ಬೆಲ್ಲದ ಪಾನಕವನ್ನು ಸಾಧಾರಣವಾಗಿ ಶ್ರೀರಾಮನ ಜನ್ಮದಿನವಾದ ರಾಮನವಮಿ ಯಂದು ತಯಾರಿಸಿ ಕೋಸಂಬರಿ ಯೊಂದಿಗೆ ಹಂಚುತ್ತಾರೆ. ಈ ಪಾನಕದಲ್ಲಿ ಬೆಲ್ಲ ಮತ್ತು ಕಾಳು ಮೆಣಸು ಸಾಮಾನ್ಯ ಪದಾರ್ಥಗಳಾಗಿದ್ದು, ಜೊತೆಗೆ ಶುಂಠಿ ಅಥವಾ ಹುಣಿಸೆ ರಸ ಅಥವಾ ನಿಂಬೆ ಹಣ್ಣಿನ ರಸ ಸೇರಿಸುತ್ತಾರೆ. ಇಲ್ಲಿ ಎರಡು ವಿಧವಾದ ಪಾನಕವನ್ನು ವಿವರಿಸಲಾಗಿದೆ. ನಿಮ್ಮ ರುಚಿಗೆ ತಕ್ಕಂತೆ ಪದಾರ್ಥಗಳನ್ನು ಬದಲಾಯಿಸಲು ಬಹುದು. ಬೆಲ್ಲದಲ್ಲಿ ಕಬ್ಬಿಣ ಸತ್ವ ಇದ್ದು ಬಹಳ ಆರೋಗ್ಯಕರವಾಗಿದೆ. ಈ ಪಾನಕ ಜೀರ್ಣಕ್ಕೆ ಬಹಳ ಒಳ್ಳೆಯದು.ಇದರ ತಯಾರಿ ಸರಳವಾಗಿದ್ದು, ಕಡಿಮೆ ಸಮಯದಲ್ಲಿ ತಯಾರಿಸಬಹುದು.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 1 ಕಪ್
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 1 ಕಪ್
ಬೇಕಾಗುವ ಪದಾರ್ಥಗಳು (ವಿಧಾನ 1):( ಅಳತೆ ಕಪ್ = 240 ಎಂಎಲ್ )
- 1 ಕಪ್ ನೀರು
- ದೊಡ್ಡ ಚಿಟಿಕೆ ಒಣಶುಂಠಿ ಪುಡಿ ಅಥವಾ 1/4 ಟಿಸ್ಪೂನ್ ಜಜ್ಜಿದ ಶುಂಠಿ
- 1 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
- ಒಂದು ಚಿಟಿಕೆ ಕಾಳು ಮೆಣಸು ಪುಡಿಮಾಡಿದ್ದು (ಬೇಕಾದಲ್ಲಿ)
- 1 ಟೀಸ್ಪೂನ್ ನಿಂಬೆ ಹಣ್ಣಿನ ರಸ
- ಒಂದು ಸಣ್ಣ ಚಿಟಿಕೆ ಏಲಕ್ಕಿ ಪುಡಿ
ಬೇಕಾಗುವ ಪದಾರ್ಥಗಳು (ವಿಧಾನ 2):( ಅಳತೆ ಕಪ್ = 240 ಎಂಎಲ್ )
- 1 ಕಪ್ ನೀರು
- 1 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
- ಒಂದು ಚಿಟಿಕೆ ಕಾಳು ಮೆಣಸು ಪುಡಿಮಾಡಿದ್ದು
- 1 ಗೋಲಿ ಗಾತ್ರದ ಹುಣಿಸೆ ಹಣ್ಣು
- ಒಂದು ಸಣ್ಣ ಚಿಟಿಕೆ ಏಲಕ್ಕಿ ಪುಡಿ
ಬೆಲ್ಲದ ಪಾನಕ ಮಾಡುವ ವಿಧಾನ (ವಿಧಾನ 1):
- 1 ಕಪ್ ನೀರು ತೆಗೆದುಕೊಂಡು, ಶುಂಠಿ, ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಕಾಳು ಮೆಣಸು, ನಿಂಬೆ ರಸ, ಏಲಕ್ಕಿ ಪುಡಿ ಹಾಕಿ ಬೆರೆಸಿ. 10 ನಿಮಿಷ ಹಾಗೆ ಬಿಟ್ಟು, ಕುಡಿಯಲು ಕೊಡಿ.
ಬೆಲ್ಲದ ಪಾನಕ ಮಾಡುವ ವಿಧಾನ (ವಿಧಾನ 2):
- ಹುಣಿಸೆಹಣ್ಣು ನೆನೆಸಿ, ರಸ ತೆಗೆದಿಟ್ಟು ಕೊಳ್ಳಿ. 1 ಕಪ್ ನೀರು ತೆಗೆದುಕೊಂಡು, ಹುಣಿಸೆ ರಸ, ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಕಾಳು ಮೆಣಸು, ಏಲಕ್ಕಿ ಹಾಕಿ ಬೆರೆಸಿ. 10 ನಿಮಿಷಗಳ ಕಾಲ ಹಾಗೆ ಬಿಟ್ಟು, ಕುಡಿಯಲು ಕೊಡಿ.