ಗುರುವಾರ, ಮಾರ್ಚ್ 31, 2016

Bendekayi bol kodlu or bolu huli recipe in kannada | ಬೆಂಡೆಕಾಯಿ ಬೋಳು ಕೊದ್ಲು । ಬೆಂಡೆಕಾಯಿ ಬೋಳು ಹುಳಿ


ಬೆಂಡೆಕಾಯಿ ಬೋಳು ಕೊದ್ಲು । ಬೆಂಡೆಕಾಯಿ ಬೋಳು ಹುಳಿ


ಬೆಂಡೆಕಾಯಿ ಬೋಳು ಕೊದ್ಲು ಅಥವಾ ಬೆಂಡೆಕಾಯಿ ಬೋಳು ಹುಳಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇದನ್ನು ಬೆಂಡೆಕಾಯಿ ಮತ್ತು ತೊಗರಿಬೇಳೆ ಹಾಕಿ ಮಾಡಲಾಗುತ್ತದೆ. ತುಳು ಭಾಷೆಯಲ್ಲಿ ಸಾಂಬಾರ್ ನ್ನು ಕೊದ್ಲು ಅಥವಾ ಕೊದ್ದೆಲ್ ಎಂದು ಕರೆಯುತ್ತಾರೆ.  ಕರಾವಳಿ ಪ್ರದೇಶದಲ್ಲಿ ಆಚರಣೆಯಲ್ಲಿರುವ ಈ ಸಾಂಬಾರ್ ನ್ನು ತೆಂಗಿನಕಾಯಿ ಇಲ್ಲದೆ  ಮತ್ತು ಯಾವುದೇ ಮಸಾಲೆ ಇಲ್ಲದೆ ತಯಾರಿಸಲಾಗುತ್ತದೆ. ಹಾಗಾಗಿ ಇದನ್ನು ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಎಂದು ಕರೆಯುತ್ತಾರೆ.
ಈ ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಅಥವಾ ತೆಂಗಿನಕಾಯಿ ಹಾಕದ ಸಾಂಬಾರ್ ನ್ನು ಬದನೇಕಾಯಿ, ತೊಂಡೆಕಾಯಿ, ಬೀನ್ಸ್ ಅಥವಾ ಸೌತೆಕಾಯಿ ಉಪಯೋಗಿಸಿ ಸಹ ಮಾಡಬಹುದು. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 4 ಜನರಿಗೆ 

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 120 ಎಂಎಲ್ ) 

  1. 1/4 ಕೆಜಿ ಬೆಂಡೆಕಾಯಿ
  2. 1/2 ಕಪ್ ತೊಗರಿಬೇಳೆ
  3. 1 - 2 ಹಸಿಮೆಣಸು
  4. 1 ಟೀಸ್ಪೂನ್ ಬೆಲ್ಲ
  5. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  6. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. ಉಪ್ಪು ರುಚಿಗೆ ತಕ್ಕಷ್ಟು 


ಒಗ್ಗರಣೆಗೆ ಬೇಕಾಗುವ ಪದಾರ್ಥಗಳು :

  1. 1 ಕೆಂಪು ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 4 - 5 ಕರಿಬೇವಿನ ಎಲೆ 
  5. 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ
  6. 1/4 ಟೀಸ್ಪೂನ್ ಇಂಗು

ಬೆಂಡೆಕಾಯಿ ಬೋಳು ಕೊದ್ಲು ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ೧ ಕಪ್ ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. 
  2. ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ. ಒತ್ತಡ ಇಳಿದ ನಂತರ ಬೇಳೆ ಅರ್ಧ ಬೆನ್ದಿರುವುದನ್ನು ನೀವು ಗಮನಿಸಬಹುದು. 
  3. ಬೆಂಡೆಕಾಯಿಯನ್ನು ತೊಳೆದು ನೀರಾರಿಸಿ, ೨ ಸೆ ಮೀ ಉದ್ದದ ಹೋಳುಗಳಾಗಿ ಕತ್ತರಿಸಿ. 
  4. ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಬೆಂಡೆಕಾಯಿ, ಸ್ವಲ್ಪ ಉಪ್ಪು, ಬೆಲ್ಲ, ಹುಣಿಸೆ ರಸ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ. ೨ ಕಪ್ ನೀರು ಸೇರಿಸಿ ಒಂದು ವಿಷಲ್ ಮಾಡಿ. 
  5. ಒತ್ತಡ ಇಳಿದ ನಂತರ ಮುಚ್ಚಳ ತೆರೆದು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇನ್ನೆರಡು ಕಪ್ ನೀರು ಹಾಕಿ. ನೀರಿನ ಪ್ರಮಾಣವನ್ನು ನಿಮ್ಮಿಷ್ಟದ ಪ್ರಕಾರ ಬದಲಾಯಿಸಬಹುದು.
  6. ಒಂದು ಕುದಿ ಬರಿಸಿ ಸ್ಟವ್ ಆಫ್ ಮಾಡಿ.
  7. ಸಣ್ಣ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ , ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸಾಂಬಾರ್ಗೆ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.

ಸೋಮವಾರ, ಮಾರ್ಚ್ 28, 2016

Menthe palle in Kannada | Menthe soppu bele palle | ಮೆಂತೆ ಪಲ್ಲೆ ಮಾಡುವ ವಿಧಾನ


menthe palle in kannada

Menthe palle in Kannada | ಮೆಂತೆ ಪಲ್ಲೆ ಮಾಡುವ ವಿಧಾನ

ಮೆಂತೆ ಪಲ್ಲೆ ಉತ್ತರ ಕರ್ನಾಟಕದ ಪ್ರಸಿದ್ಧ ಅಡುಗೆಯಾಗಿದ್ದು, ಇದನ್ನು ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ತಿನ್ನುತ್ತಾರೆ. ಮೆಂತೆ ಪಲ್ಲೆಯನ್ನು ಮೆಂತೆ ಸೊಪ್ಪು, ತೊಗರಿ ಬೇಳೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಇನ್ನು ಕೆಲವು ಮಸಾಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. 
ಈ ಮೆಂತೆ ಪಲ್ಲೆಯನ್ನು ಎರಡು ರೀತಿಯಲ್ಲಿ ತಯಾರಿಸಲಾಗುತ್ತದೆ. ಮೊದಲನೆಯದು ಒಗ್ಗರಣೆಗೆ ತೊಗರಿ ಬೇಳೆ ಹಾಕಿ ಬೇಯಿಸುವುದು ಮತ್ತು ಇನ್ನೊಂದು ಒಗ್ಗರಣೆಗೆ ಮೊದಲೇ ಬೇಯಿಸಿಟ್ಟ ಬೇಳೆ ಹಾಕಿ ಮಾಡುವುದು. ನಾನು ಇಲ್ಲಿ ಮೊದಲನೇ ರೀತಿಯಲ್ಲಿ ವಿವರಿಸಿದ್ದೇನೆ.  
ಇದೊಂದು ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆ ತಯಾರಿಸಿ ನೋಡಿ. ಇದು ನಿಮ್ಮನ್ನು ಖಂಡಿತ ನಿರಾಶೆ ಗೊಳಿಸುವುದಿಲ್ಲ. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 4 ಜನರಿಗೆ 


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಕಟ್ಟು ಮೆಂತೆ ಸೊಪ್ಪು ಅಥವಾ 2 ಕಪ್ ಒತ್ತಿ ತುಂಬಿದ ಮೆಂತೆ ಸೊಪ್ಪು 
  2. 2 ಕಪ್ ತೊಗರಿಬೇಳೆ 
  3. 1/2 ಟೀಸ್ಪೂನ್ ಜೀರಿಗೆ 
  4. 1 ಕೆಂಪು ಮೆಣಸಿನಕಾಯಿ ( ಬೇಕಾದಲ್ಲಿ) 
  5. 1 - 2 ಹಸಿಮೆಣಸಿನಕಾಯಿ 
  6. 4 ಎಸಳು ಬೆಳ್ಳುಳ್ಳಿ 
  7. 1ಸೆಮೀ ಉದ್ದದ ಶುಂಠಿ 
  8. 1 ಈರುಳ್ಳಿ 
  9. 1 ಟೊಮೆಟೊ (ಬೇಕಾದಲ್ಲಿ) 
  10. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  11. 1/2 ಟೀ ಚಮಚ ಜೀರಿಗೆ ಪುಡಿ (ಬೇಕಾದಲ್ಲಿ) 
  12. ಉಪ್ಪು ರುಚಿಗೆ ತಕ್ಕಷ್ಟು 

ಮೆಂತೆ  ಪಲ್ಲೆ ಮಾಡುವ ವಿಧಾನ:

  1. ತೊಗರಿಬೇಳೆ ತೊಳೆದು ಪಕ್ಕಕ್ಕಿಡಿ. 
  2. ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿಟ್ಟು ಕೊಳ್ಳಿ.
  3. ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು, ತೊಳೆದು, ಕತ್ತರಿಸಿಟ್ಟುಕೊಳ್ಳಿ.  ಟೊಮೇಟೊವನ್ನು ಕತ್ತರಿಸಿಟ್ಟು ಕೊಳ್ಳಿ. 
  4. ಒಂದು ಕುಕ್ಕರ್ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆಯನ್ನು ಹಾಕಿ.
  5. ಜೀರಿಗೆ ಸಿಡಿದ ಕೂಡಲೇ ಇಡೀ ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ. ಸ್ವಲ್ಪ ಹೊತ್ತು ಹುರಿಯಿರಿ. 
  6. ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ  ಹುರಿಯಿರಿ.
  7. ಕತ್ತರಿಸಿದ ಟೊಮ್ಯಾಟೊ ಮತ್ತು ಅರಿಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಹುರಿಯಿರಿ.
  8. ಕತ್ತರಿಸಿದ ಮೆಂತೆ ಸೊಪ್ಪು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  9. ಸುಮಾರು 4 ಕಪ್ ನೀರು ಸೇರಿಸಿ ಅಥವಾ ಬೇಳೆಯ ದುಪ್ಪಟ್ಟಿನಷ್ಟು ನೀರು ಸೇರಿಸಿ. 
  10. ತೊಳೆದಿಟ್ಟ ತೊಗರಿ ಬೇಳೆಯನ್ನು ಸೇರಿಸಿ. 
  11. ಒಮ್ಮೆ ಕಲಸಿ ಪ್ರೆಷರ್ ಕುಕ್ಕರ್ ನಲ್ಲಿ 3 - 4 ಸೀಟಿಗಳನ್ನು ಮಾಡಿ ಬೇಯಿಸಿ.  ಬೇಕಾದಲ್ಲಿ ಮೊದಲೇ  ಬೇಯಿಸಿದ ಬೇಳೆಯನ್ನು ಸೇರಿಸಬಹುದು. 
  12. ಪ್ರೆಷರ್ ಕುಕ್ಕರ್ ನ ಸೆಕೆ ಇಳಿದ ಮೇಲೆ ಬೇಳೆ ಮತ್ತು ಸೊಪ್ಪು ಚೆನ್ನಾಗಿ ಬೆನ್ದಿರುವುದನ್ನು ನೀವು ನೋಡಬಹುದು. ಆದರೆ ಬೇಳೆ ಮುದ್ದೆಯಾಗಿರುವುದಿಲ್ಲ.
  13. ಕತ್ತರಿಸಿದ ಕೊತ್ತುಂಬರಿ ಸೊಪ್ಪು, ಉಪ್ಪು ಮತ್ತು ಜೀರಿಗೆ ಪುಡಿ ಸೇರಿಸಿ. 
  14. ಅಗಲವಾದ ಸೌಟಿನ ಹಿಂಭಾಗದಿಂದ ಒತ್ತುತ್ತ ಚೆನ್ನಾಗಿ ಕಲಸಿ. 
  15. ಅಗತ್ಯವಿದ್ದಷ್ಟು ನೀರು ಸೇರಿಸಿ. ಜೋಳದ ರೊಟ್ಟಿ ಅಥವಾ ಚಪಾತಿಯ ಜೊತೆಗೆ ಬಡಿಸಬೇಕಾದಲ್ಲಿ ಸ್ವಲ್ಪ ಗಟ್ಟಿಯಾಗಿ ಮತ್ತು ಅನ್ನದ ಜೊತೆ ಬಡಿಸಲು ಸ್ವಲ್ಪ ತೆಳ್ಳಗೆ ಆಗುವಂತೆ ನೀರು ಸೇರಿಸಿ. ಒಂದು ಕುದಿ ಕುದಿಸಿ. ಬಿಸಿ ತುಪ್ಪ ಮತ್ತು ಮೆಂತೆ ಪಲ್ಲೆಯನ್ನು ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.


ಬುಧವಾರ, ಮಾರ್ಚ್ 23, 2016

Ellu juice recipe in kannada | ಎಳ್ಳು ಜ್ಯೂಸು ಮಾಡುವ ವಿಧಾನ


ellu juice recipe in kannada

ಎಳ್ಳು ಜ್ಯೂಸು ಮಾಡುವ ವಿಧಾನ

ಎಳ್ಳು ಜ್ಯೂಸು ಮಾಡುವ ವಿಧಾನವನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಎಳ್ಳು ಜ್ಯೂಸನ್ನು ಎಳ್ಳು, ಬೆಲ್ಲ ಮತ್ತು ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಇದು ತುಂಬಾ ಸುಲಭ ಮತ್ತು ರುಚಿಕರವಾದ ಪಾನೀಯ ಆಗಿದೆ. ಈ ರೀತಿಯ ಜ್ಯೂಸನ್ನು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಅನೇಕ ಅಂಗಡಿಗಳಲ್ಲಿ ಮಾರಲಾಗುತ್ತದೆ.

ಎಳ್ಳನ್ನು ಉಷ್ಣ ಆಹಾರ ಎನ್ನುತ್ತಾರೆ. ಆದರೆ ಎಳ್ಳೆಣ್ಣೆ ಮತ್ತು ಈ ಎಳ್ಳಿನ ಜ್ಯೂಸನ್ನು ತಂಪು ಎನ್ನುತ್ತಾರೆ. ಹೇಗೆಂದು ನನಗೆ ಗೊತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ನನಗೆ ದಯವಿಟ್ಟು ತಿಳಿಸಿ.

ಎಳ್ಳು ಅನೇಕ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಕ್ಯಾಲ್ಸಿಯಂ, ತಾಮ್ರ, ಮ್ಯಾಂಗನೀಸ್, ರಂಜಕ, ಮೆಗ್ನೀಷಿಯಂ, ಕಬ್ಬಿಣ, ಸತು, ಜೀವಸತ್ವ B1 ಮತ್ತು ಸೆಲೆನಿಯಮ್ ಹೇರಳವಾಗಿದೆ ಎನ್ನಲಾಗಿದೆ. ಆಸ್ತಮಾ, ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್, ಆಸ್ಟಿಯೊಪೊರೋಸಿಸ್, ಮೈಗ್ರೇನ್ ಮತ್ತು ಮಧುಮೇಹ ಹೃದಯ ರೋಗ ಚಿಕಿತ್ಸೆಯಲ್ಲಿ ಬಹಳ ಅನುಕೂಲಕರ ಎಂದು ಹೇಳಲಾಗುತ್ತದೆ. ಈಗ ಎಳ್ಳು ಜ್ಯೂಸು ಮಾಡುವ ವಿಧಾನವನ್ನು ನೋಡೋಣ.

ಎಳ್ಳು ಜ್ಯೂಸು ವಿಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

1/2 ಕಪ್ ಬಿಳಿ ಎಳ್ಳು
1/2 ಕಪ್ ಪುಡಿ ಮಾಡಿದ ಬೆಲ್ಲ
2 ಕಪ್ ನೀರು (ಅರೆಯಲು ಬೇಕಾದ ನೀರು ಸೇರಿಸಿ)
2 ಕಪ್ ಕುದಿಸಿ ಆರಿಸಿದ ಹಾಲು
ಒಂದು ಏಲಕ್ಕಿ

ಎಳ್ಳು ಜ್ಯೂಸು ಮಾಡುವ ವಿಧಾನ:

ಒಂದು ಬಾಣಲೆ ತೆಗೆದುಕೊಂಡು ಎಳ್ಳನ್ನು ಎಣ್ಣೆ ಹಾಕದೆ ಹುರಿಯಿರಿ. ಸ್ವಲ್ಪ ಹುರಿದರೆ ಅಂದರೆ ಎಳ್ಳು ಉಬ್ಬುವವರೆಗೆ ಹುರಿದರೆ ಸಾಕು. ಹುರಿದ ಎಳ್ಳು ತಣ್ಣಗಾಗುವವರೆಗೆ ಕಾಯಿರಿ.
ಈಗ ಎಳ್ಳು, ಬೆಲ್ಲ ಮತ್ತು ಏಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ.
ಅಗತ್ಯವಿರುವಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಹಾಲು ಮತ್ತು ಉಳಿದ ನೀರು ಸೇರಿಸಿ ಚೆನ್ನಾಗಿ ಕಲಕಿ. ಫ್ರಿಜ್ ನಲ್ಲಿಟ್ಟು ತಂಪಾದ ಎಳ್ಳು ಜ್ಯೂಸನ್ನು ಸವಿಯಿರಿ.

Related Posts Plugin for WordPress, Blogger...