala tea recipe in Kannada | ಮಸಾಲೆ ಟೀ ಮಾಡುವ ವಿಧಾನ


ಮಸಾಲೆ ಟೀ ಮಾಡುವ ವಿಧಾನ

ಇಂದು ನಾನು ಈ ವೀಕೆಂಡ್‌ನಲ್ಲಿ ಮಾಡಿ ಅಸ್ವಾದಿಸುವಂತಹ ಪಾಕವಿಧಾನವೊಂದನ್ನು ವಿವರಿಸಲಿದ್ದೇನೆ. ಅದೆಂದರೆ ರುಚಿಕರ ಮಸಾಲಾ ಚಹಾ ಅಥವಾ ಮಸಾಲ ಟೀ. ನಮ್ಮಲ್ಲಿ ಹೆಚ್ಚಿನವರು ವಾರ ಪೂರ್ತಿ ಕೆಲಸದ ತರಾತುರಿಯಲ್ಲಿರುತ್ತಾರೆ. ವೀಕೆಂಡ್ ಬಂತೆಂದರೆ ಸ್ವಲ್ಪ ಆರಾಮ. ಹಾಗೂ ಏನಾದರೊಂದು ಬದಲಾವಣೆ ಇದ್ದರೆ ಚೆನ್ನ ಎಂದು ಮನಸು ಬಯಸುತ್ತದೆ. ಈ ವಾರ ಈ ಮಸಾಲಾ ಚಹಾ ಮಾಡಿ ಆನಂದಿಸಿ.
ಈ ಮಸಾಲ ಚಹಾ ಅಥವಾ ಮಸಾಲೆ ಟೀ ಯನ್ನು ಒಣ ಶುಂಠಿ, ಕರಿ ಮೆಣಸು, ಲವಂಗ, ಏಲಕ್ಕಿ ಮತ್ತು ಚಕ್ಕೆ ಬಳಸಿಕೊಂಡು ತಯಾರಿಸಲಾಗುತ್ತದೆ. ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳ ಮೂಲಕ ಇಲ್ಲಿ ವಿವರಿಸಲಾಗಿದೆ. ನೀವು ನಿಮ್ಮ ಇಷ್ಟದ ಪ್ರಕಾರ ಹಾಲು ಮತ್ತು ನೀರಿನ ಅನುಪಾತ ಬದಲಾಯಿಸಬಹುದು.
ಮಸಾಲೆ ಟೀ ವಿಡಿಯೋ

ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 10 ನಿಮಿಷ
ಪ್ರಮಾಣ: 2 ಕಪ್

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್ )

  1. 1.5 ಕಪ್ ಹಾಲು
  2. 0.5 ಕಪ್ ನೀರು
  3. 4 ಲವಂಗ
  4. 1-2 ಕರಿಮೆಣಸು
  5. ಒಂದು ಸಣ್ಣ ತುಂಡು ಒಣ ಶುಂಠಿ
  6. ಒಂದು ಏಲಕ್ಕಿ
  7. ಸಣ್ಣ ಚೂರು ಚಕ್ಕೆ

ಮಸಾಲೆ ಟೀ ಮಾಡುವ ವಿಧಾನ:

  1. ಎಲ್ಲ ಮಸಾಲಾ ಪದಾರ್ಥಗಳನ್ನು ತೆಗೆದುಕೊಂಡು ಕುಟ್ಟಾಣಿಯಲ್ಲಿ ಸ್ವಲ್ಪ ಜಜ್ಜಿಕೊಳ್ಳಿ.
  2. ಜಜ್ಜಿದ ಮಸಾಲೆಗಳನ್ನು ೧/೨ ಕಪ್ ನೀರಿನೊಂದಿಗೆ ಒಂದು ಪಾತ್ರೆಯಲ್ಲಿ ಹಾಕಿ 2 ನಿಮಿಷಗಳ ಕಾಲ ಕುದಿಸಿ.
  3. ಈಗ ಹಾಲು, ಚಹಾ ಪುಡಿ ಮತ್ತು ಸಕ್ಕರೆ ಹಾಕಿ ಕುದಿಸಿ. ಸೋಸಿ ಕುಡಿಯಲು ನೀಡಿ.


ಬುಧವಾರ, ಫೆಬ್ರವರಿ 3, 2016

Mangalore style bannada southekayi sambar recipe | ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್



ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್

ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್ ಪಾಕವಿಧಾನ ಹಂತ ಹಂತವಾದ ಚಿತ್ರಗಳ ಮೂಲಕ ವಿವರಿಸಲಾಗಿದೆ. ಮಂಗಳೂರು ಶೈಲಿಯ ಬಣ್ಣದ-ಸೌತೆಕಾಯಿ ಅಥವಾ ಸಾಂಬಾರ್-ಸೌತೆಕಾಯಿ ಸಾಂಬಾರ್ನ್ನು ತಾಜಾ ಹುರಿದ ಮಸಾಲೆಗಳು ಮತ್ತು ತುರಿದ ತೆಂಗಿನಕಾಯಿ ಬಳಸಿಕೊಂಡು ತಯಾರಿಸಲಾಗುತ್ತದೆ. ಈ ರೀತಿಯ ಸಾಂಬಾರ್ ಮಂಗಳೂರು, ಉಡುಪಿ ಮತ್ತು ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಆಚರಣೆಯಲ್ಲಿದೆ. ಕರ್ನಾಟಕದಲ್ಲಿ ಸಾಂಬಾರ್ನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಮಂಗಳೂರು ಮತ್ತು ಉಡುಪಿ ವಲಯದಲ್ಲಿ "ಕೊದ್ದೆಲ್ ಅಥವಾ ಹುಳಿ" ಎಂದೂ, ಮಲೆನಾಡು ಪ್ರದೇಶದಲ್ಲಿ "ಹುಳಿ ಅಥವಾ ಹುಳಿ-ಸಾರು" ಎಂದೂ, ಉಳಿದ ಪ್ರದೇಶಗಳಲ್ಲಿ ಸಾರು ಅಥವಾ ಸಾಂಬಾರ್ ಎಂದು ಕರೆಯಲಾಗುತ್ತದೆ.
ಕರ್ನಾಟಕದ ಅಡುಗೆ ಎಷ್ಟು ಶ್ರೀಮಂತವಾಗಿದೆ ಎಂದರೆ ಇಲ್ಲಿ ಅನೇಕ ವಿಧವಾದ ಸಾಂಬಾರ್ ಗಳು ಆಚರಣೆಯಲ್ಲಿವೆ. ಸಾಂಬಾರ್ ಪಾಕವಿಧಾನ ಪ್ರದೇಶದಿಂದ ಪ್ರದೇಶಕ್ಕೆ, ಕುಟುಂಬದಿಂದ ಕುಟುಂಬಕ್ಕೆ ಮತ್ತು ಬಳಸುವ ತರಕಾರಿಗಳ ಮೇಲೆ ಅವಲಂಬಿತವಾಗಿದೆ. ಎಷ್ಟರಮಟ್ಟಿಗೆ ಈ ವೆಬ್‌ಸೈಟ್ ನಲ್ಲಿ ನ್ಯಾಯ ಒದಗಿಸಬಲ್ಲೆವೋ ಗೊತ್ತಿಲ್ಲ. ಈಗ ಈ ಮಂಗಳೂರು ಶೈಲಿಯ ಬಣ್ಣದ-ಸೌತೆಕಾಯಿ ಉಪಯೋಗಿಸಿ ಮಾಡುವ ಸಾಂಬಾರ್ ನೊಂದಿಗೆ ಪ್ರಾರಂಭಿಸಿದ್ದೇವೆ. ನಾನು ವಾರದಲ್ಲೊಮ್ಮೆಯಾದರೂ ಈ ತರದ ಸಾಂಬಾರ್ ಮಾಡುತ್ತೇನೆ ಮತ್ತು ಅನ್ನದೊಂದಿಗೆ ರುಚಿಕರವಾಗಿರುತ್ತದೆ. .
ಈ ರೀತಿಯ ಸೌತೆಕಾಯಿ ಸಾಂಬಾರ್ ನಲ್ಲಿ ಹುಣಿಸೆ ಹಣ್ಣು ಬಳಸುವುದಿಲ್ಲ ಏಕೆಂದರೆ ಸೌತೆಕಾಯಿಯಲ್ಲೇ ಹುಳಿ ಅಂಶವಿರುತ್ತದೆ. ಸೌತೆಕಾಯಿ ಬದಲು ಬೂದು-ಕುಂಬಳ ಕಾಯಿಯನ್ನು ಉಪಯೋಗಿಸಬಹುದು. ಬೇಳೆಯ ಬದಲು ನೆನೆಸಿದ ಹೆಸರು ಅಥವಾ ಅಲಸಂದೆ ಕಾಳನ್ನು ಬಳಸಬಹುದು.
ಸೌತೆಕಾಯಿ ಸಾಂಬಾರ್ ವಿಡಿಯೋ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಮಧ್ಯಮ ಗಾತ್ರದ ಬಣ್ಣದ ಸೌತೆಕಾಯಿ / ಸಾಂಬಾರ್-ಸೌತೆಕಾಯಿ
  2. 2 ಟೇಬಲ್ ಚಮಚ ತೊಗರಿಬೇಳೆ
  3. 1/4 ಟೀಸ್ಪೂನ್ ಅರಿಶಿನ ಪುಡಿ
  4. 2 ಟೀಸ್ಪೂನ್ ಕಲ್ಲುಪ್ಪು (ನಿಮ್ಮ ರುಚಿ ಪ್ರಕಾರ)
  5. 1 ಟೀಸ್ಪೂನ್ ಬೆಲ್ಲ

ಮಸಾಲೆಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 - 2 ಕಪ್ ತೆಂಗಿನ ತುರಿ (ನೀವಿಷ್ಟ ಪಡುವ ಸಾಂಬಾರ್ನ ದಪ್ಪ ಅವಲಂಬಿಸಿ)
  2. 2 - 3 ಕೆಂಪು ಮೆಣಸಿನಕಾಯಿ
  3. 1 ಟೀಸ್ಪೂನ್ ಉದ್ದಿನ ಬೇಳೆ
  4. 2 ಟೀಸ್ಪೂನ್ ಕೊತ್ತಂಬರಿ ಬೀಜ
  5. 1/4 ಟೀಸ್ಪೂನ್ ಜೀರಿಗೆ
  6. 7 - 8 ಮೆಂತ್ಯ ಕಾಳು (ಬೇಕಾದಲ್ಲಿ)
  7. ಒಂದು ಚಿಟಿಕೆ ಇಂಗು
  8. 1 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಕೆಂಪು ಮೆಣಸಿನಕಾಯಿ
  2. 5 - 6 ಕರಿಬೇವು
  3. 1/4 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಅಡುಗೆ ಎಣ್ಣೆ

ಮಂಗಳೂರು ಶೈಲಿಯ ಬಣ್ಣದ ಸೌತೆಕಾಯಿ ಸಾಂಬಾರ್ ಪಾಕ ವಿಧಾನ:

  1. ಸೌತೆಕಾಯಿಯನ್ನು ತೊಳೆದು, ಕತ್ತರಿಸಿ, ಮಧ್ಯದ ತಿರುಳನ್ನು ತೆಗೆದು ಸಣ್ಣ ಹೋಳುಗಳನ್ನಾಗಿ ಮಾಡಿಕೊಳ್ಳಿ. ನಿಮಗಿಷ್ಟ ಇದ್ದಲ್ಲಿ ಸಿಪ್ಪೆ ತೆಗೆಯಬಹುದು. ಆದರೆ ನಾನು ತೆಗೆಯುವುದಿಲ್ಲ. ಹೋಳುಗಳನ್ನು ಪುನಃ ಒಮ್ಮೆ ತೊಳೆದುಕೊಳ್ಳಿ ಏಕೆಂದರೆ ಕೆಲವು ಸೌತೆಕಾಯಿಯ ತಿರುಳು ಕಹಿಯಾಗಿರುತ್ತದೆ.
  2. ಬೇಳೆಯನ್ನು ಒಂದು ಕುಕ್ಕರ್ ನಲ್ಲಿ ತೆಗೆದುಕೊಂಡು ತೊಳೆಯಿರಿ. ಒಂದು ಕಪ್ ನೀರು, ಚಿಟಿಕೆ ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ ಎರಡು ವಿಶಾಲ್ ಮಾಡಿ. ಅರಶಿನ ಮತ್ತು ಎಣ್ಣೆ ಹಾಕಿದರೆ ಬೇಳೆ ಚೆನ್ನಾಗಿ ಬೇಯುವುದು. ಈ ಹಂತದಲ್ಲಿ ಬೇಳೆ ಅರ್ಧ ಬೆಂದಿರುತ್ತದೆ.
  3. ಈಗ ಅದೇ ಕುಕ್ಕರ್ ಗೆ ಕತ್ತರಿಸಿದ ಸೌತೆಕಾಯಿ ಹೋಳು, 1 ಟೀಸ್ಪೂನ್ ಉಪ್ಪು ಮತ್ತು 2 ಲೋಟ ನೀರು ಹಾಕಿ ಪುನಃ ಎರಡು ವಿಷಲ್ ಮಾಡಿ. ಈ ಹಂತದಲ್ಲಿ ಬೇಳೆ ತರಕಾರಿಯೊಂದಿಗೆ ಸಂಪೂರ್ಣ ಬೆಂದಿರುತ್ತದೆ.
  4. ಈಗ ಒಂದು ಬಾಣಲೆ ತೆಗೆದು ಕೊಂಡು, ಕೆಂಪು ಮೆಣಸಿನಕಾಯಿ, ಉದ್ದಿನಬೇಳೆ, ಕೊತ್ತಂಬರಿ ಬೀಜ, ಜೀರಿಗೆ, ಮೆಂತೆ ಮತ್ತು ಇಂಗನ್ನು ಮಧ್ಯಮ ಉರಿಯಲ್ಲಿ 1 ಟೀಸ್ಪೂನ್ ಎಣ್ಣೆ ಹಾಕಿ ಹುರಿಯಿರಿ.
  5. ಹುರಿದ ಮಸಾಲೆ ಮತ್ತು ತೆಂಗಿನತುರಿಯನ್ನು ನೀರು ಸೇರಿಸಿ ಅರೆಯಿರಿ. ಅರೆದ ಮಸಾಲೆಯನ್ನು ತರಕಾರಿ ಮತ್ತು ಬೇಳೆ ಇರುವ ಕುಕ್ಕರ್ ಗೆ ಹಾಕಿ. 1 ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಬೆಲ್ಲ ಹಾಕಿ.
  6. ಈಗ ಪುನಃ 1 ಕಪ್ ನೀರು ಅಥವಾ ನಿಮಗೆ ಸಾಂಬಾರ್ ಎಷ್ಟು ದಪ್ಪ ಬೇಕೋ ಅಷ್ಟು ನೀರು ಸೇರಿಸಿ, ಮಗುಚಿ, ಒಂದು ಕುದಿ ಕುದಿಸಿ. ಕೆಂಪು ಮೆಣಸು, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಸೋಮವಾರ, ಫೆಬ್ರವರಿ 1, 2016

Kesari bath recipe in kannada | ಕೇಸರಿಬಾತ್ ಮಾಡುವ ವಿಧಾನ | ಶೀರಾ ಮಾಡುವ ವಿಧಾನ


ಕೇಸರಿಬಾತ್ ಮಾಡುವ ವಿಧಾನ

ಹಂತ ಹಂತವಾದ ಚಿತ್ರಗಳ ಮೂಲಕ ಕರ್ನಾಟಕ ಶೈಲಿಯ ಸುಲಭ ಮತ್ತು ಸರಳ ಕೇಸರಿ ಬಾತ್ ಪಾಕವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಕೇಸರಿ ಬಾತ್ ಕರ್ನಾಟಕದ ಬಹಳ ಜನಪ್ರಿಯ ಸಿಹಿ ತಿನಿಸಾಗಿದೆ. ಕೇಸರಿ ಬಾತ್ ಹಬ್ಬ ಹರಿದಿನಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ಸಾಮಾನ್ಯ ದಿನಗಳಲ್ಲಿ ಮತ್ತು ಹಠಾತ್ ಅತಿಥಿಗಳು ಬಂದಾಗ ಹೀಗೆ ಎಲ್ಲ ಸಂದರ್ಭದಲ್ಲೂ ತಯಾರಿಸುವ ಬಹಳ ಸಾಮಾನ್ಯ ಸಿಹಿತಿನಿಸಾಗಿದೆ. ದಕ್ಷಿಣ ಕರ್ನಾಟಕದಲ್ಲಂತೂ ಕೇಸರಿ ಬಾತ್ ಮದುವೆ-ಮುಂಜಿಗಳಲ್ಲಿ ಬೆಳಗ್ಗಿನ ಉಪಹಾರದೊಂದಿಗೆ ಹೆಚ್ಚಾಗಿ ತಯಾರಿಸಲಾಗುತ್ತದೆ. ಕೇಸರಿ ಬಾತ್ ಸಾಧಾರಣವಾಗಿ ಬೆಳಗ್ಗಿನ ತಿಂಡಿಯೊಂದಿಗೆ ತಯಾರಿಸಲಾಗುತ್ತದೆ ಮತ್ತು ಒಂದೇ ತಟ್ಟೆಯಲ್ಲಿ ಉಪ್ಪಿಟ್ಟಿನೊಂದಿಗೆ (ಖಾರಾ ಬಾತ್) ಬಡಿಸಿದಾಗ ಅದನ್ನು "ಚೌ ಚೌ ಬಾತ್" ಎಂದು ಕರೆಯಲಾಗುತ್ತದೆ. ಮಂಗಳೂರು ಪ್ರದೇಶದಲ್ಲಿ ಕೇಸರಿ ಬಾತ್ ನ್ನು ಶೀರಾ ಎಂಬ ಹೆಸರಿನಿಂದ ಕರೆಯುತ್ತಾರೆ. ಉತ್ತರ ಭಾರತದಲ್ಲೂ ಸಹ ಈ ಸಿಹಿ ತಿನಿಸು ಜನಪ್ರಿಯವಾಗಿದೆ ಮತ್ತು ಶೀರಾ ಅಥವಾ ಸೂಜಿ ಹಲ್ವಾ ಎಂಬ ಹೆಸರಿನಿಂದ ಕರೆಯುತ್ತಾರೆ.
ಇನ್ನು "ಕೇಸರಿ ಬಾತ್" ಹೆಸರಿನ ಬಗ್ಗೆ ಹೇಳ ಬೇಕೆಂದರೆ ಈ ಸಿಹಿತಿನಿಸನ್ನು ಸಾಧಾರಣವಾಗಿ ಕೇಸರಿ ಬಣ್ಣ ಉಪಯೋಗಿಸಿ ತಯಾರಿಸುವುದರಿಂದ ಆ ಹೆಸರು ಬಂದಿರಬಹುದು. ಕೇಸರಿ ಬಣ್ಣದೊಂದಿಗೆ ಹಳದಿ ಅಥವಾ ಹಸಿರು ಬಣ್ಣದ ಕೇಸರಿ ಬಾತ್ ತಯಾರಿಸುವುದು ರೂಢಿಯಲ್ಲಿದೆ. ಈ ಬಣ್ಣಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ನಾನು ಅರಿಶಿನ ಪುಡಿ ಬಳಸಿದ್ದೇನೆ. ಆದರೆ ಇತ್ತೀಚೆಗೆ ನಾನು ಕೇಸರಿ ಬಾತ್ ಬಗ್ಗೆ ಓದುವಾಗ ಕೆಲವರು ಕೇಸರಿಬಾತ್ ಹೆಸರು "ಕೇಸರಿ ದಳ" ಗಳಿಂದ ಬಂದಿದೆ ಎಂದು ಹೇಳುವುದರ ಜೊತೆಗೆ ಕೇಸರಿಬಾತ್ ಮಾಡುವಾಗ ಕೇಸರಿ ದಳಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿಯಪಟ್ಟೆ. ಆದರೆ ನಾನು ಕರ್ನಾಟಕದಲ್ಲಿ ಕೇಸರಿದಳ ಬಳಸಿಕೊಂಡು ಕೇಸರಿಬಾತ್ ಮಾಡುವುದನ್ನು ಇಲ್ಲಿ ವರೆಗೆ ನೋಡಿಲ್ಲ. ಹಾಗಾಗಿ ಇದೊಂದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.
ಈ ಕೇಸರಿಬಾತ್ ಬಗ್ಗೆ ಇನ್ನೊಂದು ಹೇಳಲೇ ಬೇಕಾದ ಸಂಗತಿಯೆಂದರೆ ಇದೊಂದು ಅತ್ಯಂತ ಸಾಮಾನ್ಯ ಮತ್ತು ಸರಳ ಪಾಕವಿಧಾನ ಆದರೂ ಇದು ಸ್ವಲ್ಪ ನಾಜೂಕಾದ ಕೆಲಸವಾಗಿದೆ. ರುಚಿಕರವಾದ ಕೇಸರಿಬಾತ್ ತಯಾರಿಕೆಯಲ್ಲಿ ಎಡುವುವವರೇ ಹೆಚ್ಚು. ನಾನು ಇದಕ್ಕೆ ಹೊರತಲ್ಲ. ಎಷ್ಟೋ ಸಮಯದ ನಂತರ ಈಗ ಎಲ್ಲರೂ ಮೆಚ್ಚುವಂತಹ ರುಚಿಕರ ಕೇಸರಿಬಾತ್ ನ್ನು ನಾನು ತಯಾರಿಸಬಲ್ಲೆ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ. ಈ ಪಾಕವಿಧಾನವನ್ನು ನಾನು ಕಲಿತದ್ದು ನನ್ನ ದೊಡ್ಡಣ್ಣನಿಂದ. ಆಶ್ಚರ್ಯಕರ ವಿಷಯವೆಂದರೆ ಬಹಳ ಅಪರೂಪಕ್ಕೆ ಅಡುಗೆ ಮಾಡುವ ಅಣ್ಣನಿಗೆ ಹಲವಾರು ಸಿಹಿತಿನಿಸುಗಳು ಮತ್ತು ಭಕ್ಷ್ಯಗಳು ಮಾಡುವ ಕಲೆ ಮತ್ತು ಪಾಕವಿಧಾನ ಚೆನ್ನಾಗಿ ತಿಳಿದಿದೆ. ನನ್ನಮ್ಮ ಮತ್ತು ನನ್ನ ಅತ್ತೆ ಸಹ ಪಾಕ ಪ್ರವೀಣೆಯರೇ. ಹಾಗಾಗಿ ನನಗೆ ಯಾವುದೇ ಅಡುಗೆಯಲ್ಲಿ ಅನುಮಾನ ಇದ್ದಲ್ಲಿ ನಾನು ಅಣ್ಣಾ, ಅಮ್ಮ ಅಥವಾ ಅತ್ತೆಗೆ ಕರೆ ಮಾಡುತ್ತೇನೆ. ಈಗ ನಾವು ಕರ್ನಾಟಕದ ಕೇಸರಿಬಾತ್ ನ್ನು ಸರಳ ಮತ್ತು ರುಚಿಕರವಾಗಿ ಮಾಡುವ ವಿಧಾನವನ್ನು ನೋಡೋಣ.


ತಯಾರಿ ಸಮಯ: 1 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 2 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್)

  1. 1 ಕಪ್ ಪೇಣಿ ರವೆ (ಸಣ್ಣ ರವೆ)
  2. 3 ಕಪ್ ನೀರು
  3. 1.5 ಕಪ್ ಸಕ್ಕರೆ
  4. 0.5 - 1 ಕಪ್ ತುಪ್ಪ (ಧಾರಾಳವಾಗಿರಿ)
  5. 1/2 ಟೀಸ್ಪೂನ್ ನಿಂಬೆ ಹಣ್ಣಿನ ರಸ (ಬೇಕಾದಲ್ಲಿ, ಹಾಕಿದರೆ ಚೆನ್ನ)
  6. 1/4 ಟೀಸ್ಪೂನ್ ಅರಶಿನ ಪುಡಿ
  7. ಒಂದು ಚಿಟಿಕೆ ಉಪ್ಪು
  8. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  9. 5-6 ಗೋಡಂಬಿ
  10. 8-10 ಒಣ ದ್ರಾಕ್ಷಿ

ಕರ್ನಾಟಕ ಶೈಲಿಯ ಕೇಸರಿಬಾತ್ ಪಾಕವಿಧಾನ:

  1. ಒಂದು ಪಾತ್ರೆಯಲ್ಲಿ ನೀರು, ಸಕ್ಕರೆ, ಅರಶಿನಪುಡಿ, ಉಪ್ಪು ಮತ್ತು ಲಿಂಬೆರಸ ಹಾಕಿ ಕುದಿಯಲು ಇಡಿ. ಲಿಂಬೆರಸ ಮತ್ತು ಉಪ್ಪು ಹಾಕುವುದರಿಂದ ಕೇಸರಿಬಾತ್ ರುಚಿ ಹೆಚ್ಚುತ್ತದೆ. ನೀರು ಕುದಿಯಲು ಸ್ವಲ್ಪ ಹೊತ್ತು ಬೇಕಾಗುತ್ತದೆ ಅಷ್ಟರೊಳಗೆ ರವೆ ಹುರಿದು ಕೊಳ್ಳೋಣ. ಅದಕ್ಕಾಗಿ ಒಂದು ಬಾಣಲೆಗೆ ತುಪ್ಪ ಹಾಕಿ.
  2. ಬಾಣಲೆಯನ್ನು ಸ್ಟೋವ್ ಮೇಲಿರಿಸಿ, ರವೆ, ಗೋಡಂಬಿ ಮತ್ತು ಒಣದ್ರಾಕ್ಷಿ ಹಾಕಿ ಹುರಿಯಲು ಪ್ರಾರಂಭಿಸಿ. ಸ್ಟೋವ್ ಮಧ್ಯಮ ಉರಿಯಲ್ಲಿರಲಿ. ಒಣದ್ರಾಕ್ಷಿ ಉಬ್ಬಲು ಪ್ರಾರಂಭಿಸಿದಾಗ ಉರಿ ತಗ್ಗಿಸಿ.
  3. ಇಷ್ಟರೊಳಗೆ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ.
  4. ಏಲಕ್ಕಿ ಪುಡಿ ಸೇರಿಸಿ ಮಗುಚಿ. ದಪ್ಪ ಪೇಸ್ಟ್ ನ ಹದಕ್ಕೆ ಬಂದ ಕೂಡಲೇ ಸ್ಟೋವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಗಟ್ಟಿಯಾಗುತ್ತದೆ. ನೆನಪಿಡಿ ೩-೪ ನಿಮಿಷದೊಳಗೆ ಪೇಸ್ಟ್ ನ ಹದಕ್ಕೆ ಬರುತ್ತದೆ. ಜಾಸ್ತಿ ಹೊತ್ತು ಬೇಯಿಸಬೇಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.

Related Posts Plugin for WordPress, Blogger...