ಬುಧವಾರ, ಡಿಸೆಂಬರ್ 2, 2015

Heerekayi sippe chutney in Kannada | ಹೀರೆಕಾಯಿ ಸಿಪ್ಪೆ ಚಟ್ನಿ


 ಹೀರೆಕಾಯಿ ಸಿಪ್ಪೆ ಚಟ್ನಿ ಮಾಡುವ ವಿಧಾನ 

ಹೀರೇಕಾಯಿ ಸಿಪ್ಪೆ ಚಟ್ನಿ ತುಂಬಾ ಸರಳ ಮತ್ತು ರುಚಿಕರ ಚಟ್ನಿಯಾಗಿದ್ದು ಅನ್ನದೊಂದಿಗೆ ಚೆನ್ನಾಗಿ ಸೇರುತ್ತದೆ. ನಾವು ಸಾಧಾರಣವಾಗಿ ಹೀರೆಕಾಯಿಯ ತೊವ್ವೆ, ಸಾಂಬಾರ್, ಬೋಂಡಾ ( ಬಜ್ಜಿ ) ಅಥವಾ ದೋಸೆ ಮಾಡುವಾಗ ಸಿಪ್ಪೆ ತೆಗೆಯುತ್ತೇವೆ. ನೀವು ಆ ಸಿಪ್ಪೆ ಎಸೆಯುತ್ತೀರಾದರೆ, ಒಮ್ಮೆ ಈ ಚಟ್ನಿ ಪ್ರಯತ್ನಿಸಿ. ನಿಜವಾಗಲೂ ಇದು ಬಹಳ ರುಚಿಕರವಾದ ಚಟ್ನೀ. ಈ ಚಟ್ನಿ ಯ ಜೊತೆಗೆ ನಾವು ಹೀರೇಕಾಯಿ ದೋಸೆ ಮಾಡುವ ವಿಧಾನವನ್ನು ಪೋಸ್ಟ್ ಮಾಡಿದ್ದೇವೆ. ಆದ್ದರಿಂದ ನೀವು ದೋಸೆ ಮತ್ತು ಚಟ್ನಿ ಎರಡನ್ನೂ ಒಟ್ಟಿಗೆ ಪ್ರಯತ್ನಿಸಬಹುದು.
ಹೀರೇಕಾಯಿ ಅತ್ಯಂತ ಹೆಚ್ಚು ನಾರಿನಂಶ ಹೊಂದಿರುವ ತರಕಾರಿಯಾಗಿದ್ದು ಅನೇಕ ಆರೋಗ್ಯಕಾರ ಅಂಶಗಳನ್ನು ಹೊಂದಿದೆ. ಇದು ದೇಹದ ಸಕ್ಕರೆ ಅಂಶ ಹತೋಟಿಯಲ್ಲಿಡಲು, ರಕ್ತ ಶುದ್ದೀಕರಣ ಮಾಡಲು ಮತ್ತು ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಯಾವುದೇ ತರಕಾರಿಯಲ್ಲಿ ಸಿಪ್ಪೆಯು ಗರಿಷ್ಠ ಪೋಷಕಾಂಶಗಳನ್ನು ಹೊಂದಿರುತ್ತದೆ. ಹಾಗಾಗಿ ಸಿಪ್ಪೆಯನ್ನು ಎಸೆಯದೆ ಈ ಚಟ್ನಿ ಪ್ರಯತ್ನಿಸಿ. ನಿಮಗಿದು ಖಂಡಿತ ಇಷ್ಟವಾಗುವುದು.
ನಾನು ಈ ಚಟ್ನಿಗೆ ಒಗ್ಗರಣೆ ಹಾಕುವುದಿಲ್ಲ. ನಿಮಗೆ ಬೇಕೆನಿಸಿದರೆ 1/4 ಚಮಚ ಸಾಸಿವೆ, 1/2 ಒಣಮೆಣಸು ಉಪಯೋಗಿಸಿ ಒಗ್ಗರಣೆ ಮಾಡಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 1 ಹೀರೇಕಾಯಿ
  2. 1 ಕಪ್ ತೆಂಗಿನ ತುರಿ
  3. 1-2 ಒಣ ಮೆಣಸಿನಕಾಯಿ / ಹಸಿ ಮೆಣಸಿನಕಾಯಿ
  4. 4 ಟೀಸ್ಪೂನ್ ಉದ್ದಿನ ಬೇಳೆ
  5. 1/4 ಟೀಸ್ಪೂನ್ ಸಾಸಿವೆ
  6. 1 ಟೀಸ್ಪೂನ್ ಅಡುಗೆ ಎಣ್ಣೆ
  7. 1/2 ನೆಲ್ಲಿಕಾಯಿ ಗಾತ್ರ ಹುಣಿಸೆ ಹಣ್ಣು
  8. ಉಪ್ಪು ರುಚಿಗೆ ತಕ್ಕಷ್ಟು.

ಹೀರೇಕಾಯಿ ಸಿಪ್ಪೆ ಚಟ್ನಿ ಮಾಡುವ ವಿಧಾನ:

  1. ಹೀರೆಕಾಯಿಯ ಮೊನಚಾದ ಅಂಚನ್ನು ಹೆರೆಸಿ, ಚೆನ್ನಾಗಿ ತೊಳೆಯಿರಿ. ನಂತರ ಹೀರೇಕಾಯಿ ಸಿಪ್ಪೆಯನ್ನು ಸ್ವಲ್ಪ ದಪ್ಪನಾಗಿ ತೆಗೆದು 1 ಇಂಚು ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ. ಸ್ವಲ್ಪವೇ ಸ್ವಲ್ಪ ನೀರು ಸೇರಿಸಿ ಒಂದು ಕುಕ್ಕರ್ ಅಥವಾ ಪಾತ್ರೆಯಲ್ಲಿ ಬೇಯಿಸಿಕೊಳ್ಳಿ .
  2. ಒಂದು ಬಾಣಲೆಗೆ ಎಣ್ಣೆ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ, ಉದ್ದಿನಬೇಳೆ ಹೊಂಬಣ್ಣ ಬರುವ ವರೆಗೆ ಹುರಿಯಿರಿ.
  3. ಬೇಯಿಸಿದ ಹೀರೇಕಾಯಿ ಸಿಪ್ಪೆ ತಣ್ಣಗಾಗುವ ವರೆಗೆ ಕಾದು, ಒಂದು ಮಿಕ್ಸೀ ಜಾರಿಗೆ ಸಿಪ್ಪೆ ಮತ್ತು ತೆಂಗಿನ ತುರಿ ಸೇರಿಸಿ ಅರೆದು ಕೊಳ್ಳಿ. ಅದಕ್ಕೆ ಉಪ್ಪು , ಹುಣಸೆ ಹಣ್ಣು ಮತ್ತು ಹುರಿದ ಮಸಾಲೆ ಸೇರಿಸಿ ಪುನಃ 10 ಸೆಕೆಂಡುಗಳ ಕಾಲ ಅರೆಯಿರಿ. ಈ ರುಚಿಕರವಾದ ಚಟ್ನಿಯನ್ನು. ಬಿಸಿಯಾದ ಅನ್ನದೊಂದಿಗೆ ಅಥವಾ ದೋಸೆ ಅಥವಾ ಚಪಾತಿಯೊಂದಿಗೆ ಬಡಿಸಿ.

ಮಂಗಳವಾರ, ಡಿಸೆಂಬರ್ 1, 2015

Bengaluru hotel style idli sambar in Kannada | ಬೆಂಗಳೂರು ಶೈಲಿಯ ಇಡ್ಲಿ ಸಾಂಬಾರ್


ಬೆಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ 

ಇಡ್ಲಿ - ಸಾಂಬಾರ್ ಕರ್ನಾಟಕದ ಬಹಳ ಸಾಮಾನ್ಯ ಉಪಹಾರ ವಾಗಿದ್ದು, ಸಾಂಬಾರ್ ಮತ್ತು ಚಟ್ನಿ ಮಾಡುವ ವಿಧಾನ ಒಂದು ಸ್ಥಳದಿಂದ ಇನ್ನೊಂದಕ್ಕೆ ಬದಲಾಗುತ್ತವೆ . ನೀವು ಎಂದಾದರೂ ಬೆಂಗಳೂರು ಹೋಟೆಲ್‌ಗಳಲ್ಲಿ ಅಥವಾ ದರ್ಶಿನಿಗಳಲ್ಲಿ ( ಫಾಸ್ಟ್ ಫುಡ್ ) ಇಡ್ಲಿ - ಸಾಂಬಾರ್ ತಿಂದಿದ್ದರೆ, ಇಡ್ಲಿ ಎಷ್ಟು ರುಚಿಕರವಾಗಿದೆ ಎನ್ನುವಿರಿ...ಕಾರಣ ಅವರು ಇಡ್ಲಿ ಜೊತೆಗೆ ನೀಡುವ ಸಾಂಬಾರ್ ಇಡ್ಲಿಯ ರುಚಿಯನ್ನು ಅಷ್ಟರ ಮಟ್ಟಿಗೆ ಹೆಚ್ಚಿಸುತ್ತದೆ... ಕರ್ನಾಟಕದ ಇತರ ಪ್ರದೇಶಗಳಲ್ಲೂ ಸಾಂಬಾರ್ ರುಚಿಕರವಾಗಿರುತ್ತದೆ ಆದರೆ ಸ್ವಲ್ಪ ಭಿನ್ನವಾಗಿ ಇರುತ್ತದೆ ಬೇರೆ ಸಾಂಬಾರ್ ಗಳ ಪಾಕವಿಧಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಈ ಸುಲಭ ಮತ್ತು ಸರಳವಾದ ಸಾಂಬಾರ್ ಮಾಡುವುದು ಹೇಗೆಂದು ತಿಳಿದುಕೊಳ್ಳಿ. 

ಇಡ್ಲಿ ಸಾಂಬಾರ್ ವಿಡಿಯೋ 


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 3 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )

  1. 1/2 ಕಪ್ ಸಾಂಬಾರ್ ಈರುಳ್ಳಿ ಅಥವಾ 1 ದೊಡ್ಡ ಈರುಳ್ಳಿ
  2. 1 ಕ್ಯಾರೆಟ್
  3. 1 ಸಣ್ಣ ಆಲೂಗಡ್ಡೆ(ಬೇಕಾದಲ್ಲಿ)
  4. 1 ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಿಸೆಹಣ್ಣು
  5. 1 ದೊಡ್ಡ ನೆಲ್ಲಿಕಾಯಿ ಗಾತ್ರದ ಬೆಲ್ಲ
  6. 2 ಟೇಬಲ್ ಸ್ಪೂನ್ ಕೊತ್ತಂಬರಿ ಸೊಪ್ಪು
  7. ಉಪ್ಪು ರುಚಿಗೆ ತಕ್ಕಷ್ಟು.

ಮಸಾಲೆಗೆ ಬೇಕಾಗುವ ಪದಾರ್ಥಗಳು:

  1. 1/4 ಕಪ್ ತೆಂಗಿನ ತುರಿ
  2. 2-3 ಒಣ ಮೆಣಸಿನ ಕಾಯಿ
  3. 2 ಟೀಸ್ಪೂನ್ ತೊಗರಿ ಬೇಳೆ
  4. 1 ಟೀಸ್ಪೂನ್ ಕಡ್ಲೆ ಬೇಳೆ
  5. 2 ಟೀಸ್ಪೂನ್ ಕೊತ್ತಂಬರಿ ಬೀಜ
  6. 1/4 ಟೀಸ್ಪೂನ್ ಮೆಂತೆ
  7. 5-6 ಕಾಳು ಮೆಣಸು
  8. 1/2 ಬೆರಳುದ್ದ ಚಕ್ಕೆ
  9. ಒಂದು ದೊಡ್ಡ ಚಿಟಿಕೆ ಇಂಗು
  10. 1 ಹಸಿ ಮೆಣಸಿನ ಕಾಯಿ
  11. 4-5 ಕರಿ ಬೇವಿನ ಎಲೆ
  12. 1 ಟೊಮ್ಯಾಟೋ
  13. 2 ಟೀಸ್ಪೂನ್ ಅಡುಗೆ ಎಣ್ಣೆ

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನ ಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಬೆಂಗಳೂರು ಶೈಲಿಯ ಇಡ್ಲಿ ಸಾಂಬಾರ್ ಮಾಡುವ ವಿಧಾನ:

  1. ಕ್ಯಾರೆಟ್, ಆಲೂಗಡ್ಡೆ ಮತ್ತು ಈರುಳ್ಳಿ ಗಳನ್ನು ಸ್ವಚ್ಛ ಗೊಳಿಸಿ ಹೆಚ್ಚಿಕೊಳ್ಳಿ. ಒಂದು ಕುಕ್ಕರ್ ನಲ್ಲಿ ಈ ತರಕಾರಿಗಳನ್ನು ಹಾಕಿ ನೀರು ಮತ್ತು ಸ್ವಲ್ಪ ಉಪ್ಪಿನೊಂದಿಗೆ 2 ವಿಷಲ್ ಮಾಡಿ ಬೇಯಿಸಿಕೊಳ್ಳಿ.
  2. ಒಂದು ಬಾಣಲೆ ಯನ್ನು ಸ್ಟೋವ್ ಮೇಲೆ ಇಡಿ. ಉರಿ ಕಡಿಮೆ ಇರಲಿ. 1 ಟೀಸ್ಪೂನ್ ಎಣ್ಣೆ ಹಾಕಿ ಮೊದಲಿಗೆ ಒಣ ಮೆಣಸು ಹಾಕಿ ಹುರಿಯಿರಿ. ನಂತರ ಅದೇ ಬಾಣಲೆಗೆ ತೊಗರಿಬೇಳೆ , ಕಡ್ಲೆ ಬೇಳೆ ಮತ್ತು ಕೊತ್ತುಂಬರಿ ಬೀಜಗಳನ್ನು ಸೇರಿಸಿ ಹುರಿಯಿರಿ. ಬೇಳೆಗಳು ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ, ಮೆಂತ್ಯ , ಕಾಳು ಮೆಣಸು ಮತ್ತು ಚಕ್ಕೆ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
  3. ಈಗ ಇಂಗು , ಕರಿಬೇವಿನ ಸೊಪ್ಪು ಮತ್ತು ಹಸಿ ಮೆಣಸಿನಕಾಯಿ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ಕೊನೆಯಲ್ಲಿ ಕತ್ತರಿಸಿದ ಟೊಮೆಟೊ ಸೇರಿಸಿ, 10 ಸೆಕೆಂಡ್ ಗಳ ಕಾಲ ಹುರಿದು ಸ್ಟೌವ್ ಆಫ್ ಮಾಡಿ.
  4. ಹುರಿದ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ, ತೆಂಗಿನ ತುರಿ ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆಯಿರಿ.
  5. ತರಕಾರಿಗಳು ಬೆಂದ ಮೇಲೆ ಅದೇ ಕುಕ್ಕರ್ಗೆ ಅರೆದ ಮಸಾಲಾ ಹಾಕಿ. ಉಪ್ಪು , ಬೆಲ್ಲ ಮತ್ತು ಹುಣಸೆ ರಸ ಸೇರಿಸಿ ಒಂದು ಕುದಿ ಬರಿಸಿ.
  6. ನಂತರ ಕೊತ್ತಂಬರಿ ಸೊಪ್ಪು ಹಾಕಿ, ಒಮ್ಮೆ ಮಗುಚಿ ಸ್ಟೋವ್ ಆಫ್ ಮಾಡಿ. ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ.

ಭಾನುವಾರ, ನವೆಂಬರ್ 29, 2015

Bellada panaka in Kannada | ಬೆಲ್ಲದ ಪಾನಕ


ಬೆಲ್ಲದ ಪಾನಕ ಮಾಡುವ ವಿಧಾನ 

ಬೆಲ್ಲದ ಪಾನಕವನ್ನು ಸಾಧಾರಣವಾಗಿ ಶ್ರೀರಾಮನ ಜನ್ಮದಿನವಾದ ರಾಮನವಮಿ ಯಂದು ತಯಾರಿಸಿ ಕೋಸಂಬರಿ ಯೊಂದಿಗೆ ಹಂಚುತ್ತಾರೆ. ಈ ಪಾನಕದಲ್ಲಿ ಬೆಲ್ಲ ಮತ್ತು ಕಾಳು ಮೆಣಸು ಸಾಮಾನ್ಯ ಪದಾರ್ಥಗಳಾಗಿದ್ದು, ಜೊತೆಗೆ ಶುಂಠಿ ಅಥವಾ ಹುಣಿಸೆ ರಸ ಅಥವಾ ನಿಂಬೆ ಹಣ್ಣಿನ ರಸ ಸೇರಿಸುತ್ತಾರೆ. ಇಲ್ಲಿ ಎರಡು ವಿಧವಾದ ಪಾನಕವನ್ನು ವಿವರಿಸಲಾಗಿದೆ. ನಿಮ್ಮ ರುಚಿಗೆ ತಕ್ಕಂತೆ ಪದಾರ್ಥಗಳನ್ನು ಬದಲಾಯಿಸಲು ಬಹುದು. ಬೆಲ್ಲದಲ್ಲಿ ಕಬ್ಬಿಣ ಸತ್ವ ಇದ್ದು ಬಹಳ ಆರೋಗ್ಯಕರವಾಗಿದೆ. ಈ ಪಾನಕ ಜೀರ್ಣಕ್ಕೆ ಬಹಳ ಒಳ್ಳೆಯದು.ಇದರ ತಯಾರಿ ಸರಳವಾಗಿದ್ದು, ಕಡಿಮೆ ಸಮಯದಲ್ಲಿ ತಯಾರಿಸಬಹುದು.


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ: 1 ಕಪ್

ಬೇಕಾಗುವ ಪದಾರ್ಥಗಳು (ವಿಧಾನ 1):( ಅಳತೆ ಕಪ್ = 240 ಎಂಎಲ್ )

  1. 1 ಕಪ್ ನೀರು
  2. ದೊಡ್ಡ ಚಿಟಿಕೆ ಒಣಶುಂಠಿ ಪುಡಿ ಅಥವಾ 1/4 ಟಿಸ್ಪೂನ್ ಜಜ್ಜಿದ ಶುಂಠಿ 
  3. 1 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
  4. ಒಂದು ಚಿಟಿಕೆ ಕಾಳು ಮೆಣಸು ಪುಡಿಮಾಡಿದ್ದು (ಬೇಕಾದಲ್ಲಿ)
  5. 1 ಟೀಸ್ಪೂನ್ ನಿಂಬೆ ಹಣ್ಣಿನ ರಸ
  6. ಒಂದು ಸಣ್ಣ ಚಿಟಿಕೆ ಏಲಕ್ಕಿ ಪುಡಿ

ಬೇಕಾಗುವ ಪದಾರ್ಥಗಳು (ವಿಧಾನ 2):( ಅಳತೆ ಕಪ್ = 240 ಎಂಎಲ್ )

  1. 1 ಕಪ್ ನೀರು
  2. 1 ಟೇಬಲ್ ಚಮಚ ಪುಡಿ ಮಾಡಿದ ಬೆಲ್ಲ
  3. ಒಂದು ಚಿಟಿಕೆ ಕಾಳು ಮೆಣಸು ಪುಡಿಮಾಡಿದ್ದು
  4. 1 ಗೋಲಿ ಗಾತ್ರದ ಹುಣಿಸೆ ಹಣ್ಣು
  5. ಒಂದು ಸಣ್ಣ ಚಿಟಿಕೆ ಏಲಕ್ಕಿ ಪುಡಿ

ಬೆಲ್ಲದ ಪಾನಕ ಮಾಡುವ ವಿಧಾನ (ವಿಧಾನ 1):

  1. 1 ಕಪ್ ನೀರು ತೆಗೆದುಕೊಂಡು, ಶುಂಠಿ, ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಕಾಳು ಮೆಣಸು, ನಿಂಬೆ ರಸ, ಏಲಕ್ಕಿ ಪುಡಿ ಹಾಕಿ ಬೆರೆಸಿ. 10 ನಿಮಿಷ ಹಾಗೆ ಬಿಟ್ಟು, ಕುಡಿಯಲು ಕೊಡಿ.

ಬೆಲ್ಲದ ಪಾನಕ ಮಾಡುವ ವಿಧಾನ (ವಿಧಾನ 2):

  1. ಹುಣಿಸೆಹಣ್ಣು ನೆನೆಸಿ, ರಸ ತೆಗೆದಿಟ್ಟು ಕೊಳ್ಳಿ. 1 ಕಪ್ ನೀರು ತೆಗೆದುಕೊಂಡು, ಹುಣಿಸೆ ರಸ, ಪುಡಿಮಾಡಿದ ಬೆಲ್ಲ, ಪುಡಿಮಾಡಿದ ಕಾಳು ಮೆಣಸು, ಏಲಕ್ಕಿ ಹಾಕಿ ಬೆರೆಸಿ. 10 ನಿಮಿಷಗಳ ಕಾಲ ಹಾಗೆ ಬಿಟ್ಟು, ಕುಡಿಯಲು ಕೊಡಿ.

Related Posts Plugin for WordPress, Blogger...