Oats payasa recipe in Kannada | ಓಟ್ಸ್ ಪಾಯಸ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)
1/2 ಕಪ್ ಓಟ್ಸ್
1/2 ಕಪ್ ಬೆಲ್ಲ
2.5 ಕಪ್ ಹಾಲು
1 ಕಪ್ ನೀರು
2 ಟೇಬಲ್ ಚಮಚ ತುಪ್ಪ
5-6 ಗೋಡಂಬಿ
ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ಓಟ್ಸ್ ಪಾಯಸ ಮಾಡುವ ವಿಧಾನ:
ಹಾಲನ್ನು ಒಂದು ಪಾತ್ರೆಯಲ್ಲಿ ಕುದಿಯಲು ಇಡಿ.
ಅದೇ ಸಮಯದಲ್ಲಿ ಇನ್ನೊಂದು ಬಾಣಲೆಯಲ್ಲಿ ಓಟ್ಸ್ ಮತ್ತು ತುಪ್ಪ ಹಾಕಿ.
ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಒಂದು ಕಪ್ ಬಿಸಿ ಹಾಲು ಮತ್ತು ಒಂದು ಕಪ್ ನೀರನ್ನು ಸೇರಿಸಿ. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಉರಿ ತಗ್ಗಿಸಿ, ಆಗಾಗ್ಯೆ ಮಗುಚುತ್ತಾ ಓಟ್ಸ್ ನ್ನು ಬೇಯಿಸಿ. ಬೇಗ ಬೇಯುವ ಓಟ್ಸ್ ಆದಲ್ಲಿ ಮೂರು ನಿಮಿಷ ಸಾಕು.
ಸಣ್ಣಗೆ ಕತ್ತರಿಸಿದ ಗೋಡಂಬಿ ಸೇರಿಸಿ.
ಪುಡಿ ಮಾಡಿದ ಬೆಲ್ಲ ಸೇರಿಸಿ.
ಮತ್ತು ಏಲಕ್ಕಿ ಪುಡಿ ಸೇರಿಸಿ.
ಬೆಲ್ಲ ಕರಗಿದ ಮೇಲೆ ಉಳಿದ ಹಾಲು ಹಾಕಿ, ಕುದಿಸಿ. ನೆನಪಿಡಿ ಪಾಯಸ ತಣ್ಣಗಾದ ನಂತರ ಸ್ವಲ್ಪ ಗಟ್ಟಿಯಾಗುತ್ತದೆ. ಅದನ್ನು ಗಮನದಲ್ಲಿಟ್ಟು ಬೇಕಾದಲ್ಲಿ ಹಾಲನ್ನು ಸೇರಿಸಿ. ಸ್ಟೋವ್ ಆಫ್ ಮಾಡಿ.
Jolada dose recipe in Kannada | ಜೋಳದ ದೋಸೆ ಮಾಡುವ ವಿಧಾನ
ಜೋಳದ ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಜೋಳದ ಹಿಟ್ಟು
1/2 ಕಪ್ ಅಕ್ಕಿ ಹಿಟ್ಟು
2 ಟೇಬಲ್ ಚಮಚ ರವೆ (ಬೇಕಾದಲ್ಲಿ)
1 ಸಣ್ಣಗೆ ಹೆಚ್ಚಿದ ಈರುಳ್ಳಿ
1/2 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
1 ಟೀಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು
1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ
ಎಣ್ಣೆ ಅಥವಾ ತುಪ್ಪ (ದೋಸೆ ಮಾಡಲು)
ಉಪ್ಪು ರುಚಿಗೆ ತಕ್ಕಷ್ಟು
ಜೋಳದ ದೋಸೆ ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಜೋಳದ ಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ.
ಆಮೇಲೆ ಜೀರಿಗೆ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಹಸಿರುಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ.
ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತ ತೆಳುವಾದ ಹಿಟ್ಟು ತಯಾರಿಸಿಕೊಳ್ಳಿ. ಆದರೆ ಹಿಟ್ಟು ನೀರು ದೋಸೆ ಅಥವಾ ರವೇ ದೋಸೆಗಿಂತ ಸ್ವಲ್ಪ ಗಟ್ಟಿ ಇರಲಿ.
ಬೇಕಾದಲ್ಲಿ ಎರಡು ಟೇಬಲ್ ಚಮಚ ರವೇ ಸೇರಿಸಿ. ರವೇ ಸೇರಿಸಿದರೇ ದೋಸೆ ಗರಿಗರಿಯಾಗುವುದು ಮತ್ತು ದೋಸೆ ಮಾಡಲು ಸುಲಭವಾಗುವುದು.
ಕಬ್ಬಿಣದ ದೋಸೆ ಕಲ್ಲು ಅಥವಾ ನಾನ್ ಸ್ಟಿಕ್ ಪ್ಯಾನ್ ಬಿಸಿ ಮಾಡಿ. ದೋಸೆ ಕಲ್ಲು ಕಾದಿದೆಯೇ ಎಂದು ತಿಳಿಯಲು ಎರಡು ಹನಿ ನೀರು ಚಿಮುಕಿಸಿ, ಚರ-ಪರ ಸದ್ದಿನೊಂದಿಗೆ ಆವಿಯಾದಲ್ಲಿ ಕಾದಿದೆ ಎಂದರ್ಥ. ಕಬ್ಬಿಣದ ದೋಸೆ ಕಲ್ಲಾದಲ್ಲಿ ಎಣ್ಣೆ ಹಚ್ಚಿ.
ಪ್ರತಿ ದೋಸೆ ಮಾಡುವ ಮುನ್ನ, ಹಿಟ್ಟನ್ನು ಚೆನ್ನಾಗಿ ಸೌಟಿನಲ್ಲಿ ಬೆರೆಸಿಕೊಳ್ಳ ಬೇಕು. ಬಿಸಿ ದೋಸೆ ಕಲ್ಲಿನ ಮೇಲೆ ದೋಸೆ ಹಿಟ್ಟನ್ನು ಸೌಟಿನಿಂದ ಸುರಿಯಿರಿ.
ಮುಚ್ಚಳ ಮುಚ್ಚಿ ಬೇಯಿಸಿ.
ಒಂದೈದು ಸೆಕೆಂಡುಗಳ ನಂತರ ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ.
ನಂತರ ಉರಿಯನ್ನು ಕಡಿಮೆ ಮಾಡಿ, 5 - 10 ಸೆಕೆಂಡುಗಳ ಕಾಲ ಬಿಟ್ಟು, ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ದೋಸೆ ಕಲ್ಲಿನ ಮೇಲೆಯೇ ದೋಸೆಯನ್ನು ಮಡಿಸಿ. ತೆಂಗಿನ ಕಾಯಿ ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಡಿಸಿ.
Ragi sandige recipe in Kannada | ರಾಗಿ ಸಂಡಿಗೆ ಮಾಡುವ ವಿಧಾನ
ರಾಗಿ ಸಂಡಿಗೆ ವಿಡಿಯೋ
ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್)
1/4 ಕಪ್ ರಾಗಿಹಿಟ್ಟು
1.5 ಕಪ್ ನೀರು (ಅರೆಯುವ ನೀರು ಸೇರಿಸಿ)
ದೊಡ್ಡ ಚಿಟಿಕೆ ಇಂಗು
2 - 3 ಹಸಿರುಮೆಣಸಿನಕಾಯಿ
1/2 ಟೀಸ್ಪೂನ್ ಜೀರಿಗೆ
1/2 ಟೀಸ್ಪೂನ್ ಉಪ್ಪು ಅಥವಾ ರುಚಿಗೆ ತಕ್ಕಷ್ಟು
ರಾಗಿ ಸಂಡಿಗೆ ಮಾಡುವ ವಿಧಾನ:
ರಾಗಿ ಹಿಟ್ಟು, ಉಪ್ಪು, ಹಸಿರುಮೆಣಸಿನಕಾಯಿ ಮತ್ತು ಇಂಗನ್ನು ಮಿಕ್ಸಿ ಜಾರಿನಲ್ಲಿ ತೆಗೆದುಕೊಳ್ಳಿ.
ಅಗತ್ಯವಿದ್ದಷ್ಟು ನೀರು ಸೇರಿಸಿ, ಅರೆಯಿರಿ. ಒಂದರ್ಧ ಘಂಟೆ ನೆನೆಯಲು ಬಿಡಿ. ಗಮನಿಸಿ ಅರೆಯದೆಯೂ ಮಾಡಬಹುದು. ರಾಗಿ ಹಿಟ್ಟಿಗೆ ಉಪ್ಪು ಮತ್ತು ಹಸಿರುಮೆಣಸಿನಕಾಯಿಯನ್ನು ಜಜ್ಜಿ ಹಾಕಿದರಾಯಿತು.
ಅರೆದ ರಾಗಿ ಹಿಟ್ಟನ್ನು, ಉಳಿದ ನೀರಿನೊಂದಿಗೆ ಒಂದು ಬಾಣಲೆಗೆ ಹಾಕಿ, ಕುದಿಯಲು ಇಡೀ.
ಐದಾರು ನಿಮಿಷ ಅಥವಾ ಸ್ವಲ್ಪ ಗಟ್ಟಿಯಾಗುವವರೆಗೆ ಮಗುಚಿ.
ಜೀರಿಗೆ ಸೇರಿಸಿ, ಸ್ಟವ್ ಆಫ್ ಮಾಡಿ.
ಬಿಸಿ ಕಡಿಮೆ ಆದ ಮೇಲೆ, ಒಂದು ಪ್ಲಾಸ್ಟಿಕ್ ಶೀಟ್ ಅಥವಾ ಎಣ್ಣೆ ಸವರಿದ ಪ್ಲೇಟ್ ನಲ್ಲಿ ಸಂಡಿಗೆ ಹಾಕಿ. ಬಿಸಿಲಿನಲ್ಲಿ ಒಣಗಲು ಇಡಿ.
ದಿನದ ಕೊನೆಯಲ್ಲಿ ಸಂಡಿಗೆಯನ್ನು ಮಗುಚಿ ಹಾಕಿ.
ಮತ್ತೊಂದೆರಡು ದಿವಸ, ಬಿಸಿಲಿನಲ್ಲಿಟ್ಟು ಗರಿ-ಗರಿ ಯಾಗುವವರೆಗೆ ಒಣಗಿಸಿ. ಗಾಳಿಯಾಡದ ಡಬ್ಬದಲ್ಲಿ ಎತ್ತಿಡಿ. ಇದನ್ನು ಎಣ್ಣೆಯಲ್ಲಿ ಕಾಯಿಸಿ ಊಟಕ್ಕೆ ಬಡಿಸಬಹುದು. ಖಾಯಿಸುವಾಗ ಎಣ್ಣೆ ಬಿಸಿ ಇರಲಿ..ಆದರೆ ಬೇಗ-ಬೇಗ ಖಾಯಿಸಬೇಕು.