Tomato poori recipe in Kannada | ಟೊಮೇಟೊ ಪೂರಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ಗೋಧಿ ಹಿಟ್ಟು
- 2 ಮಧ್ಯಮ ಗಾತ್ರದ ಟೊಮೇಟೊ
- 2 ಟೇಬಲ್ ಚಮಚ ಸಣ್ಣ ರವೆ
- 1 ಚಮಚ ತುಪ್ಪ
- 1/4 ಟೀಸ್ಪೂನ್ ಓಮಕಾಳು
- 1/2 ಟೀಸ್ಪೂನ್ ಅಚ್ಚಖಾರದ ಪುಡಿ
- 1/2 ಟೀಸ್ಪೂನ್ ಕೊತ್ತಂಬರಿ ಪುಡಿ
- 1/4 ಟೀಸ್ಪೂನ್ ಜೀರಿಗೆ ಪುಡಿ
- ದೊಡ್ಡ ಚಿಟಿಕೆ ಗರಂ ಮಸಾಲೆ
- ಒಂದು ಚಿಟಿಕೆ ಇಂಗು
- 1 ಟೇಬಲ್ ಸ್ಪೂನ್ ಕತ್ತರಿಸಿದ ಕರಿಬೇವಿನ ಎಲೆ
- ಉಪ್ಪು ರುಚಿಗೆ ತಕ್ಕಷ್ಟು
- ಎಣ್ಣೆ ಪೂರಿ ಕಾಯಿಸಲು
ಟೊಮೇಟೊ ಪೂರಿ ಮಾಡುವ ವಿಧಾನ:
- ಟೊಮ್ಯಾಟೊವನ್ನು ತೊಳೆದು, ಕತ್ತರಿಸಿ, ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. ನೀರು ಸೇರಿಸುವ ಅಗತ್ಯವಿಲ್ಲ.
- ಒಂದು ಅಗಲವಾದ ಬಟ್ಟಲಿಗೆ ಗೋಧಿ ಹಿಟ್ಟು ಮತ್ತು ಸಣ್ಣ ರವೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ರವೆ ಹಾಕುವುದರಿಂದ ಪೂರಿ ಚೆನ್ನಾಗಿ ಉಬ್ಬಿ, ಗರಿ ಗರಿಯಾಗುತ್ತದೆ.
- ನಂತರ 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ.
- ಅದಕ್ಕೆ ಓಮಕಾಳು, ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಇಂಗು ಮತ್ತು ಉಪ್ಪು ಸೇರಿಸಿ. ನಿಮ್ಮಿಷ್ಟದ ಮಸಾಲೆ ಪುಡಿಗಳನ್ನು ಸೇರಿಸಬಹುದು.
- ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ.
- ಅರೆದಿಟ್ಟ ಟೊಮೇಟೊ ಹಾಕಿ ಪೂರಿ ಹಿಟ್ಟನ್ನು ತಯಾರಿಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಅಗತ್ಯವಿದ್ದಷ್ಟು ಟೊಮೇಟೊ ಪೇಸ್ಟ್ ಹಾಕಿದರೆ ಸಾಕು. ನೀರು ಸೇರಿಸುವ ಅಗತ್ಯ ಇಲ್ಲ.
- ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
- ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ.
- ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.
- ಎರಡು ಬದಿ ಕಾಯಿಸಿ. ಚಟ್ನಿ ಅಥವಾ ಯಾವುದೇ ಗೊಜ್ಜಿನೊಂದಿಗೆ ಬಡಿಸಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ