Khara bath recipe in Kannada | ಖಾರ ಬಾತ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್)
1 ಕಪ್ ಬನ್ಸಿ ರವೇ
2.5 ಕಪ್ ನೀರು
1/2 ಟೀಸ್ಪೂನ್ ಸಾಸಿವೆ
1 ಟೀಸ್ಪೂನ್ ಉದ್ದಿನಬೇಳೆ
1 ಟೀಸ್ಪೂನ್ ಕಡ್ಲೆಬೇಳೆ
1 ದೊಡ್ಡ ಈರುಳ್ಳಿ
1 ಟೊಮ್ಯಾಟೋ
1/2 ದೊಣ್ಣೆಮೆಣಸು
1 ಸಣ್ಣ ಕ್ಯಾರಟ್
5 - 6 ಬೀನ್ಸ್
1/4 ಕಪ್ ಹಸಿ ಬಟಾಣಿ
1-2 ಹಸಿರು ಮೆಣಸಿನಕಾಯಿ
4-5 ಕರಿ ಬೇವಿನ ಎಲೆ
1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
1/4 ಟೀಸ್ಪೂನ್ ಅರಶಿನ ಪುಡಿ
2 - 3 ವಾಂಗೀಬಾತ್ ಪುಡಿ
6-8 ಟೀಸ್ಪೂನ್ ಅಡುಗೆ ಎಣ್ಣೆ
1 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
1/2 ಕಪ್ ತೆಂಗಿನತುರಿ
ಬೇಕಾಗುವ ಪದಾರ್ಥಗಳು: (ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ)
1.5 ಟೀಸ್ಪೂನ್ ಕೊತ್ತಂಬರಿ ಬೀಜ
1 ಟೀಸ್ಪೂನ್ ಉದ್ದಿನಬೇಳೆ
1 ಟೀಸ್ಪೂನ್ ಕಡ್ಲೆಬೇಳೆ
1/4 ಟೀಸ್ಪೂನ್ ಗಸಗಸೆ
4 - 5 ಲವಂಗ
1/4 ಬೆರಳುದ್ದ ಚಕ್ಕೆ
1/2 ಕಪ್ ಕೊಬ್ಬರಿ
ಖಾರ ಬಾತ್ ಮಾಡುವ ವಿಧಾನ:
ವಾಂಗೀಬಾತ್ ಪುಡಿ ಇಲ್ಲದಿದ್ದಲ್ಲಿ, ಎಲ್ಲ ಪದಾರ್ಥಗಳನ್ನು ಹುರಿದು, ಕೊಬ್ಬರಿಯೊಂದಿಗೆ ಪುಡಿ ಮಾಡಿ.
ತರಕಾರಿಗಳನ್ನು ತೊಳೆದು, ಕತ್ತರಿಸಿಟ್ಟುಕೊಳ್ಳಿ. ಹಾಗೇ ಈರುಳ್ಳಿ, ಟೊಮ್ಯಾಟೋ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟು ಕೊಳ್ಳಿ. ಬೇರೆ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
ಒಂದು ಕುಕ್ಕರ್ ನಲ್ಲಿ ಕತ್ತರಿಸಿದ ಬೀನ್ಸ್, ಕ್ಯಾರಟ್ ಮತ್ತು ಹಸಿ ಬಟಾಣಿಯನ್ನು ಸ್ವಲ್ಪ ನೀರಿನಲ್ಲಿ (ಸುಮಾರು ಅರ್ಧ ಕಪ್) ಬೇಯಿಸಿಕೊಳ್ಳಿ.
ಒಂದು ಬಾಣಲೆ ಬಿಸಿಮಾಡಿ, ಎಣ್ಣೆ, ಸಾಸಿವೆ, ಉದ್ದಿನಬೇಳೆ ಮತ್ತು ಕಡ್ಲೆಬೇಳೆ ಹಾಕಿ.
ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ.
ನಂತರ ಈರುಳ್ಳಿ ಮತ್ತು ದೊಣ್ಣೆಮೆಣಸು ಹಾಕಿ ಮೆತ್ತಗಾಗುವವರೆಗೆ ಮಧ್ಯಮ ಉರಿಯಲ್ಲಿ ಹುರಿಯಿರಿ.
ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೋ ಹಾಕಿ.
ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೋ ಮೆತ್ತಗಾಗುವವರೆಗೆ ಹುರಿಯಿರಿ.
ಸುಮಾರು 2 ಕಪ್ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದ ಕೂಡಲೇ ರವೇ (ದೊಡ್ಡ ರವೇ) ಹಾಕಿ ಮಗುಚಿ.
ಒಂದು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಿನತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮಗುಚಿ. ಪುನಃ ಮುಚ್ಚಳ ಮುಚ್ಚಿ, 2-3 ನಿಮಿಷಗಳ ಕಾಲ ಬೇಯಲು ಬಿಡಿ. ಸ್ಟವ್ ಆಫ್ ಮಾಡಿ, ಬಡಿಸಿ.
Veg lollipop recipe in Kannada | ವೆಜ್ ಲಾಲಿಪಾಪ್ ಮಾಡುವ ವಿಧಾನ
ವೆಜ್ ಲಾಲಿಪಾಪ್ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ದೊಡ್ಡ ಆಲೂಗಡ್ಡೆ
1 ಸಣ್ಣ ಕ್ಯಾರಟ್ ತುರಿದಿದ್ದು
1/2 ದೊಣ್ಣೆಮೆಣಸು ಸಣ್ಣಗೆ ಹೆಚ್ಚಿದ್ದು
1/2 ಟೀಸ್ಪೂನ್ ಜೀರಿಗೆ
1/2 ಈರುಳ್ಳಿ
1 ಟೀಸ್ಪೂನ್ ಸಣ್ಣದಾಗಿ ಕೊಚ್ಚಿದ ಶುಂಠಿ ಮತ್ತು ಬೆಳ್ಳುಳ್ಳಿ
1 ಟೇಬಲ್ ಚಮಚ ಸಣ್ಣದಾಗಿ ಕೊಚ್ಚಿದ ಕೊತ್ತಂಬರಿ ಸೊಪ್ಪು
1/2 - 1 ಟೀಸ್ಪೂನ್ ಅಚ್ಚಖಾರದ ಪುಡಿ
1/2 ಟೀಸ್ಪೂನ್ ಕೊತ್ತಂಬರಿ ಪುಡಿ
1/4 ಟೀಸ್ಪೂನ್ ಜೀರಿಗೆ ಪುಡಿ
1/4 ಟೀಸ್ಪೂನ್ ಗರಂ ಮಸಾಲಾ
ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ ಅಥವಾ ಸ್ವಲ್ಪ ನಿಂಬೆ ರಸ
ದೊಡ್ಡ ಚಿಟಿಕೆ ಅರಿಶಿನ
ದೊಡ್ಡ ಚಿಟಿಕೆ ಚಾಟ್ ಮಸಾಲಾ
3 ಬ್ರೆಡ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಕಾಯಿಸಲು
ವೆಜ್ ಲಾಲಿಪಾಪ್ ಮಾಡುವ ವಿಧಾನ:
ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆಯಿರಿ.
2 ಟೀಸ್ಪೂನ್ ಎಣ್ಣೆಯನ್ನು ಒಂದು ಬಾಣಲೆಯಲ್ಲಿ ಬಿಸಿ ಮಾಡಿ ಜೀರಿಗೆ ಹಾಕಿ.
ಜೀರಿಗೆ ಸಿಡಿದ ಮೇಲೆ ನುಣ್ಣಗೆ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿ ಸೇರಿಸಿ.
ಕೂಡಲೇ ಈರುಳ್ಳಿ ಸೇರಿಸಿ ಮೆತ್ತಗಾಗುವವರೆಗೆ ಹುರಿಯಿರಿ.
ತುರಿದ ಕ್ಯಾರಟ್ ಮತ್ತು ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು ಸೇರಿಸಿ ಹುರಿಯಿರಿ.
ನಂತ್ರ ಮಸಾಲೆ ಪುಡಿಗಳನ್ನು ಸೇರಿಸಿ. ನಾನು ಇಲ್ಲಿ ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಮಾವಿನಕಾಯಿ ಪುಡಿ, ಅರಿಶಿನ, ಚಾಟ್ ಮಸಾಲಾ ಮತ್ತು ಉಪ್ಪು ಸೇರಿಸಿದ್ದೇನೆ. ಸ್ಟವ್ ಆಫ್ ಮಾಡಿ.
ಅದಕ್ಕೆ ಬೇಯಿಸಿದ ಆಲೂಗಡ್ಡೆ, ಕೊತ್ತಂಬರಿ ಸೊಪ್ಪು ಸೇರಿಸಿ.
ಒಂದು ಬ್ರೆಡ್ ನ್ನು ನೀರಿನಲ್ಲಿ ಹಾಕಿ, ಹಿಂಡಿ ತೆಗೆದು ಸೇರಿಸಿ ಚೆನ್ನಾಗಿ ಕಲಸಿ.
ಸಣ್ಣ ನಿಂಬೆಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ.
ಉಳಿದ ಎರಡು ಬ್ರೆಡ್ ನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟು ಕೊಳ್ಳಿ.
ವೆಜ್ ಲಾಲಿಪಾಪ್ ಉಂಡೆಗಳನ್ನು ಆ ಬ್ರೆಡ್ ಪುಡಿಯಲ್ಲಿ ಹೊರಳಾಡಿಸಿ.
ಗುಳಿಯಪ್ಪ ಅಥವಾ ಪಡ್ಡು ಪಾನ್ ನ್ನು ಬಿಸಿಮಾಡಿ, ಗುಳಿಗಳಿಗೆ ಸ್ವಲ್ಪ ಎಣ್ಣೆ ಹಾಕಿ.
ತಯಾರಿಸದ ವೆಜ್ ಲಾಲಿಪಾಪ್ ಉಂಡೆಗಳನ್ನು ಹಾಕಿ ಸಣ್ಣ ಉರಿಯಲ್ಲಿ ತಿರುವಿ ಹಾಕುತ್ತ ಬೇಯಿಸಿ. ಅಗತ್ಯವಿದ್ದಷ್ಟು ಎಣ್ಣೆ ಹಾಕಿ ಕಾಯಿಸಿ.
ಟೂತ್ ಪಿಕ್ ಚುಚ್ಚಿ. ಬಿಸಿ ಇರುವಾಗಲೇ ಟೊಮೇಟೊ ಸಾಸ್ ನೊಂದಿಗೆ ಬಡಿಸಿ.
Hagalakai pakoda recipe in kannada | ಹಾಗಲಕಾಯಿ ಪಕೋಡ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ದೊಡ್ಡಹಾಗಲಕಾಯಿ
3 ಟೇಬಲ್ ಚಮಚ ಕಡ್ಲೆ ಹಿಟ್ಟು
1 ಟೇಬಲ್ ಚಮಚ ಅಕ್ಕಿ ಹಿಟ್ಟು
1 ಟೀಸ್ಪೂನ್ ಅಚ್ಚ ಖಾರದ ಪುಡಿ
1/4 ಟೀಸ್ಪೂನ್ ಇಂಗು
1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಖಾಯಿಸಲು ಅಥವಾ ಕರಿಯಲು
ಹಾಗಲಕಾಯಿ ನೆನೆಸಲು ಬೇಕಾಗುವ ಪದಾರ್ಥಗಳು:
1/4 ಟೀಸ್ಪೂನ್ ಅರಿಶಿನ
1 ಟೀಸ್ಪೂನ್ಉಪ್ಪು
ಅಗತ್ಯವಿದ್ದಷ್ಟು ನೀರು
ಬೇಕಾಗುವ ಪದಾರ್ಥಗಳು: (ಬೇಕಾದಲ್ಲಿ)
1/4 ಟೀಸ್ಪೂನ್ ಓಮ ಅಥವಾ ಅಜ್ವೈನ್
1/4 ಟೀಸ್ಪೂನ್ ಜೀರಿಗೆ
ದೊಡ್ಡ ಚಿಟಿಕೆ ಮಾವಿನಕಾಯಿ ಪುಡಿ
1/2 ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಾಗಲಕಾಯಿ ಪಕೋಡ ಮಾಡುವ ವಿಧಾನ:
ಹಾಗಲಕಾಯಿಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ನೀರು, ಉಪ್ಪು ಮತ್ತು ಅರಿಶಿನ ಹಾಕಿ. ಕತ್ತರಿಸಿದ ಹಾಗಲಕಾಯಿಯನ್ನು 15 - 20 ನಿಮಿಷ ನೆನೆಸಿಡಿ.
ನಂತ್ರ ನೀರು ಹಿಂಡಿ ತೆಗೆದಿಡಿ.
ಇನ್ನೊಂದು ಪಾತ್ರೆಯಲ್ಲಿ ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟು ತೆಗೆದುಕೊಳ್ಳಿ.
ಅದಕ್ಕೆ ಮೆಣಸಿನ ಪುಡಿ, ಉಪ್ಪು ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ. ನಿಮ್ಮಿಷ್ಟದ ಬೇರೆ ಪದಾರ್ಥಗಳನ್ನು ಸೇರಿಸಬಹುದು. ಮೇಲಿನ "ಬೇಕಾದಲ್ಲಿ" ಎಂದು ನಮೂದಿಸಿದ ಪಟ್ಟಿ ನೋಡಿ.
ನಂತರ ಕತ್ತರಿಸಿ, ನೆನೆಸಿದ ಹಾಗಲಕಾಯಿ ಹಾಕಿ.
ಒಂದೆರಡು ಚಮಚ ನೀರು ಸಿಂಪಡಿಸಿ, ಕಲಸಿಕೊಳ್ಳಿ. ಹೆಚ್ಚು ನೀರು ಬೇಡ.
ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಸ್ವಲ್ಪ ಸ್ವಲ್ಪವಾಗಿ ಬಿಸಿ ಎಣ್ಣೆಗೆ ಹಾಕಿ. ಒಂದರ ಮೇಲೊಂದು ಬೀಳದಂತೆ ಜಾಗ್ರತೆ ವಹಿಸಿ.
ಸ್ವರ ಅಥವಾ ಗುಳ್ಳೆಗಳು ನಿಲ್ಲುವವರೆಗೆ ಕಾಯಿಸಿ. ಚಹಾ ಅಥವಾ ಊಟದೊಂದಿಗೆ ಬಡಿಸಿ.
Tomato poori recipe in Kannada | ಟೊಮೇಟೊ ಪೂರಿ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ಗೋಧಿ ಹಿಟ್ಟು
2 ಮಧ್ಯಮ ಗಾತ್ರದ ಟೊಮೇಟೊ
2 ಟೇಬಲ್ ಚಮಚ ಸಣ್ಣ ರವೆ
1 ಚಮಚ ತುಪ್ಪ
1/4 ಟೀಸ್ಪೂನ್ ಓಮಕಾಳು
1/2 ಟೀಸ್ಪೂನ್ ಅಚ್ಚಖಾರದ ಪುಡಿ
1/2 ಟೀಸ್ಪೂನ್ ಕೊತ್ತಂಬರಿ ಪುಡಿ
1/4 ಟೀಸ್ಪೂನ್ ಜೀರಿಗೆ ಪುಡಿ
ದೊಡ್ಡ ಚಿಟಿಕೆ ಗರಂ ಮಸಾಲೆ
ಒಂದು ಚಿಟಿಕೆ ಇಂಗು
1 ಟೇಬಲ್ ಸ್ಪೂನ್ ಕತ್ತರಿಸಿದ ಕರಿಬೇವಿನ ಎಲೆ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ ಪೂರಿ ಕಾಯಿಸಲು
ಟೊಮೇಟೊ ಪೂರಿ ಮಾಡುವ ವಿಧಾನ:
ಟೊಮ್ಯಾಟೊವನ್ನು ತೊಳೆದು, ಕತ್ತರಿಸಿ, ಮಿಕ್ಸಿಯಲ್ಲಿ ಅರೆದಿಟ್ಟುಕೊಳ್ಳಿ. ನೀರು ಸೇರಿಸುವ ಅಗತ್ಯವಿಲ್ಲ.
ಒಂದು ಅಗಲವಾದ ಬಟ್ಟಲಿಗೆ ಗೋಧಿ ಹಿಟ್ಟು ಮತ್ತು ಸಣ್ಣ ರವೆ ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ರವೆ ಹಾಕುವುದರಿಂದ ಪೂರಿ ಚೆನ್ನಾಗಿ ಉಬ್ಬಿ, ಗರಿ ಗರಿಯಾಗುತ್ತದೆ.
ನಂತರ 1 ಚಮಚ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ.
ಅದಕ್ಕೆ ಓಮಕಾಳು, ಅಚ್ಚಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಇಂಗು ಮತ್ತು ಉಪ್ಪು ಸೇರಿಸಿ. ನಿಮ್ಮಿಷ್ಟದ ಮಸಾಲೆ ಪುಡಿಗಳನ್ನು ಸೇರಿಸಬಹುದು.
ಹೆಚ್ಚಿದ ಕರಿಬೇವಿನ ಎಲೆ ಸೇರಿಸಿ.
ಅರೆದಿಟ್ಟ ಟೊಮೇಟೊ ಹಾಕಿ ಪೂರಿ ಹಿಟ್ಟನ್ನು ತಯಾರಿಸಿ. ಹಿಟ್ಟು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಅಗತ್ಯವಿದ್ದಷ್ಟು ಟೊಮೇಟೊ ಪೇಸ್ಟ್ ಹಾಕಿದರೆ ಸಾಕು. ನೀರು ಸೇರಿಸುವ ಅಗತ್ಯ ಇಲ್ಲ.
ಸಣ್ಣ ಲಿಂಬೆ ಹಣ್ಣಿನ ಗಾತ್ರದ ಉಂಡೆಗಳನ್ನು ಮಾಡಿಕೊಳ್ಳಿ.
ಸ್ವಲ್ಪ ಹಿಟ್ಟು ಉದುರಿಸಿ ಅಂಗೈ ಅಗಲದ ಪೂರಿ ಲಟ್ಟಿಸಿ. ಪೂರಿ ಚಪಾತಿಗಿಂತ ಸ್ವಲ್ಪ ದಪ್ಪನಾಗಿರಲಿ.
ಎಣ್ಣೆ ಕಾಯಿಸಿ ಒಂದೊಂದಾಗಿ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. ಕಾಯಿಸುವಾಗ ಒಂದೋ ಸೌಟಿನ ಹಿಂಭಾಗದಿಂದ ಮೆಲ್ಲನೆ ಒತ್ತುವುದು, ಇಲ್ಲವೇ ಎಣ್ಣೆ ಹಾರಿಸುವುದು ಮಾಡಿದಲ್ಲಿ ಪೂರಿ ಚೆನ್ನಾಗಿ ಉಬ್ಬುವುದು.
ಎರಡು ಬದಿ ಕಾಯಿಸಿ. ಚಟ್ನಿ ಅಥವಾ ಯಾವುದೇ ಗೊಜ್ಜಿನೊಂದಿಗೆ ಬಡಿಸಿ.