ಶನಿವಾರ, ಜನವರಿ 30, 2016

Menasinakayi bajji recipe in Kannada | ಮೆಣಸಿನಕಾಯಿ ಬಜ್ಜಿ | ಮೆಣಸಿನಕಾಯಿ ಬೋಂಡಾ

ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ 

ಗರಿಗರಿ ಮೆಣಸಿನಕಾಯಿ ಬಜ್ಜಿ ಅಥವಾ ಬೋಂಡಾ ಹಂತ ಹಂತವಾಗಿ ಚಿತ್ರಗಳ ಮೂಲಕ ವಿವರಿಸಲಾಗಿದೆ. ಬಾಯಲ್ಲಿ ನೀರೂರಿಸುವ ಈ ಬಜ್ಜಿಗಳನ್ನು ನೀವು ಕೆಲವೇ ಕೆಲವು ನಿಮಿಷಗಳಲ್ಲಿ ತಯಾರಿಸಬಹುದು ಮತ್ತು ಈ ವಿಧಾನದಲ್ಲಿ ಮಾಡಿದ ಬಜ್ಜಿಗಳು ಸಾಧಾರಣವಾಗಿ ಮಾಡುವ ಬಜ್ಜಿಗಿಂತ ಹೆಚ್ಚು ರುಚಿಕರವಾಗಿರುತ್ತದೆ.
ಸಾಧಾರಣವಾಗಿ ಕರ್ನಾಟಕ ಶೈಲಿಯಲ್ಲಿ ಬಜ್ಜಿ ಮಾಡುವುದಾದರೆ ಹಿಟ್ಟು ದಪ್ಪನಾಗಿದ್ದು, ಬಜ್ಜಿಗಳೂ ಸಹ ದಪ್ಪನಾಗಿರುತ್ತದೆ. ನೀವು ಆ ಶೈಲಿಯಲ್ಲೇ ಮಾಡಲು ಇಚ್ಚಿಸಿದಲ್ಲಿ ನಾವು ಈಗಾಗಲೇ ಹಾಕಿರುವ ದೊಡ್ಡಪತ್ರೆ ಎಲೆಗಳ ಬಜ್ಜಿ ವಿಧಾನವನ್ನು ಓದಿ. ಎಲೆಗಳ ಬದಲು ಮೆಣಸಿನಕಾಯಿ ಉಪಯೋಗಿಸಿದರಾಯಿತು. ಆದರೆ ಒಮ್ಮೆ ಈ ವಿಧಾನದಲ್ಲಿ ಬಜ್ಜಿಗಳನ್ನು ನೀವು ಮಾಡಿನೋಡಿ. ಗರಿಗರಿಯಾಗಿದ್ದು ಬಹಳ ರುಚಿಕರವಾಗಿರುತ್ತದೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1.5 ಕಪ್ ಕಡ್ಲೆಹಿಟ್ಟು
  2. 10 ಬಜ್ಜಿ ಮೆಣಸಿನಕಾಯಿ
  3. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  4. ಒಂದು ದೊಡ್ಡ ಚಿಟಿಕೆ ಇಂಗು
  5. ಎಣ್ಣೆ ಬಜ್ಜಿ ಕಾಯಿಸಲು
  6. ಉಪ್ಪು ರುಚಿಗೆ ತಕ್ಕಷ್ಟು.

ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಚ್ಚಖಾರದ ಪುಡಿ, ಇಂಗು ಮತ್ತು ಉಪ್ಪನ್ನು ಹಾಕಿ. ನೀರು ಹಾಕಿ ಸ್ವಲ್ಪ ತೆಳ್ಳಗಿನ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಮೆಣಸಿನಕಾಯಿಗೆ ಹಿಡಿಯುವಂತಿದ್ದರೆ ಸಾಕು.
  2. ಮೆಣಸಿನಕಾಯಿಯನ್ನು ತೊಳೆದು, ಕತ್ತರಿಸಿ, ಬೀಜ ತೆಗೆಯಿರಿ. ಸಿದ್ಧ ಪಡಿಸಿದ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕಾಯಿಸಿ. ಬಿಸಿ ಬಿಸಿ ಹಾಗೂ ಗರಿ ಗರಿ ಮೆಣಸಿನಕಾಯಿ ಬಜ್ಜಿ ಸವಿಯಲು ಸಿದ್ಧ.


ಶುಕ್ರವಾರ, ಜನವರಿ 29, 2016

Shunti thambuli recipe in Kannada | ಶುಂಠಿ ತಂಬುಳಿ ಮಾಡುವ ವಿಧಾನ


ಶುಂಠಿ ತಂಬುಳಿ ಮಾಡುವ ವಿಧಾನ

ಸುಲಭ ಮತ್ತು ಆರೋಗ್ಯಕರ ಶುಂಠಿ ತಂಬುಳಿ ಅಥವಾ ತಂಬ್ಳಿ ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳ ಮೂಲಕ ವಿವರಿಸಲಾಗಿದೆ. ತುಂಬುಳಿ ಅನ್ನದ ಜೊತೆಗೆ ಸಾರು ಅಥವಾ ಸಾಂಬಾರ್ ನಂತೆ ಬಡಿಸುವ ಅಡುಗೆಯಾಗಿದೆ. ಸಾಧಾರಣವಾಗಿ ಊಟವನ್ನು ತಂಬುಳಿ ಯೊಂದಿಗೆ ಪ್ರಾರಂಭಿಸುತ್ತಾರೆ. ಶುಂಠಿ ತಂಬುಳಿಯನ್ನು ಶುಂಠಿ, ತೆಂಗಿನ ತುರಿ ಮತ್ತು ಮೊಸರು ಬಳಸಿಕೊಂಡು ತಯಾರಿಸಲಾಗುತ್ತದೆ. ಇದೊಂದು ಅತ್ಯಂತ ಸುಲಭವಾದ ಅಡುಗೆಯಾಗಿದ್ದು ಯಾರೇ ಆಗಲಿ 10 ನಿಮಿಷಗಳಲ್ಲಿ ತಯಾರಿಸಬಹುದು. ಜೊತೆಗೆ ಇದು ಬಹಳ ರುಚಿಕರ ಹಾಗಾಗಿ ನೀವು ಇದನ್ನು ಒಮ್ಮೆಯಾದರೂ ಪ್ರಯತ್ನಿಸಬೇಕು ಮತ್ತು ನಿಮಗೆ ಇದು ಖಂಡಿತವಾಗಿಯೂ ಇಷ್ಟವಾಗುವುದು.

Shunti thambuli video Kannada

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 2" ಉದ್ದದ ಹಸಿ ಶುಂಠಿ
  2. 1 ಕಪ್ ತೆಂಗಿನತುರಿ
  3. 1 ಕಪ್ ಮೊಸರು
  4. 1-2 ಕಪ್ ನೀರು
  5. 1 ಕೆಂಪು ಮೆಣಸಿನಕಾಯಿ / ಮಜ್ಜಿಗೆ ಮೆಣಸು
  6. 1 ಟೀಸ್ಪೂನ್ ಅಡುಗೆ ಎಣ್ಣೆ
  7. 1/4 ಟೀಸ್ಪೂನ್ ಸಾಸಿವೆ
  8. ಉಪ್ಪು ರುಚಿಗೆ ತಕ್ಕಷ್ಟು.

ಶುಂಠಿ ತಂಬುಳಿ ಮಾಡುವ ವಿಧಾನ:

  1. ಶುಂಠಿ ಮತ್ತು ತೆಂಗಿನತುರಿಯನ್ನು ಮಿಕ್ಸಿ ಜಾರಿನಲ್ಲಿ ಸ್ವಲ್ಪ ನೀರು ಹಾಕಿ ನಯವಾಗಿ ಅರೆಯಿರಿ.
  2. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಉಪ್ಪು, ಮೊಸರು ಮತ್ತು ನೀರು ಸೇರಿಸಿ ಕಲಸಿ. ಸಾಸಿವೆ ಮತ್ತು ಮೆಣಸಿನಕಾಯಿಯ ಒಗ್ಗರಣೆ ಕೊಡಿ. ಬಿಸಿ ಅನ್ನದೊಂದಿಗೆ ಬಡಿಸಿ.

ಬುಧವಾರ, ಜನವರಿ 27, 2016

Rave uppittu recipe | ರವೆ ಉಪ್ಪಿಟ್ಟು | ಸಜ್ಜಿಗೆ ಉಪ್ಪಿಟ್ಟು


ರವೆ ಉಪ್ಪಿಟ್ಟು ಮಾಡುವ ವಿಧಾನ 

ಕರ್ನಾಟಕ ಶೈಲಿಯ ರವೆ ಉಪ್ಪಿಟ್ಟು ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳ ಮೂಲಕ ವಿವರಿಸಲಾಗಿದೆ. ಉಪ್ಪಿಟ್ಟು ದಕ್ಷಿಣ ಭಾರತದ ಅತ್ಯಂತ ಜನಪ್ರಿಯ, ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಮತ್ತು ಸರಳ ಉಪಹಾರವಾಗಿದೆ. ನಮ್ಮಲ್ಲಿ ಬಹುತೇಕ ಎಲ್ಲರಿಗೂ ರವೆ ಉಪ್ಪಿಟ್ಟು ಮಾಡುವ ವಿಧಾನ ಖಂಡಿತ ತಿಳಿದಿರುತ್ತದೆ. ಆದರೆ ಈ ಲೇಖನವನ್ನು ಹೊಸದಾಗಿ ಅಡುಗೆ ಕಲಿಯುತ್ತಿರುವವರಿಗೋಸ್ಕರ ಮತ್ತು ವೆಬ್‌ಸೈಟ್ನಲ್ಲಿ ಈ ಜನಪ್ರಿಯ ಪಾಕವಿಧಾನವನ್ನು ಸೇರಿಸುವುದಕ್ಕೋಸ್ಕರ ಬರೆಯುತ್ತಿದ್ದೇನೆ.
ಕರ್ನಾಟಕದಲ್ಲಿ ಇದನ್ನು ಉಪ್ಪಿಟ್ಟು ಅಥವಾ ಉಪುಮಾ ಎಂಬ ಹೆಸರಿನಿಂದ ಕರೆಯುತ್ತಾರೆ. ಮಂಗಳೂರು ಪ್ರದೇಶದಲ್ಲಿ ಸಜ್ಜಿಗೆ ಉಪ್ಪಿಟ್ಟು ಎಂಬ ಹೆಸರು ರೂಢಿಯಲ್ಲಿದೆ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಉಪ್ಪಿಟ್ಟನ್ನು ಪೇಣಿ ರವೆ, ಬನ್ಸಿ ರವೆ, ಅಕ್ಕಿ ರವೆ, ಶಾವಿಗೆ ಅಥವಾ ಅಕ್ಕಿ ಬಳಸಿಕೊಂಡು ತಯಾರಿಸಲಾಗುತ್ತದೆ. ತರಕಾರಿ ಉಪ್ಪಿಟ್ಟು ಕೂಡ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಎಲ್ಲ ಉಪ್ಪಿಟ್ಟಿನ ಪಾಕವಿಧಾನ ಸ್ವಲ್ಪ ಸ್ವಲ್ಪ ಭಿನ್ನವಾಗಿರುತ್ತವೆ. ಹಾಗೂ ನಾವು ಮುಂಬರುವ ದಿನಗಳಲ್ಲಿ ಒಂದೊಂದನ್ನೇ ವಿವರಿಸುತ್ತೇವೆ.
ರವಾ ಉಪ್ಪಿಟ್ಟು ಅತ್ಯಂತ ಜನಪ್ರಿಯ ಉಪಹಾರವಾಗಿದ್ದರೂ ಸಹ ಇದನ್ನು ಕೆಲವರು ಬಹಳ ಇಷ್ಟ ಪಟ್ಟು ತಿಂದರೆ ಇನ್ನೂ ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ನನಗೆ ಮಾತ್ರ ಇದು ತುಂಬಾ ಇಷ್ಟ. ಆದರೆ ಇದು ಬಹಳ ಪೌಷ್ಟಿಕ ಆಹಾರವಾಗಿರುವುದರಿಂದ ನಿಮಗೆ ಇಷ್ಟವಿಲ್ಲದಿದ್ದರೂ ಆಗಾಗ್ಯೆ ಮಾಡಿ ತಿನ್ನಲು ಮರೆಯದಿರಿ.
ಉಪ್ಪಿಟ್ಟು ಪಾಕವಿಧಾನ ದಕ್ಷಿಣ ಭಾರತದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಬದಲಾಗುತ್ತದೆ. ವ್ಯತ್ಯಾಸಗಳು ಅದರ ಬಣ್ಣ ಮತ್ತು ಬಳಸುವ ನೀರಿನ ಪ್ರಮಾಣದಲ್ಲಿವೆ. ಈ ರುಚಿಕರ ಮತ್ತು ಸರಳ ಉಪ್ಪಿಟ್ಟಿನ ಪಾಕವಿಧಾನವನ್ನು ಒಮ್ಮೆ ಅನುಸರಿಸಿ ನೋಡಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್)

  1. 2 ಕಪ್ ರವೆ (ಸಣ್ಣ ರವೆ)
  2. 4 ಕಪ್ ನೀರು
  3. 1/2 ಟೀಸ್ಪೂನ್ ಸಾಸಿವೆ
  4. 1 ಟೀಸ್ಪೂನ್ ಉದ್ದಿನಬೇಳೆ
  5. 1 ಟೀಸ್ಪೂನ್ ಕಡ್ಲೆಬೇಳೆ
  6. 1 ದೊಡ್ಡ ಈರುಳ್ಳಿ (1 ಟೀಸ್ಪೂನ್ ಸಕ್ಕರೆ + ಒಂದು ಚಿಟಿಕೆ ಇಂಗು, ಈರುಳ್ಳಿ ಬಳಸದೆ ಇದ್ದಲ್ಲಿ)
  7. 1-2 ಹಸಿರು ಮೆಣಸಿನಕಾಯಿ
  8. 5-6 ಕರಿ ಬೇವಿನ ಎಲೆ
  9. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  10. 1/4 ಟೀಸ್ಪೂನ್ ಅರಶಿನ ಪುಡಿ
  11. 4-5 ಟೀಸ್ಪೂನ್ ಅಡುಗೆ ಎಣ್ಣೆ
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
  13. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  14. 1/2 ಕಪ್ ತೆಂಗಿನತುರಿ
  15. 1 ಟೀಸ್ಪೂನ್ ನಿಂಬೆ ಹಣ್ಣಿನ ರಸ (ಬೇಕಾದಲ್ಲಿ)

ಪೇಣಿ ರವೆ ಉಪ್ಪಿಟ್ಟು ಮಾಡುವ ವಿಧಾನ:

  1. ಈರುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿ. ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ಒಂದು ಪಾತ್ರೆಯಲ್ಲಿ ಉಪ್ಪು ಮತ್ತು ನೀರನ್ನು ಹಾಕಿ ಕುದಿಯಲು ಇಡಿ. ನೀರು ಕುದಿಯುವುದರೊಳಗೆ ಉಪ್ಪಿಟ್ಟಿಗೆ ಒಗ್ಗರಣೆ ಸಿದ್ಧಪಡಿಸಿಕೊಳ್ಳೋಣ. ಏಕೆಂದರೆ ಕುದಿಯುವ ನೀರು ಕೊನೆಯಲ್ಲಿ ಬೇಕಾಗುತ್ತದೆ.
  2. ಅದಕ್ಕಾಗಿ ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
  3. ಈರುಳ್ಳಿ ಮೆತ್ತಗಾದ ಮೇಲೆ 2 ಕಪ್ ರವೆ ಮತ್ತು ಅರಶಿನ ಪುಡಿ ಸೇರಿಸಿ ಮಧ್ಯಮ ಉರಿಯಲ್ಲಿ ಒಂದೈದು ನಿಮಿಷಗಳ ಕಾಲ ಹುರಿಯಿರಿ.
  4. ಇಷ್ಟರೊಳಗೆ ನೀರು ಕುದಿಯಲಾರಂಭಿಸಿರುತ್ತದೆ. ಆ ಕುದಿಯುವ ನೀರನ್ನು ಜಾಗ್ರತೆಯಿಂದ ರವೆ ಇರುವ ಬಾಣಲೆಗೆ ಸ್ವಲ್ಪ ಸ್ವಲ್ಪವಾಗಿ ಸುರಿಯಿರಿ. ನೀರು ಇಂಗುವವರೆಗೆ ಮಗುಚಿ. ನೀರು ಇಂಗಲು ಒಂದು ನಿಮಿಷ ಸಾಕಾಗುತ್ತದೆ.
  5. ನಂತರ ಮುಚ್ಚಳ ಮುಚ್ಚಿ 3 - 4 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ಆಮೇಲೆ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಮತ್ತು ಲಿಂಬೆ ರಸ ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, ಸ್ಟೋವ್ ಆಫ್ ಮಾಡಿ. ಒಂದು ನಿಮಿಷದ ನಂತರ ಮತ್ತೊಮ್ಮೆ ಮಗುಚಿ, ಬಿಸಿಯಾಗಿರುವಾಗಲೇ ಸಕ್ಕರೆ, ಉಪ್ಪಿನಕಾಯಿ ಅಥವಾ ಮೊಸರಿನೊಂದಿಗೆ ಬಡಿಸಿ.


ಶನಿವಾರ, ಜನವರಿ 23, 2016

Gatti mosaru maduva vidhana | ಗಟ್ಟಿ ಮೊಸರು ಮಾಡುವ ವಿಧಾನ


ಗಟ್ಟಿ ಮೊಸರು ಮಾಡುವ ವಿಧಾನ

ಮನೆಯಲ್ಲಿ ಗಟ್ಟಿ ಮೊಸರು ಮಾಡುವುದು ಹೇಗೆಂದು ತಿಳಿದುಕೊಳ್ಳಿ. ಮನೆಯಲ್ಲಿ ಮಾಡಿದೆ ಮೊಸರು ಶುದ್ಧ, ರುಚಿಕರ ಮತ್ತು ಮಾಡಲು ಬಹಳ ಸರಳವಾಗಿದೆ. ನಮ್ಮ ಮನೆಗಳಲ್ಲಿ ಮೊಸರು ಅಥವಾ ಮಜ್ಜಿಗೆ ಇಲ್ಲದ ಊಟವನ್ನು ಅಪೂರ್ಣವಾಗಿ ಪರಿಗಣಿಸಲಾಗುತ್ತದೆ. ಹಾಗಾಗಿ ಮನೆಯಲ್ಲಿ ಮೊಸರು ಮಾಡುವುದು ದೈನಂದಿನ ಪ್ರಕ್ರಿಯೆಯಾಗಿದೆ. ನಾನು ಈ ಗಟ್ಟಿ ಮೊಸರು ಮಾಡುವ ವಿಧಾನವನ್ನು, ಮೊಸರು ಮಾಡಲು ತೊಂದರೆ ಅನುಭವಿಸುತ್ತಿರುವವರಿಗೋಸ್ಕರ ವಿವರಿಸುತ್ತಿದ್ದೇನೆ.. ನಮ್ಮಲ್ಲಿ ಅನೇಕರು ಮೊಸರನ್ನು ಅಂಗಡಿಯಲ್ಲಿ ಖರೀದಿಸುತ್ತೀರಿ. ಆದರೆ ಮನೆಯಲ್ಲಿ ಮೊಸರು ಮಾಡುವುದು ಬಹಳ ಸುಲಭ ಮತ್ತು ನೀವು ಒಮ್ಮೆ ಮೊಸರು ಮಾಡುವುದನ್ನು ಸರಿಯಾಗಿ ಕಲಿತುಕೊಂಡರೆ ನಂತರ ಅಂಗಡಿಗಳಿಂದ ಮೊಸರು ಖರೀದಿ ಮಾಡುವುದನ್ನು ಖಂಡಿತ ನಿಲ್ಲಿಸುವಿರಿ.

ಮನೆಯಲ್ಲಿ ಗಟ್ಟಿ ಮೊಸರು ಮಾಡುವ ವಿಧಾನ:

  1. ಮನೆಯಲ್ಲಿ ಮೊಸರು ಮಾಡಲು ಮೊದಲಿಗೆ ನೀರು ಬೆರೆಸದೇ ಹಾಲನ್ನು ಕುದಿಸಬೇಕು. ನಿಮಗೆ ಹಾಲು ನೀರಾಗಿದೆ ಎನಿಸಿದರೆ ಕೆಲವು ನಿಮಿಷಗಳ ಕಾಲ ಹೆಚ್ಚು ಕುದಿಸಿ. ಯಾವಾಗಲೂ ಮೊಸರು ಮಾಡುವ ಸ್ವಲ್ಪ ಮೊದಲು ಹಾಲನ್ನು ಕುದಿಸಬೇಕು. ಯಾವಾಗಲೋ ಕುದಿಸಿ ಇಟ್ಟ ಹಾಲಿಂದ ಮೊಸರು ಮಾಡಲು ಹೊರಟರೆ ಚೆನ್ನಾಗಿ ಬರುವುದಿಲ್ಲ, ಜೊತೆಗೆ ಮೊಸರು ಆಗುವ ಮೊದಲೇ ಹಾಲು ಹಾಳಾಗುವ ಸಾಧ್ಯತೆಯೂ ಇದೆ.
  2. ಹಾಲು ಬೆಚ್ಚಗಾಗುವವರೆಗೆ ಕಾಯಿರಿ. ಗಮನಿಸಿ, ಹಾಲು ಬಿಸಿಯಾಗಿರಬಾರದು ಮತ್ತು ಪೂರ್ತಿ ತಣ್ಣಗೆ ಸಹ ಆಗಬಾರದು. ಈ ಬೆಚ್ಚಗಾಗಿರುವ ಹಾಲಿಗೆ 1 ರಿಂದ 2 ಚಮಚದಷ್ಟು ಮೊಸರು ಹಾಕಿ ಚೆನ್ನಾಗಿ ಮಗುಚಬೇಕು. ನೀವು ಪ್ಯಾಕೆಟ್ ಹಾಲು ಬಳಸುತ್ತಿದ್ದರೆ ಅಥವಾ ಚಳಿ ಪ್ರದೇಶದಲ್ಲಿದ್ದರೆ 2 ಚಮಚದಷ್ಟು ಮೊಸರು ಹಾಕಿ.., ಇಲ್ಲವೇ 1 ಚಮಚ ಸಾಕಾಗುತ್ತದೆ.
  3. ಈಗ ಮುಚ್ಚಳ ಮುಚ್ಚಿ 6-7 ಘಂಟೆಗಳ ಕಾಲ ಹಾಗೆ ಇಡಿ. ಮೊಸರು ಆಗಲು ಬೇಕಾದ ಈ ಸಮಯ ಕೂಡ ನೀವಿರುವ ಪ್ರದೇಶದ ಹವಾಮಾನವನ್ನು ಅವಲಂಬಿಸಿರುತ್ತದೆ. ಈ ಸಮಯದಲ್ಲಿ ಪಾತ್ರೆಯನ್ನು ಅಲ್ಲಾಡಿಸಬಾರದು. ಜಾಸ್ತಿ ಮೊಸರು ಹಾಕುವುದು ಅಥವಾ ತುಂಬಾ ಸಮಯ ಬಿಡುವುದು ಮಾಡಿದಲ್ಲಿ ಮೊಸರು ಹುಳಿಯಾಗುವ ಸಾಧ್ಯತೆಯೂ ಇದೆ. ಹೇಳಿದ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊಸರು ಮಾಡಿದಲ್ಲಿ ರುಚಿಕರ ಗಟ್ಟಿ ಮೊಸರು ಮಾಡಲು ಸಾಧ್ಯವಾಗುತ್ತದೆ.

Raagi dose Recipe in Kannada | ದಿಢೀರ್ ರಾಗಿ ದೋಸೆ

ದಿಢೀರ್ ರಾಗಿ ದೋಸೆ ಮಾಡುವ ವಿಧಾನ 

ದಿಢೀರ್ ರಾಗಿ ದೋಸೆ ಹಂತ ಹಂತವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಈ ದೋಸೆಗೆ ಕೇವಲ ರಾಗಿ ಹಿಟ್ಟು ಮತ್ತು ಕರಿಬೇವಿನ ಎಲೆಗಳನ್ನು ಉಪಯೋಗಿಸಲಾಗುತ್ತದೆ. ಈ ರಾಗಿ ದೋಸೆ ಬಹಳ ಆರೋಗ್ಯಕರವಾಗಿದ್ದು, ಅದರಲ್ಲೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಸೇವಿಸಿದಲ್ಲಿ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಬಹಳ ಪರಿಣಾಮಕಾರಿಯಾಗಿದೆ.
ನಾನು ಈ ದೋಸೆಯನ್ನು ಬೆಳಗ್ಗಿನ ಉಪಹಾರದ ಪಟ್ಟಿಯಲ್ಲಿ ಸೇರಿಸಿದ್ದೇನೆ. ಆದರೆ ಈ ದೋಸೆಯನ್ನು ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ರಾತ್ರೆ ಊಟಕ್ಕೆ ಅನ್ನದ ಬದಲಾಗಿ ಪ್ರತಿನಿತ್ಯ ಸೇವಿಸುತ್ತಾರೆ.
ರಾಗಿಯೊಂದಿಗೆ ಬೇರೆ ಬೇರೆ ಹಿಟ್ಟನ್ನು ಬೆರೆಸಿ, ರಾಗಿ ದೋಸೆ ಎಂದು ತಿನ್ನುವ ಬದಲು ಈ ರೀತಿ ರಾಗಿ ಹಿಟ್ಟು ಮಾತ್ರ ಹಾಕಿ ಮಾಡಿದ ದೋಸೆ ಹೆಚ್ಚು ಪ್ರಯೋಜನಕಾರಿ ಎಂದು ನನ್ನ ಅನಿಸಿಕೆ. ಆದರೆ ದೋಸೆ ಮಾಡುವ ಸಮಯದಲ್ಲಿ ನಿಮಗೆ ಕಷ್ಟವೆನ್ನಿಸಿದರೆ ಒಂದು ಅಥವಾ ಎರಡು ಟೇಬಲ್ ಚಮಚ ಗೋಧಿ ಹಿಟ್ಟನ್ನು ಅಥವಾ ಉದ್ದಿನ ದೋಸೆ ಹಿಟ್ಟನ್ನು ಬೆರೆಸಿ ದೋಸೆ ಮಾಡಬಹುದು.

ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 10 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಕಪ್ ರಾಗಿ ಹಿಟ್ಟು
  2. 2 ಟೇಬಲ್ ಸ್ಪೂನ್ ಸಣ್ಣಗೆ ಕತ್ತರಿಸಿದ ಕರಿಬೇವಿನ ಎಲೆ
  3. ಉಪ್ಪು ರುಚಿಗೆ ತಕ್ಕಷ್ಟು
  4. 3 ಕಪ್ ನೀರು (ಹಿಟ್ಟಿನ ಗುಣಮಟ್ಟ ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  5. 2 ಟೀಸ್ಪೂನ್ ಅಡುಗೆ ಎಣ್ಣೆ.

ದಿಢೀರ್ ರಾಗಿ ದೋಸೆ ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು ಮತ್ತು ಕತ್ತರಿಸಿದ ಕರಿಬೇವಿನ ಎಲೆಗಳನ್ನು ಹಾಕಿ. ದೋಸೆ ಹಿಟ್ಟು ತೆಳುವಾಗಲು ಸಾಕಷ್ಟು ನೀರು ಸೇರಿಸಿ (1 ಲೋಟ ಹಿಟ್ಟಿಗೆ 1.5 ಕಪ್ ನಷ್ಟು ನೀರು ಬೇಕಾಗುತ್ತದೆ). ಉಪ್ಪು ಹಾಕಿ ಕಲಸಿ. ರಾಗಿ ದೋಸೆಗೆ ಹೆಚ್ಚು ಉಪ್ಪು ಅಗತ್ಯವಿರುವುದಿಲ್ಲ.
  2. ಈಗ ಕಬ್ಬಿಣದ ಕಾವಲಿ ಅಥವಾ ನಾನ್ ಸ್ಟಿಕ್ ಪ್ಯಾನ್ ತೆಗೆದುಕೊಂಡು ಒಲೆ ಮೇಲೆ ಇರಿಸಿ, ಒಲೆ ದೊಡ್ಡ ಉರಿಯಲ್ಲಿರಲಿ. ರಾಗಿ ದೋಸೆ ಮಾಡಲು ಕಾವಲಿ ಚೆನ್ನಾಗಿ ಕಾದಿರ ಬೇಕು. ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ಕಾವಲಿಯಾದರೆ ಸಣ್ಣ ಈರುಳ್ಳಿ ಅಥವಾ ಒಂದು ಕ್ಯಾರೆಟ್ ಬಳಸಿಕೊಂಡು ಕಾವಲಿಗೆ ಎಣ್ಣೆ ಹಚ್ಚಿ. ಪ್ರತಿ ರಾಗಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ರಾಗಿ ದೋಸೆ ಮಾಡಲು ಬಿಸಿ ಕಾವಲಿ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು, ನೀರ್ ದೋಸೆ ಅಥವಾ ರವೆ ದೋಸೆ ಮಾಡುವ ವಿಧಾನದಲ್ಲಿ ದೋಸೆ ಮಾಡಿ.
  3. ಸುಮಾರು 10 ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ಮುಚ್ಚಳ ತೆರೆದು, ಉರಿಯನ್ನು ಕಡಿಮೆ ಮಾಡಿ, 5 ಸೆಕೆಂಡುಗಳ ಕಾಲ ಬಿಟ್ಟು, ಜಾಗ್ರತೆಯಿಂದ ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಪುನಃ ಉರಿಯನ್ನು ಹೆಚ್ಚಿಸಿ. ರಾಗಿ ದೋಸೆ ಕಾವಲಿಯಿಂದ ತೆಗೆಯಲು ಕಷ್ಟಸಾಧ್ಯವಾದಲ್ಲಿ, ಸ್ವಲ್ಪ ಗೋಧಿ ಹಿಟ್ಟು ಅಥವಾ ಉದ್ದಿನ ದೋಸೆ ಹಿಟ್ಟನ್ನು ಬೆರೆಸಿ ನಂತರ ಪ್ರಯತ್ನಿಸಿ. ಇದನ್ನು ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.

ಶುಕ್ರವಾರ, ಜನವರಿ 22, 2016

Bellulli chutney recipe in Kannada | ಬೆಳ್ಳುಳ್ಳಿ ಚಟ್ನಿ

Bellulli chutney recipe in Kannada

Bellulli chutney recipe in Kannada | ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ 

ಇಂದು ನಾನು ಹಂತ ಹಂತವಾದ ಚಿತ್ರ ವಿವರಣೆಯೊಂದಿಗೆ ಒಂದು ರುಚಿಕರ, ಆರೋಗ್ಯಕರ ಮತ್ತು ಸುಲಭ ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನವನ್ನು ವಿವರಿಸಲಿದ್ದೇನೆ. ಈ ಚಟ್ನಿ ಹುರಿದ ಬೆಳ್ಳುಳ್ಳಿ, ಹುರಿದ ಕೆಂಪು ಮೆಣಸಿನಕಾಯಿ ಮತ್ತು ತೆಂಗಿನ ತುರಿಯನ್ನು ಉಪಯೋಗಿಸಿ ಮಾಡಲಾಗುತ್ತದೆ. ಈ ಚಟ್ನಿ ದೋಸೆಯೊಂದಿಗೆ ತಿನ್ನಲು ಬಹಳ ರುಚಿಕರ. ಆದರೆ ನೀವು ಇಡ್ಲಿ ಅಥವಾ ಅನ್ನದೊಂದಿಗೆ ಸಹ ತಿನ್ನಬಹುದು. ನಿಮಗೆಲ್ಲ ತಿಳಿದಿರುವ ಹಾಗೆ ಬೆಳ್ಳುಳ್ಳಿಯಲ್ಲಿ ಅನೇಕ ಔಷಧೀಯ ಗುಣಗಳಿವೆ ಮತ್ತು ಈ ಚಟ್ನಿ ಬಹಳ ಸುಲಭವಾಗಿ ಜಾಸ್ತಿ ಬೆಳ್ಳುಳ್ಳಿಯನ್ನು ಸೇವಿಸಲು ಸಹಕಾರಿಯಾಗಿದೆ.

ಬೆಳ್ಳುಳ್ಳಿ ಚಟ್ನಿ ವಿಡಿಯೋ



ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 3 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ಮಧ್ಯಮ ಗಾತ್ರದ ಬೆಳ್ಳುಳ್ಳಿ
  2. 2-4 ಒಣ ಮೆಣಸಿನಕಾಯಿ
  3. 1 ಕಪ್ ತೆಂಗಿನ ತುರಿ
  4. 1 ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
  5. 1 ಟೀಸ್ಪೂನ್ ಅಡುಗೆ ಎಣ್ಣೆ
  6. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಳ್ಳುಳ್ಳಿ ಚಟ್ನಿ ಮಾಡುವ ವಿಧಾನ:

  1. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಮೊದಲು ಒಣ ಮೆಣಸಿನಕಾಯಿಯನ್ನು ಹುರಿದು ತೆಗೆದಿಟ್ಟು ಕೊಳ್ಳಿ. ನಂತರ ಅದೇ ಬಾಣಲೆಯಲ್ಲಿ ತುಂಡು ಮಾಡಿದ ಬೆಳ್ಳುಳ್ಳಿಯನ್ನು ಹುರಿಯಿರಿ.
  2. ಒಂದು ಮಿಕ್ಸಿ ಜಾರ್ನಲ್ಲಿ ಹುರಿದ ಮೆಣಸಿನಕಾಯಿ, ಬೆಳ್ಳುಳ್ಳಿ, ತೆಂಗಿನತುರಿ, ಉಪ್ಪು ಮತ್ತು ಹುಣಿಸೆಹಣ್ಣು ಹಾಕಿ ಅರೆಯಿರಿ. ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ದೋಸೆ, ಇಡ್ಲಿ ಅಥವಾ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಜನವರಿ 19, 2016

Zunka or jhunka vadi recipe in Kannada | ಉತ್ತರ ಕರ್ನಾಟಕದ ಜುನ್ಕ ವಡಿ | ಕಡ್ಲೆಹಿಟ್ಟಿನ ಪಲ್ಯ


ಉತ್ತರ ಕರ್ನಾಟಕದ ಜುನ್ಕ ವಡಿ

ಜುನ್ಕ ವಡಿ ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳೊಂದಿಗೆ ವಿವರಿಸಲಾಗಿದೆ . ಈ ಅಡುಗೆ ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ. ಇದನ್ನು ಕಡ್ಲೆ ಹಿಟ್ಟು , ಈರುಳ್ಳಿ ಮತ್ತು ಕೆಲವು ಮಸಾಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. "ಕಡ್ಲೆ ಹಿಟ್ಟಿನ ಪಲ್ಯನ? ಅದು ಹೇಗಿರುತ್ತಪ್ಪಾ" ಅಂತ ಯೋಚನೆ ಮಾಡ್ತ ಇದ್ದೀರ? ಯೋಚನೆ ಮಾಡ್ಲೆಬೇಡಿ. ಇದೊಂದು ಬಹಳ ರುಚಿಕರ ಮತ್ತು ಸುಲಭವಾದ ಅಡುಗೆಯಾಗಿದ್ದು ಚಪಾತಿ ಅಥವಾ ಜೋಳದ ರೊಟ್ಟಿ ಜೊತೆ ಪಲ್ಯದಂತೆ ಬಳಸಲಾಗುತ್ತದೆ. ಅಚ್ಚರಿಯೆಂದರೆ ಈ ರುಚಿಕರ ಮೇಲೋಗರ ಕರ್ನಾಟಕ ರಾಜ್ಯದ ದಕ್ಷಿಣ ಭಾಗದಲ್ಲಿ ಅಪರಿಚಿತ. ಆದರೆ ನೀವು ಎಂದಾದರೂ ಕಾಮತ್ ಹೋಟೆಲ್ಗಳಲ್ಲಿ "ಜೋಳದ ರೊಟ್ಟಿ ಊಟ" ಸವಿದಿದ್ದರೆ ಇದರ ಹೆಸರು ಮತ್ತು ಹೇಗೆ ಮಾಡಲಾಗಿದೆ ಎಂದು ತಿಳಿಯದೆ ನೀವು ಈಗಾಗಲೇ ಇದನ್ನು ತಿಂದಿರುತ್ತೀರಿ.
ಜುನ್ಕ ವಡಿ ಅಥವಾ ಕಡ್ಲೆಹಿಟ್ಟಿನ ಪಲ್ಯವನ್ನು ಬಳಸುವ ನೀರಿನ ಪ್ರಮಾಣ ಅವಲಂಬಿಸಿ ಬೇರೆ ಬೇರೆ ರೀತಿಯಲ್ಲಿ ತಯಾರಿಸುತ್ತಾರೆ. ಜಾಸ್ತಿ ನೀರು ಬಳಸಿ ದಪ್ಪ ಪೇಸ್ಟ್ ನಂತೆ, ಸ್ವಲ್ಪ ನೀರು ಚಿಮುಕಿಸಿ ಪುಡಿ ಪುಡಿಯಂತೆ ಅಥವಾ ನಾನು ಇಲ್ಲಿ ವಿವರಿಸಿದಂತೆ ತಯಾರಿಸಲಾಗುತ್ತದೆ. ದಪ್ಪ ಪೇಸ್ಟ್ ನಂತೆ ಮಾಡಲು 1 ಕಪ್ ಕಡ್ಲೆಹಿಟ್ಟನ್ನು 2 ಕಪ್ ನೀರಲ್ಲಿ ಕಲಸಿಟ್ಟು ಕೊಂಡು ಮಾಡಲಾಗುತ್ತದೆ. ಪುಡಿ ಪುಡಿಯಾಗಿ ಮಾಡಲು ಕಡ್ಲೆಹಿಟ್ಟನ್ನು ಹುರಿದು, ನಂತರ ನೀರು ಚಿಮುಕಿಸಿ ಮಾಡಲಾಗುತ್ತದೆ. ನೀವು ಚೆನ್ನಾಗಿ ಜೀರ್ಣವಾಗಲು ಸಣ್ಣದಾಗಿ ಕತ್ತರಿಸಿದ ಶುಂಠಿ, ಬೆಳ್ಳುಳ್ಳಿ ಅಥವಾ ಇಂಗು ಸಹ ಸೇರಿಸಬಹುದು.
ನಾನು ಬೆಳಗಾವಿ ಮೂಲದ ನನ್ನ ಪ್ರೀತಿಯ ಸ್ನೇಹಿತೆ ವೀಣಾರಿಂದ ಈ ಪಲ್ಯ ಕಲಿತೆ. ನೀವು ಮಾಡಿನೋಡಿ. ನಿಮಗೆ ಖಂಡಿತ ಇಷ್ಟವಾಗುವುದು.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 150 ಎಂಎಲ್)

  1. 2 ಕಪ್ ಕಡ್ಲೆ ಹಿಟ್ಟು
  2. 1 ದೊಡ್ಡ ಈರುಳ್ಳಿ
  3. 1-2 ಚಮಚ ಕೆಂಪು ಮೆಣಸಿನ ಪುಡಿ / 1 ಟೀಸ್ಪೂನ್ ಹಸಿರು ಮೆಣಸಿನಕಾಯಿ ಪೇಸ್ಟ್
  4. 5-6 ಕರಿಬೇವಿನ ಎಲೆ
  5. 1/2 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಜೀರಿಗೆ
  7. 1/4 ಟೀಸ್ಪೂನ್ ಅರಿಶಿನ ಪುಡಿ
  8. 3/4 ಕಪ್ ನೀರು ( +1/4 ಕಪ್ ಹಾಲು ಬಳಸದಿದ್ದರೆ)
  9. 1/4 ಕಪ್ ಹಾಲು (ಬೇಕಾದಲ್ಲಿ)
  10. 8-10 ಟೀಸ್ಪೂನ್ ಅಡುಗೆ ಎಣ್ಣೆ
  11. 1 ಟೀಸ್ಪೂನ್ ಸಕ್ಕರೆ (ಅಥವಾ ನಿಮ್ಮ ರುಚಿ ಪ್ರಕಾರ)
  12. 1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  13. 2 ಟೀಸ್ಪೂನ್ ಕೊತ್ತಂಬರಿ ಸೊಪ್ಪು

ಉತ್ತರ ಕರ್ನಾಟಕದ ಜುನ್ಕ ವಡಿ ಮಾಡುವ ವಿಧಾನ:

  1. ಈರುಳ್ಳಿ, ಕರಿಬೇವಿನ ಎಲೆ ಮತ್ತು ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಕೊಳ್ಳಿ. ಕಡ್ಲೆಹಿಟ್ಟನ್ನು ಸಾರಣಿಸಿ ಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಸಾಸಿವೆ ಮತ್ತು ಜೀರಿಗೆ ಹಾಕಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಕರಿಬೇವು ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ.
  3. ಈರುಳ್ಳಿ ಮೆತ್ತಗಾದ ಕೂಡಲೇ ಅರಶಿನ ಮತ್ತು ಅಚ್ಚಕಾರದ ಪುಡಿ ಸೇರಿಸಿ ಮಗುಚಿ. ಕೂಡಲೇ 3/4 ಕಪ್ ನೀರು ಮತ್ತು 1/4 ಕಪ್ ಹಾಲು ಹಾಕಿ. ಹಾಲು ಹಾಕುವುದಿಲ್ಲವಾದಲ್ಲಿ 1 ಕಪ್ ನೀರು ಹಾಕಿ.
  4. ಸಕ್ಕರೆ ಮತ್ತು ಉಪ್ಪು ಹಾಕಿ ಕುದಿಸಿ.
  5. ನೀರು ಕುದಿಯಲು ಪ್ರಾರಂಭವಾದ ಕೂಡಲೇ, 2 ಕಪ್ ಕಡ್ಲೆ ಹಿಟ್ಟು ಹಾಕಿ, ಚೆನ್ನಾಗಿ ಗಂಟಾಗದಂತೆ ಮಗುಚಿ. ಮಗುಚುವಾಗ ಉರಿ ಕಡಿಮೆಯಿರಲಿ.
  6. ಒಂದೆರಡು ನಿಮಿಷ ಮಗುಚಿದ ಮೇಲೆ. ೨ ಚಮಚ ಎಣ್ಣೆಯನ್ನು ಹಾಕಿ ಪುನಃ ಮಗುಚಿ. ಒಂದು ತಟ್ಟೆಗೆ ಹಾಕಿ, ಬರ್ಫಿಯಂತೆ ತುಂಡು ಮಾಡಿ. ಇಲ್ಲವೇ ಚಪಾತಿ ಅಥವಾ ಜೋಳದ ರೊಟ್ಟಿಯೊಂದಿಗೆ ಹಾಗೆ ಬಡಿಸಿ.

ಗುರುವಾರ, ಜನವರಿ 14, 2016

Karnataka style vegetable pulao recipe | ಕರ್ನಾಟಕ ಶೈಲಿಯ ವೆಜಿಟೆಬಲ್ ಪಲಾವ್


ಕರ್ನಾಟಕ ಶೈಲಿಯ ವೆಜಿಟೆಬಲ್ ಪಲಾವ್

ಕರ್ನಾಟಕ ಶೈಲಿಯ ಪುಲಾವ್ ಪಾಕವಿಧಾನವನ್ನು ಹಂತ ಹಂತವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಇದೊಂದು ತುಂಬಾ ರುಚಿಕರ ಮತ್ತು ಪೌಷ್ಟಿಕ ಅಡುಗೆಯಾಗಿದ್ದು ಕುಕ್ಕರ್ ಬಳಸಿ ಇದನ್ನು ತಯಾರಿಸಲಾಗುತ್ತದೆ. ಕರ್ನಾಟಕದಲ್ಲಿ ಸಾಧಾರಣವಾಗಿ ಈ ರೀತಿಯ ಪುಲಾವ್ ತಯಾರಿಸಲಾಗುತ್ತದೆ ಮತ್ತು ಅದನ್ನು "ಪಲಾವ್" ಎಂದು ಕರೆಯಲಾಗುತ್ತದೆ. ಇದೊಂದು ಎಲ್ಲರಿಗೂ ಇಷ್ಟವಾಗುವಂತಹ ರುಚಿಕರ ಅಡುಗೆಯಾಗಿದೆ.
ವೆಜಿಟೆಬಲ್ ಪಲಾವ್ ವಿಡಿಯೋ
ತಯಾರಿ ಸಮಯ: 20 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಕ್ಯಾರೆಟ್
  3. 1 ಸಣ್ಣ ಆಲೂಗಡ್ಡೆ
  4. 8-10 ಬೀನ್ಸ್
  5. 1 ನವಿಲ್ ಕೋಸು / ಸ್ವಲ್ಪ ಕೋಸು
  6. 1/2 ದೊಣ್ಣೆ ಮೆಣಸಿನಕಾಯಿ
  7. 1/4 ಕಪ್ ನೆನೆಸಿದ ಬಟಾಣಿ
  8. 1/2 ಕಪ್ ಕತ್ತರಿಸಿದ ಮೆಂತೆ ಸೊಪ್ಪು
  9. 2 ದೊಡ್ಡ ಈರುಳ್ಳಿ
  10. 2 ದೊಡ್ಡ ಟೊಮ್ಯಾಟೋ
  11. 1/2 ಟೀಸ್ಪೂನ್ ಜೀರಿಗೆ
  12. 2 ಚಕ್ರ ಮೊಗ್ಗು / ಪುಲಾವ್ ಎಲೆ
  13. 1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
  14. 8-10 ಟೀಸ್ಪೂನ್ ಅಡುಗೆ ಎಣ್ಣೆ / ತುಪ್ಪ
  15. 2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
  16. 2 ಟೀಸ್ಪೂನ್ ಉಪ್ಪು (ನಿಮ್ಮ ರುಚಿಗೆ ತಕ್ಕಷ್ಟು)

ಬೇಕಾಗುವ ಪದಾರ್ಥಗಳು (ಮಸಾಲೆ ಅರೆಯಲು):

  1. 1/2 ಕಪ್ ತೆಂಗಿನತುರಿ
  2. 2ಸೆಮೀ ಉದ್ದದ ಶುಂಠಿ
  3. 5-6 ಎಸಳು ಬೆಳ್ಳುಳ್ಳಿ
  4. 1 ಟೀಸ್ಪೂನ್ ಕೊತ್ತಂಬರಿ ಬೀಜ
  5. 1 ಟೀಸ್ಪೂನ್ ಸೋಂಪು / 1/2 ಟೀಸ್ಪೂನ್ ಜೀರಿಗೆ
  6. 1-2 ಹಸಿರುಮೆಣಸಿನಕಾಯಿ
  7. 1 ಬೆರಳುದ್ದ ಚಕ್ಕೆ
  8. 8-10 ಲವಂಗ
  9. 1 ಏಲಕ್ಕಿ
  10. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  11. 2 ಟೇಬಲ್ ಸ್ಪೂನ್ ಕತ್ತರಿಸಿದ ಪುದೀನಾ ಎಲೆ (ಬೇಕಾದಲ್ಲಿ)
  12. 1/2 ಕಪ್ ನೀರು ಅರೆಯಲು

ವೆಜಿಟೆಬಲ್ ಪುಲಾವ್ ಮಾಡುವ ವಿಧಾನ:

  1. ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು ಒಂದು ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
  2. ಎಲ್ಲ ತರಕಾರಿಗಳನ್ನು ತೊಳೆದು ಕತ್ತರಿಸಿಕೊಳ್ಳಿ. ಟೊಮ್ಯಾಟೋ, ಮೆಂತೆ ಸೊಪ್ಪು ಮತ್ತು ಈರುಳ್ಳಿಯನ್ನು ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
  3. ಈಗ ಒಂದು 3ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಅಥವಾ ತುಪ್ಪ ಹಾಕಿ. 1/2 ಟೀಸ್ಪೂನ್ ಜೀರಿಗೆ ಮತ್ತು ಚಕ್ರ ಮೊಗ್ಗು ಹಾಕಿ, ಹುರಿಯಿರಿ. ಜೀರಿಗೆ ಸಿಡಿದ ಕೂಡಲೇ ಕತ್ತರಿಸಿದ ಈರುಳ್ಳಿ ಹಾಕಿ.
  4. ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ. ಒಂದೆರಡು ನಿಮಿಷದ ನಂತರ ಮೆಂತೆ ಸೊಪ್ಪು ಹಾಕಿ ಹುರಿಯಿರಿ.
  5. ಈಗ ಕತ್ತರಿಸಿದ ತರಕಾರಿ ಹಾಕಿ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿಯಿರಿ. ಆಮೇಲೆ ಅರೆದ ಮಸಾಲೆ ಮತ್ತು ಅರಶಿನ ಪುಡಿ ಹಾಕಿ ಪುನಃ 5 ನಿಮಿಷಗಳ ಕಾಲ ಆಗಾಗ್ಯೆ ಮಗುಚುತ್ತಾ ಹುರಿಯಿರಿ.
  6. ಮಸಾಲೆ ಹುರಿಯುತ್ತಿರುವಾಗಲೇ 1 ಕಪ್ ಅಕ್ಕಿ ತೊಳೆದು ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2 ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
  7. ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
  8. ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.


ಬುಧವಾರ, ಜನವರಿ 13, 2016

Nellikai uppinakayi recipe in Kannada | ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ


ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ 

ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ ಪಾಕವಿಧಾನವನ್ನು ಹಂತ ಹಂತವಾಗಿ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಇದೊಂದು ದಿಡೀರ್, ಆರೋಗ್ಯಕರ ಮತ್ತು ಸುಲಭವಾಗಿ ಮಾಡಬಲ್ಲ ಉಪ್ಪಿನಕಾಯಿಯಾಗಿದೆ. ನೆಲ್ಲಿಕಾಯಿ ಹೇರಳವಾಗಿ ಸಿಗುತ್ತಿರುವ ಈ ಸಮಯದಲ್ಲೇ, ಈ ರುಚಿಕರ ಮತ್ತು ಸುಲಭ ಉಪ್ಪಿನಕಾಯಿಯನ್ನು ಹಾಕಿಬಿಡೋಣ ಎಂದುಕೊಂಡೆ. ಈ ಉಪ್ಪಿನಕಾಯಿಯನ್ನು ಫ್ರಿಡ್ಜ್ ನಲ್ಲಿಟ್ಟರೆ ಎರಡು ತಿಂಗಳು ಕೆಡದೆ ಉಳಿಯಬಲ್ಲದು. ಇಲ್ಲವಾದಲ್ಲಿ 15 ದಿನಗಳ ಒಳಗೆ ಉಪಯೋಗಿಸಿ.
ನಮಗೆಲ್ಲರಿಗೂ ತಿಳಿದಿರುವ ಹಾಗೆ ನೆಲ್ಲಿಕಾಯಿ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದೆ. ಇದು ಅನೇಕ ಕಾಯಿಲೆಗಳಿಗೆ ಪರಿಹಾರ ಒದಗಿಸುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅತ್ಯಂತ ಸಮೃದ್ಧವಾಗಿದೆ. ಕ್ಯಾಲ್ಸಿಯಮ್, ರಂಜಕ , ಕಬ್ಬಿಣ, ಕೆರೋಟಿನ್ ಹಾಗೂ ವಿಟಮಿನ್ ಬಿ ಕಾಂಪ್ಲೆಕ್ಸ್ ಹೀಗೆ ಅನೇಕ ಖನಿಜ ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿಯೂ ಇದೆ. ಶೀಘ್ರದಲ್ಲೇ ನಾವು ಮುಂಬರುವ ದಿನಗಳಲ್ಲಿ ನೆಲ್ಲಿಕಾಯಿಯ ಬಗ್ಗೆ ಸವಿಸ್ತಾರವಾದ ಲೇಖನ ಮತ್ತು ನೆಲ್ಲಿಕಾಯಿಯ ಹಲವಾರು ಅಡುಗೆಗಳನ್ನು ಪೋಸ್ಟ್ ಮಾಡಲಿದ್ದೇವೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ: 15 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 15 ನೆಲ್ಲಿಕಾಯಿ
  2. 15-20 ಒಣ ಮೆಣಸಿನಕಾಯಿ
  3. 3 ಟೀಸ್ಪೂನ್ ಸಾಸಿವೆ
  4. 1.5 ಟೀಸ್ಪೂನ್ ಜೀರಿಗೆ
  5. 1/4 ಟೀಸ್ಪೂನ್ ಮೆಂತೆ
  6. 1/2 ಕಪ್ ಉಪ್ಪು (ರುಚಿಗೆ ತಕ್ಕಷ್ಟು)

ದಿಢೀರ್ ನೆಲ್ಲಿಕಾಯಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಒಂದು ಪಾತ್ರೆ ತೆಗೆದುಕೊಂಡು ಅದರಲ್ಲಿ ನೆಲ್ಲಿಕಾಯಿ ಮತ್ತು ಉಪ್ಪು ಹಾಕಿ. ನೆಲ್ಲಿಕಾಯಿ ಮುಳುಗುವಷ್ಟು ನೀರು ಹಾಕಿ 5 ನಿಮಿಷಗಳ ಕಾಲ ಕುದಿಸಿ.
  2. ತಣ್ಣಗಾದ ಮೇಲೆ ಉಪ್ಪು ನೀರನ್ನು ಬಗ್ಗಿಸಿ ಪಕ್ಕದಲ್ಲಿಡಿ. ನೆಲ್ಲಿಕಾಯಿಯ ಬೀಜ ತೆಗೆದು, ತುಂಡು ಮಾಡಿಕೊಳ್ಳಿ. ಬೆಂದಮೇಲೆ ಮೆತ್ತಗಾಗುವುದರಿಂದ ಸುಲಭವಾಗಿ ಬೀಜವನ್ನು ಬೇರ್ಪಡಿಸಬಹುದು. ನಂತರ ಒಂದು ಜರಡಿಯ ಸಹಾಯದಿಂದ ಸೋಸುತ್ತ ಬಗ್ಗಿಸಿಟ್ಟ ಉಪ್ಪು ನೀರನ್ನು ಹಾಕಿ. ನಿಮಗೆ ದಪ್ಪ ರಸದ ಉಪ್ಪಿನಕಾಯಿ ಬೇಕಾದಲ್ಲಿ ಸ್ವಲ್ಪ ಉಪ್ಪು ನೀರು ಸೇರಿಸಿ ಅನಂತರ ಬೇಕಾದಷ್ಟು ಉಪ್ಪು ಹಾಕಬಹುದು. ನೀವು ಉಪಯೋಗಿಸುವ ಯಾವುದೇ ಪಾತ್ರೆಯಲ್ಲಿ ನೀರಿನ ಪಸೆ ಇಲ್ಲದಂತೆ ನೋಡಿಕೊಳ್ಳಿ.
  3. ಈಗ ಒಣಮೆಣಸಿನಕಾಯಿ, ಸಾಸಿವೆ, ಜೀರಿಗೆ ಮತ್ತು ಮೆಂತೆಯನ್ನು ಎಣ್ಣೆ ಹಾಕದೇ ಹುರಿದು ಕೊಳ್ಳಿ. ತಣ್ಣಗಾದಮೇಲೆ ನಯವಾದ ಪುಡಿ ಮಾಡಿ ಕೊಳ್ಳಿ.
  4. ಆ ಪುಡಿಯನ್ನು ತುಂಡುಮಡಿದ ನೆಲ್ಲಿಕಾಯಿ ಮತ್ತು ಉಪ್ಪು ನೀರಿರುವ ಪಾತ್ರೆಗೆ ಹಾಕಿ, ಚೆನ್ನಾಗಿ ಮಗುಚಿ. ನೆಲ್ಲಿಕಾಯಿ ಉಪ್ಪಿನಕಾಯಿ ಸವಿಯಲು ಸಿದ್ಧ.

ಮಂಗಳವಾರ, ಜನವರಿ 12, 2016

Karnataka style pongal recipe in kannada | ಕರ್ನಾಟಕ ಶೈಲಿಯ ಖಾರ ಮತ್ತು ಸಿಹಿ ಪೊಂಗಲ್


ಕರ್ನಾಟಕ ಶೈಲಿಯ ಖಾರ ಮತ್ತು ಸಿಹಿ ಪೊಂಗಲ್

ಕರ್ನಾಟಕ ಶೈಲಿಯ ಖಾರಾ ಮತ್ತು ಸಿಹಿ ಪೊಂಗಲ್ ಮಾಡುವ ವಿಧಾನವನ್ನು ಹಂತ ಹಂತವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಕರ್ನಾಟಕದಲ್ಲಿ ಮಾಡುವ ಖಾರ ಪೊಂಗಲ್ ಸಾಮಾನ್ಯ ಪೊಂಗಲ್ ಗಿಂತ ಸ್ವಲ್ಪ ಭಿನ್ನವಾಗಿರುತ್ತದೆ. ಇದು ಕರ್ನಾಟಕದಲ್ಲಿ ಪ್ರಸಿದ್ಧವಾದ ಬೆಳಗ್ಗಿನ ತಿಂಡಿಯಾಗಿದೆ. ಕರ್ನಾಟಕ ಶೈಲಿಯ ಖಾರಾ ಪೊಂಗಲ್ ನ್ನು ಮಸಾಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ ಆದ್ದರಿಂದ ಇದಕ್ಕೆ ಚಟ್ನಿಯ ಅಗತ್ಯವಿರುವುದಿಲ್ಲ, ಹಾಗೆ ತಿನ್ನಬಹುದು. ಮತ್ತು ಕರ್ನಾಟಕ ಶೈಲಿಯ ಖಾರಾ ಪೊಂಗಲ್ ನಲ್ಲಿ, ಅಕ್ಕಿ ಮತ್ತು ಹೆಸರುಬೇಳೆಯನ್ನು ಸಮಾನ ಪ್ರಮಾಣದಲ್ಲಿ ಹಾಕಲಾಗುತ್ತದೆ ಆದರೆ ಸಾಮಾನ್ಯ ಪೊಂಗಲ್ನಲ್ಲಿ ಹೆಸರುಬೇಳೆ ಬಹಳ ಕಡಿಮೆ ಬಳಸಲಾಗುತ್ತದೆ.
ಕರ್ನಾಟಕದ ಸಿಹಿ ಪೊಂಗಲ್ ಪಾಕವಿಧಾನ ಸಾಮಾನ್ಯವಾಗಿ ಮಾಡುವ ಸಿಹಿ ಪೊಂಗಲ್ ನ್ನು ಹೋಲುತ್ತದೆ. ಆದರೆ ಸಾಮಾನ್ಯವಾಗಿ ಮಾಡುವ ಸಿಹಿ ಪೊಂಗಲ್ ನಲ್ಲಿ ತೆಂಗಿನ ತುರಿ ಬಳಸುವುದಿಲ್ಲ. ಈ ಸಿಹಿ ಪೊಂಗಲ್ ಗೆ ನಿಮಗೆ ಇಷ್ಟವಿದ್ದಲ್ಲಿ ಸ್ವಲ್ಪ ಹಾಲನ್ನು ಸೇರಿಸಬಹುದು ಆದರೆ ನಾನು ಸೇರಿಸುವುದಿಲ್ಲ. ಕರ್ನಾಟಕದ ಕೆಲವು ಸ್ಥಳಗಳಲ್ಲಿ ಈ ಖಾರಾ ಮತ್ತು ಸಿಹಿ ಪೊಂಗಲ್ ನ್ನು "ಹುಗ್ಗಿ" ಅಥವಾ "ಹುಗ್ಗಿ ಅನ್ನ" ಎಂದು ಕರೆಯಲಾಗುತ್ತದೆ. ಇಲ್ಲಿ ನಾನು ಸಿಹಿ ಮತ್ತು ಖಾರಾ ಪೊಂಗಲ್ ಎರಡರ ಪಾಕವಿಧಾನಗಳನ್ನು ವಿವರಿಸಿದ್ದೇನೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 45 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 3/4 ಕಪ್ ಊಟದ ಅಕ್ಕಿ (1/2 ಕಪ್ ಖಾರ ಪೊಂಗಲ್ ಗೆ + 1/4 ಕಪ್ ಸಿಹಿ ಪೊಂಗಲ್ ಗೆ)
  2. 3/4 ಕಪ್ ಹೆಸರುಬೇಳೆ (1/2 ಕಪ್ ಖಾರ ಪೊಂಗಲ್ ಗೆ + 1/4 ಕಪ್ ಸಿಹಿ ಪೊಂಗಲ್ ಗೆ)

ಖಾರ ಪೊಂಗಲ್ ಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 ಟೇಬಲ್ ಸ್ಪೂನ್ ತುಪ್ಪ
  2. 1/2 ಟೀ ಸ್ಪೂನ್ ಜೀರಿಗೆ
  3. 1/4 ಟೀ ಸ್ಪೂನ್ ಅರಶಿನ ಪುಡಿ
  4. 1/2 ಟೀ ಸ್ಪೂನ್ ಜಜ್ಜಿದ ಕಾಳುಮೆಣಸು
  5. 8 - 10 ಗೋಡಂಬಿ
  6. 1-2 ಹಸಿರುಮೆಣಸಿನಕಾಯಿ
  7. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
  8. 8 - 10 ಕರಿಬೇವಿನ ಎಲೆ
  9. 1/4 ಕಪ್ ತೆಂಗಿನತುರಿ
  10. ಉಪ್ಪು ರುಚಿಗೆ ತಕ್ಕಷ್ಟು

ಸಿಹಿ ಪೊಂಗಲ್ ಗೆ ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 4 ಟೇಬಲ್ ಸ್ಪೂನ್ ತುಪ್ಪ
  2. 1/2 ಕಪ್ ಬೆಲ್ಲ
  3. 1/4 ಕಪ್ ತೆಂಗಿನತುರಿ
  4. 8 - 10 ಗೋಡಂಬಿ
  5. 8 - 10 ಒಣ ದ್ರಾಕ್ಷಿ
  6. ಒಂದು ಚಿಟಿಕೆ ಉಪ್ಪು

ಖಾರ ಪೊಂಗಲ್ ಮಾಡುವ ವಿಧಾನ:

  1. ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
  2. ಒಂದು ಕುಕ್ಕರ್‌ನಲ್ಲಿ ಹುರಿದ ಬೇಳೆ ಮತ್ತು ಅಕ್ಕಿಯನ್ನು ಹಾಕಿ ಎರಡು ಬಾರಿ ತೊಳೆಯಿರಿ.
  3. ನಂತರ 4 ಕಪ್ ನೀರು ಹಾಕಿ, 2 ವಿಷಲ್ ಮಾಡಿ ಬೇಯಿಸಿಕೊಳ್ಳಿ. ಗಮನಿಸಿ, ಪೊಂಗಲ್ ಗೆ ಬೇಳೆ ಮತ್ತು ಅಕ್ಕಿ ಸ್ವಲ್ಪ ಮೆತ್ತಗೆ ಬೆಂದರೆ ಚೆನ್ನ.
  4. ಈಗ ಶುಂಠಿಯನ್ನು ಕತ್ತರಿಸಿ, ಕಾಳುಮೆಣಸನ್ನು ಜಜ್ಜಿ, ಗೋಡಂಬಿಯನ್ನು ತುಂಡು ಮಾಡಿ, ತೆಂಗಿನಕಾಯಿ ತುರಿದಿಟ್ಟುಕೊಳ್ಳಿ ಮತ್ತು ಬೇರೆ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ನಂತರ ಒಂದು ದೊಡ್ಡ ಬಾಣಲೆ ಒಲೆಯ ಮೇಲಿಟ್ಟು, ತುಪ್ಪ ಮತ್ತು ಜೀರಿಗೆ ಹಾಕಿ.
  5. ಜೀರಿಗೆ ಸಿಡಿದ ಕೂಡಲೇ ಗೋಡಂಬಿ, ಕಾಳುಮೆಣಸು ಮತ್ತು ಅರಶಿನ ಪುಡಿಯನ್ನು ಹಾಕಿ. ಸ್ವಲ್ಪ ಹೊತ್ತು ಹುರಿದ ನಂತರ ಶುಂಠಿ, ಹಸಿರುಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ ಹುರಿಯಿರಿ.
  6. ತೆಂಗಿನ ತುರಿಯನ್ನು ಸೇರಿಸಿ ಮಗುಚಿ. ಸ್ಟೋವ್ ಆಫ್ ಮಾಡಿ.
  7. ಈಗ 2/3 ಭಾಗದಷ್ಟು ಬೇಯಿಸಿದ ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ (ಉಳಿದ 1/3 ಭಾಗ ಸಿಹಿ ಪೊಂಗಲ್ ಗೆ ಉಳಿಸಿಕೊಳ್ಳಿ). ನಂತರ ಸುಮಾರು 2 ಕಪ್ ನಷ್ಟು ನೀರು ಹಾಕಿ, ಮಗುಚಿ.
  8. ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುದಿಸಿ. ಕರ್ನಾಟಕ ಶೈಲಿಯ ಪೊಂಗಲ್ ಬಿಸಿಬೇಳೆ ಬಾತ್ ನಷ್ಟು ತೆಳ್ಳಗಿರಬೇಕು. ಬಿಸಿ ಬಿಸಿ ಖಾರ ಪೊಂಗಲ್ ನ್ನು ಸಿಹಿ ಪೊಂಗಲ್ ನೊಂದಿಗೆ ಬಡಿಸಿ.

ಸಿಹಿ ಪೊಂಗಲ್ ಮಾಡುವ ವಿಧಾನ:

  1. ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಒಂದು ಕಪ್ ನೀರು ಮತ್ತು ಒಂದು ಕಪ್ ಬೆಲ್ಲ ಹಾಕಿ ಕುದಿಸಿ. ಬೆಲ್ಲ ಕರಗಿದ ಕೂಡಲೇ ಸ್ಟೋವ್ ಆಫ್ ಮಾಡಿ.
  2. ಇನ್ನೊಂದು ಸಣ್ಣ ಬಾಣಲೆಯಲ್ಲಿ ಖಾರ ಪೊಂಗಲ್ ಮಾಡಿ ಉಳಿಸಿದ, ಬೇಯಿಸಿದ ಅಕ್ಕಿ-ಬೇಳೆ ಮಿಶ್ರಣವನ್ನು ಹಾಕಿ. ಬೆಲ್ಲದ ನೀರನ್ನು ಜರಡಿಯ ಮೂಲಕ ಸೋಸಿ ಹಾಕಿ.
  3. ಒಂದು ಚಿಟಿಕೆ ಉಪ್ಪು, ತೆಂಗಿನ ತುರಿ ಹಾಕಿ ಚೆನ್ನಾಗಿ ಮಗುಚುತ್ತಾ ಕುದಿಸಿ. ಕುದಿಯಲು ಪ್ರಾರಂಭವಾದ ಕೂಡಲೇ ಉರಿಯನ್ನು ಕಡಿಮೆ ಮಾಡಿ.
  4. ಚಿಕ್ಕ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಹುರಿಯಿರಿ. ಕುದಿಯುತ್ತಿರುವ ಸಿಹಿ ಪೊಂಗಲ್ ಗೆ ಹಾಕಿ ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಖಾರ ಪೊಂಗಲ್ ನೊಂದಿಗೆ ಬಡಿಸಿ.

ಗುರುವಾರ, ಜನವರಿ 7, 2016

Raagi rotti recipe in Kannada | ಕರ್ನಾಟಕ ಶೈಲಿಯ ರಾಗಿರೊಟ್ಟಿ


ಕರ್ನಾಟಕ ಶೈಲಿಯ ರಾಗಿರೊಟ್ಟಿ

ರಾಗಿ ರೊಟ್ಟಿ ಕರ್ನಾಟಕದ ಅತ್ಯಂತ ಟೇಸ್ಟಿ ಮತ್ತು ಅತ್ಯಂತ ಪ್ರಸಿದ್ಧವಾದ ಉಪಹಾರವಾಗಿದೆ. ರಾಗಿ ಒಂದು ಮ್ಯಾಜಿಕ್ ಧಾನ್ಯವಾಗಿದ್ದು, ಅನೇಕ ಪೌಷ್ಟಿಕಾಂಶಗಳಿಗೆ ಮತ್ತು ಆರೋಗ್ಯಕರ ಅಂಶಗಳಿಗೆ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯಲ್ಲಿ ರಾಗಿ ರೊಟ್ಟಿ ಮಾಡುತ್ತಾರಾದರೂ, ಈ ರೀತಿಯ ರಾಗಿ ರೊಟ್ಟಿ ಬಹಳ ರುಚಿಕರವಾಗಿರುತ್ತದೆ. ನಮ್ಮಲ್ಲಿ ಅನೇಕರು ರಾಗಿ ಒಂದು ರುಚಿ ಇಲ್ಲದ ಧಾನ್ಯ ಎಂದು ಹೀಗೆಳೆಯುತ್ತಾರೆ. ಆದರೆ ಈ ರಾಗಿ ರೊಟ್ಟಿಯನ್ನು ಒಮ್ಮೆ ಪ್ರಯತ್ನಿಸಿ ರುಚಿ ನೋಡಿದರೆ ಅವರಿಗೆ ರಾಗಿ ಎಷ್ಟು ರುಚಿಕರ ಎಂದೆನ್ನಿಸುತ್ತದೆ. ಈ ರಾಗಿ ರೊಟ್ಟಿಯನ್ನು ರಾಗಿಹಿಟ್ಟು, ಈರುಳ್ಳಿ, ಹಸಿರು ಹಸಿರುಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ನೀವು ಕರಿಬೇವಿನ ಎಲೆಗಳ ಬದಲಾಗಿ ಕೊತ್ತುಂಬರಿ ಸೊಪ್ಪನ್ನು ಸಹ ಬಳಸಬಹುದು. 
ರಾಗಿರೊಟ್ಟಿ


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 3 ಕಪ್ ರಾಗಿಹಿಟ್ಟು
  2. 3 ಕಪ್ ನೀರು (ರಾಗಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 2-4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  4. 3 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 1/4 ಕಪ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆಗಳು
  6. ಉಪ್ಪು ರುಚಿಗೆ ತಕ್ಕಷ್ಟು
  7. 1/4 ಕಪ್ ಅಡುಗೆ ಎಣ್ಣೆ
  8. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಕರ್ನಾಟಕ ಶೈಲಿಯ ರಾಗಿರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ರಾಗಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
  2. ಈಗ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  3. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
  4. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ರಾಗಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
  5. ಎಚ್ಚರಿಕೆಯಿಂದ ಪ್ಲಾಸ್ಟಿಕ್ ಹಾಳೆಯಲ್ಲಿರುವ ರಾಗಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ (ನಾನ್-ಸ್ಟಿಕ್ ಆದರೆ ಉತ್ತಮ) ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
  6. ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.

Akki rotti recipe in Kannada | ಮಲೆನಾಡು ಶೈಲಿಯ ಅಕ್ಕಿರೊಟ್ಟಿ


ಮಲೆನಾಡು ಶೈಲಿಯ ಎಣ್ಣೆ ಅಕ್ಕಿರೊಟ್ಟಿ

ಅಕ್ಕಿ ರೊಟ್ಟಿ ಕರ್ನಾಟಕದ ಅತ್ಯಂತ ಟೇಸ್ಟಿ ಮತ್ತು ಅತ್ಯಂತ ಪ್ರಸಿದ್ಧವಾದ ಉಪಹಾರವಾಗಿದೆ. ಅಕ್ಕಿ ರೊಟ್ಟಿ ಕರ್ನಾಟಕ ರಾಜ್ಯದಾದ್ಯಂತ ಆಚರಣೆಯಲ್ಲಿದೆ, ಆದರೆ ಪದಾರ್ಥಗಳು ಮತ್ತು ಪಾಕವಿಧಾನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬದಲಾಗುತ್ತದೆ. ಈ ಕೆಳಗೆ ವಿವರಿಸಿರುವ ಅಕ್ಕಿ ರೊಟ್ಟಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಆಚರಣೆಯಲ್ಲಿದೆ. ಈ ಅಕ್ಕಿ ರೊಟ್ಟಿಯನ್ನು ಅಕ್ಕಿಹಿಟ್ಟು, ಈರುಳ್ಳಿ, ಹಸಿರು ಹಸಿರುಮೆಣಸಿನಕಾಯಿ ಹಾಗೂ ಕರಿಬೇವಿನ ಎಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ನೀವು ಕರಿಬೇವಿನ ಎಲೆಗಳ ಬದಲಾಗಿ ಕೊತ್ತುಂಬರಿ ಸೊಪ್ಪನ್ನು ಸಹ ಬಳಸಬಹುದು. 
ಅಕ್ಕಿರೊಟ್ಟಿ ವಿಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 3 ಜನರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಅಕ್ಕಿಹಿಟ್ಟು
  2. 2.5 ಕಪ್ ನೀರು (ಅಕ್ಕಿಹಿಟ್ಟಿನ ಗುಣಮಟ್ಟವನ್ನು ಅವಲಂಬಿಸಿ ಸ್ವಲ್ಪ ಹೆಚ್ಚು ಕಡಿಮೆ)
  3. 2 - 4 ಸಣ್ಣಗೆ ಹೆಚ್ಚಿದ ಹಸಿರುಮೆಣಸಿನ ಕಾಯಿ
  4. 4 ಸಣ್ಣಗೆ ಹೆಚ್ಚಿದ ಈರುಳ್ಳಿ
  5. 2 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕರಿಬೇವಿನ ಎಲೆ
  6. ಉಪ್ಪು ರುಚಿಗೆ ತಕ್ಕಷ್ಟು
  7. ರೊಟ್ಟಿ ಮಾಡಲು ಅಡುಗೆ ಎಣ್ಣೆ
  8. 15x15cm ಗಾತ್ರದ ದಪ್ಪ ಪ್ಲಾಸ್ಟಿಕ್ ಹಾಳೆ / ಬಾಳೆ ಎಲೆ

ಮಲೆನಾಡು ಶೈಲಿಯ ಅಕ್ಕಿರೊಟ್ಟಿ ಮಾಡುವ ವಿಧಾನ:

  1. ಒಂದು ಬಾಣಲೆ ಅಥವಾ ಪಾತ್ರೆಯಲ್ಲಿ ನೀರು ಮತ್ತು ಉಪ್ಪು ಹಾಕಿ ಕುದಿಸಿ. ನೀರು ಕುಡಿಯಲು ಪ್ರಾರಂಭಿಸಿದ ಕೂಡಲೇ ಅಕ್ಕಿ ಹಿಟ್ಟು ಹಾಕಿ ಸ್ಟೋವ್ ಆಫ್ ಮಾಡಿ.
  2. ಈಗ ಕತ್ತರಿಸಿದ ಈರುಳ್ಳಿ , ಕರಿಬೇವಿನ ಸೊಪ್ಪು, ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಬೇಕಾದಲ್ಲಿ ನೀರು ಅಥವಾ ಹಿಟ್ಟು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.
  3. ಒಂದು ಸಣ್ಣ ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದು ಕೊಳ್ಳಿ. ಪ್ಲಾಸ್ಟಿಕ್ ಹಾಳೆ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆಯನ್ನು ಹಚ್ಚಿ ಒಂದು ಟೆನ್ನಿಸ್ ಚಂಡಿನ ಗಾತ್ರದ ಹಿಟ್ಟು ಇರಿಸಿ.
  4. ಈಗ ನಿಮ್ಮ ಬೆರಳುಗಳಿಗೆ ಎಣ್ಣೆ ಹಚ್ಚಿಕೊಂಡು, ಬೆರಳುಗಳಿಂದ ಮೆಲ್ಲನೆ ಒತ್ತುತ್ತಾ ವೃತ್ತಾಕಾರದ ಅಕ್ಕಿ ರೊಟ್ಟಿಯನ್ನು ತಟ್ಟಿ. ಆಗಾಗ್ಯೆ ಕೈ ಬೆರಳುಗಳಿಂದ ಎಣ್ಣೆ ಮುಟ್ಟುತ್ತಾ ರೊಟ್ಟಿ ತಟ್ಟುವುದರಿಂದ ಕೈಗೆ ಅಂಟುವುದಿಲ್ಲ.
  5. ಪ್ಲಾಸ್ಟಿಕ್ ಹಾಳೆಯಲ್ಲಿರುವ ಅಕ್ಕಿ ರೊಟ್ಟಿಯನ್ನು ಕೈಯಲ್ಲಿ ತೆಗೆದುಕೊಂಡು ಬಿಸಿ ತವಾ (ನಾನ್-ಸ್ಟಿಕ್ ಆದರೆ ಉತ್ತಮ) ಮೇಲೆ ಹಾಕಿ. ಈ ಹಂತದಲ್ಲಿ ನೀವು ಎಚ್ಚರಿಕೆಯಿಂದಿರಬೇಕು ಮತ್ತು ವೇಗವಾಗಿರಬೇಕು. ಇಲ್ಲವಾದಲ್ಲಿ ರೊಟ್ಟಿ ಹರಿದುಹೋಗಬಹುದು.
  6. ಮೇಲಿನಿಂದ ಎಣ್ಣೆ ಹಾಕಿ, ಸುಮಾರು ಒಂದು ನಿಮಿಷದ ನಂತರ ರೊಟ್ಟಿಯನ್ನು ತಿರುವಿ ಹಾಕಿ. ಇನ್ನೊಂದು ಬದಿಯೂ ಕಾಯಿಸಿ. ಬೆಣ್ಣೆ ಅಥವಾ ಮೊಸರು ಅಥವಾ ಚಟ್ನಿಯೊಂದಿಗೆ ಬಡಿಸಿ.

ಬುಧವಾರ, ಜನವರಿ 6, 2016

Coriander leaves chutney recipe | ಕೊತ್ತಂಬರಿ ಸೊಪ್ಪಿನ ಒಣ ಚಟ್ನಿ | ಕೊತ್ತಂಬರಿ ಸೊಪ್ಪಿನ ತೊಕ್ಕು


ಕೊತ್ತಂಬರಿ ಸೊಪ್ಪಿನ ಒಣ ಚಟ್ನಿ

ನೀವು ಮಾರುಕಟ್ಟೆಯಲ್ಲಿ ತಾಜಾ ಕೊತ್ತುಂಬರಿ ಸೊಪ್ಪಿನ ದೊಡ್ಡ ಕಟ್ಟು ಬಹಳ ಕಡಿಮೆ ಬೆಲೆಯಲ್ಲಿ ದೊರಕಿತೆಂದು ಖರೀದಿ ಮಾಡಿ ಬಿಟ್ಟಿದ್ದೀರಾ? ನಂತರ ಆ ತಾಜಾ ನಾಟಿ ಕೊತ್ತಂಬರಿ ಸೊಪ್ಪನ್ನು ಏನು ಮಾಡುವುದು ಹೇಗೆ ಉಪಯೋಗಿಸುವುದು ಎಂದು ಆಲೋಚಿಸುತ್ತಿದ್ದೀರಾ? ಚಿಂತಿಸಬೇಡಿ, ಇಲ್ಲೊಂದು ಕೊತ್ತುಂಬರಿ ಸೊಪ್ಪನ್ನು ಬಳಸಿ ಮಾಡಬಹುದಾದ ಸರಳ ಮತ್ತು ರುಚಿಕರ ಚಟ್ನಿ ವಿಧಾನವನ್ನು ವಿವರಿಸಲಾಗಿದೆ. ಈ ಕೊತ್ತಂಬರಿ ಚಟ್ನಿ ಇತರ ಚಟ್ನಿ ಗಳಿಗಿಂತ ಭಿನ್ನವಾಗಿದ್ದು ಇದನ್ನು ನೀವು ತೊಕ್ಕು ಅಥವಾ ಉಪ್ಪಿನಕಾಯಿ ರೀತಿಯಲ್ಲಿ ಬಳಸ ಬೇಕಾಗುತ್ತದೆ. ಈ ಚಟ್ನಿಯನ್ನು ತೆಂಗಿನಕಾಯಿ ಮತ್ತು ನೀರು ಸೇರಿಸದೆ ತಯಾರಿಸಲಾಗುತ್ತದೆ. ಈ ಚಟ್ನಿಗೆ ಒಗ್ಗರಣೆಯ ಅಗತ್ಯವಿರುವುದಿಲ್ಲ.
ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಕೊತ್ತುಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಹುಣಸೆ ಹಣ್ಣು ಮತ್ತು ಉಪ್ಪು ಬಳಸಿ ತಯಾರಿಸಲಾಗುತ್ತದೆ. ಈ ಚಟ್ನಿ ಸುಲಭವಾಗಿ ಹಾಳಾಗುವುದಿಲ್ಲ ಹಾಗಾಗಿ ಫ್ರಿಡ್ಜ್ ನಲ್ಲಿ ಇಟ್ಟಲ್ಲಿ ನೀವು ಇದನ್ನು ಕೆಲವು ವಾರಗಳ ಕಾಲ ಉಪಯೋಗಿಸಬಹುದು. ಈ ಬಹಳ ಸುಲಭವಾದ ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಕೊತ್ತಂಬರಿ ಸೊಪ್ಪಿನ ತೊಕ್ಕಿನ ಪಾಕವಿಧಾನವನ್ನು ಹಂತ ಹಂತವಾದ ಚಿತ್ರ ವಿವರಣೆಯೊಂದಿಗೆ ಈ ಕೆಳಗೆ ವಿವರಿಸಲಾಗಿದೆ.

ತಯಾರಿ ಸಮಯ: 15 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 10 ಜನರಿಗೆ

ಬೇಕಾಗುವ ಪದಾರ್ಥಗಳು:

  1. 1 ದೊಡ್ಡ ಕಟ್ಟು ಕೊತ್ತಂಬರಿ ಸೊಪ್ಪು
  2. 6-10 ಹಸಿರು ಮೆಣಸಿನಕಾಯಿ
  3. 1 ಸಣ್ಣ ನಿಂಬೆ ಗಾತ್ರದ ಹುಣಿಸೆ ಹಣ್ಣು
  4. 2 ಚಮಚ ಅಡುಗೆ ಎಣ್ಣೆ
  5. ಉಪ್ಪು ರುಚಿಗೆ ತಕ್ಕಷ್ಟು.

ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವ ವಿಧಾನ:

  1. ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ತೊಳೆದು, ನೀರಾರಸಿ ಕತ್ತರಿಸಿಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಹಸಿರುಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ನಂತರ ತೆಗೆದು ಪಕ್ಕಕ್ಕಿಡಿ.
  3. ಈಗ ಅದೇ ಬಾಣಲೆಗೆಕತ್ತರಿಸಿದ ಸೊಪ್ಪನ್ನು ಹಾಕಿ, ಸಣ್ಣ ಉರಿಯಲ್ಲಿ, ಸೊಪ್ಪು ಬಾಡುವವರೆಗೆ ಹುರಿದುಕೊಳ್ಳಿ.
  4. ಹುರಿದ ಸೊಪ್ಪು ತಣ್ಣಗಾಗುವವರೆಗೆ ಕಾಯಿರಿ. ನಂತರ ಹುರಿದ ಸೊಪ್ಪು, ಹಸಿರುಮೆಣಸಿನಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಅರೆಡುಕೊಳ್ಳಿ. ಗಮನಿಸಿ ನೀರು ಸೇರಿಸದೆ ಅರೆಯಬೇಕು. ಈಗ ಈ ಚಟ್ನಿಯನ್ನು, ಅನ್ನ, ರೊಟ್ಟಿ, ಪರೊಟದೊಂದಿಗೆ ಉಪ್ಪಿನಕಾಯಿ ಅಥವಾ ತೊಕ್ಕಿನಂತೆ ಬಡಿಸಿ.

ಸೋಮವಾರ, ಜನವರಿ 4, 2016

Carrot halwa recipe in Kannada | ಕ್ಯಾರೆಟ್ ಹಲ್ವಾ ಮಾಡುವ ವಿಧಾನ


ಕ್ಯಾರೆಟ್ ಹಲ್ವಾ ಮಾಡುವ ವಿಧಾನ 

ಕ್ಯಾರೆಟ್ ಹಲ್ವಾ ಭಾರತದ ಜನಪ್ರಿಯ ಸಿಹಿ ತಿನಿಸಾಗಿದ್ದು ಬಹಳ ಸರಳ ಪಾಕವಿಧಾನವನ್ನು ಹೊಂದಿದೆ. ಅದರಲ್ಲೂ ಈ ಕೆಳಗೆ ವಿವರಿಸಲಾದ ಕ್ಯಾರಟ್ ಹಲ್ವಾ ಪಾಕವಿಧಾನ ಅತ್ಯಂತ ಸರಳವಾಗಿದ್ದು ಪ್ರೆಶರ್ಕುಕ್ಕರ್ ಬಳಸಿಕೊಂಡು ಮಾಡಲಾಗುತ್ತದೆ. ಈ ಕ್ಯಾರಟ್ ಹಲ್ವಾ ಪಾಕವಿಧಾನಕ್ಕೆ ಬಹಳ ಕಡಿಮೆ ಹಾಲು ಮತ್ತು ಕಡಿಮೆ ಸಮಯ ಸಾಕಾಗುತ್ತದೆ ಹಾಗೂ ಬಹಳ ರುಚಿಕರವಾಗಿರುತ್ತದೆ. ಹೊಸದಾಗಿ ಅಡುಗೆ ಮಾಡುವವರು ಸಹ, ಹೆದರದೆ ಆತ್ಮವಿಶ್ವಾಸದಿಂದ ಮಾಡಬಹುದಾದ ಹಲ್ವಾ ಇದಾಗಿದೆ.
ಕ್ಯಾರೆಟ್ ನಲ್ಲಿ ಅನೇಕ ಆರೋಗ್ಯಕಾರಿ ಅಂಶಗಳಿದ್ದು, ಮಕ್ಕಳಿಗೂ ಮತ್ತು ದೊಡ್ಡವರಿಗೂ ಬಹಳ ಒಳ್ಳೆಯದು. ನಮ್ಮ ಹಿಂದಿನ ಪೋಸ್ಟ್ ಕ್ಯಾರೆಟ್ ಮಿಲ್ಕ್‌ಶೇಕ್ ನಲ್ಲಿ ಕ್ಯಾರೆಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ದಯವಿಟ್ಟು ಓದಿ.
ಕ್ಯಾರೆಟ್ ಹಲ್ವಾ ವೀಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 4 ಕಪ್ ಕ್ಯಾರೆಟ್ ತುರಿ ಅಥವಾ 4 ಮಧ್ಯಮ ಗಾತ್ರದ ಕ್ಯಾರೆಟ್
  2. 2 ಕಪ್ ಹಾಲು
  3. 3/4 - 1 ಕಪ್ ಸಕ್ಕರೆ
  4. 4 ಟೇಬಲ್ ಸ್ಪೂನ್ ತುಪ್ಪ
  5. 1 ಟೇಬಲ್ ಸ್ಪೂನ್ ಗೋಡಂಬಿ
  6. 1 ಟೇಬಲ್ ಸ್ಪೂನ್ ಒಣ ದ್ರಾಕ್ಷಿ
  7. 1/4 ಟೀಸ್ಪೂನ್ ಏಲಕ್ಕಿ ಪುಡಿ

ಕ್ಯಾರೆಟ್ ಹಲ್ವಾ ಮಾಡುವ ವಿಧಾನ:

  1. ಕ್ಯಾರೆಟ್ ನ್ನು ತೊಳೆದು ತುರಿದುಕೊಳ್ಳಿ.
  2. ಕ್ಯಾರೆಟ್ ತುರಿ ಮತ್ತು ಹಾಲನ್ನು ಕುಕ್ಕರಿಗೆ ಹಾಕಿ.
  3. ಮುಚ್ಚಳ ಮುಚ್ಚಿ ಒಂದು ಅಥವಾ ಎರಡು ವಿಷಲ್ ಬರಿಸಿ. ಹೀಗೆ ಮಾಡುವುದರಿಂದ ಕ್ಯಾರೆಟ್ ಹಲ್ವಾ ಮಾಡಲು ಸುಲಭ ಮತ್ತು ಬಹಳ ಕಡಿಮೆ ಸಮಯದಲ್ಲಿ ಆಗುತ್ತದೆ.
  4. ಬೇಯಿಸಿದ ಕ್ಯಾರೆಟ್ ನ್ನು ದಪ್ಪ ತಳವಿರುವ ಪಾತ್ರೆಗೆ ಹಾಕಿ.
  5. ದೊಡ್ಡ ಉರಿಯಲ್ಲಿ ಕುದಿಸುತ್ತ ಚೆನ್ನಾಗಿ ಮಗುಚಿ.
  6. ಅರ್ಧದಷ್ಟು ಹಾಲು ಕಡಿಮೆ ಆದ ಕೂಡಲೇ, ಉರಿ ತಗ್ಗಿಸಿ, ಸಕ್ಕರೆ ಹಾಕಿ. ಆಗಾಗ್ಯೆ ಮಗುಚುತ್ತಾ ಇರಿ.
  7. ಇನ್ನೊಂದು ಬಾಣಲೆಯಲ್ಲಿ ನಾಲ್ಕು ಟೇಬಲ್ ಚಮಚ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿಯಿರಿ.
  8. ಹಲ್ವಾದ ನೀರು ಆರುತ್ತಾ ಬಂದಾಗ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದ ಸಮೇತ ಹಾಕಿ. ಏಲಕ್ಕಿ ಪುಡಿಯನ್ನು ಸೇರಿಸಿ. ಒಂದೆರಡು ನಿಮಿಷ ಚೆನ್ನಾಗಿ ಮಗುಚಿ. ಸ್ಟೋವ್ ಆಫ್ ಮಾಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.

ಶುಕ್ರವಾರ, ಜನವರಿ 1, 2016

Alugadde mosaru bajji in Kannada | ಆಲೂಗಡ್ಡೆ ಮೊಸರು ಬಜ್ಜಿ ಮಾಡುವ ವಿಧಾನ


ಆಲೂಗಡ್ಡೆ ಮೊಸರು ಬಜ್ಜಿ ಮಾಡುವ ವಿಧಾನ 

ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಾವು ಈ ವರ್ಷದಲ್ಲಿ ಹೆಚ್ಚು ರುಚಿಕರ ಅಡುಗೆಗಳನ್ನು ಹಾಕುವಂತೆ ಆಗಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು !!
ಆಲೂಗಡ್ಡೆ ಸಲಾಡ್ ಅಥವಾ ಆಲೂಗಡ್ಡೆ ಮೊಸರು ಬಜ್ಜಿಯನ್ನು ಅನ್ನ ಅಥವಾ ರೈಸ್ ಬಾತ್ ಗಳೊಂದಿಗೆ ಸವಿಯಬಹುದು. ಅಥವಾ ನೀವು ಊಟದ ಜೊತೆಗೆ ಆಲೂಗಡ್ಡೆ ಸಲಾಡ್ ನ್ನು ಪ್ರತ್ಯೇಕವಾಗಿ ಬಡಿಸಬಹುದು. ಈ ಸಲಾಡ್ ಅಥವಾ ಮೊಸರು ಬಜ್ಜಿಯನ್ನು ಆಲೂಗಡ್ಡೆ, ಮೊಸರು ಮತ್ತು ಕೆಲವು ಮಸಾಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಹಸಿ ಇಂಗು ಬಳಕೆ ಆಲೂಗಡ್ಡೆ ಸಲಾಡ್ ರುಚಿಯನ್ನು ಹೆಚ್ಚಿಸುತ್ತದೆ. ಸರಳ ಮತ್ತು ಅತ್ಯಂತ ರುಚಿಕರ ಆಲೂಗಡ್ಡೆ ಸಲಾಡ್ ಅಥವಾ ಆಲೂ - ಮೊಸರು - ಬಜ್ಜಿ ಮಾಡುವ ವಿಧಾನವನ್ನು ತಿಳಿಯಿರಿ.
ಆಲೂಗಡ್ಡೆ ಮೊಸರು ಬಜ್ಜಿ ವಿಡಿಯೋ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಆಲೂಗಡ್ಡೆ
  2. 1 ಟೀಸ್ಪೂನ್ ಕತ್ತರಿಸಿದ ಶುಂಠಿ
  3. 1 ಟೀಸ್ಪೂನ್ ಕತ್ತರಿಸಿದ ಹಸಿರು ಮೆಣಸಿನಕಾಯಿ
  4. ಒಂದು ದೊಡ್ಡ ಚಿಟಿಕೆ ಇಂಗು
  5. 2 ಟೀಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು
  7. 1 ಕಪ್ ಮೊಸರು
  8. 1 ಟೀಸ್ಪೂನ್ ಅಡುಗೆ ಎಣ್ಣೆ
  9. 1/4 ಟೀಸ್ಪೂನ್ ಸಾಸಿವೆ

ಆಲೂಗಡ್ಡೆ ಮೊಸರುಬಜ್ಜಿ ಮಾಡುವ ವಿಧಾನ:

  1. ಆಲೂಗಡ್ಡೆ ತೊಳೆದು ನಾಲ್ಕು ಭಾಗಗಳಾಗಿ ಕತ್ತರಿಸಿ. ಸಾಕಷ್ಟು ನೀರು ಸೇರಿಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ.
  2. ಈಗ ಕತ್ತರಿಸಿದ ಶುಂಠಿ , ಕತ್ತರಿಸಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು ಮತ್ತು ಇಂಗು ಸೇರಿಸಿ.
  3. ಮೊಸರು ಸೇರಿಸಿ ಕಲಸಿ. ಎಣ್ಣೆ ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ದಯವಿಟ್ಟು ಗಮನಿಸಿ, ಒಗ್ಗರಣೆ ಹಾಕಲೇ ಬೇಕೆಂದೇನಿಲ್ಲ.

Related Posts Plugin for WordPress, Blogger...