ಸೋಮವಾರ, ಮಾರ್ಚ್ 28, 2016

Menthe palle in Kannada | Menthe soppu bele palle | ಮೆಂತೆ ಪಲ್ಲೆ ಮಾಡುವ ವಿಧಾನ


menthe palle in kannada

Menthe palle in Kannada | ಮೆಂತೆ ಪಲ್ಲೆ ಮಾಡುವ ವಿಧಾನ

ಮೆಂತೆ ಪಲ್ಲೆ ಉತ್ತರ ಕರ್ನಾಟಕದ ಪ್ರಸಿದ್ಧ ಅಡುಗೆಯಾಗಿದ್ದು, ಇದನ್ನು ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ತಿನ್ನುತ್ತಾರೆ. ಮೆಂತೆ ಪಲ್ಲೆಯನ್ನು ಮೆಂತೆ ಸೊಪ್ಪು, ತೊಗರಿ ಬೇಳೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಇನ್ನು ಕೆಲವು ಮಸಾಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. 
ಈ ಮೆಂತೆ ಪಲ್ಲೆಯನ್ನು ಎರಡು ರೀತಿಯಲ್ಲಿ ತಯಾರಿಸಲಾಗುತ್ತದೆ. ಮೊದಲನೆಯದು ಒಗ್ಗರಣೆಗೆ ತೊಗರಿ ಬೇಳೆ ಹಾಕಿ ಬೇಯಿಸುವುದು ಮತ್ತು ಇನ್ನೊಂದು ಒಗ್ಗರಣೆಗೆ ಮೊದಲೇ ಬೇಯಿಸಿಟ್ಟ ಬೇಳೆ ಹಾಕಿ ಮಾಡುವುದು. ನಾನು ಇಲ್ಲಿ ಮೊದಲನೇ ರೀತಿಯಲ್ಲಿ ವಿವರಿಸಿದ್ದೇನೆ.  
ಇದೊಂದು ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆ ತಯಾರಿಸಿ ನೋಡಿ. ಇದು ನಿಮ್ಮನ್ನು ಖಂಡಿತ ನಿರಾಶೆ ಗೊಳಿಸುವುದಿಲ್ಲ. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 4 ಜನರಿಗೆ 


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

 1. 1 ಕಟ್ಟು ಮೆಂತೆ ಸೊಪ್ಪು ಅಥವಾ 2 ಕಪ್ ಒತ್ತಿ ತುಂಬಿದ ಮೆಂತೆ ಸೊಪ್ಪು 
 2. 2 ಕಪ್ ತೊಗರಿಬೇಳೆ 
 3. 1/2 ಟೀಸ್ಪೂನ್ ಜೀರಿಗೆ 
 4. 1 ಕೆಂಪು ಮೆಣಸಿನಕಾಯಿ ( ಬೇಕಾದಲ್ಲಿ) 
 5. 1 - 2 ಹಸಿಮೆಣಸಿನಕಾಯಿ 
 6. 4 ಎಸಳು ಬೆಳ್ಳುಳ್ಳಿ 
 7. 1ಸೆಮೀ ಉದ್ದದ ಶುಂಠಿ 
 8. 1 ಈರುಳ್ಳಿ 
 9. 1 ಟೊಮೆಟೊ (ಬೇಕಾದಲ್ಲಿ) 
 10. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
 11. 1/2 ಟೀ ಚಮಚ ಜೀರಿಗೆ ಪುಡಿ (ಬೇಕಾದಲ್ಲಿ) 
 12. ಉಪ್ಪು ರುಚಿಗೆ ತಕ್ಕಷ್ಟು 

ಮೆಂತೆ  ಪಲ್ಲೆ ಮಾಡುವ ವಿಧಾನ:

 1. ತೊಗರಿಬೇಳೆ ತೊಳೆದು ಪಕ್ಕಕ್ಕಿಡಿ. 
 2. ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿಟ್ಟು ಕೊಳ್ಳಿ.
 3. ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು, ತೊಳೆದು, ಕತ್ತರಿಸಿಟ್ಟುಕೊಳ್ಳಿ.  ಟೊಮೇಟೊವನ್ನು ಕತ್ತರಿಸಿಟ್ಟು ಕೊಳ್ಳಿ. 
 4. ಒಂದು ಕುಕ್ಕರ್ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆಯನ್ನು ಹಾಕಿ.
 5. ಜೀರಿಗೆ ಸಿಡಿದ ಕೂಡಲೇ ಇಡೀ ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ. ಸ್ವಲ್ಪ ಹೊತ್ತು ಹುರಿಯಿರಿ. 
 6. ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ  ಹುರಿಯಿರಿ.
 7. ಕತ್ತರಿಸಿದ ಟೊಮ್ಯಾಟೊ ಮತ್ತು ಅರಿಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಹುರಿಯಿರಿ.
 8. ಕತ್ತರಿಸಿದ ಮೆಂತೆ ಸೊಪ್ಪು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
 9. ಸುಮಾರು 4 ಕಪ್ ನೀರು ಸೇರಿಸಿ ಅಥವಾ ಬೇಳೆಯ ದುಪ್ಪಟ್ಟಿನಷ್ಟು ನೀರು ಸೇರಿಸಿ. 
 10. ತೊಳೆದಿಟ್ಟ ತೊಗರಿ ಬೇಳೆಯನ್ನು ಸೇರಿಸಿ. 
 11. ಒಮ್ಮೆ ಕಲಸಿ ಪ್ರೆಷರ್ ಕುಕ್ಕರ್ ನಲ್ಲಿ 3 - 4 ಸೀಟಿಗಳನ್ನು ಮಾಡಿ ಬೇಯಿಸಿ.  ಬೇಕಾದಲ್ಲಿ ಮೊದಲೇ  ಬೇಯಿಸಿದ ಬೇಳೆಯನ್ನು ಸೇರಿಸಬಹುದು. 
 12. ಪ್ರೆಷರ್ ಕುಕ್ಕರ್ ನ ಸೆಕೆ ಇಳಿದ ಮೇಲೆ ಬೇಳೆ ಮತ್ತು ಸೊಪ್ಪು ಚೆನ್ನಾಗಿ ಬೆನ್ದಿರುವುದನ್ನು ನೀವು ನೋಡಬಹುದು. ಆದರೆ ಬೇಳೆ ಮುದ್ದೆಯಾಗಿರುವುದಿಲ್ಲ.
 13. ಕತ್ತರಿಸಿದ ಕೊತ್ತುಂಬರಿ ಸೊಪ್ಪು, ಉಪ್ಪು ಮತ್ತು ಜೀರಿಗೆ ಪುಡಿ ಸೇರಿಸಿ. 
 14. ಅಗಲವಾದ ಸೌಟಿನ ಹಿಂಭಾಗದಿಂದ ಒತ್ತುತ್ತ ಚೆನ್ನಾಗಿ ಕಲಸಿ. 
 15. ಅಗತ್ಯವಿದ್ದಷ್ಟು ನೀರು ಸೇರಿಸಿ. ಜೋಳದ ರೊಟ್ಟಿ ಅಥವಾ ಚಪಾತಿಯ ಜೊತೆಗೆ ಬಡಿಸಬೇಕಾದಲ್ಲಿ ಸ್ವಲ್ಪ ಗಟ್ಟಿಯಾಗಿ ಮತ್ತು ಅನ್ನದ ಜೊತೆ ಬಡಿಸಲು ಸ್ವಲ್ಪ ತೆಳ್ಳಗೆ ಆಗುವಂತೆ ನೀರು ಸೇರಿಸಿ. ಒಂದು ಕುದಿ ಕುದಿಸಿ. ಬಿಸಿ ತುಪ್ಪ ಮತ್ತು ಮೆಂತೆ ಪಲ್ಲೆಯನ್ನು ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Related Posts Plugin for WordPress, Blogger...