Idli - Dose batter recipe in Kannada | ಇಡ್ಲಿ ಮತ್ತು ದೋಸೆ ಹಿಟ್ಟು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 240 ಎಂಎಲ್ )
- 1 ಕಪ್ ದೋಸೆ ಅಕ್ಕಿ
- 1 ಕಪ್ ಕುಸುಬುಲಕ್ಕಿ ಅಥವಾ ಇಡ್ಲಿ ಅಕ್ಕಿ
- 1/2 ಕಪ್ ಉದ್ದಿನ ಬೇಳೆ (ಚಳಿಗಾಲ ಆದ್ರೆ ಸ್ವಲ್ಪ ಜಾಸ್ತಿ ಮಾಡಿ)
- 1 ಟೀಸ್ಪೂನ್ ಮೆಂತೆ
- 1/4 - 1/2 ಕಪ್ ಗಟ್ಟಿ ಅವಲಕ್ಕಿ
- ಉಪ್ಪು ನಿಮ್ಮ ರುಚಿ ಪ್ರಕಾರ
ಇಡ್ಲಿ ಮತ್ತು ದೋಸೆ ಹಿಟ್ಟು ಮಾಡುವ ವಿಧಾನ:
- ಎರಡು ರೀತಿಯ ಅಕ್ಕಿಯನ್ನು ತೊಳೆದು 4 - 5 ಗಂಟೆಗಳ ಕಾಲ ನೆನೆಸಿಡಿ.
- ಉದ್ದಿನಬೇಳೆ ಮತ್ತು ಮೆಂತೆಯನ್ನು ತೊಳೆದು ಬೇರೆ ಪಾತ್ರೆಯಲ್ಲಿ 4 - 5 ಗಂಟೆಗಳ ಕಾಲ ನೆನೆಸಿಡಿ.
- ಅರೆಯುವ ಮುನ್ನ ಅವಲಕ್ಕಿಯನ್ನು ತೊಳೆದು 10 ನಿಮಿಷಗಳ ಕಾಲ ನೆನೆಸಿಡಿ.
- ನಂತರ ಮೊದಲಿಗೆ ಉದ್ದಿನಬೇಳೆ ಮತ್ತು ಮೆಂತೆಯನ್ನು ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ನಯವಾಗಿ ಅರೆದು ಒಂದು ಪಾತ್ರೆಗೆ ಬಗ್ಗಿಸಿ. ಅರೆಯಲು ನೆನೆಸಿದ ನೀರು ಉಪಯೋಗಿಸಬಹುದು.
- ಆಮೇಲೆ ನೆನೆಸಿದ ಅಕ್ಕಿಯ ನೀರು ಬಸಿದು, ಸ್ವಲ್ಪ ತರಿ ತರಿಯಾಗಿ ಅರೆದು, ಅದೇ ಪಾತ್ರೆಗೆ ಬಗ್ಗಿಸಿ. ಅರೆಯಲು ಅಗತ್ಯವಿದ್ದಷ್ಟು ಮಾತ್ರ ನೀರು ಸೇರಿಸಿ. ಗಮನಿಸಿ, ಹೆಚ್ಚು ನೀರು ಸೇರಿಸಬೇಡಿ ಮತ್ತು ಸ್ವಲ್ಪ ತರಿ ತರಿ ಇದ್ದರೆ ಸಾಕು.
- ಕೈಗಳನ್ನು ಬಳಸಿ ಚೆನ್ನಾಗಿ ಕಲಸಿ, ಮುಚ್ಚಳವನ್ನು ಮುಚ್ಚಿ 7 - 8 ಗಂಟೆಗಳ ಕಾಲ ಹುದುಗಲು ಬಿಡಿ. ಚಳಿಗಾಲ ಸಮಯ ಆದಲ್ಲಿ ಸುಮಾರು 12 ಗಂಟೆ ಬೇಕಾಗಬಹುದು.
- ಹುದುಗುವಿಕೆಯ ನಂತರ ಅಗತ್ಯವಿದ್ದಷ್ಟು ಹಿಟ್ಟು ತೆಗೆದುಕೊಂಡು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
- ಇಡ್ಲಿ ತಟ್ಟೆಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಇಡ್ಲಿ ಹಿಟ್ಟನ್ನು ಹಾಕಿ.
- 10 ನಿಮಿಷಗಳ ಕಾಲ ಅದನ್ನು ಸೆಕೆಯಲ್ಲಿ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ನೀರು ಕುದಿಯಲು ಪ್ರಾರಂಭವಾದ ಮೇಲೆ ಇಡ್ಲಿ ತಟ್ಟೆಗಳನ್ನಿಡಿ. ೧೦ ನಿಮಿಷಗಳ ಕಾಲ ಬೇಯಿಸಿ. ಒಂದೈದು ನಿಮಿಷ ಬಿಟ್ಟು ಇಡ್ಲಿಯನ್ನು ತೆಗೆಯಿರಿ.
- ನಂತರ ದೋಸೆ ಮಾಡಲು, ಅಗತ್ಯವಿದ್ದಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ನೀರು ಮತ್ತು ಅಗತ್ಯವಿದ್ದಷ್ಟು ಉಪ್ಪು ಹಾಕಿ ದೋಸೆ ಮಾಡಿ.
- ಅದೇ ದೋಸೆ ಹಿಟ್ಟಲ್ಲಿ ಈರುಳ್ಳಿ ದೋಸೆ ಮಾಡಿ. ಈರುಳ್ಳಿ ದೋಸೆ ಮಾಡಲು, ಎರಡು ಸೌಟು ಹಿಟ್ಟು ಹಾಕಿ, ಮೇಲಿಂದ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಮತ್ತು ತುರಿದ ಕ್ಯಾರಟ್ ಹಾಕಿ ಎರಡು ಬದಿ ಕಾಯಿಸಿ.
- ಪಡ್ಡು ಮಾಡಲು ದೋಸೆ ಹಿಟ್ಟಿಗೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಹಸಿಮೆಣಸು ಹಾಕಿ ಪಡ್ಡು ಹೆಂಚಲ್ಲಿ ಪಡ್ಡು ಮಾಡಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ