ಗುರುವಾರ, ಏಪ್ರಿಲ್ 28, 2016

Dasavala thambuli or thambli recipe in kannada | ದಾಸವಾಳ ತಂಬುಳಿ ಮಾಡುವ ವಿಧಾನ

dasavala thambuli in kannada

Dasavala thambuli or thambli recipe in kannada |  ದಾಸವಾಳ ತಂಬುಳಿ ಮಾಡುವ ವಿಧಾನ 

ದಾಸವಾಳ ತಂಬುಳಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇದೊಂದು ಸರಳ ಮತ್ತು ರುಚಿಕರ ಅಡುಗೆಯಾಗಿದ್ದು, ದಾಸವಾಳ ಹೂವು ಸಿಕ್ಕಿದಲ್ಲಿ ಮಾಡಲು ಮರೆಯದಿರಿ. ಅನ್ನದೊಂದಿಗೆ ಬಹಳ ರುಚಿಕರವಾಗಿರುತ್ತದೆ.


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 10 - 12 ದಾಸವಾಳ ಹೂಗಳು 
  2. 1 ಕಪ್ ತೆಂಗಿನ ತುರಿ 
  3. 1/4 ಟೀಸ್ಪೂನ್ ಸಾಸಿವೆ
  4. 2 ಕಪ್ ಮೊಸರು 
  5. ಉಪ್ಪು ನಿಮ್ಮ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/4 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 2 ಟೀಸ್ಪೂನ್ ಅಡುಗೆ ಎಣ್ಣೆ

ದಾಸವಾಳ ತಂಬುಳಿ ಮಾಡುವ ವಿಧಾನ:

  1. ತಾಜಾ ದಾಸವಾಳ ಹೂಗಳನ್ನು ತೆಗೆದುಕೊಳ್ಳಿ. ಬಿಳಿ ಹೂವುಗಳಿದ್ದಲ್ಲಿ ಉತ್ತಮ. ಜಾಗ್ರತೆಯಿಂದ ತೊಳೆದು ನೀರಾರಿಸಿ. 
  2. ದಾಸವಾಳ ಹೂವುಗಳ ದಳಗಳನ್ನು ಪ್ರತ್ಯೇಕಿಸಿ. ಕೀಟ ಅಥವಾ ಹುಳುಗಳು ಇದ್ದರೆ ತೆಗೆಯಿರಿ. 
  3. ಆಯ್ದ ದಾಸವಾಳ ದಳಗಳನ್ನು ಕತ್ತರಿಸಿ.
  4. ಕೈಗಳನ್ನು ಬಳಸಿ ಕತ್ತರಿಸಿದ ದಳಗಳನ್ನು ಹಿಸುಕಿ. ಉಪ್ಪು ಸೇರಿಸಿ. 
  5. ತೆಂಗಿನ ತುರಿ ಮತ್ತು 1/4 ಟೀಸ್ಪೂನ್ ಸಾಸಿವೆಯನ್ನು ನುಣ್ಣನೆ ಅರೆಯಿರಿ. 
  6. ಅರೆದ ತೆಂಗಿನಕಾಯಿಯನ್ನು ಹಿಸುಕಿದ ದಾಸವಾಳಕ್ಕೆ ಸೇರಿಸಿ.  ಮೊಸರನ್ನೂ ಸೇರಿಸಿ ಚೆನ್ನಾಗಿ ಕಲಸಿ.  
  7. ಕೆಂಪು ಮೆಣಸಿನಕಾಯಿ , ಸಾಸಿವೆಯ ಒಗ್ಗರಣೆ ಮಾಡಿ ಸೇರಿಸಿ . ಬಿಸಿಯಾದ ಅನ್ನದೊಂದಿಗೆ ಬಡಿಸಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಏಪ್ರಿಲ್ 27, 2016

Mangalore style churumuri recipe in Kannada | ಮಂಗಳೂರು ಶೈಲಿಯ ಚುರುಮುರಿ ಮಾಡುವ ವಿಧಾನ

mangalore style churumuri recipe in kannada.

Mangalore style churumuri recipe in Kannada | ಮಂಗಳೂರು ಶೈಲಿಯ ಚುರುಮುರಿ ಮಾಡುವ ವಿಧಾನ 


ಮಂಗಳೂರು ಶೈಲಿಯ ಚುರುಮುರಿ ಮಾಡುವ ವಿಧಾನವನ್ನುಇಲ್ಲಿ ವಿವರಿಸಲಾಗಿದೆ. ಈ ರೀತಿಯ ಚುರುಮುರಿ ಮಂಗಳೂರು-ಉಡುಪಿ ಪ್ರದೇಶದಲ್ಲಿ ಬಹಳ ಜನಪ್ರಿಯ ಮತ್ತು ಎಲ್ಲರು ಇಷ್ಟ ಪಡುವ ಕುರುಕಲು ತಿಂಡಿ ಯಾಗಿದ್ದು, ಸಾಧಾರಣವಾಗಿ ಇದನ್ನು ಗಾಡಿಗಳಲ್ಲಿ ಮಾರುತ್ತಾರೆ. ಈ ಚುರುಮುರಿ ಮಲೆನಾಡು ಪ್ರದೇಶದಲ್ಲೂ ಬಳಕೆಯಲ್ಲಿದೆ. ಖಾರ ಮತ್ತು ರುಚಿಕರ ಚುರುಮುರಿ ವಿಧಾನವನ್ನು ವೀಡಿಯೊ ಮೂಲಕ ವಿವರಿಸಿದ್ದೇನೆ. ನೋಡಿ ಆನಂದಿಸಿ.




ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 0 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 4 - 6 ಕಪ್  ಮಂಡಕ್ಕಿ
  2. 1 ಸಣ್ಣದಾಗಿ ಕೊಚ್ಚಿದ ಈರುಳ್ಳಿ
  3. 1 ಸಣ್ಣದಾಗಿ ಕೊಚ್ಚಿದ ಟೊಮೆಟೊ
  4. 1 ತುರಿದ ಸಣ್ಣ ಗಾತ್ರದ ಕ್ಯಾರೆಟ್
  5. 2 ಟೇಬಲ್ ಚಮಚ ತುರಿದ ಮಾವಿನಕಾಯಿ
  6. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. 2 ಟೇಬಲ್ ಚಮಚ ಹುರಿದ ನೆಲಗಡಲೆ
  8. 1 ಸಣ್ಣದಾಗಿ ಕೊಚ್ಚಿದ ಹಸಿರು ಮೆಣಸಿನಕಾಯಿ ( ಬೇಕಾದಲ್ಲಿ - ಹೆಚ್ಚಿನ ಖಾರಕ್ಕಾಗಿ)
  9. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  10. 1/4 ಟೀಸ್ಪೂನ್ ಅರಿಶಿನ ಪುಡಿ
  11. 2 ಟೇಬಲ್ ಚಮಚ ತೆಂಗಿನ ಎಣ್ಣೆ / ಅಡುಗೆ ಎಣ್ಣೆ ( ತೆಂಗಿನ ಎಣ್ಣೆಗೆ ಆದ್ಯತೆ)
  12. ಉಪ್ಪು ರುಚಿಗೆ ತಕ್ಕಷ್ಟು

ಮಂಗಳೂರು ಶೈಲಿಯ ಚುರುಮುರಿ ಮಾಡುವ ವಿಧಾನ:

  1. ದೊಡ್ಡ ಬಟ್ಟಲಿನಲ್ಲಿ ಗರಿಗರಿಯಾದ ಮಂಡಕ್ಕಿ ತೆಗೆದುಕೊಳ್ಳಿ. ಮಂಡಕ್ಕಿ ಗರಿಗರಿ ಇಲ್ಲವಾದಲ್ಲಿ ಒಂದು ಬಾಣಲೆಯಲ್ಲಿ ಬೆಚ್ಚಗೆ ಮಾಡುವ ಮೂಲಕ ಗರಿ ಗರಿ ಮಾಡಿಕೊಳ್ಳಿ.
  2. ಈಗ ಅರಿಶಿನ ಪುಡಿ, ಅಚ್ಚ ಖಾರದ ಪುಡಿ, ಉಪ್ಪು ಮತ್ತು ತೆಂಗಿನ ಎಣ್ಣೆ ಸೇರಿಸಿ.
  3. ಚೆನ್ನಾಗಿ ಕಲಸಿ. ಬೇಕಾದಲ್ಲಿ ಒಂದು ದೊಡ್ಡ ಚಿಟಿಕೆ ಚಾಟ್ ಮಸಾಲಾ ಸಹ ಸೇರಿಸಬಹುದು. 
  4. ಹುರಿದ ಕಡಲೆಕಾಯಿ ಬೀಜವನ್ನು ಸೇರಿಸಿ. ನೀವು ಕಾಂಗ್ರೆಸ್ ಕಡಲೆಕಾಯಿ ಅಥವಾ  ಯಾವುದೇ ಕಾರಕಡ್ಡಿ ಮಿಕ್ಸ್ಚರ್ ನ್ನು ಸಹ ಬಳಸಬಹುದು. 
  5. ಸಣ್ಣದಾಗಿ ಕೊಚ್ಚಿದ ಈರುಳ್ಳಿ, ತುರಿದ ಕ್ಯಾರೆಟ್, ತುರಿದ ಮಾವಿನಕಾಯಿ, ಹೆಚ್ಚಿದ ಕೊತ್ತಂಬರಿ ಸೊಪ್ಪು , ಹಸಿರು ಮೆಣಸಿನ ಕಾಯಿ ಮತ್ತು ಟೊಮೆಟೊ ಸೇರಿಸಿ.
  6. ಚೆನ್ನಾಗಿ ಕಲಸಿ ತಕ್ಷಣವೇ ಬಡಿಸಿ.

ಸೋಮವಾರ, ಏಪ್ರಿಲ್ 25, 2016

Menthe huli or Menthya sambar in Kannada | ಮೆಂತೆ ಹುಳಿ ಅಥವಾ ಮೆಂತೆ ಸಾಂಬಾರ್ ಮಾಡುವ ವಿಧಾನ

menthe huli athava menthe sambar in kannada

Menthe huli or Menthya sambar in Kannada | ಮೆಂತೆ ಹುಳಿ ಅಥವಾ ಮೆಂತೆ ಸಾಂಬಾರ್ ಮಾಡುವ ವಿಧಾನ


ಮೆಂತೆ ಹುಳಿ ಅಥವಾ ಮೆಂತೆ ಸಾಂಬಾರ್ ಬಹಳ ರುಚಿಕರ ಮತ್ತು ಅತೀ ಕಡಿಮೆ ಪದಾರ್ಥಗಳನ್ನು ಬಳಸಿ ಮಾಡುವ ಸಾಂಬಾರ್ ಆಗಿದೆ. ಈ ಸಾಂಬಾರ್ ಗೆ ಬೇಳೆಯಾಗಲಿ ಅಥವಾ ಯಾವುದೇ ತರಕಾರಿಯಾಗಲಿ ಬಳಸುವುದಿಲ್ಲ. ಹುಳಿ-ಸಿಹಿ ಮಿಶ್ರಿತ ಈ ಸಾಂಬಾರ್ ಅನ್ನದೊಂದಿಗೆ ಬಲು ರುಚಿ. ಒಮ್ಮೆ ಮಾಡಿ ನೋಡಿ.

ತಯಾರಿ ಸಮಯ: 0 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಟೀಸ್ಪೂನ್ ಮೆಂತೆ / ಮೆಂತ್ಯ ಕಾಳು
  2. 4 - 6 ಕೆಂಪು ಮೆಣಸಿನಕಾಯಿ 
  3. 1 ಟೀಸ್ಪೂನ್ ಕೊತ್ತಂಬರಿ ಬೀಜ 
  4. 1/4 ಟೀಸ್ಪೂನ್ ಜೀರಿಗೆ 
  5. 1/4 ಟೀಸ್ಪೂನ್ ಸಾಸಿವೆ 
  6. 1 ಕಪ್ ತೆಂಗಿನ ತುರಿ 
  7. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು 
  8. 2 ನಿಂಬೆ ಗಾತ್ರದ ಬೆಲ್ಲ 
  9. 1 ಟೀಸ್ಪೂನ್ ಅಡುಗೆ ಎಣ್ಣೆ 
  10. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1/2 ಚಮಚ ಸಾಸಿವೆ
  2. 1 ಕೆಂಪು ಮೆಣಸಿನಕಾಯಿ
  3. 5 - 6 ಕರಿಬೇವಿನ ಎಲೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ಮೆಂತೆ ಹುಳಿ ಅಥವಾ ಮೆಂತೆ ಸಾಂಬಾರ್ ಮಾಡುವ ವಿಧಾನ:

  1. ದೊಡ್ಡ ಬಾಣಲೆ ತೆಗೆದುಕೊಂಡು ಬಿಸಿ ಮಾಡಿ. ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ ಮತ್ತು ಸಾಸಿವೆ ಸೇರಿಸಿ. 
  2. ಮಧ್ಯಮ ಜ್ವಾಲೆಯ ಅಡಿಯಲ್ಲಿ ಅವುಗಳನ್ನು ಹುರಿಯಿರಿ ಮತ್ತು ಪಕ್ಕಕ್ಕಿಡಿ.
  3. ಅದೇ ಬಾಣಲೆಗೆ ಮೆಂತೆ ಅಥವಾ ಮೆಂತ್ಯವನ್ನು  ಹಾಕಿ.
  4. ಹೊಂಬಣ್ಣ ಬರುವವರೆಗೆ ಮಧ್ಯಮ ಜ್ವಾಲೆಯಲ್ಲಿ ಹುರಿಯಿರಿ.
  5. ಈಗ ಹುರಿದ ಮೆಂತೆಗೆ ಎಚ್ಚರಿಕೆಯಿಂದ 2 ಕಪ್ ನೀರು ಸೇರಿಸಿ ಕುದಿಸಿ. 
  6. ಮುಚ್ಚಳವನ್ನು ಮುಚ್ಚಿ ಮಧ್ಯಮ ಜ್ವಾಲೆಯ ಅಡಿಯಲ್ಲಿ 10 ನಿಮಿಷ ಬೇಯಿಸಿ.
  7. ಅಷ್ಟರಲ್ಲಿ ಮಿಕ್ಸಿ ಜಾರ್ ಗೆ ತುರಿದ ತೆಂಗಿನಕಾಯಿ ಮತ್ತು ಹುರಿದ ಮಸಾಲೆಗಳನ್ನು (ಕೆಂಪು ಮೆಣಸಿನಕಾಯಿ , ಜೀರಿಗೆ , ಕೊತ್ತಂಬರಿ ಬೀಜ ಮತ್ತು ಸಾಸಿವೆ) ಹಾಕಿ.
  8. ಅಗತ್ಯವಿದ್ದಷ್ಟು ನೀರು ಬಳಸಿ ನುಣ್ಣನೆ ಅರೆಯಿರಿ.
  9. ಈಗ ಬೇಯಿಸಿದ ಮೆಂತೆ ಅಥವಾ ಮೆಂತ್ಯಕ್ಕೆ ಅರೆದ ಮಸಾಲೆ ಮತ್ತು ಬೆಲ್ಲವನ್ನು ಸೇರಿಸಿ. 
  10. ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣಿನಿಂದ ತೆಗೆದ ಹುಣಿಸೆ ರಸ ಸೇರಿಸಿ ಮತ್ತು ಉಪ್ಪು ಸೇರಿಸಿ . 
  11. 3 - 4 ಕಪ್ ನೀರು ಸೇರಿಸಿ ಕುಡಿಸಿ. ಚೆನ್ನಾಗಿ ಕುದಿಯಲು ಪ್ರಾರಂಭವದ ಕೂಡಲೇ ಸ್ಟವ್ ಆಫ್ ಮಾಡಿ. 
  12. ಎಣ್ಣೆ, ಸಾಸಿವೆ, ಕೆಂಪು ಮೆಣಸಿನಕಾಯಿ ಮತ್ತು ಕರಿಬೇವಿನ ಒಗ್ಗರಣೆ ಮಾಡಿ. ಬಿಸಿ ಅನ್ನದೊಂದಿಗೆ ಬಡಿಸಿ, ಆನಂದಿಸಿ !!


ಶನಿವಾರ, ಏಪ್ರಿಲ್ 23, 2016

Eerulli pakoda (bajji) or Neerulli baje recipe in kannada | ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಮಾಡುವ ವಿಧಾನ

onion or eerulli pakoda in kannada

Eerulli pakoda (bajji) or Neerulli baje recipe in kannada | ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಮಾಡುವ ವಿಧಾನ 

ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಯನ್ನು ಈರುಳ್ಳಿ, ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಅಚ್ಚಖಾರದ ಪುಡಿ, ಓಮದ ಕಾಳು, ಇಂಗು, ಸಣ್ಣಗೆ ಹೆಚ್ಚಿದ ಹಸಿರುಮೆಣಸಿನಕಾಯಿ ಮತ್ತು ಕರಿಬೇವನ್ನು ಹಾಕಿ ಮಾಡಲಾಗುತ್ತದೆ. ನನ್ನ ಪ್ರಕಾರ ಒಮ ಅಥವಾ ಅಜ್ವೈನ್ ಹಾಕಿ ಮಾಡಿದರೆ ಹೆಚ್ಚು ರುಚಿ. ನೀವು ನಿಮ್ಮ ಇಷ್ಟದ ಪ್ರಕಾರ ಒಮದ ಬದಲು ಜೀರಿಗೆ ಅಥವಾ ಜಜ್ಜಿದ ಕೊತ್ತಂಬರಿಯನ್ನು ಸೇರಿಸಬಹುದು.
ನಾನು ಕೆಲವೊಮ್ಮೆ ಸಣ್ಣಗೆ ಹೆಚ್ಚಿದ ಶುಂಟಿ ಬೆಳ್ಳುಳ್ಳಿಯನ್ನು ಸಹ ಸೇರಿಸುತ್ತೇನೆ. ಅದು ಸಹ ರುಚಿಕರವಾಗಿರುತ್ತದೆ. ಈ ಗರಿಗರಿಯಾದ ಪಕೋಡ ಅಥವಾ ಬಜ್ಜಿ ಯನ್ನು ಮಾಡಿ ಸವಿದು ಆನಂದಿಸಿ. 


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ : 4 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 5 - 6 ದೊಡ್ಡ ಈರುಳ್ಳಿ
  2. 3 ಕಪ್ ಕಡ್ಲೆ ಹಿಟ್ಟು
  3. 1/2 ಕಪ್ ಅಕ್ಕಿ ಹಿಟ್ಟು
  4. 1 ಟೀಸ್ಪೂನ್ ಅಚ್ಚ ಖಾರದ ಪುಡಿ
  5. 1 - 2 ಸಣ್ಣದಾಗಿ ಹೆಚ್ಚಿದ ಹಸಿಮೆಣಸಿನಕಾಯಿ (ಬೇಕಾದಲ್ಲಿ)
  6. 2 ಟೇಬಲ್ ಚಮಚ ಹೆಚ್ಚಿದ ಕರಿಬೇವು
  7. 1/4 ಟೀಸ್ಪೂನ್ ಇಂಗು
  8. 1/2 ಟೀಸ್ಪೂನ್ ಓಮ ಅಥವಾ ಅಜ್ವೈನ್
  9. ಉಪ್ಪು ರುಚಿಗೆ ತಕ್ಕಷ್ಟು
  10. ಎಣ್ಣೆ ಖಾಯಿಸಲು ಅಥವಾ ಕರಿಯಲು

ಈರುಳ್ಳಿ ಪಕೋಡ (ಬಜ್ಜಿ) ಅಥವಾ ನೀರುಳ್ಳಿ ಬಜೆ ಮಾಡುವ ವಿಧಾನ:

  1. ಈರುಳ್ಳಿ ಉದ್ದನಾಗಿ ತೆಳುವಾಗಿ ಕತ್ತರಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಹೀಗೆ ಮಾಡುವುದರಿಂದ ಈರುಳ್ಳಿ ನೀರು ಬಿಡುತ್ತದೆ. 
  2. ಈಗ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ಕತ್ತರಿಸಿದ ಹಸಿರು ಮೆಣಸಿನಕಾಯಿ , ಕತ್ತರಿಸಿದ ಕರಿಬೇವಿನ ಸೊಪ್ಪು, ಓಮ ಮತ್ತು ಇಂಗು ಸೇರಿಸಿ ಚೆನ್ನಾಗಿ ಕಲಸಿ. ನೀರು ಹಾಕಬೇಡಿ.
  3. 2 ಚಮಚ ಬಿಸಿ ಎಣ್ಣೆ ಸೇರಿಸಿ ಮತ್ತೆ ಚೆನ್ನಾಗಿ ಕಲಸಿ. ಈಗ ಸಹ ನೀರು ಸೇರಿಸಬೇಡಿ. 
  4. ಈಗ ಒಂದು ಬಾಣಲೆ ತೆಗೆದುಕೊಂಡು ಎಣ್ಣೆ ಬಿಸಿಯಾಗಲು ಇಡಿ. ಎಣ್ಣೆ ಬಿಸಿಯಾದ ಕೂಡಲೇ ಒಂದು ಕೈ ಹಿಡಿಯಷ್ಟು ಹಿಟ್ಟು ತೆಗೆದುಕೊಂಡು ಸ್ವಲ್ಪ ಸ್ವಲ್ಪವಾಗಿ ಎಣ್ಣೆಗೆ ಹಾಕಿ. ಹಿಟ್ಟು ತುಂಬ ಉದುರಾಗಿದೆ (ಒಣಕಲಾಗಿದೆ) ಎನಿಸಿದರೆ ಸ್ವಲ್ಪವೇ ಸ್ವಲ್ಪ ನೀರು ಸಿಂಪಡಿಸಿ ಚೆನ್ನಾಗಿ ಕಲಸಿ ಆನಂತರ ಬಿಸಿ ಎಣ್ಣೆಯಲ್ಲಿ ಹಾಕಿ.

ಬುಧವಾರ, ಏಪ್ರಿಲ್ 20, 2016

Carrot parota recipe in Kannada | ಕ್ಯಾರಟ್ ಪರೋಟ ಮಾಡುವ ವಿಧಾನ


carrot parota in kannada

Carrot parota recipe in Kannada | ಕ್ಯಾರಟ್  ಪರೋಟ ಮಾಡುವ ವಿಧಾನ


ಕ್ಯಾರಟ್ ಪರೋಟವನ್ನು ತುರಿದ ಕ್ಯಾರಟ್, ಸ್ವಲ್ಪ ಆಲೂಗಡ್ಡೆ ಮತ್ತು ಮಸಾಲಾ ಪದಾರ್ಥಗಳನ್ನು ಉಪಯೋಗಿಸಿ ಮಾಡಲಾಗಿದೆ.  ಇದೊಂದು ಮಸಾಲೆ ತುಂಬಿಸಿ ಮಾಡಿದ ಪರೋಟವಾಗಿದ್ದು ನಾನು ಈಗಾಗಲೇ ವಿವರಿಸಿದ ಅಲೂ ಪರೋಟವನ್ನು ಹೋಲುತ್ತದೆ. ಜೀರ್ಣದ ಸಮಸ್ಯೆಯಿರುವವರು ಅಲೂ ಪರೋಟದ ಬದಲು ಈ ರೀತಿಯ ಪರೋಟ ಮಾಡಿ ತಿಂದರೆ ರುಚಿಕರವಾಗಿದ್ದು ಅವರ ಆರೋಗ್ಯಕ್ಕೂ ಒಳ್ಳೆಯದು. 


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 40 ನಿಮಿಷ
ಪ್ರಮಾಣ : 8 ಪರೋಟ 

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಮಧ್ಯಮ ಗಾತ್ರದ ಕ್ಯಾರಟ್
  2. 1 ಮಧ್ಯಮ ಗಾತ್ರದ ಆಲೂಗಡ್ಡೆ
  3. 3 ಕಪ್ ಗೋಧಿ ಹಿಟ್ಟು (8 - 10 ದೊಡ್ಡ ಚಪಾತಿ ಗಾಗುವಷ್ಟು)
  4. 1/2 ಟೀಸ್ಪೂನ್ ಸಾಸಿವೆ
  5. 1/2 ಟೀಸ್ಪೂನ್ ಜೀರಿಗೆ
  6. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
  7. 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ
  8. 2 ಟೀಸ್ಪೂನ್ ಕತ್ತರಿಸಿದ ಕರಿಬೇವಿನ ಸೊಪ್ಪು
  9. 2 ಟೇಬಲ್ ಸ್ಪೂನ್ ಕತ್ತರಿಸಿದ ಕೊತ್ತುಂಬರಿ ಸೊಪ್ಪು
  10. ಒಂದು ದೊಡ್ಡ ಚಿಟಿಕೆ ಅರಿಶಿನ ಪುಡಿ
  11. ಒಂದು ದೊಡ್ಡ ಚಿಟಿಕೆ ಇಂಗು 
  12. 2 ಟೀಸ್ಪೂನ್ ಅಡುಗೆ ಎಣ್ಣೆ
  13. ಉಪ್ಪು ರುಚಿಗೆ ತಕ್ಕಷ್ಟು.

ಆಲೂ ಪರೋಟ ಮಾಡುವ ವಿಧಾನ:

  1. ಆಲೂಗಡ್ಡೆ ತೊಳೆದು ಸ್ವಲ್ಪ ಉಪ್ಪು ಮತ್ತು ಅರಿಶಿನ ಪುಡಿಯೊಂದಿಗೆ ಕುಕ್ಕರ್‌ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಸಿಪ್ಪೆ ತೆಗೆದು ಪುಡಿ ಮಾಡಿಟ್ಟು ಕೊಳ್ಳಿ. ಕ್ಯಾರಟ್ ನ್ನು ತೊಳೆದು ತುರಿದಿಟ್ಟು ಕೊಳ್ಳಿ. 
  2. ಗೋಧಿಹಿಟ್ಟನ್ನು ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಮುಚ್ಚಿಡಿ. 
  3. ಕ್ಯಾರಟ್ ಪರೋಟದ ಮಸಾಲೆ ಮಾಡಲು, ಮೊದಲಿಗೆ ಒಲೆ ಹತ್ತಿಸಿ ಮಧ್ಯಮ ಉರಿಯಲ್ಲಿಡಿ. ಒಲೆ ಮೇಲೆ ಬಾಣಲೆ ಇರಿಸಿ, ಎಣ್ಣೆ ಮತ್ತು ಸಾಸಿವೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಜೀರಿಗೆ ಹಾಕಿ. 
  4. ತಕ್ಷಣ ಕತ್ತರಿಸಿದ ಹಸಿಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಕೈಯಾಡಿಸಿ.
  5. ನಂತರ ಕತ್ತರಿಸಿದ ಕರಿಬೇವಿನ ಸೊಪ್ಪು ಹಾಕಿ. ಕೂಡಲೇ ಕೊತ್ತುಂಬರಿ ಸೊಪ್ಪು ಸೇರಿಸಿ ಮಗುಚಿ. 
  6. ತುರಿದ ಕ್ಯಾರಟ್, ಅರಶಿನ ಪುಡಿ ಮತ್ತು ಇಂಗು ಸೇರಿಸಿ ಒಂದೆರಡು ನಿಮಿಷ ಹುರಿದು ಒಲೆ ಆರಿಸಿ.
  7. ಈಗ ಅದೇ ಬಾಣಲೆಗೆ ಪುಡಿಮಾಡಿದ ಆಲೂಗಡ್ಡೆ, ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಗುಚಿ.
  8. ಈಗ ಕ್ಯಾರಟ್ ಪರೋಟ ಮಾಡಲು, ಗೋಧಿ ಹಿಟ್ಟನ್ನು ಮುಟ್ಟಿಕೊಂಡು, ಒಂದು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಎರಡೂ ಕೈ ಬೆರಳುಗಳನ್ನು ಬಳಸಿ ಒಂದು ಬಟ್ಟಲಿನ ಆಕಾರ ಮಾಡಿ. ಆ ಬಟ್ಟಲಿನ ಆಕಾರದೊಳಗೆ ಒಂದು ಸಣ್ಣ ನಿಂಬೆ ಗಾತ್ರದ ಮಸಾಲೆ ಇರಿಸಿ.
  9. ಎಚ್ಚರಿಕೆಯಿಂದ ತುದಿಗಳನ್ನು ಒಟ್ಟಿಗೆ ತಂದು ಮಸಾಲೆಯನ್ನು ಒಳಗೆ ಸೇರಿಸಿ. ಹೊರಗಿನ ಹಿಟ್ಟು ಹೆಚ್ಚು ಕಡಿಮೆ ಎಲ್ಲ ಕಡೆ ಒಂದೇ ದಪ್ಪವಿರುವಂತೆ ಜಾಗ್ರತೆವಹಿಸಿ. ನಿಧಾನವಾಗಿ ಅದನ್ನು ಒತ್ತಿ ಸ್ವಲ್ಪ ಚಪ್ಪಟೆ ಮಾಡಿ.
  10. ಸಾಕಷ್ಟು ಗೋಧಿ ಹಿಟ್ಟನ್ನು ಬಳಸಿ ಚಪ್ಪಟೆ ಮಾಡಿದ ಉಂಡೆಯನ್ನು ಚಪಾತಿಯಂತೆ ಒತ್ತಿ ಅಥವಾ ಲಟ್ಟಿಸಿ.
  11. ಒಂದು ಹೆಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ. ಜಾಗ್ರತೆಯಿಂದ ಲಟ್ಟಿಸಿದ ಪರೋಟವನ್ನು ತವಾ ಮೇಲೆ ಹಾಕಿ. 
  12. ಎರಡು ಬದಿ ಕಾಯಿಸಿ. ಬೇಕಾದಲ್ಲಿ ಕಾಯಿಸುವಾಗ ತುಪ್ಪ ಅಥವಾ ಎಣ್ಣೆ ಹಾಕಿ. ಬಿಸಿಯಾಗಿರುವಾಗಲೇ ಮೊಸರು ಮತ್ತು ಉಪ್ಪಿನಕಾಯಿ ಜೊತೆ ಬಡಿಸಿ.

ಮಂಗಳವಾರ, ಏಪ್ರಿಲ್ 19, 2016

Mavinakai chutney recipe in kannada | ಮಾವಿನಕಾಯಿ ಚಟ್ನಿ ಮಾಡುವ ವಿಧಾನ

mango chutney or mavinakayi chutney in kannada

Mavinakai chutney recipe in kannada | ಮಾವಿನಕಾಯಿ ಚಟ್ನಿ ಮಾಡುವ ವಿಧಾನ 

ಮಾವಿನಕಾಯಿ ಚಟ್ನಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಸಾಧಾರಣವಾಗಿ ಮಾವಿನಕಾಯಿ ಚಟ್ನಿ ಯನ್ನು ಹಸಿರುಮೆಣಸಿನಕಾಯಿ ಮತ್ತು ತೆಂಗಿನಕಾಯಿ ಹಾಕಿ ಮಾಡಲಾಗುತ್ತದೆ. ಆದರೆ ಈ ಚಟ್ನಿಯನ್ನು ಮಾವಿನಕಾಯಿ, ತೆಂಗಿನ ತುರಿ,  ಹುರಿದ ಒಣಮೆಣಸು ಮತ್ತು ಉದ್ದಿನಬೇಳೆಯನ್ನು ಸೇರಿಸಿ ಮಾಡುವ ಕಾರಣ ಹೆಚ್ಚು ರುಚಿಕರವಾಗಿರುತ್ತದೆ.

ಮಾವಿನಕಾಯಿ ಚಟ್ನಿ ವಿಡಿಯೋ


ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 1/2 ಮಾವಿನಕಾಯಿ 
  2. 2 ಕಪ್ ತೆಂಗಿನ ತುರಿ
  3. 2 - 4 ಒಣ ಮೆಣಸಿನಕಾಯಿ
  4. 4 ಟೀಸ್ಪೂನ್ ಉದ್ದಿನ ಬೇಳೆ
  5. ಒಂದು ಚಿಟಿಕೆ ಸಾಸಿವೆ
  6. 1 ಟೀಸ್ಪೂನ್ ಅಡುಗೆ ಎಣ್ಣೆ
  7. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ (ಬೇಕಾದಲ್ಲಿ)
  2. 1/4 ಟೀಸ್ಪೂನ್ ಸಾಸಿವೆ
  3. 1 ಟೀಸ್ಪೂನ್ ಅಡುಗೆ ಎಣ್ಣೆ

ಮಾವಿನಕಾಯಿ ಚಟ್ನಿ ಮಾಡುವ ವಿಧಾನ:

  1. ಮಾವಿನಕಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ. 
  2. ಸಿಪ್ಪೆ ತೆಗೆದ ಮಾವಿನಕಾಯಿಯನ್ನು ತುರಿಯಿರಿ. 
  3. ಒಂದು ಬಾಣಲೆಗೆ ಎಣ್ಣೆ, ಸಾಸಿವೆ ಮತ್ತು ಉದ್ದಿನಬೇಳೆ ಹಾಕಿ.
  4. ಉದ್ದಿನಬೇಳೆ ಹೊಂಬಣ್ಣ ಬರುವವರೆಗೆ ಹುರಿಯಿರಿ.
  5. ಒಂದು ಮಿಕ್ಸೀ ಜಾರಿಗೆ ತೆಂಗಿನ ತುರಿ, ತುರಿದ ಮಾವಿನಕಾಯಿ, ಹುರಿದ ಒಣ ಮೆಣಸು ಮತ್ತು ಹುರಿದ ಉದ್ದಿನಬೇಳೆ ಹಾಕಿ. 
  6. ಅಗತ್ಯವಿದ್ದಷ್ಟು ನೀರು ಸೇರಿಸಿ  ಅರೆಯಿರಿ. 
  7. ಒಣಮೆಣಸಿನಕಾಯಿ ಮತ್ತು ಸಾಸಿವೆಯ ಒಗ್ಗರಣೆ ಮಾಡಿ.

ಸೋಮವಾರ, ಏಪ್ರಿಲ್ 18, 2016

Ghee rice recipe in Kannada | ತುಪ್ಪ ಅನ್ನ ಮಾಡುವ ವಿಧಾನ

ghee rice recipe in kannada

Ghee rice recipe in Kannada | ತುಪ್ಪ ಅನ್ನ ಮಾಡುವ ವಿಧಾನ 


ರುಚಿಕರ ಮತ್ತು ಸರಳ ಘೀ ರೈಸ್ ಅಥವಾ ತುಪ್ಪದ ಅನ್ನ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಈ ಅಡುಗೆಯನ್ನು ತುಪ್ಪ, ಅಕ್ಕಿ, ಈರುಳ್ಳಿ, ಬೆಳ್ಳುಳ್ಳಿ, ಶುಂಟಿ ಮತ್ತು ಇನ್ನು ಕೆಲವು ಮಸಾಲೆ  ಪದಾರ್ಥಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. 
ವಿಶೇಷವೆಂದರೆ ಈ ಅಡುಗೆ ಯ ವಿಡಿಯೋವನ್ನು ಸಹ ಮಾಡಿದ್ದೇನೆ. ಕೆಳಗಿರುವ ವೀಡಿಯೊವನ್ನು ವೀಕ್ಷಿಸಿ ಹೇಗಿತ್ತೆಂದು ತಿಳಿಸಿ.



ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : ಇಬ್ಬರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಕಪ್ ಬಾಸಮತಿ ಅಕ್ಕಿ
  2. 4 ಟೇಬಲ್ ಚಮಚ ತುಪ್ಪ
  3. 1 ಸಣ್ಣ ಪುಲಾವ್ ಎಲೆ
  4. 1 ಮರಾಟಿ ಮೊಗ್ಗು
  5. 2 ದಳ ಜಾಪತ್ರೆ (ಬೇಕಾದಲ್ಲಿ)
  6. 1 ಏಲಕ್ಕಿ
  7. 1/2 ಬೆರಳುದ್ದ ಚಕ್ಕೆ 
  8. 5 - 6 ಲವಂಗ
  9. 1/4 ಟೀಸ್ಪೂನ್ ಕರಿಮೆಣಸು 
  10. 1 ಟೀಸ್ಪೂನ್ ನುಣ್ಣಗೆ ಕತ್ತರಿಸಿದ ಶುಂಠಿ
  11. 5 ಗೋಡಂಬಿ ತುಂಡು ಮಾಡಿದ್ದು 
  12. 4 - 5 ಬೇಳೆ ಬೆಳ್ಳುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  13. 1 ಈರುಳ್ಳಿ ಸಣ್ಣದಾಗಿ ಕತ್ತರಿಸಿದ್ದು
  14. 4 ಕಪ್ ನೀರು
  15.  ಉಪ್ಪು ರುಚಿಗೆ ತಕ್ಕಷ್ಟು

ಅಲಂಕಾರಕ್ಕೆ ಬೇಕಾಗುವ ಪದಾರ್ಥಗಳು:

  1. 5 ಗೋಡಂಬಿ
  2. 1/4 ಈರುಳ್ಳಿ ಉದ್ದವಾಗಿ ಸೀಳಿದ್ದು
  3. 2 ಹಸಿರು ಮೆ ಣಸಿನಕಾಯಿ ಸೀಳಿದ್ದು

ತುಪ್ಪ ಅನ್ನ ಮಾಡುವ ವಿಧಾನ:

  1. ಅಕ್ಕಿ ತೊಳೆದು, ನೀರು ಬಗ್ಗಿಸಿ ಪಕ್ಕಕ್ಕಿಡಿ. 
  2. ಕುಕ್ಕರ್ ನಲ್ಲಿ  ತುಪ್ಪ ತೆಗೆದುಕೊಂಡು ಬಿಸಿ ಮಾಡಿ.  ಅದಕ್ಕೆ  ಪುಲಾವ್ ಎಲೆ, ಮರಾಟಿ ಮೊಗ್ಗು, ಜಾಪತ್ರೆ, ಏಲಕ್ಕಿ, ಚಕ್ಕೆ, ಲವಂಗ ಮತ್ತು ಕರಿಮೆಣಸು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಸಣ್ಣದಾಗಿ ಕತ್ತರಿಸಿದ ಶುಂಠಿ , ಬೆಳ್ಳುಳ್ಳಿ ಮತ್ತು ತುಂಡು ಮಾಡಿದ ಗೋಡಂಬಿಯನ್ನು ಸೇರಿಸಿ. ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.
  3. ಸಣ್ಣದಾಗಿ ಕತ್ತರಿಸಿದ  ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ, ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ.
  4. ನಂತರ ತೊಳೆದಿಟ್ಟ ಅಕ್ಕಿ ಹಾಕಿ 2 - 3 ನಿಮಿಷಗಳ ಕಾಲ ಹುರಿಯಿರಿ. 
  5. ನೀರು ಹಾಕಿ ಮಗುಚಿ.
  6. ಉಪ್ಪು ಸೇರಿಸಿ ಪುನಃ ಮಗುಚಿ. 
  7. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ವಿಷಲ್ ಮಾಡಿ. 
  8. ಒತ್ತಡ ಇಳಿದ ಕೂಡಲೇ ಒಂದು ಫೋರ್ಕ್ ತೆಗೆದುಕೊಂಡು ತುಪ್ಪದನ್ನವನ್ನು ಬಿಡಿಸಿ ಅಥವಾ ಹರಡಿ. ಈಗ ಅಲಂಕಾರಕ್ಕೆ ಮತ್ತು ರುಚಿಗೆ ಹಾಕುವ ಪದಾರ್ಥಗಳನ್ನು ಹುರಿಯಬೇಕು. ಮೊದಲಿಗೆ ಒಂದು ಬಾಣಲೆಯಲ್ಲಿ 1 ಟಿಸ್ಪೂನ್ ತುಪ್ಪ ಹಾಕಿ  ಗೋಡಂಬಿ ಸೇರಿಸಿ ಹುರಿಯಿರಿ.
  9. ಈಗ ಅದೇ ಬಾಣಲೆಗೆ ಸೀಳಿದ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹುರಿಯಿರಿ. 
  10. ಈಗ ಘೀ ರೈಸ್ ಅಥವಾ ತುಪ್ಪದನ್ನವನ್ನು ಹುರಿದ ಗೋಡಂಬಿ, ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿಯಿಂದ  ಅಲಂಕರಿಸಿ.  ಟೊಮೆಟೊ ಸಾಸ್ ಮತ್ತು ಉಪ್ಪಿನಕಾಯಿ ಜೊತೆ ಬಡಿಸಿ.

ಶನಿವಾರ, ಏಪ್ರಿಲ್ 16, 2016

Mavina hannu palya or gojju in kannada | ಮಾವಿನ ಹಣ್ಣು ಪಲ್ಯ । ಮಾವಿನ ಹಣ್ಣು ಗೊಜ್ಜು

mavina hannu palya or gojju in kannada


Mavina hannu palya or gojju in kannada | ಮಾವಿನ ಹಣ್ಣು ಪಲ್ಯ । ಮಾವಿನ ಹಣ್ಣು ಗೊಜ್ಜು 

ಮಾವಿನ ಹಣ್ಣು ಪಲ್ಯವನ್ನು ಸ್ವಲ್ಪ ಹುಳಿಯಾಗಿರುವ ಮಾವಿನ ಹಣ್ಣು ಅಥವಾ ಕಾಟು ಮಾವಿನ ಹಣ್ಣು ಉಪಯೋಗಿಸಿ ಮಾಡಲಾಗುತ್ತದೆ. ಕೆಲವೊಮ್ಮೆ ಹುಳಿಯಿರುವ ಮಾವಿನಕಾಯಿ ಸಿಕ್ಕಿದಾಗ ಏನು ಮಾಡುವುದೆಂದು ತಿಳಿಯದೆ ಪೇಚಾಡುವಂತಾಗುತ್ತದೆ. ಅಂತಃ ಸಮಯದಲ್ಲಿ ಹುಳಿ ಮಾವಿನ ಹಣ್ಣನ್ನು ಉಪಯೋಗಿಸಿ ಅಥವಾ ಕಾಟು ಮಾವಿನ ಹಣ್ಣನ್ನು ಉಪಯೋಗಿಸಿ ಈ ಪಲ್ಯ ಅಥವಾ ಗೊಜ್ಜನ್ನು ತಯಾರಿಸಿ. ಇದು ಬಿಸಿ ಅನ್ನದೊಂದಿಗೆ ಬಹಳ ರುಚಿಕರವಾಗಿರುತ್ತದೆ. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ : 4 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 - 3 ಸ್ವಲ್ಪ ಹುಳಿಯಿರುವ ಮಾವಿನ ಹಣ್ಣು ಅಥವಾ 5 - 6 ಕಾಟು ಮಾವಿನ ಹಣ್ಣು
  2. 2 ದೊಡ್ಡ ನಿಂಬೆ ಗಾತ್ರದ ಬೆಲ್ಲ (ಮಾವಿನ ಹಣ್ಣಿನ ಹುಳಿ ಅವಲಂಬಿಸಿ)
  3. 4 ಟೀಸ್ಪೂನ್ ಅಡುಗೆ ಎಣ್ಣೆ
  4. 1/2 ಟೀಸ್ಪೂನ್ ಸಾಸಿವೆ
  5. 1 ಟೀಸ್ಪೂನ್ ಉದ್ದಿನ ಬೇಳೆ
  6. 1 ಟೀಸ್ಪೂನ್ ಕಡ್ಲೆಬೇಳೆ
  7. 1/4 ಟೀಸ್ಪೂನ್ ಅರಶಿನ ಪುಡಿ
  8. 4-5 ಕರಿ ಬೇವಿನ ಎಲೆ
  9. 1-2 ಹಸಿ ಮೆಣಸಿನ ಕಾಯಿ
  10. 1 ಟೀಸ್ಪೂನ್ ಸಾರಿನ ಪುಡಿ ಅಥವಾ ಸಾಂಬಾರ್ ಪುಡಿ 
  11. ಉಪ್ಪು ರುಚಿಗೆ ತಕ್ಕಷ್ಟು.

ಮಾವಿನ ಹಣ್ಣು ಪಲ್ಯ ಅಥವಾ ಗೊಜ್ಜು ಮಾಡುವ ವಿಧಾನ:

  1. ಮಾವಿನ ಹಣ್ಣನ್ನು ತೊಳೆದು ದೊಡ್ಡದಾಗಿ ಕತ್ತರಿಸಿ. ಗೊರಟು ಅಥವಾ ಬೀಜವನ್ನು ಎಸೆಯಬೇಡಿ. 
  2. ಬಾಣಲೆ ಬಿಸಿ ಮಾಡಿ, ಎಣ್ಣೆ, 1/2 ಚಮಚ ಸಾಸಿವೆ, ಉದ್ದಿನ ಬೇಳೆ ಮತ್ತು ಕಡ್ಲೆಬೇಳೆ ಹಾಕಿ. 
  3. ಉದ್ದಿನ ಬೇಳೆ ಕಂದು ಬಣ್ಣಕ್ಕೆ ತಿರುಗಿದ ಕೂಡಲೇ ಸೀಳಿದ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ.
  4. ಈಗ ಕತ್ತರಿಸಿದ ಮಾವಿನ ಹಣ್ಣನ್ನು ಹಾಕಿ. 
  5. ಉಪ್ಪು , ಬೆಲ್ಲ ಮತ್ತು ಸುಮಾರು 1/2 ಕಪ್ ನಷ್ಟು ನೀರು ಹಾಕಿ. 
  6. ಅರಿಶಿನ ಪುಡಿ ಸೇರಿಸಿ ಮಗುಚಿ. ಕುದಿಯಲು ಪ್ರಾರಂಭವಾದ ಕೂಡಲೇ ಉರಿ ಕಡಿಮೆ ಮಾಡಿ. 
  7. ಮುಚ್ಚಳವನ್ನು ಮುಚ್ಚಿ ಬೇಯಿಸಿ. ಆಗಾಗ್ಯೆ ಮಗುಚುತ್ತಾ ಇರಿ.
  8. ನೀರಾರುತ್ತಾ ಬಂದಾಗ ಸಾರಿನ ಪುಡಿ ಸೇರಿಸಿ, ಚೆನ್ನಾಗಿ ಕಲಸಿ.
  9. ಈ ಪಲ್ಯ ಗೊಜ್ಜಿನ ರೂಪದಲ್ಲಿರಬೇಕು. ಬೇಕಾದಲ್ಲಿ ನೀರು ಸೇರಿಸಿ ಕುದಿಸಿ. ಬಿಸಿ ಬಿಸಿ ಅನ್ನ ಅಥವಾ ಚಪಾತಿಯೊಂದಿಗೆ ಬಡಿಸಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಗುರುವಾರ, ಏಪ್ರಿಲ್ 14, 2016

Brahmi thambuli in Kannada | ಬ್ರಾಹ್ಮೀ ತಂಬುಳಿ । ತಿಮರೆ ತಂಬ್ಳಿ । ಒಂದೆಲಗ ತಂಬುಳಿ

brahmi or thimare thambli in kannada

Brahmi thambli in Kannada | ಬ್ರಾಹ್ಮೀ ತಂಬುಳಿ । ತಿಮರೆ ತಂಬ್ಳಿ । ಒಂದೆಲಗ ತಂಬುಳಿ 

ಬ್ರಾಹ್ಮೀ ತಂಬುಳಿ ವಿಡಿಯೋ

ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂ ಎಲ್)

  1. 1 ಹಿಡಿ ಬ್ರಾಹ್ಮೀ ಎಲೆಗಳು
  2. 1/4 ಕಪ್ ತೆಂಗಿನತುರಿ
  3. 1/2 ಕಪ್ ಮೊಸರು ಅಥವಾ ಗಟ್ಟಿ ಮಜ್ಜಿಗೆ 
  4. 1 ಕಪ್ ನೀರು 
  5. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಟಿಸ್ಪೂನ್ ಅಡುಗೆ ಎಣ್ಣೆ 
  2. 1 ಒಣ ಮೆಣಸಿನಕಾಯಿ 
  3. 1/4 ಟಿಸ್ಪೂನ್ ಸಾಸಿವೆ

ಬ್ರಾಹ್ಮೀ । ತಿಮರೆ । ಒಂದೆಲಗ ತಂಬುಳಿ ಮಾಡುವ ವಿಧಾನ:

  1. ಬ್ರಾಹ್ಮೀ ಎಲೆಗಳನ್ನು ತೊಳೆದು ಕತ್ತರಿಸಿ. 
  2. ಕತ್ತರಿಸಿದ ಎಲೆ ಮತ್ತು ತೆಂಗಿನ ತುರಿಯನ್ನು ಮಿಕ್ಸಿ ಜಾರಿಗೆ ಹಾಕಿ. 
  3. ಅಗತ್ಯವಿದ್ದಷ್ಟು ನೀರು ಸೇರಿಸಿ, ನುಣ್ಣಗೆ ಅರೆಯಿರಿ.
  4. ಅರೆದ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ. ಮೊಸರು ಮತ್ತು ನೀರು ಸೇರಿಸಿ. ಉಪ್ಪು ಹಾಕಿ ಕಲಸಿ. 
  5. ಎಣ್ಣೆ, ಒಣ ಮೆಣಸು ಮತ್ತು ಸಾಸಿವೆ ಒಗ್ಗರಣೆ ಮಾಡಿ ಸೇರಿಸಿ. ಬಿಸಿ ಅನ್ನದೊಂದಿಗೆ ಬಡಿಸಿ.

ಮಂಗಳವಾರ, ಏಪ್ರಿಲ್ 12, 2016

masoppu saaru and ragi muddde in kannada | ಮಸ್ಸೊಪ್ಪು ಸಾರು ಮತ್ತು ರಾಗಿ ಮುದ್ದೆ ಮಾಡುವ ವಿಧಾನ

masoppu saaru and raagi mudde recipe in kannada

masoppu saaru and ragi muddde in kannada | ಮಸ್ಸೊಪ್ಪು ಸಾರು ಮತ್ತು ರಾಗಿ ಮುದ್ದೆ ಮಾಡುವ ವಿಧಾನ 


ಮಸೊಪ್ಪು ಸಾರು ಮತ್ತು ರಾಗಿ ಮುದ್ದೆ ಕರ್ನಾಟಕದ ಜನಪ್ರಿಯ ಅಡುಗೆಯಾಗಿದ್ದು, ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ ಇತ್ಯಾದಿ ಜಿಲ್ಲೆಗಳಲ್ಲಿ ಆಚರಣೆಯಲ್ಲಿದೆ. ಮಸೊಪ್ಪು ಸಾರನ್ನು ಬೆರಕೆ ಸೊಪ್ಪು (ಪಾಲಕ್, ಮೆಂತೆ, ದಂಟು, ಸಬ್ಸಿಗೆ) ಗಳಿಂದ ತಯಾರಿಸಲಾಗುತ್ತದೆ. ಆದರೆ ಇವಿಷ್ಟಲ್ಲದೆ ಬೇರೆ ಯಾವುದೇ ಸೊಪ್ಪನ್ನು ಸಹ ಬೆರಕೆಯಾಗಿ ನಿಮ್ಮ ರುಚಿಗೆ ತಕ್ಕಂತೆ ಉಪಯೋಗಿಸಬಹುದು. ಪಾಲಕ್ ಸೊಪ್ಪು ಮಾತ್ರ ಉಪಯೋಗಿಸಿ ಸಹ ಮಸೊಪ್ಪು ಸಾರನ್ನು ತಯಾರಿಸಬಹುದು. ನಾನು ಪಾಲಕ್ ಮತ್ತು ದಂಟಿನ ಸೊಪ್ಪನ್ನು ಉಪಯೋಗಿಸಿ ಮಾಡಿದ್ದೇನೆ. 
ಇನ್ನು ರಾಗಿ ಮುದ್ದೆ ನಿಮಗೆಲ್ಲ ತಿಳಿದಿರುವಂತೆ ರಾಗಿ ಹಿಟ್ಟು, ಉಪ್ಪು ಮತ್ತು ನೀರು ಉಪಯೋಗಿಸಿ ತಯಾರಿಸಲಾಗುತ್ತದೆ. ರಾಗಿ ಮುದ್ದೆಯನ್ನು ಯಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಸವಿಯಬಹುದು. 
ಈ ಅಡುಗೆಯನ್ನು ನಾನು ನನ್ನ ಪಕ್ಕದಮನೆ ಆಂಟಿ ಯಿಂದ ಕಲಿತದ್ದು. ಮಸೊಪ್ಪನ್ನು ಕೊಂಚ ಬೇರೆ ವಿಧಾನದಲ್ಲೂ ಮಾಡುತ್ತಾರೆಂದು ಕೇಳಿದ್ದೇನೆ. ನೀವು ಮಾಡುವ ವಿಧಾನ ಬೇರೆಯಾಗಿದ್ದಲ್ಲಿ ದಯವಿಟ್ಟು ಕಾಮೆಂಟ್ ಮಾಡಿ. 

ಬೇಕಾಗುವ ಪದಾರ್ಥಗಳು (ಮಸೊಪ್ಪು ಸಾರಿಗೆ): (ಅಳತೆ ಕಪ್ = 120 ಎಂ ಎಲ್)

  1. 1 ಕಟ್ಟು ಸೊಪ್ಪು (ಪಾಲಕ್, ಪಾಲಕ್+ದಂಟು, ಪಾಲಕ್+ದಂಟು+ಮೆಂತೆ+ಸಬ್ಸಿಗೆ, ಇತ್ಯಾದಿ)
  2. 1.5 ಕಪ್ ತೊಗರಿ ಬೇಳೆ 
  3. 1 ಸಣ್ಣಗೆ ಹೆಚ್ಚಿದ ಈರುಳ್ಳಿ
  4. 1 ಸಣ್ಣಗೆ ಹೆಚ್ಚಿದ ಟೊಮೇಟೊ 
  5. 2 ಟೇಬಲ್ ಸ್ಪೂನ್ ತೆಂಗಿನತುರಿ (ಬೇಕಾದಲ್ಲಿ)
  6. ಒಂದು ದೊಡ್ಡ ಚಿಟಿಕೆ ಅರಶಿನ ಪುಡಿ 
  7. 2 - 4 ಹಸಿರು ಮೆಣಸಿನಕಾಯಿ 
  8. ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಿಸೇಹಣ್ಣು 
  9. 1/2 ಟಿಸ್ಪೂನ್ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ 
  10. 1 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು 
  11. ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/4 ಟೀಸ್ಪೂನ್ ಸಾಸಿವೆ
  3. 1/4 ಟೀಸ್ಪೂನ್ ಜೀರಿಗೆ
  4. 4 -5 ಎಸಳು ಕತ್ತರಿಸಿದ ಬೆಳ್ಳುಳ್ಳಿ 
  5. ಒಂದು ದೊಡ್ಡ ಚಿಟಿಕೆ ಇಂಗು 
  6. 4 - 5 ಕರಿಬೇವಿನ ಎಲೆ 
  7. 2 ಟೀಸ್ಪೂನ್ ಅಡುಗೆ ಎಣ್ಣೆ

ಬೇಕಾಗುವ ಪದಾರ್ಥಗಳು (ರಾಗಿ ಮುದ್ದೆಗೆ): (ಅಳತೆ ಕಪ್ = 120 ಎಂ ಎಲ್)

  1. 2 + 1/2 ಕಪ್ ನೀರು ( 1/2 ಕಪ್ ಕೊನೆಯಲ್ಲಿ ಬಳಸಲಾಗುತ್ತದೆ)
  2. 2 ಕಪ್ ರಾಗಿ ಹಿಟ್ಟು
  3. ಉಪ್ಪು ರುಚಿಗೆ ತಕ್ಕಷ್ಟು (ಬೇಕಾದಲ್ಲಿ)

ಮಸ್ಸೊಪ್ಪು ಸಾರು ಮಾಡುವ ವಿಧಾನ:

  1. ಸೊಪ್ಪನ್ನು ಸ್ವಚ್ಛಗೊಳಿಸಿ ಸಣ್ಣಗೆ ಕತ್ತರಿಸಿ. 
  2. ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ತೊಳೆದು, ಅರಶಿನ ಪುಡಿ, ಒಂದೆರಡು ಹನಿ ಎಣ್ಣೆ ಮತ್ತು ಅಗತ್ಯವಿದ್ಧಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. 
  3. ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಸೊಪ್ಪು, ಈರುಳ್ಳಿ, ಟೊಮೆಟೊ, ತೆಂಗಿನ ತುರಿ ಮತ್ತು ಸೀಳಿದ ಹಸಿರು ಮೆಣಸಿನಕಾಯಿಗಳನ್ನು ಹಾಕಿ. ಒಂದು ಕಪ್ ನೀರು ಸೇರಿಸಿ, ಮುಚ್ಚಳವನ್ನು ಮುಚ್ಚಿ ಒಂದು ವಿಷಲ್ ಮಾಡಿ ಬೇಯಿಸಿಕೊಳ್ಳಿ.
  4. ಒತ್ತಡ ಕಡಿಮೆ ಆದ ಕೂಡಲೇ ಮುಚ್ಚಳವನ್ನು ತೆರೆದು, ಬೆಂದ ಪದಾರ್ಥಗಳನ್ನು ಕಡಗೋಲು ಉಪಯೋಗಿಸಿ ಚೆನ್ನಾಗಿ ಮಸೆಯಿರಿ ಅಥವಾ ಕಡೆಯಿರಿ. ಇಲ್ಲವೇ ಮಿಕ್ಸಿಗೆ ಹಾಕಿ ಒಂದೆರಡು ಸುತ್ತು ಅರೆಯಿರಿ. ನಾನು ಅಗಲವಾದ ಸೌಟಿನ ಹಿಂಭಾಗ ಉಪಯೋಗಿಸಿ ಮಸೆಯುತ್ತೇನೆ. ಹೀಗೆ ಸೊಪ್ಪು ಮತ್ತು ಬೇಳೆಯನ್ನು ಮಸೆಯುವುದರಿಂದಲೇ ಈ ಸಾರಿಗೆ ಮಸೊಪ್ಪು ಎಂಬ ಹೆಸರು ಬಂದಿದೆ.
  5. ಈಗ ಒಂದು ಸಣ್ಣ ಬಾಣಲೆ ತೆಗೆದುಕೊಂಡು ಎಣ್ಣೆ, ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಬೆಳ್ಳುಳ್ಳಿ, ಇಂಗು, ಕರಿಬೇವು ಬಳಸಿಕೊಂಡು ಒಗ್ಗರಣೆ ತಯಾರಿಸಿ.
  6. ಆ ಒಗ್ಗರಣೆಯನ್ನು ಮಸೆದ ಸೊಪ್ಪು ಮತ್ತು ಬೇಳೆಯಿರುವ ಕುಕ್ಕರ್ ಗೆ ಸೇರಿಸಿ. ಒಂದು ಸಣ್ಣ ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣಿನ ರಸ ಮತ್ತು ಉಪ್ಪು ಸೇರಿಸಿ. 
  7. 1/2 ಚಮಚ ಹುರಿದ ಜೀರಿಗೆ ಪುಡಿ ಅಥವಾ ರಸಂ ಪುಡಿ ಸೇರಿಸಿ, ಸ್ಟವ್ ಆನ್ ಮಾಡಿ, ಕುದಿಯಲು ಇಡಿ.
  8. ಕತ್ತರಿಸಿದ ಕೊತ್ತುಂಬರಿ ಸೊಪ್ಪನ್ನು ಸೇರಿಸಿ. ಸಾರು ಚೆನ್ನಾಗಿ ಕುದಿಯಲು ಪ್ರಾರಂಭವಾದ ಕೂಡಲೇ ಸ್ಟವ್ ಆರಿಸಿ. ಬಿಸಿ ರಾಗಿ ಮುದ್ದೆಯೊಂದಿಗೆ ಬಡಿಸಿ.

ರಾಗಿ ಮುದ್ದೆ ಮಾಡುವ ವಿಧಾನ:

  1. ದಪ್ಪ ತಳದ ದೊಡ್ಡ ಪಾತ್ರೆಯಲ್ಲಿ 2 ಕಪ್ ನೀರು ತೆಗೆದುಕೊಳ್ಳಿ. 2 ಟೀಸ್ಪೂನ್ ರಾಗಿ ಹಿಟ್ಟು ಸೇರಿಸಿ.  ಗಂಟಿಲ್ಲದಂತೆ ಚೆನ್ನಾಗಿ ಕಲಸಿ ಕುದಿಯಲು ಇಡಿ. ಹೀಗೆ ಮಾಡಿದಲ್ಲಿ ರಾಗಿ ಮುದ್ದೆ ಗಂಟಾಗುವುದಿಲ್ಲ. 
  2. ನೀರು ಕುದಿಯಲು ಪ್ರಾರಂಭವಾದ ಕೂಡಲೇ  2 ಕಪ್  ರಾಗಿ ಹಿಟ್ಟು ಸೇರಿಸಿ.  ಗಮನಿಸಿ ಮಗುಚಬೇಡಿ. ಹಾಗೆ ಕುದಿಯಲು ಬಿಡಿ. 
  3. ಮಧ್ಯಮ ಜ್ವಾಲೆಯಲ್ಲಿ 7 - 8 ನಿಮಿಷಗಳ ಕಾಲ ಕುದಿಯಲು ಬಿಡಿ. ರಾಗಿ ಮುದ್ದೆಯ ಪ್ರಮಾಣದ ಮೇಲೆ ಸಮಯ ಬದಲಾಗ ಬಹುದು. 
  4. ಸುಮಾರು 7 - 8 ನಿಮಿಷಗಳಾದ ಕೂಡಲೇ ಜ್ವಾಲೆಯನ್ನು ಕಡಿಮೆ ಮಾಡಿ, ಮರದ ಕೋಲು (ರಾಗಿ ಮುದ್ದೆ ಕೋಲು) ಅಥವಾ ಮರದ ಸೌಟಿನಿಂದ ಚೆನ್ನಾಗಿ ಮಗುಚಿ.
  5. 2 - 3 ನಿಮಿಷಗಳ ಕಾಲ ಗಂಟುಗಳಿಲ್ಲದಂತೆ ಚೆನ್ನಾಗಿ ಮಗುಚಬೇಕಾಗುತ್ತದೆ. 
  6. ನಂತರ 1/2 ಕಪ್ ನೀರು ಸಿಂಪಡಿಸಿ ಮತ್ತೆ ಚೆನ್ನಾಗಿ ಮಗುಚಿ ಸ್ಟೌವ್ ಆಫ್ ಮಾಡಿ. ಈ ರೀತಿ ಮಾಡುವುದರಿಂದ ರಾಗಿ ಮುದ್ದೆ ಮೆತ್ತಗಾಗಿ ಚೆನ್ನಾಗಿ ಬರುತ್ತದೆ. 
  7. ತಕ್ಷಣ ಒಂದು ಪ್ಲೇಟ್ ಅಥವಾ ಮರದ ಹಲಗೆಯ ಮೇಲೆ ಸುರಿದು, ನೀರು ಮುಟ್ಟಿ ಕೊಂಡು ಕೈಯಿಂದ  ಟೆನಿಸ್ ಬಾಲ್ ಗಾತ್ರದ ರಾಗಿ ಮುದ್ದೆಗಳನ್ನು ಮಾಡಿ. ಹೀಗೆ ಮಾಡುವಾಗ ರಾಗಿ ಮುದ್ದೆ ನಿಮ್ಮ ಬೆರಳುಗಳಿಗೆ ಅಂಟಿಕೊಳ್ಳ ಬಾರದು. ಅಂಟಿದಲ್ಲಿ ರಾಗಿ ಮುದ್ದೆ ಸರಿಯಾಗಿ ಬೆಂದಿಲ್ಲವೆಂದು ಅರ್ಥ. ಈಗ ಬಿಸಿ ರಾಗಿ ಮುದ್ದೆಯನ್ನು ಮಸ್ಸೊಪ್ಪು ಸಾರು ಅಥವಾ ಇನ್ನಾವುದೇ ಸಾರು ಅಥವಾ ಸಾಂಬಾರ್ ನೊಂದಿಗೆ ಬಡಿಸಿ. ಮೊಸರಿನೊಂದಿಗೂ ಬಡಿಸಬಹುದು. ಆರೋಗ್ಯಕರ ಊಟವನ್ನು ಹೊಟ್ಟೆ ಭರ್ತಿ ಆನಂದಿಸಿ. 

ಶನಿವಾರ, ಏಪ್ರಿಲ್ 9, 2016

Carrot badami payasa in Kannada | ಕ್ಯಾರಟ್ ಬಾದಾಮಿ ಪಾಯಸ ಮಾಡುವ ವಿಧಾನ

carrot badami payasa in kannada

Carrot badami payasa in Kannada | ಕ್ಯಾರಟ್ ಬಾದಾಮಿ ಪಾಯಸ ಮಾಡುವ ವಿಧಾನ 

ಕ್ಯಾರಟ್ ಬಾದಾಮಿ ಪಾಯಸ ಬಹಳ ಸುಲಭ, ರುಚಿಕರ ಮತ್ತು ಮಕ್ಕಳಿಗೆ ಇಷ್ಟವಾಗುವಂಥ ಸಿಹಿ ತಿನಿಸಾಗಿದೆ. ನಾನು ಈಗಾಗಲೇ ವಿವರಿಸಿರುವ ಅನಾನಸ್ ಪಾಯಸ ಮತ್ತು ಈ ಕ್ಯಾರಟ್ ಬಾದಾಮಿ ಪಾಯಸವನ್ನು ನನ್ನತ್ತೆ ಯಿಂದ ಕಲಿತದ್ದು.
 ಕ್ಯಾರಟ್ ಬಾದಾಮಿ ಪಾಯಸವನ್ನು ಕ್ಯಾರಟ್, ಬಾದಾಮಿ, ಹಾಲು  ಮತ್ತು ಸಕ್ಕರೆ ಉಪಯೋಗಿಸಿ ತಯಾರಿಸಲಾಗುತ್ತದೆ. 


ತಯಾರಿ ಸಮಯ: 1 ಘಂಟೆ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ

ಬೇಕಾಗುವ ಪದಾರ್ಥಗಳು: (ಅಳತೆ ಕಪ್  = 120 ಎಂ ಎಲ್)

  1. 2 ಮಧ್ಯಮ ಗಾತ್ರದ ಕ್ಯಾರೆಟ್ 
  2. 20 - 25 ಬಾದಾಮಿ
  3. 2 ಕಪ್ ಹಾಲು
  4. 2 ಕಪ್ ನೀರು (ಬೇಯಿಸಲು ಮತ್ತು ಅರೆಯಲು ಬೇಕಾದ ನೀರು ಸೇರಿಸಿ)
  5. 12 ಟಿಸ್ಪೂನ್ ಅಥವಾ  3/4 ಕಪ್ ಸಕ್ಕರೆ ಅಥವಾ ನಿಮ್ಮ ರುಚಿಗೆ ತಕ್ಕಷ್ಟು
  6. ಒಂದು ಚಿಟಿಕೆ ಏಲಕ್ಕಿ ಪುಡಿ
  7. 1 ಟೇಬಲ್ ಸ್ಪೂನ್ ತುಂಡು ಮಾಡಿದ ಗೋಡಂಬಿ
  8. 10 ಒಣ ದ್ರಾಕ್ಷಿ
  9. 2 ಟಿಸ್ಪೂನ್ ತುಪ್ಪ

ಕ್ಯಾರಟ್ ಬಾದಾಮಿ ಪಾಯಸ ಮಾಡುವ ವಿಧಾನ:

  1. ಮೊದಲಿಗೆ ಬಾದಾಮಿಯನ್ನು ಕನಿಷ್ಟ ಒಂದು ಘಂಟೆ ಕಾಲ ನೆನೆಸಿ ಸಿಪ್ಪೆ ತೆಗೆಯಿರಿ. ಸಮಯದ ಅಭಾವವಿದ್ದಲ್ಲಿ ಕುಕ್ಕರ್ನಲ್ಲಿ ಹಾಕಿ ಒಂದು ವಿಷಲ್ ಮಾಡಿ ನಂತರ ಸಿಪ್ಪೆ ತೆಗೆಯಿರಿ.
  2. ಕ್ಯಾರೆಟನ್ನು ತೊಳೆದು ಕತ್ತರಿಸಿಕೊಳ್ಳಿ. ನಂತರ ಕ್ಯಾರೆಟ್ ಮತ್ತು ಸಿಪ್ಪೆ ತೆಗೆದ ಬಾದಾಮಿಯನ್ನು ಕುಕ್ಕರ್ ನಲ್ಲಿ ಸ್ವಲ್ಪ ನೀರು ಹಾಕಿ, 2 ವಿಷಲ್ ಮಾಡಿ ಬೇಯಿಸಿಕೊಳ್ಳಿ.
  3. ಬೇಯಿಸಿದ ಕ್ಯಾರಟ್ ಮತ್ತು ಬಾದಾಮಿ ತಣ್ಣಗಾಗುವವರೆಗೆ ಕಾಯಿರಿ. ನಂತರ ನೀರನ್ನು ಬಸಿದು ಪಕ್ಕಕ್ಕಿಡಿ. ಅದನ್ನು ಮುಂದೆ ಪಾಯಸ ಕುದಿಸುವಾಗ ಸೇರಿಸಲಿದ್ದೇವೆ. 
  4. ಈಗ ಬೇಯಿಸಿದ ಬಾದಾಮಿಯನ್ನು ಮಾತ್ರ ಮಿಕ್ಸಿ ಜಾರಿಗೆ ಹಾಕಿ.
  5. ಅಗತ್ಯವಿದ್ದಷ್ಟು ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಅರೆದು ಕೊಳ್ಳಿ.
  6. ಈಗ ಅದೇ ಮಿಕ್ಸಿ ಜಾರಿಗೆ ಬೇಯಿಸಿದ ಕ್ಯಾರಟ್ ಹಾಕಿ. 
  7. ಕ್ಯಾರಟ್ ನುಣ್ಣಗಾಗುವವರೆಗೆ ಪುನಃ ಅರೆಯಿರಿ. 
  8. ಈಗ ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಬಸಿದಿಟ್ಟ ನೀರು, ಉಳಿದ ನೀರು, ಹಾಲು ಮತ್ತು ಸಕ್ಕರೆ ಹಾಕಿ.
  9. ಒಮ್ಮೆ ಚೆನ್ನಾಗಿ ಮಗುಚಿ ಕುದಿಸಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಪಾಯಸ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಕುದಿಯುತ್ತಿರಲಿ. 
  10. ಈ ಸಮಯದಲ್ಲಿ ಗೋಡಂಬಿ ಮತ್ತು ಒಣ ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿಯಿರಿ. 
  11. ತುಪ್ಪದ ಸಮೇತ ಹುರಿದ ಗೋಡಂಬಿ ಮತ್ತು ದ್ರಾಕ್ಷಿಯನ್ನು ಕುದಿಯುತ್ತಿರುವ ಪಾಯಸಕ್ಕೆ ಸೇರಿಸಿ. ಸ್ಟವ್ ಆಫ್ ಮಾಡಿ. 


ಬುಧವಾರ, ಏಪ್ರಿಲ್ 6, 2016

mosaru avalakki dose recipe in Kannada | ಮೊಸರು ಅವಲಕ್ಕಿ ದೋಸೆ


mosaru avalakki dose or uddina bele illada set dose

ಮೊಸರು ಅವಲಕ್ಕಿ ದೋಸೆ ಮಾಡುವ ವಿಧಾನ

ಮೊಸರು ಅವಲಕ್ಕಿ ದೋಸೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )

  1. 2 ಕಪ್ ದೋಸೆ ಅಕ್ಕಿ 
  2. 1 ಕಪ್ ತೆಳು ಅವಲಕ್ಕಿ (ಅಥವಾ ೩/೪ ಕಪ್ ಗಟ್ಟಿ ಅವಲಕ್ಕಿ)
  3. 1 ಕಪ್ ಮೊಸರು (ಹುಳಿ ಇಲ್ಲದ್ದು) 
  4. 1 ಟಿಸ್ಪೂನ್ ಸಕ್ಕರೆ 
  5. ಉಪ್ಪು ರುಚಿಗೆ ತಕ್ಕಷ್ಟು 
  6. ಎಣ್ಣೆ ಅಥವಾ ತುಪ್ಪ ದೋಸೆ ಮಾಡಲು

ಮೊಸರು ಅವಲಕ್ಕಿ ದೋಸೆ ಮಾಡುವ ವಿಧಾನ:

  1. ಅಕ್ಕಿಯನ್ನು ತೊಳೆದು ೨ - ೩ ಘಂಟೆಗಳ ಕಾಲ ನೆನೆಸಿ. 
  2. ಅರೆಯುವ ಮೊದಲು ಅವಲಕ್ಕಿಯನ್ನು ತೊಳೆದಿಟ್ಟು ಕೊಳ್ಳಿ. ದಪ್ಪ ಅವಲಕ್ಕಿ ಆದಲ್ಲಿ ೧೦ ನಿಮಿಷಗಳ ಕಾಲ ನೆನೆ ಹಾಕಿ. 
  3. ಅರ್ಧ ಭಾಗದಷ್ಟು ಅಕ್ಕಿಯನ್ನು ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. 
  4. ಅರೆದ ಹಿಟ್ಟನ್ನು ಒಂದು ಪಾತ್ರೆಗೆ ಸುರಿಯಿರಿ. 
  5. ಉಳಿದ ಅರ್ಧ ಭಾಗದಷ್ಟು ಅಕ್ಕಿ ಮತ್ತು ಅವಲಕ್ಕಿಯನ್ನು ನೀರು ಹಾಕಿ ಅರೆಯಿರಿ. 
  6. ಅರೆದ ನಂತರ ಮೊಸರು ಹಾಕಿ ಒಂದೆರಡು ಸುತ್ತು ಅರೆಯಿರಿ. 
  7. ಈ ಹಿಟ್ಟನ್ನು ಅದೇ ಪಾತ್ರೆಗೆ ಸುರಿಯಿರಿ. ಒಮ್ಮೆ ಮಗುಚಿ, ಮುಚ್ಚಳ ಮುಚ್ಚಿ ೫-೬ ಘಂಟೆಗಳ ಕಾಲ ಅಥವಾ ಒಂದು ರಾತ್ರಿ ಹುದುಗಲು ಬಿಡಿ. 
  8. ಮಾರನೇ ದಿನ ಉಪ್ಪು ಮತ್ತು ಸಕ್ಕರೆ ಹಾಕಿ. ಚೆನ್ನಾಗಿ ಕಲಸಿ. ಹಿಟ್ಟು ಸ್ವಲ್ಪ ತೆಳ್ಳಗಿರಬೇಕು. ಹಾಗಾಗಿ ಅಗತ್ಯವಿದ್ದಷ್ಟು ನೀರು ಸೇರಿಸಿ. 
  9. ಬಿಸಿ ದೋಸೆ ಕಾವಲಿಗೆ ಎಣ್ಣೆ ಸವರಿ  ಒಂದು ಸೌಟು ಹಿಟ್ಟನ್ನು ಸುರಿಯಿರಿ. ಹಿಟ್ಟನ್ನು ಹೆಚ್ಚು ಹರಡ ಬಾರದು. ಅದು ತಾನಾಗಿಯೇ ಹರಡಬೇಕು.  ಸೆಟ್ ದೋಸೆಯಂತೆ ಮಾಡಬೇಕು. 
  10.  ಕೆಲವು ಸೆಕೆಂಡುಗಳ ಕಾಲ ಮುಚ್ಚಳವನ್ನು ಮುಚ್ಚಿ. ನಂತರ ತುಪ್ಪ ಅಥವಾ ಎಣ್ಣೆ ಹಾಕಿ. ದೋಸೆಯನ್ನು ತೆಗೆಯಿರಿ. ಬಿಸಿ ದೋಸೆಯನ್ನು ಬೆಣ್ಣೆ ಮತ್ತು ಚಟ್ನಿ ಅಥವಾ ಸಾಂಬಾರ್ ಅಥವಾ ಸಾಗು ನೊಂದಿಗೆ ಬಡಿಸಿ.

ಮಂಗಳವಾರ, ಏಪ್ರಿಲ್ 5, 2016

Kayi vade or akki poori recipe in kannada | ಕಾಯಿ ವಡೆ ಅಥವಾ ಅಕ್ಕಿ ಹಿಟ್ಟಿನ ಪೂರಿ ಮಾಡುವ ವಿಧಾನ


kayi vade or akki poori recipe

ಕಾಯಿ ವಡೆ ಅಥವಾ ಅಕ್ಕಿ ಹಿಟ್ಟಿನ ಪೂರಿ ಮಾಡುವ ವಿಧಾನ

ಕಾಯಿ ವಡೆ ವಿಡಿಯೋ

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 240 ಎಂಎಲ್ )

  1. 2 ಕಪ್ ಅಕ್ಕಿ ಹಿಟ್ಟು 
  2. 1 ಕಪ್ ತೆಂಗಿನ ತುರಿ 
  3. 2 - 4 ಒಣ ಮೆಣಸಿನಕಾಯಿ 
  4. 2 ಟಿಸ್ಪೂನ್ ಕೊತ್ತಂಬರಿ ಬೀಜ / ಧನಿಯ
  5. 1/4 ಟಿಸ್ಪೂನ್ ಜೀರಿಗೆ 
  6. 1 - 2 ಹಸಿರು ಮೆಣಸಿನಕಾಯಿ 
  7. 2 ಟೇಬಲ್ ಸ್ಪೂನ್ ಹೆಚ್ಚಿದ ಕರಿಬೇವಿನ ಸೊಪ್ಪು 
  8. ಉಪ್ಪು ರುಚಿಗೆ ತಕ್ಕಷ್ಟು 
  9. ಎಣ್ಣೆ ಕಾಯಿಸಲು

ಕಾಯಿ ವಡೆ ಅಥವಾ ಅಕ್ಕಿ ಹಿಟ್ಟಿನ ಪೂರಿ ಮಾಡುವ ವಿಧಾನ:

  1. ತೆಂಗಿನಕಾಯಿ ತುರಿಯಿರಿ. ಹಾಗೂ ಧನಿಯ, ಜೀರಿಗೆ ಮತ್ತು ಒಣಮೆಣಸಿನ ಕಾಯಿಯನ್ನು ಅಳತೆ ಪ್ರಕಾರ ತೆಗೆದಿಟ್ಟು ಕೊಳ್ಳಿ.
  2. ಮೊದಲಿಗೆ ಒಂದು ದೊಡ್ಡ ಬಟ್ಟಲಿನಲ್ಲಿ ಅಕ್ಕಿ ಹಿಟ್ಟು ತೆಗೆದು ಕೊಳ್ಳಿ. ನಂತರ ಧನಿಯ, ಜೀರಿಗೆ ಮತ್ತು ಒಣಮೆಣಸಿನಕಾಯಿಯನ್ನು ಪುಡಿ ಮಾಡಿ ಅಕ್ಕಿ ಹಿಟ್ಟಿಗೆ ಸೇರಿಸಿ.  
  3. ತೆಂಗಿನ ತುರಿಯನ್ನು ಸಹ ಪುಡಿ ಮಾಡಿ ಅಕ್ಕಿಹಿಟ್ಟಿಗೆ ಸೇರಿಸಿ. 
  4. ಈಗ ಸಣ್ಣಗೆ ಕತ್ತರಿಸಿದ ಕರಿಬೇವು ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಇದನ್ನು ಸಹ ಪುಡಿ ಮಾಡಿ ಸೇರಿಸಬಹುದು. 
  5. ಈಗ ಬಿಸಿ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಗಮನಿಸಿ ಬಿಸಿ ನೀರು ಸಾಕು. ಕುದಿಯುವ ನೀರು ಹಾಕ ಬಾರದು. 
  6. ಕಲಸಿ ಆದಮೇಲೆ 2 ಟಿಸ್ಪೂನ್ ಎಣ್ಣೆ ಹಾಕಿ, ಪುನಃ ಕಲಸಿ.
  7. ಈಗ ಒಂದು ಸ್ವಚ್ಚವಾದ ಬಟ್ಟೆಯನ್ನು ತೆಗೆದು ಕೊಂಡು, ನಿಂಬೆ ಹಣ್ಣಿನ ಗಾತ್ರದ ಹಿಟ್ಟನ್ನು ಇಡಿ.  ಬಟ್ಟೆಯಿಂದ ಮುಚ್ಚಿ, ಪೂರಿಯ ಆಕಾರಕ್ಕೆ ಕೈ ಯಿಂದ ತಟ್ಟಿ ಅಥವಾ ಲಟ್ಟಣಿಗೆ ಸಹಾಯದಿಂದ ಲಟ್ಟಿಸಿ.
  8. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ತಟ್ಟಿದ ಅಥವಾ ಲಟ್ಟಿಸಿದ ಪೂರಿಗಳನ್ನು ಕಾಯಿಸಿ. 

Related Posts Plugin for WordPress, Blogger...