ಮಂಗಳವಾರ, ಅಕ್ಟೋಬರ್ 27, 2015

Bendekayi kayirasa recipe in Kannada | ಬೆಂಡೆಕಾಯಿ ಹಸಿ ಕಾಯಿರಸ


Bendekayi kayirasa recipe in Kannada

ಬೆಂಡೆಕಾಯಿ ಹಸಿ ಕಾಯಿರಸ ಮಾಡುವ ವಿಧಾನ 

ಬೆಂಡೆಕಾಯಿ ಹಸಿ ಕಾಯಿರಸ ಅತ್ಯಂತ ಸರಳ ಹಾಗೂ ರುಚಿಕರ ಅಡುಗೆಯಾಗಿದೆ. ಬೆಂಡೆಕಾಯಿ, ಉದ್ದಿನಬೇಳೆ ಮತ್ತು ಮೆಣಸಿನಕಾಯಿ ಈ ಅಡುಗೆಯಲ್ಲಿ ಮುಖ್ಯ ಪದಾರ್ಥಗಳಾಗಿವೆ. ಇದನ್ನು ಅನ್ನ ಅಥವಾ ಚಪಾತಿಯೊಂದಿಗೆ ಸವಿಯಬಹುದು. ಮಂಗಳೂರು ಕಡೆ ಕಾಯಿರಸದ ಪಾಕ ವಿಧಾನ ಸ್ವಲ್ಪ ಬೇರೆ ತರ ಇದ್ದು, ಬೆಲ್ಲ ಉಪಯೋಗಿಸಿ ಮಾಡುತ್ತಾರೆ. ಈ ರೀತಿಯ ಕಾಯಿರಸ ಕುಂದಾಪುರ ಮತ್ತು ಮಲೆನಾಡಿನ ಕಡೆ ಹೆಚ್ಚಾಗಿ ಚಾಲ್ತಿಯಲ್ಲಿದೆ. ಈ ಅಡುಗೆಯನ್ನು ಹಸಿ ಮೆಣಸಿನಕಾಯಿ ಉಪಯೋಗಿಸಿ ಮಾಡುತ್ತಾರಾದರೂ, ಒಣ ಮೆಣಸಿನಕಾಯಿ ಉಪಯೋಗಿಸಿ ಸಹ ತಯಾರಿಸಬಹುದು. ಯಾವುದೇ ರೀತಿ ತಯಾರಿಸಿದರೂ ತಿನ್ನಲು ರುಚಿಯಾಗಿರುತ್ತದೆ. ಈ ಅಡುಗೆ ಸ್ವಲ್ಪ ಗಟ್ಟಿಯಾಗಿದ್ದರೆ ಚೆನ್ನ. ಹಾಗಾಗಿ ನೀರು ಉಪಯೋಗಿಸುವಾಗ ಎಚ್ಚರವಿರಲಿ.
ಇದು ಅತ್ಯಂತ ಸರಳ ಹಾಗೂ ವಿಭಿನ್ನ ಅಡುಗೆಯಾಗಿದ್ದು, ಇಲ್ಲಿ ಬೇರೆ ಸಾಂಬಾರ್ ಗಳ ಹಾಗೆ ತರಕಾರಿ ಮತ್ತು ಮಸಾಲೆ ಸೇರಿಸಿ ಕುದಿಸುವುದಿಲ್ಲ. ಅಲ್ಲದೆ ತರಕಾರಿಯೊಂದಿಗೆ ಮಸಾಲೆ ಸೇರಿಸುವಾಗ ಬೇಯಿಸಿದ ತರಕಾರಿ ಬಿಸಿಯಾಗಿರಬಾರದು. ಈ ಅಡುಗೆಯನ್ನು ಬೀನ್ಸ್, ಅಲಸಂದೆ ಮತ್ತು ತೊಂಡೆಕಾಯಿಯಲ್ಲೂ ಮಾಡಬಹುದು.



ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 3 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 250 ಗ್ರಾಂ ಬೆಂಡೆಕಾಯಿ
  2. 4 ಟೀಸ್ಪೂನ್ ಉದ್ದಿನ ಬೇಳೆ
  3. 2 ಹಸಿ ಮೆಣಸಿನಕಾಯಿ
  4. 1/2 ಕಪ್ ತೆಂಗಿನ ತುರಿ
  5. 1 ಚಿಟಿಕೆ ಅರಿಶಿನ ಪುಡಿ
  6. ಹುಣಸೆ ಹಣ್ಣು ಒಂದು ನೆಲ್ಲಿಕಾಯಿ ಗಾತ್ರ
  7. 1/4 ಟೀಸ್ಪೂನ್ ಅಡುಗೆ ಎಣ್ಣೆ
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಟೀಸ್ಪೂನ್ ಸಾಸಿವೆ
  2. 4 - 5 ಕರಿಬೇವಿನ ಎಲೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಂಡೆಕಾಯಿ ಕಾಯಿರಸ ಪಾಕವಿಧಾನ:

  1. ಬೆಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, 2 ಸೆಮೀ ಉದ್ದಕ್ಕೆ ಕತ್ತರಿಸಿಕೊಳ್ಳಿ.
  2. 1 ಕಪ್ ನೀರಿನಲ್ಲಿ ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ. ಕುಕ್ಕರ್‌ಗೆ ಕತ್ತರಿಸಿದ ತರಕಾರಿಗಳನ್ನು ಹಾಕಿ, ಸ್ವಲ್ಪ ಉಪ್ಪು , ಅರಿಶಿನ ಪುಡಿ ಮತ್ತು ಹುಣಸೆ ರಸ ಸೇರಿಸಿ ಒಂದು ವಿಷಲ್ ಮಾಡಿ.
  3. ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು 1/4 ಟೀಸ್ಪೂನ್ ಎಣ್ಣೆ ಹಾಕಿ, ಉದ್ದಿನ ಬೇಳೆ ಚಿನ್ನದ ಕಂದು ಬಣ್ಣಕ್ಕೆ ಬರುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
  4. ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಉದ್ದಿನ ಬೇಳೆ ಹಾಕಿ 1/2 ಕಪ್ ನೀರು ಬಳಸಿಕೊಂಡು ಅರೆಯಿರಿ. ನಂತರ ಹುರಿದ ಹಸಿಮೆಣಸನ್ನು ಸೇರಿಸಿ ಸುಮಾರು 5 ಸೆಕೆಂಡುಗಳ ಕಾಲ ಅರೆಯಿರಿ.
  5. ಬೇಯಿಸಿದ ತರಕಾರಿ ಬಿಸಿ ಆರಿದ ನಂತರ ಅರೆದ ಮಸಾಲೆ ಸೇರಿಸಿ, ಉಪ್ಪು ಹಾಕಿ ಕಲಸಿ. ಈ ಅಡುಗೆಯಲ್ಲಿ ಮಸಾಲೆ ಹಾಕಿ ಕುದಿಸುವ ಹಂತ ಇಲ್ಲವೆಂಬುದನ್ನು ನೆನಪಿಡಿ.
  6. ಕಲಸಿದ ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ. ಈ ಅಡುಗೆಯನ್ನು 2-3 ಗಂಟೆಗಳ ಮೊದಲು ಬಳಸಿ ಅಥವಾ ಫ್ರಿಜ್ ನಲ್ಲಿ ಇಟ್ಟು ಉಪಯೋಗಿಸುವ ಮೊದಲು ಬಿಸಿಮಾಡಿಕೊಳ್ಳಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...