ಬುಧವಾರ, ಮೇ 4, 2016

Tomato salad or bajji recipe in kannada | ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ

Tomato salad or bajji recipe in kannada

Tomato salad or bajji recipe in kannada | ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ 

ಅತ್ಯಂತ ಸರಳ ಮತ್ತು ರುಚಿಕರ ಸಲಾಡ್ ಅಥವಾ ಟೊಮೇಟೊ ಬಜ್ಜಿ ಮಾಡುವ ವಿಧಾನ ಇಲ್ಲಿದೆ. ಇದನ್ನು ಅಣ್ಣ ಅಥವಾ ಚಪಾತಿಯೊಂದಿಗೆ ಸವಿಯಬಹುದು. ಯಾರು ಬೇಕಾದರೂ, ಅತ್ಯಂತ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿಕೊಂಡು ಮಾಡಬಹುದಾದ ಅಡುಗೆಯಾಗಿದ್ದು, ಒಮ್ಮೆಯಾದರೂ ಮಾಡಿ ರುಚಿ ನೋಡಲು ಮರೆಯದಿರಿ.

ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1 ದೊಡ್ಡ ಈರುಳ್ಳಿ
  2. 2 ದೊಡ್ಡ ಟೊಮ್ಯಾಟೊ
  3. 1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
  4. 0.5 - 1 ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1 ಒಣ ಮೆಣಸಿನಕಾಯಿ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ಟೊಮೇಟೊ ಸಲಾಡ್ ಅಥವಾ ಬಜ್ಜಿ ಮಾಡುವ ವಿಧಾನ:

  1. ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. 
  2. ಅದಕ್ಕೆ ಸಣ್ಣಗೆ ಹೆಚ್ಚಿದ ಟೊಮೇಟೊ ಸೇರಿಸಿ. 
  3. ನಂತರ ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಹಾಕಿ. 
  4. ಚೆನ್ನಾಗಿ ಕಲಸಿ. ಎಣ್ಣೆ, ಸಾಸಿವೆ ಮತ್ತು ಒಣಮೆಣಸಿನ  ಕಾಯಿಯ ಒಗ್ಗರಣೆ ಕೊಡಿ. ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ. ಹಾಗೇ ಬೇಕಾದರೂ ಸವಿಯಬಹುದು. 

ಮಂಗಳವಾರ, ಮೇ 3, 2016

Rave or sajjige rotti recipe in Kannada | ರವೆ ಅಥವಾ ಸಜ್ಜಿಗೆ ರೊಟ್ಟಿ ಮಾಡುವ ವಿಧಾನ

Rave or sajjige rotti recipe in Kannada

Rave or sajjige rotti recipe in Kannada | ರವೆ ಅಥವಾ  ಸಜ್ಜಿಗೆ ರೊಟ್ಟಿ ಮಾಡುವ ವಿಧಾನ 

ರವೆ ಅಥವಾ  ಸಜ್ಜಿಗೆ ರೊಟ್ಟಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ರೀತಿಯ ರವೆ ರೊಟ್ಟಿಯನ್ನು ಮಂಗಳೂರು ಪ್ರದೇಶದಲ್ಲಿ ತಯಾರಿಸಲಾಗುತ್ತದೆ. ಅಲ್ಲಿ ರವೆಯನ್ನು ಸಜ್ಜಿಗೆ ಎಂದೂ, ತವಾದ ಮೇಲೆ ಹರಡಿ ಮಾಡುವ ತಿಂಡಿಯನ್ನು ರೊಟ್ಟಿಯೆಂದು ಕರೆಯುವ ಕಾರಣ ಈ ತಿಂಡಿಯನ್ನು ಸಜ್ಜಿಗೆ ರೊಟ್ಟಿ ಎಂದು ಕರೆಯುತ್ತಾರೆ. ಈ ಅಡುಗೆಯ ವೀಡಿಯೊ ಮಾಡಿದ್ದೇನೆ. ನೋಡಿ ಆನಂದಿಸಿ.



ತಯಾರಿ ಸಮಯ: 30 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1.5 ಕಪ್ ಸಣ್ಣ ರವೆ / ಸಜ್ಜಿಗೆ
  2. 0.5 ಕಪ್ ಮೊಸರು (ಸ್ವಲ್ಪ ಹುಳಿ ಇದ್ದರೆ ಒಳ್ಳೆಯದು )
  3. 1 ಟೀಸ್ಪೂನ್ ಮೈದಾ ಹಿಟ್ಟು
  4. 1.5 ಟೀಸ್ಪೂನ್ ಅಕ್ಕಿ ಹಿಟ್ಟು
  5. 1.5 ಕಪ್ ನೀರು
  6. 2 ಟೇಬಲ್ ಚಮಚ ತೆಂಗಿನ ತುರಿ
  7. 1 - 2 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
  8. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  9. 0.25 ಟೀಸ್ಪೂನ್ ಇಂಗು
  10. 1/4 ಟೀಸ್ಪೂನ್ ಅರಿಶಿನ ಪುಡಿ ( ಬೇಕಾದಲ್ಲಿ - ನಾನು ಬಳಸಲಿಲ್ಲ)
  11. ಸಾಸಿವೆ ಮತ್ತು ಮಜ್ಜಿಗೆ ಮೆಣಸಿನ ಒಗ್ಗರಣೆ (ಬೇಕಾದಲ್ಲಿ- ನಾನು ಬಳಸಲಿಲ್ಲ)
  12. ತೆಂಗಿನ ಎಣ್ಣೆ / ತುಪ್ಪ ( ದೋಸೆ ಮಾಡುವ ಸಂದರ್ಭದಲ್ಲಿ ಬಳಸಲು)
  13. ಉಪ್ಪು ರುಚಿಗೆ ತಕ್ಕಷ್ಟು

ರವೆ ಅಥವಾ  ಸಜ್ಜಿಗೆ ರೊಟ್ಟಿ ಮಾಡುವ ವಿಧಾನ:

  1. ದೊಡ್ಡ ಬಟ್ಟಲಿನಲ್ಲಿ ರವೆ, ಮೈದಾ ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
  2. ಮೊಸರು ಮತ್ತು ನೀರು ಸೇರಿಸಿ. 
  3. ಚೆನ್ನಾಗಿ ಕಲಸಿ, 15 - 20 ನಿಮಿಷ ನೆನೆಯಲು ಬಿಡಿ. 
  4. ನಂತರ ತುರಿದ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ. 
  5. ಚೆನ್ನಾಗಿ ಕಲಸಿ. ಹಿಟ್ಟು  ದಪ ದಪನೆ ಬೀಳುವಂತೆ ಇರಬೇಕು. ಬೇಕಾದಲ್ಲಿ ನೀರು ಸೇರಿಸಿ. 
  6. ದೋಸೆ ಕಲ್ಲು ಅಥವಾ ನಾನ್-ಸ್ಟಿಕ್ ತವ ಬಿಸಿ ಮಾಡಿ. ಬಿಸಿ ಪ್ಯಾನ್ ಮೇಲೆ ಒಂದು ಸೌಟು ಹಿಟ್ಟು ಸುರಿದು ವೃತ್ತಾಕಾರವಾಗಿ ಕೈಗಳಿಂದ ಹರಡಿ. ಈ ಹಂತದಲ್ಲಿ ಸ್ವಲ್ಪ ಶೀಘ್ರವಾಗಿರಲು ಮರೆಯದಿರಿ. 
  7. ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. 
  8. ಎರಡೂ ಬದಿ ಕಾಯಿಸಿ. ತೆಂಗಿನ ಚಟ್ನಿ ಮತ್ತು ಬೆಣ್ಣೆಯೊಂದಿಗೆ ಬಡಿಸಿ.

ಸೋಮವಾರ, ಮೇ 2, 2016

soft idli using idli rave in Kannada | ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ


idli recipe using idli rave in kannada

soft idli using idli rave in Kannada | ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ 


ಇಡ್ಲಿ ರವೆ ಉಪಯೋಗಿಸಿ ಮೃದುವಾದ ಇಡ್ಲಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ನಮ್ಮಲ್ಲಿ ಬಹುತೇಕ ಎಲ್ಲರೂ ಅವರದೇ ಆದ ವಿಧಾನದಲ್ಲಿ ಮೃದು ಮತ್ತು ರುಚಿಕರ ಇಡ್ಲಿ ತಯಾರಿಸುತ್ತಾರೆ. ನಾನು ಮಾಡುವ ವಿಧಾನವನ್ನು ಕೆಲ ಸಲಹೆಗಳನ್ನು ಇಲ್ಲಿ ವಿವರಿಸಿದ್ದೇನೆ. ಕೆಳಗೆ ತಿಳಿಸಿರುವ ಅಳತೆ ಹವಾಮಾನ ಮತ್ತು ಅರೆಯಲು ಮಿಕ್ಸಿ ಅಥವಾ ಗ್ರೈಂಡರ್ ಎಂಬುದರ ಮೇಲೆ ಅವಲಂಬಿತವಾಗಿದೆ.

ತಯಾರಿ ಸಮಯ: 14 - 15 ಘಂಟೆ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 30 - 40 ಇಡ್ಲಿಗಳು

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 2 ಕಪ್ ಇಡ್ಲಿ ರವಾ 
  2. 1/2 - 3/4 ಕಪ್ ಉದ್ದಿನ ಬೇಳೆ 
  3. 1/4 - 1/2 ಟೀಸ್ಪೂನ್ ಮೆಂತ್ಯ 
  4. 0 - 1/2 ಕಪ್ ಅವಲಕ್ಕಿ 
  5. ಉಪ್ಪು ನಿಮ್ಮ ರುಚಿ ಪ್ರಕಾರ

ಇಡ್ಲಿ ರವೆ ಉಪಯೋಗಿಸಿ ಇಡ್ಲಿ ಮಾಡುವ ವಿಧಾನ:

  1. ಉದ್ದಿನಬೇಳೆ ಮತ್ತು ಮೆಂತ್ಯವನ್ನು ತೊಳೆದು ಒಳ್ಳೆಯ ನೀರಿನಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ. ಉತ್ತಮ ಫಲಿತಾಂಶಕ್ಕಾಗಿ ಇಡೀ ಉದ್ದಿನ ಬೇಳೆ ಬಳಸಿ.
  2. ಅವಲಕ್ಕಿಯನ್ನು ಬಳಸುತ್ತೀರಾದರೆ ಅದನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಾನು ಗ್ರೈಂಡರ್ ಬಳಸುವುದರಿಂದ ಅವಲಕ್ಕಿ ಸೇರಿಸುವುದಿಲ್ಲ. 
  3. 4 - 5 ಗಂಟೆಗಳ ನಂತರ ನೆನೆಸಿಟ್ಟ ಬೇಳೆಯ ನೀರನ್ನು ಬಸಿದು ಪಕ್ಕಕ್ಕಿಡಿ. ಅರೆಯುವಾಗ ಈ ನೀರು ಉಪಯೋಗಿಸಿದಲ್ಲಿ ಹಿಟ್ಟು ಚೆನ್ನಾಗಿ ಹುದುಗಲು ಸಹಾಯವಾಗುತ್ತದೆ.
  4. ಈಗ ಗ್ರೈಂಡರ್ ಗೆ ನೆನೆಸಿದ ಉದ್ದಿನಬೇಳೆ, ಮೆಂತ್ಯ ಮತ್ತು ಅವಲಕ್ಕಿ (ಬಳಸುತ್ತೀರಾದಲ್ಲಿ) ಹಾಕಿ.
  5. ಏತನ್ಮಧ್ಯೆ, ಇಡ್ಲಿ ರವೆಗೆ ಬೆಚ್ಚಗಿನ ನೀರು ಹಾಕಿ ನೀರನ್ನು ಸಂಪೂರ್ಣವಾಗಿ ಬಸಿದು ಪಕ್ಕಕ್ಕೆ ಹೊಂದಿಸಿ.
  6. ಈಗ ಗ್ರೈಂಡರ್ ನಲ್ಲಿರುವ ಬೇಳೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುವ ಮೂಲಕ ನಯವಾಗಿ ಅರೆಯಿರಿ. ಅರೆಯಲು ಬೇಳೆ ನೆನೆಸಿದ ನೀರು ಉಪಯೋಗಿಸಿ. ಮಿಕ್ಸರ್ ಗ್ರೈಂಡರ್ನಲ್ಲಿ ರುಬ್ಬುವ ಸಂದರ್ಭದಲ್ಲಿ ತಣ್ಣೀರು ಸೇರಿಸಲು ಪ್ರಯತ್ನಿಸಿ. ಏಕೆಂದರೆ ಮಿಕ್ಸಿಯಲ್ಲಿ ಅರೆಯುವಾಗ ಹಿಟ್ಟು ಬಿಸಿಯಾಗುತ್ತದೆ.  ಆಗ ಹಿಟ್ಟು ಚೆನ್ನಾಗಿ ಹುದುಗುವುದಿಲ್ಲ.
  7. ಉದ್ದಿನ ಬೇಳೆ ಅರೆದು ಮುಗಿಯುವ ಸಂದರ್ಭದಲ್ಲಿ ತೊಳೆದಿಟ್ಟ ಇಡ್ಲಿ ರವಾ ಸೇರಿಸಿ,  5 ನಿಮಿಷ ರುಬ್ಬುವುದನ್ನು ಮುಂದುವರೆಸಿ. ಬೇಕೆನಿಸಿದರೆ ನೀರು ಸೇರಿಸಿ. ಇಡ್ಲಿ ಹಿಟ್ಟು ಸೌಟಿನಿಂದ ದಪ-ದಪನೆ ಬೀಳುವಷ್ಟು ಗಟ್ಟಿಯಾಗಿರಬೇಕು. ನೀವು ಮಿಕ್ಸರ್ ಗ್ರೈಂಡರ್ ಬಳಸುತ್ತಿದ್ದರೆ, ತೊಳೆದಿಟ್ಟ ಇಡ್ಲಿ ರವಾ ಇರುವ ಪಾತ್ರೆ ಗೆ ಅರೆದ ಉದ್ದಿನ ಹಿಟ್ಟನ್ನು ಹಾಕಿ, ನಂತರ ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ.
  8. ಒಂದು ದೊಡ್ಡ ಪಾತ್ರೆಯಲ್ಲಿ ಚೆನ್ನಾಗಿ ಕಲಸಿದ ಹಿಟ್ಟನ್ನು ಅಥವಾ ಗ್ರೈಂಡರ್ ನಲ್ಲಿ ಅರೆದ ಹಿಟ್ಟನ್ನು ಸುರಿಯಿರಿ.
  9. ಮುಚ್ಚಳವನ್ನು ಮುಚ್ಚಿ ಮತ್ತು 7 - 8 ಗಂಟೆಗಳ ಕಾಲ ಹುದುಗಲು ಬಿಡಿ.   
  10. ಹುದುಗುವಿಕೆಯ ನಂತರ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
  11. ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
  12. 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ - ೧೨ ನಿಮಿಷಗಳ ಕಾಲ ಬೇಯಿಸಿ.  
Related Posts Plugin for WordPress, Blogger...