Corn pulao recipe in Kannada | ಕಾರ್ನ್ ಪಲಾವ್ ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1 ಕಪ್ ಅಕ್ಕಿ (ಸೋನಾ ಮಸೂರಿ)
1 ಕಪ್ ಸಿಹಿ ಮೆಕ್ಕೆಜೋಳ (ಕಾರ್ನ್)
1 ದೊಡ್ಡ ಈರುಳ್ಳಿ
1 ಟೊಮ್ಯಾಟೋ
1/2 ಬೆರಳುದ್ದ ಚಕ್ಕೆ
7 - 8 ಲವಂಗ
1 ಏಲಕ್ಕಿ
1 ಚಕ್ರ ಮೊಗ್ಗು
1 ಪುಲಾವ್ ಎಲೆ
1/4 ಟೀಸ್ಪೂನ್ ಅರಶಿನ ಪುಡಿ (ಬೇಕಾದಲ್ಲಿ)
3 ಟೇಬಲ್ ಚಮಚ ಅಡುಗೆ ಎಣ್ಣೆ / ತುಪ್ಪ
2 ಕಪ್ ನೀರು (ಅಕ್ಕಿಯ ಗುಣಮಟ್ಟ ಅವಲಂಬಿಸಿ)
2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
ಮಸಾಲೆಗೆ ಬೇಕಾಗುವ ಪದಾರ್ಥಗಳು:
1/2 ಕಪ್ ತೆಂಗಿನತುರಿ
2ಸೆಮೀ ಉದ್ದದ ಶುಂಠಿ
5-6 ಎಸಳು ಬೆಳ್ಳುಳ್ಳಿ
1 ಟೀಸ್ಪೂನ್ ಕೊತ್ತಂಬರಿ ಬೀಜ
1/2 ಟೀಸ್ಪೂನ್ ಜೀರಿಗೆ
1-2 ಹಸಿರುಮೆಣಸಿನಕಾಯಿ
ಒಂದು ಹಿಡಿ ಕೊತ್ತಂಬರಿ ಸೊಪ್ಪು
1/2 ಕಪ್ ನೀರು ಅರೆಯಲು
ಕಾರ್ನ್ ಪಲಾವ್ ಮಾಡುವ ವಿಧಾನ:
ಮೊದಲಿಗೆ ಅಕ್ಕಿ ತೊಳೆದಿಟ್ಟುಕೊಳ್ಳಿ.
ಜೋಳ ತೆಗೆದಿಟ್ಟುಕೊಳ್ಳಿ. ಟೊಮ್ಯಾಟೋ ಮತ್ತು ಈರುಳ್ಳಿಯನ್ನು ಸಹ ಕತ್ತರಿಸಿ ಸಿದ್ಧ ಮಾಡಿಟ್ಟುಕೊಳ್ಳಿ.
ಮಸಾಲೆ ಅರೆಯಲು ಪಟ್ಟಿ ಮಾಡಿದ ಎಲ್ಲ ಪದಾರ್ಥಗಳನ್ನು 1/2 ಕಪ್ ನೀರು ಬಳಸಿಕೊಂಡು ಮಿಕ್ಸಿಯಲ್ಲಿ ತರಿ ತರಿಯಾಗಿ ಅರೆದು ಕೊಳ್ಳಿ.
ಈಗ ಒಂದು 5ಲೀ ನಷ್ಟು ದೊಡ್ಡ ಕುಕ್ಕರ್ ತೆಗೆದುಕೊಂಡು ಎಣ್ಣೆ ಅಥವಾ ತುಪ್ಪ ಹಾಕಿ. ಚಕ್ಕೆ, ಲವಂಗ, ಏಲಕ್ಕಿ, ಚಕ್ರ ಮೊಗ್ಗು ಮತ್ತು ಪುಲಾವ್ ಎಲೆ ಹಾಕಿ ಹುರಿಯಿರಿ.
ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹುರಿಯಿರಿ.
ಈರುಳ್ಳಿ ಮೆತ್ತಗಾದ ಕೂಡಲೇ ಟೊಮ್ಯಾಟೋ ಹಾಕಿ ಹುರಿಯಿರಿ. ನಿಂಬೆ ರಸ ಹಾಕುವುದಾದಲ್ಲಿ ಕೊನೆಯಲ್ಲಿ ಬಡಿಸುವ ಮುನ್ನ ಸೇರಿಸಿ.
ಈಗ ಬಿಡಿಸಿದ ಜೋಳ ಹಾಕಿ ಮಗುಚಿ.
ಆಮೇಲೆ ಅರೆದ ಮಸಾಲೆ ಮತ್ತು ಅರಶಿನ ಪುಡಿ ಹಾಕಿ ಪುನಃ 5 ನಿಮಿಷಗಳ ಕಾಲ ಹುರಿಯಿರಿ.
ತೊಳೆದಿಟ್ಟ ಅಕ್ಕಿ ಹಾಕಿ. ಒಮ್ಮೆ ಚೆನ್ನಾಗಿ ಮಗುಚಿ. 2ಕಪ್ ನೀರು ಸೇರಿಸಿ (ಅನ್ನಕ್ಕೆ ಬಳಸುವ ನೀರಿಗಿಂತ ಸ್ವಲ್ಪ ಕಡಿಮೆ).
ಉಪ್ಪು ಹಾಕಿ, ಪುನಃ ಒಮ್ಮೆ ಕಲಸಿ. ಮುಚ್ಚಳ ಮುಚ್ಚಿ 2 ವಿಷಲ್ ಮಾಡಿ.
ಒತ್ತಡ ಕಡಿಮೆಯಾದ ಮೇಲೆ, ಮುಚ್ಚಳ ತೆರೆದು, ಜಾಗ್ರತೆಯಿಂದ ಮುದ್ದೆಯಾಗದಂತೆ ಕಲಸಿ. ಟೊಮೇಟೊ ಬದಲಾಗಿ ನಿಂಬೆ ರಸ ಹಾಕುವುದಾದಲ್ಲಿ ಈಗ ಹಾಕಿ ಕಲಸಿ. ಮೊಸರು ಬಜ್ಜಿ ಯೊಂದಿಗೆ, ಇಲ್ಲವೇ ಹಾಗೆ ಬಿಸಿ ಬಿಸಿಯಾಗಿರುವಾಗ ಬಡಿಸಿ.
Avalakki sweet pongal | ಅವಲಕ್ಕಿ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ
ಅವಲಕ್ಕಿ ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ ವಿಡಿಯೋ
ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 240 ಎಂಎಲ್ )
1/2 ಕಪ್ ಹೆಸರುಬೇಳೆ
1 ಕಪ್ ಅವಲಕ್ಕಿ (ಮೀಡಿಯಂ ದಪ್ಪ)
3/4 ಕಪ್ ಬೆಲ್ಲ
1/4 ಕಪ್ ತೆಂಗಿನತುರಿ
1/2 ಕಪ್ ಹಾಲು
2 ಟೇಬಲ್ ಸ್ಪೂನ್ ತುಪ್ಪ
1 ಟೇಬಲ್ ಚಮಚ ಗೋಡಂಬಿ
1 ಟೇಬಲ್ ಚಮಚ ಒಣ ದ್ರಾಕ್ಷಿ
ದೊಡ್ಡ ಚಿಟಿಕೆ ಏಲಕ್ಕಿ ಪುಡಿ
ದೊಡ್ಡ ಚಿಟಿಕೆ ಒಣಶುಂಠಿ ಪುಡಿ
ಒಂದು ಚಿಟಿಕೆ ಉಪ್ಪು (ಬೇಕಾದಲ್ಲಿ)
ಅವಲಕ್ಕಿ ಸಿಹಿ ಪೊಂಗಲ್ ಮಾಡುವ ವಿಧಾನ:
ಹೆಸರು ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಘಮ್ಮೆಂದು ಸುವಾಸನೆ ಬರುವವರೆಗೆ ಹುರಿಯಿರಿ. ನೆನಪಿಡಿ, ಕೆಲವು ನಿಮಿಷಗಳ ಕಾಲ ಹುರಿದರೆ ಸಾಕಾಗುವುದು.
ಒಂದು ಕುಕ್ಕರ್‌ನಲ್ಲಿ ಹುರಿದ ಬೇಳೆಯನ್ನು ಹಾಕಿ ಎರಡು ಬಾರಿ ತೊಳೆಯಿರಿ.
ನಂತರ 1 ಕಪ್ ನೀರು ಹಾಕಿ, 2 ವಿಷಲ್ ಮಾಡಿ ಬೇಯಿಸಿಕೊಳ್ಳಿ.
ಆ ಸಮಯದಲ್ಲಿ ಒಂದು ಸಣ್ಣ ಪಾತ್ರೆ ತೆಗೆದುಕೊಂಡು ಒಂದು 1/2 ಕಪ್ ಬಿಸಿ ನೀರು ಮತ್ತು ಬೆಲ್ಲ ಹಾಕಿಡಿ. ಈ ಬೆಲ್ಲದ ನೀರನ್ನು ಆಮೇಲೆ ಬಳಸುತ್ತೇವೆ.
ಇನ್ನೊಂದು ಸಣ್ಣ ಪಾತ್ರೆಯಲ್ಲಿ ಅವಲಕ್ಕಿ ತೆಗೆದುಕೊಂಡು ತೊಳೆದು ಪಕ್ಕಕ್ಕಿಡಿ. ನೆನೆಸುವ ಅಗತ್ಯವಿಲ್ಲ. ಗಟ್ಟಿ ಅವಲಕ್ಕಿ ಆದಲ್ಲಿ ಐದು ನಿಮಿಷ ನೆನೆಸಿ.
ಬೇಳೆ ಬೆಂದ ಮೇಲೆ ಅದಕ್ಕೆ ತೊಳೆದಿಟ್ಟ ಅವಲಕ್ಕಿ ಹಾಕಿ.
ಬೆಲ್ಲದ ನೀರನ್ನು ಜರಡಿಯ ಮೂಲಕ ಸೋಸಿ ಹಾಕಿ.
ಒಂದು ಚಿಟಿಕೆ ಉಪ್ಪು (ಬೇಕಾದಲ್ಲಿ), ತೆಂಗಿನ ತುರಿ ಹಾಕಿ ಚೆನ್ನಾಗಿ ಮಗುಚಿ ಕುದಿಯಲು ಇಡೀ.
ಹಾಲನ್ನು ಸೇರಿಸಿ.
ಅವಲಕ್ಕಿ ಪೊಂಗಲ್ ಬಿಸಿ ಆರಿದ ಮೇಲೆ ಗಟ್ಟಿ ಆಗುವುದರಿಂದ, ಸ್ವಲ್ಪ ನೀರು ಸೇರಿಸಿ ಕುದಿಸಿ.
ಏಲಕ್ಕಿ ಮತ್ತು ಒಣಶುಂಠಿ ಪುಡಿ ಸೇರಿಸಿ.
ಚಿಕ್ಕ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ ಬಿಸಿಮಾಡಿ, ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ಹುರಿಯಿರಿ. ಕುದಿಯುತ್ತಿರುವ ಸಿಹಿ ಪೊಂಗಲ್ ಗೆ ಹಾಕಿ ಸ್ಟೋವ್ ಆಫ್ ಮಾಡಿ. ಬಿಸಿಯಾಗಿರುವಾಗಲೇ ಬಡಿಸಿ.
Maragenasu dose recipe in Kannada | ಮರ ಗೆಣಸು ದೋಸೆ ಮಾಡುವ ವಿಧಾನ
ಮರ ಗೆಣಸು ದೋಸೆ ವಿಡಿಯೋ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
1 ಕಪ್ ದೋಸೆ ಅಕ್ಕಿ
1 ಕಪ್ ಕತ್ತರಿಸಿದ ಮರಗೆಣಸು
1 ಟೀಸ್ಪೂನ್ ಕೊತ್ತಂಬರಿ ಬೀಜ
1/2 ಟೀಸ್ಪೂನ್ ಜೀರಿಗೆ
1 - 2 ಕೆಂಪು ಮೆಣಸಿನಕಾಯಿ
1 ಟೇಬಲ್ ಚಮಚ ಕತ್ತರಿಸಿದ ಕರಿಬೇವು
1 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
ದೊಡ್ಡ ಚಿಟಿಕೆ ಇಂಗು
ಎಣ್ಣೆ ದೋಸೆ ಮಾಡಲು
ಉಪ್ಪು ರುಚಿಗೆ ತಕ್ಕಷ್ಟು
ಮರ ಗೆಣಸು ದೋಸೆ ಮಾಡುವ ವಿಧಾನ:
ಅಕ್ಕಿಯನ್ನು 4 - 5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
ಮರಗೆಣಸನ್ನು ಸಿಪ್ಪೆ ತೆಗೆದು ಕತ್ತರಿಸಿಟ್ಟುಕೊಳ್ಳಿ.
ಅಕ್ಕಿ ನೆನೆದ ನಂತರ ನೀರನ್ನು ಬಗ್ಗಿಸಿ ಮಿಕ್ಸಿ ಜಾರಿಗೆ ಹಾಕಿ.
ಕತ್ತರಿಸಿದ ಮರಗೆಣಸು ಸೇರಿಸಿ.
ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸಿನಕಾಯಿ ಹಾಕಿ, ಅಗತ್ಯವಿದ್ದಷ್ಟು ನೀರು ಸೇರಿಸಿ, ಮಿಕ್ಸರ್ ಗ್ರೈಂಡರ್ ನಲ್ಲಿ ನಯವಾಗಿ ಅರೆಯಿರಿ.
ಅರೆದ ಮೇಲೆ ಒಂದು ಪಾತ್ರೆಗೆ ಹಾಕಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಮತ್ತು ಅಗತ್ಯವಿದ್ದಷ್ಟು ನೀರು ಸೇರಿಸಿ. ಹಿಟ್ಟು ತೆಳುವಾದ ಮಿಲ್ಕ್ ಶೇಕ್ ನಂತಿರಲಿ.
ಹಿಟ್ಟಿಗೆ ಕತ್ತರಿಸಿದ ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ಇಂಗು ಸೇರಿಸಿ.
ದೋಸೆ ಕಲ್ಲು ಅಥವಾ ಹಂಚನ್ನು ಬಿಸಿ ಮಾಡಿ. ಒಂದು ಸೌಟು ದೋಸೆ ಹಿಟ್ಟನ್ನು ಸೌಟಿನಿಂದ ಸುರಿದು ದೋಸೆ ಮಾಡಿ.
ಮುಚ್ಚಳವನ್ನು ಮುಚ್ಚಿ ಬೇಯಿಸಿ. ನಂತರ, ಮೇಲಿನಿಂದ ಎಣ್ಣೆ ಅಥವಾ ತುಪ್ಪ ಹಾಕಿ. ದೋಸೆ ಸಟ್ಟುಗ ಉಪಯೋಗಿಸಿ ದೋಸೆಯನ್ನು ತೆಗೆಯಿರಿ. ಬಿಸಿ ಬಿಸಿ ದೋಸೆಯನ್ನು ಬೆಣ್ಣೆ ಮತ್ತು ಚಟ್ನಿಯೊಂದಿಗೆ ಬಡಿಸಿ.