ಸೋಮವಾರ, ಫೆಬ್ರವರಿ 29, 2016

Udupi tomato saaru in Kannada | ಉಡುಪಿ ರಸಂ | ಉಡುಪಿ ಟೊಮ್ಯಾಟೋ ಸಾರು


ಉಡುಪಿ ಟೊಮ್ಯಾಟೋ ಸಾರು ಮಾಡುವ ವಿಧಾನ 

ಉಡುಪಿ ಶೈಲಿಯ ರಸಂ ಅಥವಾ ಟೊಮ್ಯಾಟೋ ಸಾರಿನ ಪಾಕ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಬಡಿಸುವ ಸಾರಿನ ಪಾಕವಿಧಾನ ಇದಾಗಿರುವುದರಿಂದ ಇದನ್ನು ಉಡುಪಿ ಸಮಾರಾಧನೆ ಸಾರು ಎಂದೂ ಕರೆಯಲಾಗುತ್ತದೆ. ಇದೊಂದು ಈರುಳ್ಳಿ-ಬೆಳ್ಳುಳ್ಳಿ ರಹಿತ ಸಾತ್ವಿಕ ಸಾರಾಗಿದ್ದು, ಬಹಳ ರುಚಿಕರವಾಗಿರುತ್ತದೆ. 

ನಿನ್ನೆ ನಾನು ನಿಮಗೆ ಉಡುಪಿ ಸಾರಿನ ಪುಡಿ ಮಾಡುವುದು ಹೇಗೆಂದು ತಿಳಿಸಿದ್ದೆ. ನೀವೀಗಾಗಲೇ ಸಾರಿನ ಪುಡಿ ಮಾಡಿರಬಹುದು. ಇಲ್ಲವಾದಲ್ಲಿ ಸಾರಿನ ಪುಡಿ ಮಾಡಿ ಕೊಳ್ಳಿ. ಏಕೆಂದರೆ ಇದೊಂದು ಬಹಳ ರುಚಿಕರವಾದ ಟೊಮ್ಯಾಟೋ ಸಾರು. ಮಕ್ಕಳಿಂದ ಹಿಡಿದು, ದೊಡ್ಡವರ ತನಕ ಬಾಯಿ ಚಪ್ಪರಿಸಿಕೊಂಡು ಸವಿಯುವಂತಹ ಈ ರುಚಿಕರ ಸಾರನ್ನು ಮಾಡಿ ನೋಡಿ. ಹೇಗಿತ್ತೆಂದು ತಿಳಿಸಿ.

ಉಡುಪಿ ಟೊಮ್ಯಾಟೋ ಸಾರು ವಿಡಿಯೋ


ತಯಾರಿ ಸಮಯ: 5 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120ಎಂ ಎಲ್)

4 ಟೇಬಲ್ ಚಮಚ ತೊಗರಿಬೇಳೆ (ಅಥವಾ ಒಂದು ಕೈ)
2 ಸಣ್ಣಗೆ ಕತ್ತರಿಸಿದ ಟೊಮ್ಯಾಟೊ
1 ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
1 - 2 ಟೀಸ್ಪೂನ್ ಬೆಲ್ಲ (ನಿಮ್ಮ ರುಚಿಗೆ ತಕ್ಕಷ್ಟು - ಆದರೆ ಹಾಕಲು ಮರೆಯದಿರಿ)
2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿಗೆ ತಕ್ಕಷ್ಟು)
1 ಹಸಿರು ಮೆಣಸಿನಕಾಯಿ
2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
1.5 ಟೀಸ್ಪೂನ್ ಉಡುಪಿ ರಸಂ ಪುಡಿ ಅಥವಾ ಸಾರಿನ ಪುಡಿ
ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

1/2 ಚಮಚ ಸಾಸಿವೆ
1/2 ಟೀಸ್ಪೂನ್ ಜೀರಿಗೆ
ಇಂಗು ಒಂದು ದೊಡ್ಡ ಚಿಟಿಕೆ
5 - 6 ಕರಿಬೇವಿನ ಎಲೆ
2 ಟೀಸ್ಪೂನ್ ತುಪ್ಪ / ಅಡುಗೆ ಎಣ್ಣೆ

ಉಡುಪಿ ಶೈಲಿಯ ರಸಂ ಅಥವಾ ಟೊಮ್ಯಾಟೋ ಸಾರು ತಯಾರಿಸುವ ವಿಧಾನ:

  1. ಕುಕ್ಕರ್ ನಲ್ಲಿ ತೊಗರಿಬೇಳೆ ತೆಗೆದುಕೊಂಡು ತೊಳೆಯಿರಿ. 1 ಕಪ್ ನೀರು, ಅರಿಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ.
  2. ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳವನ್ನು ತೆರೆಯಿರಿ. ತೊಗರಿಬೇಳೆ ಅರ್ಧ ಬೆಂದಿರುವುದನ್ನು ನೀವು ನೋಡಬಹುದು.
  3. ಈಗ ಬೇಳೆಯೊಂದಿಗೆ ಕತ್ತರಿಸಿದ ಟೊಮ್ಯಾಟೊ, ಉಪ್ಪು ಮತ್ತು ಸೀಳಿದ ಹಸಿರುಮೆಣಸಿನಕಾಯಿ ಹಾಕಿ. 
  4. ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಮತ್ತು ಪುನಃ 2 ವಿಷಲ್ ಮಾಡಿ.
  5. ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳ ತೆರೆಯಿರಿ. ಮತ್ತು ಈಗ ನೀವು ತೊಗರಿಬೇಳೆ ಮತ್ತು ಟೊಮ್ಯಾಟೊ ಎರಡೂ ಚೆನ್ನಾಗಿ ಬೆಂದಿರುವುದನ್ನು ಗಮನಿಸಿ.
  6. ಈಗ ಅದೇ ಕುಕ್ಕರ್ ಗೆ ಸುಮಾರು 4 ಕಪ್ ನೀರು (500 ಎಂ ಎಲ್) ಮತ್ತು 1 ಟೀ ಚಮಚ ಉಪ್ಪನ್ನು (ಅಥವಾ ನಿಮ್ಮ ರುಚಿ ಪ್ರಕಾರ) ಕುಕ್ಕರ್ ಗೆ ಹಾಕಿ ಸ್ಟೋವ್ ಆನ್ ಮಾಡಿ.
  7. ನಂತರ 1 - 2 ಚಮಚ ಪುಡಿ ಬೆಲ್ಲವನ್ನು ಸಾರಿರುವ ಕುಕ್ಕರ್ ಗೆ ಹಾಕಿ.
  8. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೆ ಹಣ್ಣನ್ನು ನೀರಲ್ಲಿ ನೆನೆಸಿ, ಕಿವುಚಿ, ರಸ ತೆಗೆದು ಸಾರಿರುವ ಕುಕ್ಕರ್ ಗೆ ಸೇರಿಸಿ.
  9. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸಾರಿರುವ ಕುಕ್ಕರ್‌ಗೆ ಸೇರಿಸಿ.
  10. ಈಗ ಸುಮಾರು 1.5 ಟೀಸ್ಪೂನ್ ಉಡುಪಿ ರಸಂ ಪುಡಿ ಅಥವಾ ಸಾರಿನ ಪುಡಿಯನ್ನು ಸೇರಿಸಿ. (ಸಾರಿನ ಪುಡಿ ಮಾಡುವ ವಿಧಾನ ತಿಳಿಯಲು ಇಲ್ಲಿ ಕ್ಲಿಕ್ಕಿಸಿ)
  11. ಸಾರು ಚೆನ್ನಾಗಿ ಗಳ ಗಳನೇ ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೌವ್ ಆಫ್ ಮಾಡಿ. ಬೇಕಾದಲ್ಲಿ ಉಪ್ಪು, ಹುಳಿ, ಸಿಹಿ ಮತ್ತು ಖಾರವನ್ನು ಈ ಹಂತದಲ್ಲಿ ರುಚಿನೋಡಿ ಸರಿಮಾಡಿಕೊಳ್ಳಬಹುದು. 
  12. ಒಗ್ಗರಣೆ ಸೌಟು ಬಳಸಿಕೊಂಡು 2 ಚಮಚ ತುಪ್ಪ, 1/2 ಚಮಚ ಸಾಸಿವೆ, 1/2 ಚಮಚ ಜೀರಿಗೆ ಮತ್ತು ಕರಿಬೇವಿನ ಎಲೆಗಳ ಒಗ್ಗರಣೆ ಮಾಡಿ. 
  13. ಒಗ್ಗರಣೆಯನ್ನು ಕುದಿಸಿದ ಸಾರಿಗೆ ಹಾಕಿ.  ಸಾತ್ವಿಕ ಉಡುಪಿ ರಸಂ ಅಥವಾ ಉಡುಪಿ ಟೊಮ್ಯಾಟೋ ಸಾರು ಸವಿಯಲು ಸಿದ್ಧ. ಬಿಸಿಯಾದ ಅನ್ನದೊಂದಿಗೆ ಬಡಿಸಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Udupi saaru or rasam recipeUdupi saaru or rasam recipeUdupi saaru or rasam recipe

ಭಾನುವಾರ, ಫೆಬ್ರವರಿ 28, 2016

Udupi rasam powder recipe | Udupi saaru pudi recipe | ಉಡುಪಿ ಸಾರಿನ ಪುಡಿ ಮಾಡುವ ವಿಧಾನ


ಉಡುಪಿ ಸಾರಿನ ಪುಡಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ಸಾರಿನ ಪುಡಿಯನ್ನು ಒಣ ಮೆಣಸಿನಕಾಯಿ, ಧನಿಯಾ, ಜೆರಿಗೆ, ಮೆಂತೆ, ಇಂಗು ಮತ್ತು ಕರಿಬೇವಿನ ಎಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. 

ಉಡುಪಿ ಅಥವಾ ಮಂಗಳೂರು ಪ್ರದೇಶದಲ್ಲಿ ಟೊಮ್ಯಾಟೋ ಸಾರನ್ನು ಇದೆ ಸಾರಿನ ಪುಡಿ ಉಪಯೋಗಿಸಿ ಮಾಡಲಾಗುತ್ತದೆ. ಸಾರು ಮಾತ್ರವಲ್ಲದೇ ಪಲ್ಯ - ಗೊಜ್ಜುಗಳಲ್ಲೂ ಕೆಲವೊಮ್ಮೆ ಈ ಸಾರಿನ ಪುಡಿಯನ್ನು ಉಪಯೋಗಿಸುತ್ತಾರೆ.

ಉಡುಪಿ ಸಾರಿನ ಪುಡಿ ವಿಡಿಯೋ


ತಯಾರಿ ಸಮಯ: 2 ನಿಮಿಷ
ಅಡುಗೆ ಸಮಯ: 15 ನಿಮಿಷ
ಪ್ರಮಾಣ: 1 ಕಪ್ ಸಾರಿನ ಪುಡಿ

ಬೇಕಾಗುವ ಪದಾರ್ಥಗಳು: (ಅಳತೆ ಕಪ್  = 240 ಎಂ ಎಲ್)
  1. 15 - 20 ಒಣ ಮೆಣಸಿನಕಾಯಿ
  2. 1 ಕಪ್ ಧನಿಯಾ ಅಥವಾ ಕೊತ್ತಂಬರಿ ಬೀಜ
  3. 1/4 ಕಪ್ ಜೀರಿಗೆ
  4. 1 ಟೇಬಲ್ ಚಮಚ ಮೆಂತೆ
  5. 1/2 ಚಮಚ ಇಂಗು
  6. 8-10 ಕರಿಬೇವಿನ ಎಲೆ
  7. 1 ಚಮಚ ಅಡುಗೆ ಎಣ್ಣೆ 

ಉಡುಪಿ ಸಾರಿನ ಪುಡಿ ತಯಾರಿಸುವ ವಿಧಾನ:
  1. ಮೇಲೆ ನಮೂದಿಸಿದ ಎಲ್ಲ ಪದಾರ್ಥಗಳನ್ನು ಸಿದ್ಧ ಮಾಡಿಟ್ಟು ಕೊಳ್ಳಿ. ಗಮನಿಸಿ ಇದು ಅಂದಾಜಿನ ಮೇಲೆ ನೀಡಿದ ಅಳತೆಯಾಗಿದ್ದು, ಸಾಧಾರಣವಾಗಿ ಸಾರಿನ ಪುಡಿ ಮಾಡುವಾಗ ಕೈ ಅಳತೆ ಉಪಯೋಗಿಸುತ್ತಾರೆ. ಅಳತೆ ಸ್ವಲ್ಪ ಹೆಚ್ಚು ಕಡಿಮೆ ಆದಲ್ಲಿ, ರುಚಿಯಲ್ಲಿ ಬಾರಿ ವ್ಯತ್ಯಾಸ ಕಂಡು ಬರುವುದಿಲ್ಲ.
  2. ಈಗ ಮೊದಲಿಗೆ ಒಂದು ಬಾಣಲೆ ತೆಗೆದುಕೊಂಡು ಒಂದು ಚಮಚ ಎಣ್ಣೆ ಹಾಕಿ, ಒಣ ಮೆಣಸಿನಕಾಯಿಯನ್ನು ಹುರಿದು ತೆಗೆದಿಟ್ಟು ಕೊಳ್ಳಿ.
  3. ನಂತರ ಅದೇ ಬಾಣಲೆಗೆ ಧನಿಯಾ, ಜೀರಿಗೆ, ಮೆಂತೆಯನ್ನು ಒಂದಾದ ಮೇಲೊಂದರಂತೆ ಹಾಕಿ, ಮಧ್ಯಮ ಉರಿಯಲ್ಲಿ ಹುರಿದು ತೆಗೆದಿಡಿ. 
  4. ಮಸಾಲೆಗಳ ಸುವಾಸನೆ ಬರುವವರೆಗೆ ಅಥವಾ ಮಸಾಲೆಗಳ ಬಣ್ಣ ಸ್ವಲ್ಪ ಬದಲಾವಣೆ ಆಗುವವರೆಗೆ ಅಥವಾ ಜೀರಿಗೆ ಮತ್ತು ಮೆಂತೆ ಉಬ್ಬುವವರೆಗೆ ಹುರಿಯಿರಿ.
  5. ಈಗ ಅದೇ ಬಾಣಲೆಗೆ ಇಂಗು ಮತ್ತು ಕರಿಬೇವಿನ ಎಲೆ ಹಾಕಿ, ಎಲೆಗಳು ಬಾಡುವವರೆಗೆ ಹುರಿಯಿರಿ
  6. ಹುರಿದ ಎಲ್ಲ ಮಸಾಲೆಗಳು ತಣ್ಣಗಾಗುವವರೆಗೆ ಕಾದು, ನೀರಿನ ಪಸೆ ಇಲ್ಲದ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ.
  7. ಘಮಘಮಿಸುವ ಉಡುಪಿ ಸಾರಿನ ಪುಡಿ ತಯಾರಾಯಿತು. ಈಗ ಇದನ್ನು ಒಂದು ಗಾಳಿಯಾಡದ ಡಬ್ಬದಲ್ಲಿ ಹಾಕಿ ಎತ್ತಿಡಿ. ಸದ್ಯದಲ್ಲೇ ಈ ಪುಡಿ ಉಪಯೋಗಿಸಿ ಸಾರು ಮಾಡುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.


ಗುರುವಾರ, ಫೆಬ್ರವರಿ 25, 2016

Ananas hannina payasa recipe | ಅನಾನಸ್ ಹಣ್ಣಿನ ಪಾಯಸ

Pineapple or ananas payasa recipe

ರುಚಿಕರ ಅನಾನಸ್ ಹಣ್ಣಿನ ಪಾಯಸವನ್ನು ಇಲ್ಲಿ ವಿವರಿಸಲಾಗಿದೆ. ಈ ಪಾಯಸವನ್ನು ಅನಾನಸ್ ಹಣ್ಣು, ಬೆಲ್ಲ ಮತ್ತು ತೆಂಗಿನ ಕಾಯಿ ಹಾಲನ್ನು ಉಪಯೋಗಿಸಿ ಮಾಡಲಾಗುತ್ತದೆ. ತೆಂಗಿನ ಕಾಯಿ ಹಾಲನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು, ಇಲ್ಲವಾದಲ್ಲಿ ಅಂಗಡಿಯಿಂದಲೂ ಕೊಂಡು ಕೊಳ್ಳಬಹುದು.

ಈ ಪಾಯಸವನ್ನು ನಾನು ನನ್ನ ಅತ್ತೆಯಿಂದ ಕಲಿತೆ. ನನ್ನತ್ತೆ ಅನೇಕ ರೀತಿಯ ಪಾಯಸ ಮಾಡುತ್ತಾರೆ. ಹಲಸಿನ ಹಣ್ಣಿನ ಪಾಯಸ, ಗೆಣಸಿನ ಪಾಯಸ, ಗಸಗಸೆ ಪಾಯಸ, ಕ್ಯಾರೆಟ್ ಪಾಯಸ, ಮುಳ್ಳುಸೌತೆ ಪಾಯಸ, ಗೋಧಿ ಪಾಯಸ ಹೀಗೆ ಪಟ್ಟಿ ಮುಂದುವರೆಯುತ್ತದೆ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್  = 120 ಎಂ ಎಲ್)
  1. 1 ಮಧ್ಯಮ ಗಾತ್ರದ ಅನಾನಸ್ / 2 ಕಪ್ ಸಣ್ಣದಾಗಿ ಹೆಚ್ಚಿದ ಅನಾನಸ್
  2. 2 ಕಪ್ ಬೆಲ್ಲ (ನಿಮ್ಮ ರುಚಿ ಪ್ರಕಾರ)
  3. 4 ಕಪ್ ಹಾಲು ತೆಂಗಿನಕಾಯಿ.
  4. 3 ಟೀಸ್ಪೂನ್ ಅಕ್ಕಿ ಹಿಟ್ಟು
  5. 2 ಟೀಸ್ಪೂನ್ ತುಪ್ಪ
  6. 8-10 ಗೋಡಂಬಿ
  7. 8-10 ಒಣದ್ರಾಕ್ಷಿ
  8. 2 ಕಪ್ ನೀರು
  9. ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ
  10. ಒಂದು ಚಿಟಿಕೆ ಉಪ್ಪು


ಅನಾನಸ್ ಹಣ್ಣಿನ ಪಾಯಸ ಮಾಡುವ ವಿಧಾನ:

  1. ಒಂದು ಮಧ್ಯಮ ಗಾತ್ರದ ಚೆನ್ನಾಗಿ ಹಣ್ಣಾಗಿರುವ ಅನಾನಸ್ ತೆಗೆದುಕೊಂಡು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ.
  2. ಈಗ ಅನಾನಸ್ ಹಣ್ಣನ್ನು ಉದ್ದಕ್ಕೆ ಕತ್ತರಿಸಿ ಮಧ್ಯಭಾಗದ ಗಟ್ಟಿ ದಿಂಡು ಅಥವಾ ತಿರುಳನ್ನು ತೆಗೆಯಿರಿ.
  3. ಈಗ ಅನಾನಸ್ ಹಣ್ಣನ್ನು ಸಣ್ಣ ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ.
  4. ಒಂದು ಪಾತ್ರೆಯಲ್ಲಿ 2 ಕಪ್ ಪುಡಿ ಮಾಡಿದ ಬೆಲ್ಲ  ಮತ್ತು  2 ಕಪ್ ನೀರು ತೆಗೆದುಕೊಂಡು ಕುದಿಯಲು ಇಡಿ.
  5. ಕುದಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ಈ ಬೆಲ್ಲದ ನೀರನ್ನು ನಾವು ಸ್ವಲ್ಪ ಸಮಯದ ನಂತರ ಬಳಸಲಿದ್ದೇವೆ.
  6. ಈಗ ಒಂದು ದಪ್ಪ ತಳದ ಪಾತ್ರೆಯಲ್ಲಿ 2 ಟೀಸ್ಪೂನ್ ತುಪ್ಪ ತೆಗೆದುಕೊಂಡು ಗೋಡಂಬಿ ಹುರಿದು ಪಕ್ಕಕ್ಕಿಡಿ.
  7. ಈಗ ಅದೇ ಪಾತ್ರೆಯಲ್ಲಿ ಒಣದ್ರಾಕ್ಷಿ ಹುರಿದು ಪಕ್ಕಕ್ಕಿಡಿ.
  8. ನಂತರ ಆ ಪಾತ್ರೆಗೆ ಸಣ್ಣದಾಗಿ ಹೆಚ್ಚಿದ ಅನಾನಸ್ ತುಂಡುಗಳನ್ನು ಹಾಕಿ ಹುರಿಯಲು ಪ್ರಾರಂಭಿಸಿ.
  9. ಮಧ್ಯಮ ಜ್ವಾಲೆಯಯಲ್ಲಿ 5 ನಿಮಿಷ ಅನಾನಸ್ ಹಣ್ಣನ್ನು ಹುರಿಯಿರಿ. ಆಗ ಅನಾನಸ್ ಹಣ್ಣಿನ ಚೂರು ಮೃದುವಾಗುತ್ತದೆ ಮತ್ತು ಸ್ವಲ್ಪ ಬಣ್ಣ ಬದಲಾವಣೆಯನ್ನು ನೀವು ಗಮನಿಸಬಹುದು.
  10. ಈಗ ಹುರಿದ ಅನಾನಸ್ಗೆ ಬೆಲ್ಲದ ನೀರು ಸೇರಿಸಿ. ಒಂದು ಜರಡಿ ಬಳಸಿಕೊಂಡು ಬೆಲ್ಲದ ನೀರನ್ನು ಸೋಸಿ ಹಾಕಿದಲ್ಲಿ ಬೆಲ್ಲದ  ಕಲ್ಮಶಗಳನ್ನು ತೆಗೆಯಬಹುದು.
  11. ಬೆಲ್ಲದ ನೀರು ಕುದಿಯಲು ಪ್ರಾರಂಭಿಸಿದ ಕೂಡಲೇ ಉರಿ ಕಡಿಮೆ ಮಾಡಿ ಅನಾನಸ್ ನ್ನು ಬೆಲ್ಲದ ನೀರಿನಲ್ಲಿ ಬೇಯಲು ಬಿಡಿ.
  12. ಸುಮಾರು 10 ರಿಂದ 15 ನಿಮಿಷಗಳ ಕಾಲ ಕುದಿಸಬೇಕಾಗುತ್ತದೆ. ಅನಾನಸ್ ಚೂರುಗಳು ಬೆಂದು ಇನ್ನಷ್ಟು ಮೃದುವಾಗುತ್ತದೆ.
  13. ಈಗ ತೆಂಗಿನ ಕಾಯಿ ಹಾಲನ್ನು ಹಾಕಿ. ತೆಂಗಿನ ಕಾಯಿ ಹಾಲನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಥವಾ ಅಂಗಡಿಯಿಂದ ಖರೀದಿಸಬಹುದು. ನಾನು 4 ಕಪ್ ತೆಂಗಿನ ತುರಿ ಮತ್ತು 4 ಕಪ್ ನೀರು ಬಳಸಿಕೊಂಡು ಕಾಯಿ ಹಾಲನ್ನು ತಯಾರಿಸಿದ್ದೇನೆ. ಕಾಯಿಹಾಲು ತಯಾರಿ ವಿಧಾನವನ್ನು ನಾನೀಗಾಗಲೇ ವಿವರಿಸಿದ್ದೇನೆ.
  14. ಈಗ ಒಂದು ಬಟ್ಟಲಿನಲ್ಲಿ 3 ಟೀಸ್ಪೂನ್ ಅಕ್ಕಿ ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ತೆಳುವಾದ ಪೇಸ್ಟ್ ಮಾಡಿಕೊಳ್ಳಿ.
  15. ಈ ಅಕ್ಕಿ ಹಿಟ್ಟು ಪೇಸ್ಟ್ ನ್ನು ಪಾಯಸಕ್ಕೆ ಸೇರಿಸಿ. ಅಕ್ಕಿ ಹಿಟ್ಟು ಪೇಸ್ಟ್ ಸೇರಿಸುವುದರಿಂದ ಪಾಯಸಕ್ಕೆ ಒಳ್ಳೆ ರುಚಿ ಬರುತ್ತದೆ. ಈ ಹಂತದ ನಂತರ ನೀವು ಪಾಯಸವನ್ನು ಆಗಾಗ್ಯೆ ಮಗುಚುತ್ತಾ ಇರಬೇಕಾಗುತ್ತದೆ.
  16. ಈಗ ಒಂದು ದೊಡ್ಡ ಚಿಟಿಕೆ ಉಪ್ಪು ಸೇರಿಸಿ. ಉಪ್ಪು ಸೇರಿಸಿದಲ್ಲಿ ಪಾಯಸದ ರುಚಿ ಎದ್ದು ಬರುತ್ತದೆ.
  17. ನಂತರ ಹುರಿದ ಗೋಡಂಬಿ, ಒಣದ್ರಾಕ್ಷಿ ಮತ್ತು ಒಂದು ದೊಡ್ಡ ಚಿಟಿಕೆ ಏಲಕ್ಕಿ ಪುಡಿ ಸೇರಿಸಿ. ಪಾಯಸ ಕುಡಿಯಲು ಪ್ರಾರಂಭಿಸಿದ ಕೂಡಲೇ ಸ್ಟೋವ್ ಆಫ್ ಮಾಡಿ. ನೆನಪಿಡಿ ತೆಂಗಿನ ಕಾಯಿ ಹಾಲು ಸೇರಿಸಿದ ನಂತರ ತುಂಬಾ ಹೊತ್ತು ಪಾಯಸ ಮಗುಚ ಬಾರದು. ರುಚಿಕರ ಪಾಯಸವನ್ನು ಬಿಸಿ ಅಥವಾ ತಣ್ಣಗೆ ಸವಿಯಿರಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

Related Posts Plugin for WordPress, Blogger...