ಬುಧವಾರ, ಜನವರಿ 6, 2016

Coriander leaves chutney recipe | ಕೊತ್ತಂಬರಿ ಸೊಪ್ಪಿನ ಒಣ ಚಟ್ನಿ | ಕೊತ್ತಂಬರಿ ಸೊಪ್ಪಿನ ತೊಕ್ಕು


ಕೊತ್ತಂಬರಿ ಸೊಪ್ಪಿನ ಒಣ ಚಟ್ನಿ

ನೀವು ಮಾರುಕಟ್ಟೆಯಲ್ಲಿ ತಾಜಾ ಕೊತ್ತುಂಬರಿ ಸೊಪ್ಪಿನ ದೊಡ್ಡ ಕಟ್ಟು ಬಹಳ ಕಡಿಮೆ ಬೆಲೆಯಲ್ಲಿ ದೊರಕಿತೆಂದು ಖರೀದಿ ಮಾಡಿ ಬಿಟ್ಟಿದ್ದೀರಾ? ನಂತರ ಆ ತಾಜಾ ನಾಟಿ ಕೊತ್ತಂಬರಿ ಸೊಪ್ಪನ್ನು ಏನು ಮಾಡುವುದು ಹೇಗೆ ಉಪಯೋಗಿಸುವುದು ಎಂದು ಆಲೋಚಿಸುತ್ತಿದ್ದೀರಾ? ಚಿಂತಿಸಬೇಡಿ, ಇಲ್ಲೊಂದು ಕೊತ್ತುಂಬರಿ ಸೊಪ್ಪನ್ನು ಬಳಸಿ ಮಾಡಬಹುದಾದ ಸರಳ ಮತ್ತು ರುಚಿಕರ ಚಟ್ನಿ ವಿಧಾನವನ್ನು ವಿವರಿಸಲಾಗಿದೆ. ಈ ಕೊತ್ತಂಬರಿ ಚಟ್ನಿ ಇತರ ಚಟ್ನಿ ಗಳಿಗಿಂತ ಭಿನ್ನವಾಗಿದ್ದು ಇದನ್ನು ನೀವು ತೊಕ್ಕು ಅಥವಾ ಉಪ್ಪಿನಕಾಯಿ ರೀತಿಯಲ್ಲಿ ಬಳಸ ಬೇಕಾಗುತ್ತದೆ. ಈ ಚಟ್ನಿಯನ್ನು ತೆಂಗಿನಕಾಯಿ ಮತ್ತು ನೀರು ಸೇರಿಸದೆ ತಯಾರಿಸಲಾಗುತ್ತದೆ. ಈ ಚಟ್ನಿಗೆ ಒಗ್ಗರಣೆಯ ಅಗತ್ಯವಿರುವುದಿಲ್ಲ.
ಕೊತ್ತಂಬರಿ ಸೊಪ್ಪಿನ ಚಟ್ನಿಯನ್ನು ಕೊತ್ತುಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಹುಣಸೆ ಹಣ್ಣು ಮತ್ತು ಉಪ್ಪು ಬಳಸಿ ತಯಾರಿಸಲಾಗುತ್ತದೆ. ಈ ಚಟ್ನಿ ಸುಲಭವಾಗಿ ಹಾಳಾಗುವುದಿಲ್ಲ ಹಾಗಾಗಿ ಫ್ರಿಡ್ಜ್ ನಲ್ಲಿ ಇಟ್ಟಲ್ಲಿ ನೀವು ಇದನ್ನು ಕೆಲವು ವಾರಗಳ ಕಾಲ ಉಪಯೋಗಿಸಬಹುದು. ಈ ಬಹಳ ಸುಲಭವಾದ ಕೊತ್ತಂಬರಿ ಸೊಪ್ಪಿನ ಚಟ್ನಿ ಅಥವಾ ಕೊತ್ತಂಬರಿ ಸೊಪ್ಪಿನ ತೊಕ್ಕಿನ ಪಾಕವಿಧಾನವನ್ನು ಹಂತ ಹಂತವಾದ ಚಿತ್ರ ವಿವರಣೆಯೊಂದಿಗೆ ಈ ಕೆಳಗೆ ವಿವರಿಸಲಾಗಿದೆ.

ತಯಾರಿ ಸಮಯ: 15 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: 10 ಜನರಿಗೆ

ಬೇಕಾಗುವ ಪದಾರ್ಥಗಳು:

  1. 1 ದೊಡ್ಡ ಕಟ್ಟು ಕೊತ್ತಂಬರಿ ಸೊಪ್ಪು
  2. 6-10 ಹಸಿರು ಮೆಣಸಿನಕಾಯಿ
  3. 1 ಸಣ್ಣ ನಿಂಬೆ ಗಾತ್ರದ ಹುಣಿಸೆ ಹಣ್ಣು
  4. 2 ಚಮಚ ಅಡುಗೆ ಎಣ್ಣೆ
  5. ಉಪ್ಪು ರುಚಿಗೆ ತಕ್ಕಷ್ಟು.

ಕೊತ್ತಂಬರಿ ಸೊಪ್ಪಿನ ಚಟ್ನಿ ಮಾಡುವ ವಿಧಾನ:

  1. ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿಗಳನ್ನು ತೊಳೆದು, ನೀರಾರಸಿ ಕತ್ತರಿಸಿಕೊಳ್ಳಿ.
  2. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಹಸಿರುಮೆಣಸಿನಕಾಯಿಯನ್ನು ಹುರಿದುಕೊಳ್ಳಿ. ನಂತರ ತೆಗೆದು ಪಕ್ಕಕ್ಕಿಡಿ.
  3. ಈಗ ಅದೇ ಬಾಣಲೆಗೆಕತ್ತರಿಸಿದ ಸೊಪ್ಪನ್ನು ಹಾಕಿ, ಸಣ್ಣ ಉರಿಯಲ್ಲಿ, ಸೊಪ್ಪು ಬಾಡುವವರೆಗೆ ಹುರಿದುಕೊಳ್ಳಿ.
  4. ಹುರಿದ ಸೊಪ್ಪು ತಣ್ಣಗಾಗುವವರೆಗೆ ಕಾಯಿರಿ. ನಂತರ ಹುರಿದ ಸೊಪ್ಪು, ಹಸಿರುಮೆಣಸಿನಕಾಯಿ, ಹುಣಿಸೆ ಹಣ್ಣು ಮತ್ತು ಉಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ಅರೆಡುಕೊಳ್ಳಿ. ಗಮನಿಸಿ ನೀರು ಸೇರಿಸದೆ ಅರೆಯಬೇಕು. ಈಗ ಈ ಚಟ್ನಿಯನ್ನು, ಅನ್ನ, ರೊಟ್ಟಿ, ಪರೊಟದೊಂದಿಗೆ ಉಪ್ಪಿನಕಾಯಿ ಅಥವಾ ತೊಕ್ಕಿನಂತೆ ಬಡಿಸಿ.

ಸೋಮವಾರ, ಜನವರಿ 4, 2016

Carrot halwa recipe in Kannada | ಕ್ಯಾರೆಟ್ ಹಲ್ವಾ ಮಾಡುವ ವಿಧಾನ


ಕ್ಯಾರೆಟ್ ಹಲ್ವಾ ಮಾಡುವ ವಿಧಾನ 

ಕ್ಯಾರೆಟ್ ಹಲ್ವಾ ಭಾರತದ ಜನಪ್ರಿಯ ಸಿಹಿ ತಿನಿಸಾಗಿದ್ದು ಬಹಳ ಸರಳ ಪಾಕವಿಧಾನವನ್ನು ಹೊಂದಿದೆ. ಅದರಲ್ಲೂ ಈ ಕೆಳಗೆ ವಿವರಿಸಲಾದ ಕ್ಯಾರಟ್ ಹಲ್ವಾ ಪಾಕವಿಧಾನ ಅತ್ಯಂತ ಸರಳವಾಗಿದ್ದು ಪ್ರೆಶರ್ಕುಕ್ಕರ್ ಬಳಸಿಕೊಂಡು ಮಾಡಲಾಗುತ್ತದೆ. ಈ ಕ್ಯಾರಟ್ ಹಲ್ವಾ ಪಾಕವಿಧಾನಕ್ಕೆ ಬಹಳ ಕಡಿಮೆ ಹಾಲು ಮತ್ತು ಕಡಿಮೆ ಸಮಯ ಸಾಕಾಗುತ್ತದೆ ಹಾಗೂ ಬಹಳ ರುಚಿಕರವಾಗಿರುತ್ತದೆ. ಹೊಸದಾಗಿ ಅಡುಗೆ ಮಾಡುವವರು ಸಹ, ಹೆದರದೆ ಆತ್ಮವಿಶ್ವಾಸದಿಂದ ಮಾಡಬಹುದಾದ ಹಲ್ವಾ ಇದಾಗಿದೆ.
ಕ್ಯಾರೆಟ್ ನಲ್ಲಿ ಅನೇಕ ಆರೋಗ್ಯಕಾರಿ ಅಂಶಗಳಿದ್ದು, ಮಕ್ಕಳಿಗೂ ಮತ್ತು ದೊಡ್ಡವರಿಗೂ ಬಹಳ ಒಳ್ಳೆಯದು. ನಮ್ಮ ಹಿಂದಿನ ಪೋಸ್ಟ್ ಕ್ಯಾರೆಟ್ ಮಿಲ್ಕ್‌ಶೇಕ್ ನಲ್ಲಿ ಕ್ಯಾರೆಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ದಯವಿಟ್ಟು ಓದಿ.
ಕ್ಯಾರೆಟ್ ಹಲ್ವಾ ವೀಡಿಯೋ
ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 4 ಕಪ್ ಕ್ಯಾರೆಟ್ ತುರಿ ಅಥವಾ 4 ಮಧ್ಯಮ ಗಾತ್ರದ ಕ್ಯಾರೆಟ್
  2. 2 ಕಪ್ ಹಾಲು
  3. 3/4 - 1 ಕಪ್ ಸಕ್ಕರೆ
  4. 4 ಟೇಬಲ್ ಸ್ಪೂನ್ ತುಪ್ಪ
  5. 1 ಟೇಬಲ್ ಸ್ಪೂನ್ ಗೋಡಂಬಿ
  6. 1 ಟೇಬಲ್ ಸ್ಪೂನ್ ಒಣ ದ್ರಾಕ್ಷಿ
  7. 1/4 ಟೀಸ್ಪೂನ್ ಏಲಕ್ಕಿ ಪುಡಿ

ಕ್ಯಾರೆಟ್ ಹಲ್ವಾ ಮಾಡುವ ವಿಧಾನ:

  1. ಕ್ಯಾರೆಟ್ ನ್ನು ತೊಳೆದು ತುರಿದುಕೊಳ್ಳಿ.
  2. ಕ್ಯಾರೆಟ್ ತುರಿ ಮತ್ತು ಹಾಲನ್ನು ಕುಕ್ಕರಿಗೆ ಹಾಕಿ.
  3. ಮುಚ್ಚಳ ಮುಚ್ಚಿ ಒಂದು ಅಥವಾ ಎರಡು ವಿಷಲ್ ಬರಿಸಿ. ಹೀಗೆ ಮಾಡುವುದರಿಂದ ಕ್ಯಾರೆಟ್ ಹಲ್ವಾ ಮಾಡಲು ಸುಲಭ ಮತ್ತು ಬಹಳ ಕಡಿಮೆ ಸಮಯದಲ್ಲಿ ಆಗುತ್ತದೆ.
  4. ಬೇಯಿಸಿದ ಕ್ಯಾರೆಟ್ ನ್ನು ದಪ್ಪ ತಳವಿರುವ ಪಾತ್ರೆಗೆ ಹಾಕಿ.
  5. ದೊಡ್ಡ ಉರಿಯಲ್ಲಿ ಕುದಿಸುತ್ತ ಚೆನ್ನಾಗಿ ಮಗುಚಿ.
  6. ಅರ್ಧದಷ್ಟು ಹಾಲು ಕಡಿಮೆ ಆದ ಕೂಡಲೇ, ಉರಿ ತಗ್ಗಿಸಿ, ಸಕ್ಕರೆ ಹಾಕಿ. ಆಗಾಗ್ಯೆ ಮಗುಚುತ್ತಾ ಇರಿ.
  7. ಇನ್ನೊಂದು ಬಾಣಲೆಯಲ್ಲಿ ನಾಲ್ಕು ಟೇಬಲ್ ಚಮಚ ತುಪ್ಪ ಹಾಕಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿಯಿರಿ.
  8. ಹಲ್ವಾದ ನೀರು ಆರುತ್ತಾ ಬಂದಾಗ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ತುಪ್ಪದ ಸಮೇತ ಹಾಕಿ. ಏಲಕ್ಕಿ ಪುಡಿಯನ್ನು ಸೇರಿಸಿ. ಒಂದೆರಡು ನಿಮಿಷ ಚೆನ್ನಾಗಿ ಮಗುಚಿ. ಸ್ಟೋವ್ ಆಫ್ ಮಾಡಿ. ಬಿಸಿ ಅಥವಾ ತಣ್ಣಗೆ ಬಡಿಸಿ.

ಶುಕ್ರವಾರ, ಜನವರಿ 1, 2016

Alugadde mosaru bajji in Kannada | ಆಲೂಗಡ್ಡೆ ಮೊಸರು ಬಜ್ಜಿ ಮಾಡುವ ವಿಧಾನ


ಆಲೂಗಡ್ಡೆ ಮೊಸರು ಬಜ್ಜಿ ಮಾಡುವ ವಿಧಾನ 

ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಾವು ಈ ವರ್ಷದಲ್ಲಿ ಹೆಚ್ಚು ರುಚಿಕರ ಅಡುಗೆಗಳನ್ನು ಹಾಕುವಂತೆ ಆಗಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು !!
ಆಲೂಗಡ್ಡೆ ಸಲಾಡ್ ಅಥವಾ ಆಲೂಗಡ್ಡೆ ಮೊಸರು ಬಜ್ಜಿಯನ್ನು ಅನ್ನ ಅಥವಾ ರೈಸ್ ಬಾತ್ ಗಳೊಂದಿಗೆ ಸವಿಯಬಹುದು. ಅಥವಾ ನೀವು ಊಟದ ಜೊತೆಗೆ ಆಲೂಗಡ್ಡೆ ಸಲಾಡ್ ನ್ನು ಪ್ರತ್ಯೇಕವಾಗಿ ಬಡಿಸಬಹುದು. ಈ ಸಲಾಡ್ ಅಥವಾ ಮೊಸರು ಬಜ್ಜಿಯನ್ನು ಆಲೂಗಡ್ಡೆ, ಮೊಸರು ಮತ್ತು ಕೆಲವು ಮಸಾಲೆಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಹಸಿ ಇಂಗು ಬಳಕೆ ಆಲೂಗಡ್ಡೆ ಸಲಾಡ್ ರುಚಿಯನ್ನು ಹೆಚ್ಚಿಸುತ್ತದೆ. ಸರಳ ಮತ್ತು ಅತ್ಯಂತ ರುಚಿಕರ ಆಲೂಗಡ್ಡೆ ಸಲಾಡ್ ಅಥವಾ ಆಲೂ - ಮೊಸರು - ಬಜ್ಜಿ ಮಾಡುವ ವಿಧಾನವನ್ನು ತಿಳಿಯಿರಿ.
ಆಲೂಗಡ್ಡೆ ಮೊಸರು ಬಜ್ಜಿ ವಿಡಿಯೋ
ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )

  1. 2 ಆಲೂಗಡ್ಡೆ
  2. 1 ಟೀಸ್ಪೂನ್ ಕತ್ತರಿಸಿದ ಶುಂಠಿ
  3. 1 ಟೀಸ್ಪೂನ್ ಕತ್ತರಿಸಿದ ಹಸಿರು ಮೆಣಸಿನಕಾಯಿ
  4. ಒಂದು ದೊಡ್ಡ ಚಿಟಿಕೆ ಇಂಗು
  5. 2 ಟೀಸ್ಪೂನ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು
  7. 1 ಕಪ್ ಮೊಸರು
  8. 1 ಟೀಸ್ಪೂನ್ ಅಡುಗೆ ಎಣ್ಣೆ
  9. 1/4 ಟೀಸ್ಪೂನ್ ಸಾಸಿವೆ

ಆಲೂಗಡ್ಡೆ ಮೊಸರುಬಜ್ಜಿ ಮಾಡುವ ವಿಧಾನ:

  1. ಆಲೂಗಡ್ಡೆ ತೊಳೆದು ನಾಲ್ಕು ಭಾಗಗಳಾಗಿ ಕತ್ತರಿಸಿ. ಸಾಕಷ್ಟು ನೀರು ಸೇರಿಸಿ ಕುಕ್ಕರ್ನಲ್ಲಿ ಬೇಯಿಸಿಕೊಳ್ಳಿ. ತಣ್ಣಗಾದ ಮೇಲೆ ಸಿಪ್ಪೆ ತೆಗೆದು ಪುಡಿ ಮಾಡಿಕೊಳ್ಳಿ.
  2. ಈಗ ಕತ್ತರಿಸಿದ ಶುಂಠಿ , ಕತ್ತರಿಸಿದ ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು ಮತ್ತು ಇಂಗು ಸೇರಿಸಿ.
  3. ಮೊಸರು ಸೇರಿಸಿ ಕಲಸಿ. ಎಣ್ಣೆ ಮತ್ತು ಸಾಸಿವೆಯ ಒಗ್ಗರಣೆ ಕೊಡಿ. ದಯವಿಟ್ಟು ಗಮನಿಸಿ, ಒಗ್ಗರಣೆ ಹಾಕಲೇ ಬೇಕೆಂದೇನಿಲ್ಲ.

Related Posts Plugin for WordPress, Blogger...