ಇದು ಅತ್ಯಂತ ಸರಳ ಹಾಗೂ ವಿಭಿನ್ನ ಅಡುಗೆಯಾಗಿದ್ದು, ಇಲ್ಲಿ ಬೇರೆ ಸಾಂಬಾರ್ ಗಳ ಹಾಗೆ ತರಕಾರಿ ಮತ್ತು ಮಸಾಲೆ ಸೇರಿಸಿ ಕುದಿಸುವುದಿಲ್ಲ. ಅಲ್ಲದೆ ತರಕಾರಿಯೊಂದಿಗೆ ಮಸಾಲೆ ಸೇರಿಸುವಾಗ ಬೇಯಿಸಿದ ತರಕಾರಿ ಬಿಸಿಯಾಗಿರಬಾರದು. ಈ ಅಡುಗೆಯನ್ನು ಬೀನ್ಸ್, ಅಲಸಂದೆ ಮತ್ತು ತೊಂಡೆಕಾಯಿಯಲ್ಲೂ ಮಾಡಬಹುದು.
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 3 ಜನರಿಗೆ
ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 250 ಗ್ರಾಂ ಬೆಂಡೆಕಾಯಿ
- 4 ಟೀಸ್ಪೂನ್ ಉದ್ದಿನ ಬೇಳೆ
- 2 ಹಸಿ ಮೆಣಸಿನಕಾಯಿ
- 1/2 ಕಪ್ ತೆಂಗಿನ ತುರಿ
- 1 ಚಿಟಿಕೆ ಅರಿಶಿನ ಪುಡಿ
- ಹುಣಸೆ ಹಣ್ಣು ಒಂದು ನೆಲ್ಲಿಕಾಯಿ ಗಾತ್ರ
- 1/4 ಟೀಸ್ಪೂನ್ ಅಡುಗೆ ಎಣ್ಣೆ
- ಉಪ್ಪು ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
- 1/4 ಟೀಸ್ಪೂನ್ ಸಾಸಿವೆ
- 4 - 5 ಕರಿಬೇವಿನ ಎಲೆ
- 1 ಟೀಸ್ಪೂನ್ ಅಡುಗೆ ಎಣ್ಣೆ
ಬೆಂಡೆಕಾಯಿ ಕಾಯಿರಸ ಪಾಕವಿಧಾನ:
- ಬೆಂಡೆಕಾಯಿ ತೊಳೆದು, ತುದಿ ಮತ್ತು ಬುಡ ತೆಗೆದು, 2 ಸೆಮೀ ಉದ್ದಕ್ಕೆ ಕತ್ತರಿಸಿಕೊಳ್ಳಿ.
- 1 ಕಪ್ ನೀರಿನಲ್ಲಿ ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ. ಕುಕ್ಕರ್‌ಗೆ ಕತ್ತರಿಸಿದ ತರಕಾರಿಗಳನ್ನು ಹಾಕಿ, ಸ್ವಲ್ಪ ಉಪ್ಪು , ಅರಿಶಿನ ಪುಡಿ ಮತ್ತು ಹುಣಸೆ ರಸ ಸೇರಿಸಿ ಒಂದು ವಿಷಲ್ ಮಾಡಿ.
- ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಮೆಣಸಿನಕಾಯಿ, ಉದ್ದಿನ ಬೇಳೆ ಮತ್ತು 1/4 ಟೀಸ್ಪೂನ್ ಎಣ್ಣೆ ಹಾಕಿ, ಉದ್ದಿನ ಬೇಳೆ ಚಿನ್ನದ ಕಂದು ಬಣ್ಣಕ್ಕೆ ಬರುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
- ಮಿಕ್ಸಿ ಜಾರ್ಗೆ ತೆಂಗಿನತುರಿ ಮತ್ತು ಹುರಿದ ಉದ್ದಿನ ಬೇಳೆ ಹಾಕಿ 1/2 ಕಪ್ ನೀರು ಬಳಸಿಕೊಂಡು ಅರೆಯಿರಿ. ನಂತರ ಹುರಿದ ಹಸಿಮೆಣಸನ್ನು ಸೇರಿಸಿ ಸುಮಾರು 5 ಸೆಕೆಂಡುಗಳ ಕಾಲ ಅರೆಯಿರಿ.
- ಬೇಯಿಸಿದ ತರಕಾರಿ ಬಿಸಿ ಆರಿದ ನಂತರ ಅರೆದ ಮಸಾಲೆ ಸೇರಿಸಿ, ಉಪ್ಪು ಹಾಕಿ ಕಲಸಿ. ಈ ಅಡುಗೆಯಲ್ಲಿ ಮಸಾಲೆ ಹಾಕಿ ಕುದಿಸುವ ಹಂತ ಇಲ್ಲವೆಂಬುದನ್ನು ನೆನಪಿಡಿ.
- ಕಲಸಿದ ನಂತರ ಎಣ್ಣೆ, ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಮಾಡಿ. ಅನ್ನ ಅಥವಾ ಚಪಾತಿ ಜೊತೆ ಬಡಿಸಿ. ಈ ಅಡುಗೆಯನ್ನು 2-3 ಗಂಟೆಗಳ ಮೊದಲು ಬಳಸಿ ಅಥವಾ ಫ್ರಿಜ್ ನಲ್ಲಿ ಇಟ್ಟು ಉಪಯೋಗಿಸುವ ಮೊದಲು ಬಿಸಿಮಾಡಿಕೊಳ್ಳಿ.