ಮಂಗಳವಾರ, ಅಕ್ಟೋಬರ್ 27, 2015

Bendekayi kayirasa recipe in Kannada | ಬೆಂಡೆಕಾಯಿ ಹಸಿ ಕಾಯಿರಸ


Bendekayi kayirasa recipe in Kannada

ಬೆಂಡೆಕಾಯಿ ಹಸಿ ಕಾಯಿರಸ ಮಾಡುವ ವಿಧಾನ 

ಬೆಂಡೆಕಾಯಿ ಹಸಿ ಕಾಯಿರಸ ಅತ್ಯಂತ ಸರಳ ಹಾಗೂ ರುಚಿಕರ ಅಡುಗೆಯಾಗಿದೆ. ಬೆಂಡೆಕಾಯಿ, ಉದ್ದಿನಬೇಳೆ ಮತ್ತು ಮೆಣಸಿನಕಾಯಿ ಈ ಅಡುಗೆಯಲ್ಲಿ ಮುಖ್ಯ ಪದಾರ್ಥಗಳಾಗಿವೆ. ಇದನ್ನು ಅನ್ನ ಅಥವಾ ಚಪಾತಿಯೊಂದಿಗೆ ಸವಿಯಬಹುದು. ಮಂಗಳೂರು ಕಡೆ ಕಾಯಿರಸದ ಪಾಕ ವಿಧಾನ ಸ್ವಲ್ಪ ಬೇರೆ ತರ ಇದ್ದು, ಬೆಲ್ಲ ಉಪಯೋಗಿಸಿ ಮಾಡುತ್ತಾರೆ. ಈ ರೀತಿಯ ಕಾಯಿರಸ ಕುಂದಾಪುರ ಮತ್ತು ಮಲೆನಾಡಿನ ಕಡೆ ಹೆಚ್ಚಾಗಿ ಚಾಲ್ತಿಯಲ್ಲಿದೆ. ಈ ಅಡುಗೆಯನ್ನು ಹಸಿ ಮೆಣಸಿನಕಾಯಿ ಉಪಯೋಗಿಸಿ ಮಾಡುತ್ತಾರಾದರೂ, ಒಣ ಮೆಣಸಿನಕಾಯಿ ಉಪಯೋಗಿಸಿ ಸಹ ತಯಾರಿಸಬಹುದು. ಯಾವುದೇ ರೀತಿ ತಯಾರಿಸಿದರೂ ತಿನ್ನಲು ರುಚಿಯಾಗಿರುತ್ತದೆ. ಈ ಅಡುಗೆ ಸ್ವಲ್ಪ ಗಟ್ಟಿಯಾಗಿದ್ದರೆ ಚೆನ್ನ. ಹಾಗಾಗಿ ನೀರು ಉಪಯೋಗಿಸುವಾಗ ಎಚ್ಚರವಿರಲಿ.
ಇದು ಅತ್ಯಂತ ಸರಳ ಹಾಗೂ ವಿಭಿನ್ನ ಅಡುಗೆಯಾಗಿದ್ದು, ಇಲ್ಲಿ ಬೇರೆ ಸಾಂಬಾರ್ ಗಳ ಹಾಗೆ ತರಕಾರಿ ಮತ್ತು ಮಸಾಲೆ ಸೇರಿಸಿ ಕುದಿಸುವುದಿಲ್ಲ. ಅಲ್ಲದೆ ತರಕಾರಿಯೊಂದಿಗೆ ಮಸಾಲೆ ಸೇರಿಸುವಾಗ ಬೇಯಿಸಿದ ತರಕಾರಿ ಬಿಸಿಯಾಗಿರಬಾರದು. ಈ ಅಡುಗೆಯನ್ನು ಬೀನ್ಸ್, ಅಲಸಂದೆ ಮತ್ತು ತೊಂಡೆಕಾಯಿಯಲ್ಲೂ ಮಾಡಬಹುದು.



ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 3 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 250 ಗ್ರಾಂ ಬೆಂಡೆಕಾಯಿ
  2. 4 ಟೀಸ್ಪೂನ್ ಉದ್ದಿನ ಬೇಳೆ
  3. 2 ಹಸಿ ಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ
  5. 1 ಚಿಟಿಕೆ ಅರಿಶಿನ ಪುಡಿ
  6. ಹುಣಸೆ ಹಣ್ಣು ಒಂದು ನೆಲ್ಲಿಕಾಯಿ ಗಾತ್ರ
  7. 1/4 ಟೀಸ್ಪೂನ್ ಅಡುಗೆ ಎಣ್ಣೆ
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 4 - 5 ಕರಿಬೇವಿನ ಎಲೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಂಡೆಕಾಯಿ ಕಾಯಿರಸ ಪಾಕವಿಧಾನ:

  1. ಬೆಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, 2 ಸೆಮೀ ಉದ್ದಕ್ಕೆ ಕತ್ತರಿಸಿಕೊಳ್ಳಿ.
  2. 1 ಕಪ್ ನೀರಿನಲ್ಲಿ ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ. ಕುಕ್ಕರ್‌ಗೆ ಕತ್ತರಿಸಿದ ತರಕಾರಿಗಳನ್ನು ಹಾಕಿ, ಸ್ವಲ್ಪ ಉಪ್ಪು , ಅರಿಶಿನ ಪುಡಿ ಮತ್ತು ಹುಣಸೆ ರಸ ಸೇರಿಸಿ ಒಂದು ವಿಷಲ್ ಮಾಡಿ.
  3. ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು 1/4 ಟೀಸ್ಪೂನ್ ಎಣ್ಣೆ ಹಾಕಿ, ಉದ್ದಿನ ಬೇಳೆ ಚಿನ್ನದ ಕಂದು ಬಣ್ಣಕ್ಕೆ ಬರುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
  4. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಉದ್ದಿನ ಬೇಳೆ ಹಾಕಿ 1/2 ಕಪ್ ನೀರು ಬಳಸಿಕೊಂಡು ಅರೆಯಿರಿ. ನಂತರ ಹುರಿದ ಹಸಿಮೆಣಸನ್ನು ಸೇರಿಸಿ ಸುಮಾರು 5 ಸೆಕೆಂಡುಗಳ ಕಾಲ ಅರೆಯಿರಿ.
  5. ಬೇಯಿಸಿದ ತರಕಾರಿ ಬಿಸಿ ಆರಿದ ನಂತರ ಅರೆದ ಮಸಾಲೆ ಸೇರಿಸಿ, ಉಪ್ಪು ಹಾಕಿ ಕಲಸಿ. ಈ ಅಡುಗೆಯಲ್ಲಿ ಮಸಾಲೆ ಹಾಕಿ ಕುದಿಸುವ ಹಂತ ಇಲ್ಲವೆಂಬುದನ್ನು ನೆನಪಿಡಿ.
  6. ಕಲಸಿದ ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ. ಈ ಅಡುಗೆಯನ್ನು 2-3 ಗಂಟೆಗಳ ಮೊದಲು ಬಳಸಿ ಅಥವಾ ಫ್ರಿಜ್ ನಲ್ಲಿ ಇಟ್ಟು ಉಪಯೋಗಿಸುವ ಮೊದಲು ಬಿಸಿಮಾಡಿಕೊಳ್ಳಿ.

ಭಾನುವಾರ, ಅಕ್ಟೋಬರ್ 25, 2015

Bisibele bath recipe in kannada | ಬಿಸಿಬೇಳೆ ಬಾತ್ ಮಾಡುವ ವಿಧಾನ


Bisibele bath recipe in kannada

Bisibele bath recipe in kannada | ಬಿಸಿಬೇಳೆ ಬಾತ್ ಮಾಡುವ ವಿಧಾನ

ಬಿಸಿಬೇಳೆ ಬಾತ್ ಕರ್ನಾಟಕ ದ ಬಹು ಜನಪ್ರಿಯ ಅಡುಗೆಯಾಗಿದ್ದು, ಇದ್ದನ್ನು ಬಿಸಿಬೇಳೆ ಹುಳಿಯನ್ನ ಎಂದೂ ಕರೆಯುತ್ತಾರೆ. ಇದರ ಪಾಕವಿಧಾನ ಬಹಳ ಸುದೀರ್ಘ ವಾಗಿದ್ದರೂ, ಇಲ್ಲಿ ಆದಷ್ಟು ಸರಳವಾಗಿ ವಿವರಿಸಲು ಪ್ರಯತ್ನಿಸಲಾಗಿದೆ. ಬಿಸಿಬೇಳೆ ಬಾತ್ ನ್ನು ಸಾಧಾರಣವಾಗಿ ಕಾರ ಬೂಂದಿ ಅಥವಾ ಮೊಸರು ಬಜ್ಜಿ (ಸಲಾಡ್) ಯೊಂದಿಗೆ ಬಡಿಸುತ್ತಾರೆ. ಆದರೆ ಇದರಲ್ಲಿ ಎಲ್ಲ ತರದ ಮಸಾಲೆ, ತರಕಾರಿ, ಉಪ್ಪು, ಹುಳಿ, ಬೆಲ್ಲ ಹೀಗೆ ಎಲ್ಲವೂ ಇರುವುದರಿಂದ, ಏನೂ ಇಲ್ಲದೆ ಹಾಗೇ ಸಹ ತಿನ್ನಲು ರುಚಿಯಾಗಿರುತ್ತದೆ.
ಎಲ್ಲ ಅಡುಗೆಯಂತೆ ಬಿಸಿಬೇಳೆ ಬಾತ್ ಪಾಕ ವಿಧಾನದಲ್ಲೂ ಸಣ್ಣ ಸಣ್ಣ ವ್ಯತ್ಯಾಸಗಳೊಂದಿಗೆ, ಅನೇಕ ವಿಧಗಳಿವೆ. ಆದರೆ ಇಲ್ಲಿರುವ ಪಾಕವಿಧಾನ ಹೆಚ್ಚಾಗಿ ಎಲ್ಲೆಡೆ ಚಾಲ್ತಿಯಲ್ಲಿದ್ದು, ಬಹಳ ರುಚಿಕರವಾಗಿರುತ್ತದೆ. ಕೆಳಗೆ ನೀಡಿರುವ ವಿಡಿಯೋವನ್ನು ಒಮ್ಮೆ ವೀಕ್ಷಿಸಿ. 



ತಯಾರಿ ಸಮಯ: 30 ನಿಮಿಷ
ಅಡುಗೆ ಸಮಯ : 1 ಗಂಟೆ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂಎಲ್ )

  1. 3/4 ಕಪ್ ತೊಗರಿಬೇಳೆ 
  2. 1 ಕಪ್ ಅಕ್ಕಿ (ಸೋನಾ ಮಸೂರಿ ಆಥವಾ ಊಟದ ಅಕ್ಕಿ) 
  3. 10 ಬೀನ್ಸ್ 
  4. 1 ಕ್ಯಾರೆಟ್ 
  5. 1 ನವಿಲ್ ಕೋಸು 
  6. 1 ಆಲೂಗಡ್ಡೆ 
  7. 2 ಟೇಬಲ್ ಸ್ಪೂನ್ ನೆನೆಸಿದ ನೆಲಗಡಲೆ 
  8. 2 ಟೇಬಲ್ ಸ್ಪೂನ್ ನೆನೆಸಿದ ಬಟಾಣಿ 
  9. 1 ಟೊಮ್ಯಾಟೋ 
  10. 1 ನಿಂಬೆ ಗಾತ್ರದಷ್ಟು ಹುಣಿಸೆ ಹಣ್ಣು 
  11. 1 ನಿಂಬೆ ಗಾತ್ರದಷ್ಟು ಬೆಲ್ಲ 
  12. ಉಪ್ಪು ರುಚಿಗೆ ತಕ್ಕಷ್ಟು

ಮಸಾಲೆ ಪುಡಿಗೆ ಬೇಕಾಗುವ ಪದಾರ್ಥಗಳು:

  1. 2-4 ಒಣ ಮೇಣಸಿನಕಾಯಿ 
  2. 1 ಟೀಸ್ಪೂನ್ ಕಡ್ಲೆ ಬೇಳೆ 
  3. 2 ಟೀಸ್ಪೂನ್ ಉದ್ದಿನ ಬೇಳೆ 
  4. 1/4 ಟೀಸ್ಪೂನ್ ಮೆಂತೆ 
  5. 1/4 ಟೀಸ್ಪೂನ್ ಸಾಸಿವೆ 
  6. 1/2 ಟೀಸ್ಪೂನ್ ಜೀರಿಗೆ 
  7. 2 ಟೀಸ್ಪೂನ್ ಕೊತ್ತಂಬರಿ ಬೀಜ 
  8. ಒಂದು ದೊಡ್ಡ ಚಿಟಿಕೆ ಇಂಗು 
  9. 1/2 ಬೆರಳುದ್ದ ಚಕ್ಕೆ 
  10. 8-10 ಲವಂಗ 
  11. 1 ಏಲಕ್ಕಿ 
  12. 1 ಟೀಸ್ಪೂನ್ ಗಸಗಸೆ 
  13. 1/2 ಟೀಸ್ಪೂನ್ ಅಡುಗೆ ಎಣ್ಣೆ 
  14. 2 ಟೇಬಲ್ ಸ್ಪೂನ್ ಒಣಕೊಬ್ಬರಿ ಅಥವಾ ಕಾಯಿತುರಿ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಟೀಸ್ಪೂನ್ ಸಾಸಿವೆ 
  2. 1 ಟೀಸ್ಪೂನ್ ಕಡ್ಲೆ ಬೇಳೆ 
  3. 2 ಟೀಸ್ಪೂನ್ ಉದ್ದಿನ ಬೇಳೆ 
  4. 8-10 ಗೋಡಂಬಿ 
  5. 7 - 8 ಕರಿಬೇವಿನ ಎಲೆ 
  6. 1/4 ಟೀಸ್ಪೂನ್ ಅರಿಶಿನ ಪುಡಿ 
  7. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ / ತುಪ್ಪ

ಬಿಸಿಬೇಳೆ ಬಾತ್ ಮಾಡುವ ವಿಧಾನ (ಅಳತೆ ಕಪ್ = 120 ಎಂಎಲ್ ):

  1. ಕನಿಷ್ಠ 5 ಲೀಟರ್ ಸಾಮರ್ಥ್ಯದ ಪ್ರೆಶರ್ ಕುಕರ್ ತೆಗೆದುಕೊಳ್ಳಿ. ಪ್ರೆಶರ್ ಕುಕರ್ ಗೆ ತೊಗರಿಬೇಳೆ ಹಾಕಿ, ತೊಳೆಯಿರಿ. ನಂತರ 2 ಕಪ್ ನೀರು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಒಂದೆರಡು ಹುಂಡು ಎಣ್ಣೆ ಹಾಕಿ 2 ವಿಷಲ್ ಕೂಗಿಸಿ. 
  2. ಎಲ್ಲ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ. ಒಂದು ಪಾತ್ರೆಯಲ್ಲಿ ಅಕ್ಕಿ, ನೆನೆಸಿದ ನೆಲಗಡಲೆ ಮತ್ತು ಬಟಾಣಿ ಹಾಕಿ ತೊಳೆಯಿರಿ. ಈಗ ತರಕಾರಿ, ಅಕ್ಕಿ ಮತ್ತು ಕಾಳುಗಳನ್ನು ಅರ್ಧ ಬೆಂದ ಬೇಳೆಯೊಂದಿಗೆ ಅದೇ ಕುಕ್ಕರ್‌ನಲ್ಲಿ ಹಾಕಿ. 4 ಕಪ್ ನೀರು ಸೇರಿಸಿ, ಒಮ್ಮೆ ಚೆನ್ನಾಗಿ ಕಲಸಿ, ಪುನಃ 2 ವಿಷಲ್ ಬರಿಸಿ. 
  3. ಈಗ ಮಸಾಲಾ ಪುಡಿ ಮಾಡಲು ಒಂದು ಬಾಣಲೆ ತೆಗೆದುಕೊಂಡು 1/2 ಚಮಚ ಎಣ್ಣೆ ಹಾಕಿ. ಸ್ಟೋವ್ ಮಧ್ಯಮ ಉರಿಯಲ್ಲಿಟ್ಟು, ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಕೊಬ್ಬರಿ ಅಥವಾ ಕಾಯಿತುರಿ ಹೊರತು ಪಡಿಸಿ, ಮಿಕ್ಕೆಲ್ಲ ಪದಾರ್ಥಗಳನ್ನು 5 ಸೆಕೆಂಡುಗಳ ಅಂತರದಲ್ಲಿ ಒಂದೊಂದಾಗಿ ಸೇರಿಸುತ್ತಾ ಹುರಿಯಿರಿ. ( ಕಡ್ಲೆಬೇಳೆ, ಉದ್ದಿನ ಬೇಳೆ, ಮೆಂತೆ, ಸಾಸಿವೆ, ಜೀರಿಗೆ, ಕಾಳು ಮೆಣಸು, ಕೊತ್ತಂಬರಿ ಬೀಜ, ಚಕ್ಕೆ, ಲವಂಗ, ಏಲಕ್ಕಿ, ಇಂಗು ಮತ್ತು ಗಸಗಸೆ). ಬೇಳೆ ಗಳು ಕಂದು ಬಣ್ಣಕ್ಕೆ ಬರುವವರೆಗೆ ನಿರಂತರವಾಗಿ ಹುರಿಯುತ್ತಾ ಇರಿ. ಉರಿ ಜಾಸ್ತಿಯಾಯಿತೆನ್ನಿಸಿದರೆ ಕಡಿಮೆಮಾಡಿಕೊಳ್ಳಿ. ತಣ್ಣಗಾದಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಪುಡಿ ಮಾಡಿಕೊಳ್ಳಿ. 
  4. ಈಗ ಒಣಕೊಬ್ಬರಿ ಅಥವಾ ಕಾಯಿತುರಿ ಹಾಕಿ ಪುನಃ ಪುಡಿ ಮಾಡಿ. 
  5. ನಂತರ ಅದೇ ಬಾಣಲೆ ತೆಗೆದುಕೊಂಡು ಎಣ್ಣೆ, ಸಾಸಿವೆ, ಕಡ್ಲೆ ಬೇಳೆ, ಉದ್ದಿನ ಬೇಳೆ ಮತ್ತು ಗೋಡಂಬಿ ಬಳಸಿಕೊಂಡು ಒಗ್ಗರಣೆ ಮಾಡಿ. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಅರಿಶಿನ ಪುಡಿ, ಕರಿಬೇವಿನ ಸೊಪ್ಪು ಸೇರಿಸಿ ಸ್ಟೋವ್ ಆಫ್ ಮಾಡಿ. ಕೂಡಲೇ ಪುಡಿ ಮಾಡಿದ ಮಸಾಲಾ, ಉಪ್ಪು , ಬೆಲ್ಲ , ಹುಣಸೆ ರಸ ಸೇರಿಸಿ ಕಲಸಿ. 
  6. ಈಗ ಬೇಯಿಸಿದ ಪದಾರ್ಥಗಳನ್ನು ಒಗ್ಗರಣೆ ಮತ್ತು ಮಸಾಲೆ ಇರುವ ಬಾಣಲೆಗೆ ಹಾಕಿ. ಚಿಕ್ಕ ಬಾಣಲೆ ಆದಲ್ಲಿ ಒಗ್ಗರಣೆ ಮತ್ತು ಮಸಾಲೆಯನ್ನು ನೀವು ಕುಕ್ಕರ್ ಗೆ ಸೇರಿಸಬಹುದು. 
  7. ಈಗ ಬೇಕಾದಷ್ಟು ನೀರು ಸೇರಿಸಿ (ಅಂದಾಜು 4 ಕಪ್ ನಷ್ಟು), ಚೆನ್ನಾಗಿ ಮಗುಚಿ, ಒಂದು ಕುದಿ ಬರಿಸಿ. 
  8. ಇದನ್ನು ಬಿಸಿ ಬಿಸಿಯಾಗಿ ತಿನ್ನಲು ರುಚಿ, ಆದ್ದರಿಂದಲೇ ಹೆಸರು "ಬಿಸಿ-ಬೇಳೆ ಬಾತ್" ಎಂದು ಇರಬಹುದು. ಮೊಸರು ಬಜ್ಜಿ ಅಥವಾ ಸಲಾಡ್ ನೊಂದಿಗೆ ಬಡಿಸಿ. ಹಾಗೇ ಸಹ ತಿನ್ನಬಹುದು.

To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಅಕ್ಟೋಬರ್ 22, 2015

Hesarubele-carrot kosambari | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ




Hesarubele-carrot kosambari recipe Kannada | ಹೆಸರುಬೇಳೆ - ಕ್ಯಾರೆಟ್ ಕೋಸಂಬರಿ

ಹೆಸರುಬೇಳೆ ಮತ್ತು ಕ್ಯಾರೆಟ್ ಕೋಸಂಬರಿಯಲ್ಲಿ ನೆನೆಸಿದ ಹೆಸರುಬೇಳೆ ಮತ್ತು ತುರಿದ ಕ್ಯಾರೆಟ್ ಮುಖ್ಯ ಪದಾರ್ಥಗಳಾಗಿವೆ. ಕೋಸಂಬರಿ ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲೊಂದಾಗಿದೆ ಹಾಗೂ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಈ ಅಡುಗೆ ಚಾಲ್ತಿಯಲ್ಲಿದೆ. ಶುಭ ಸಮಾರಂಭಗಳಲ್ಲಿ, ಅತಿಥಿಗಳು ಬಂದಾಗ, ಸುಲಭವಾಗಿ ಮಾಡಬಲ್ಲ ವಿಶೇಷ ಅಡುಗೆ ಇದಾಗಿದೆ.


ತಯಾರಿ ಸಮಯ: 2 ಗಂಟೆ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : ಇಬ್ಬರಿಗೆ
ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )
  1. 1/2 ಕಪ್ ಹೆಸರುಬೇಳೆ
  2. 1 ತುರಿದ ಕ್ಯಾರೆಟ್
  3. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  4. 2 ಟೇಬಲ್ ಸ್ಪೂನ್ ತೆಂಗಿನತುರಿ
  5. 1/2 ಟೀಸ್ಪೂನ್ ನಿಂಬೇ ರಸ
  6. 1 ಹಸಿಮೆಣಸಿನಕಾಯಿ ಸಣ್ಣಗೆ ಹೆಚ್ಚಿದ್ದು (ಬೇಕಾದಲ್ಲಿ)
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಮಾಡುವ ವಿಧಾನ:

  1. ಹೆಸರುಬೇಳೆಯನ್ನು 2-3 ಗಂಟೆಗಳ ಕಾಲ ನೆನೆಸಿ. ಕ್ಯಾರೆಟ್, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪಿನಂತ ಪದಾರ್ಥಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ.
  2. ಈಗ ಒಂದು ಬೌಲ್ ತೆಗೆದುಕೊಂಡು, ಸಿದ್ಧ ಮಾಡಿಟ್ಟುಕೊಂಡ ಎಲ್ಲಾ ಪದಾರ್ಥಗಳನ್ನು ಹಾಕಿ, ಉಪ್ಪು ಮತ್ತು ನಿಂಬೆ ರಸ ಸೇರಿಸಿ ಕಲಸಿ. ನಂತರ ಒಣ ಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ.
Related Posts Plugin for WordPress, Blogger...