ಗುರುವಾರ, ಮಾರ್ಚ್ 31, 2016

Bendekayi bol kodlu or bolu huli recipe in kannada | ಬೆಂಡೆಕಾಯಿ ಬೋಳು ಕೊದ್ಲು । ಬೆಂಡೆಕಾಯಿ ಬೋಳು ಹುಳಿ


ಬೆಂಡೆಕಾಯಿ ಬೋಳು ಕೊದ್ಲು । ಬೆಂಡೆಕಾಯಿ ಬೋಳು ಹುಳಿ


ಬೆಂಡೆಕಾಯಿ ಬೋಳು ಕೊದ್ಲು ಅಥವಾ ಬೆಂಡೆಕಾಯಿ ಬೋಳು ಹುಳಿ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇದನ್ನು ಬೆಂಡೆಕಾಯಿ ಮತ್ತು ತೊಗರಿಬೇಳೆ ಹಾಕಿ ಮಾಡಲಾಗುತ್ತದೆ. ತುಳು ಭಾಷೆಯಲ್ಲಿ ಸಾಂಬಾರ್ ನ್ನು ಕೊದ್ಲು ಅಥವಾ ಕೊದ್ದೆಲ್ ಎಂದು ಕರೆಯುತ್ತಾರೆ.  ಕರಾವಳಿ ಪ್ರದೇಶದಲ್ಲಿ ಆಚರಣೆಯಲ್ಲಿರುವ ಈ ಸಾಂಬಾರ್ ನ್ನು ತೆಂಗಿನಕಾಯಿ ಇಲ್ಲದೆ  ಮತ್ತು ಯಾವುದೇ ಮಸಾಲೆ ಇಲ್ಲದೆ ತಯಾರಿಸಲಾಗುತ್ತದೆ. ಹಾಗಾಗಿ ಇದನ್ನು ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಎಂದು ಕರೆಯುತ್ತಾರೆ.
ಈ ಬೋಳು ಕೊದ್ದೆಲ್ ಅಥವಾ ಬೋಳು ಹುಳಿ ಅಥವಾ ತೆಂಗಿನಕಾಯಿ ಹಾಕದ ಸಾಂಬಾರ್ ನ್ನು ಬದನೇಕಾಯಿ, ತೊಂಡೆಕಾಯಿ, ಬೀನ್ಸ್ ಅಥವಾ ಸೌತೆಕಾಯಿ ಉಪಯೋಗಿಸಿ ಸಹ ಮಾಡಬಹುದು. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 4 ಜನರಿಗೆ 

ಬೇಕಾಗುವ ಪದಾರ್ಥಗಳು:(ಅಳತೆ ಕಪ್ = 120 ಎಂಎಲ್ ) 

  1. 1/4 ಕೆಜಿ ಬೆಂಡೆಕಾಯಿ
  2. 1/2 ಕಪ್ ತೊಗರಿಬೇಳೆ
  3. 1 - 2 ಹಸಿಮೆಣಸು
  4. 1 ಟೀಸ್ಪೂನ್ ಬೆಲ್ಲ
  5. 1 ನೆಲ್ಲಿಕಾಯಿ ಗಾತ್ರದ ಹುಣಸೆ ಹಣ್ಣು
  6. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  7. ಉಪ್ಪು ರುಚಿಗೆ ತಕ್ಕಷ್ಟು 


ಒಗ್ಗರಣೆಗೆ ಬೇಕಾಗುವ ಪದಾರ್ಥಗಳು :

  1. 1 ಕೆಂಪು ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಜೀರಿಗೆ
  4. 4 - 5 ಕರಿಬೇವಿನ ಎಲೆ 
  5. 2 ಟೀಸ್ಪೂನ್ ಎಣ್ಣೆ ಅಥವಾ ತುಪ್ಪ
  6. 1/4 ಟೀಸ್ಪೂನ್ ಇಂಗು

ಬೆಂಡೆಕಾಯಿ ಬೋಳು ಕೊದ್ಲು ಮಾಡುವ ವಿಧಾನ:

  1. ಒಂದು ಕುಕ್ಕರ್ ನಲ್ಲಿ ತೊಗರಿ ಬೇಳೆಯನ್ನು ಹಾಕಿ ತೊಳೆಯಿರಿ. ಅದಕ್ಕೆ ೧ ಕಪ್ ನೀರು, ಅರಶಿನ ಪುಡಿ ಮತ್ತು ಒಂದೆರಡು ಹನಿ ಎಣ್ಣೆ ಹಾಕಿ. 
  2. ಮುಚ್ಚಳ ಮುಚ್ಚಿ ಎರಡು ವಿಷಲ್ ಮಾಡಿ. ಒತ್ತಡ ಇಳಿದ ನಂತರ ಬೇಳೆ ಅರ್ಧ ಬೆನ್ದಿರುವುದನ್ನು ನೀವು ಗಮನಿಸಬಹುದು. 
  3. ಬೆಂಡೆಕಾಯಿಯನ್ನು ತೊಳೆದು ನೀರಾರಿಸಿ, ೨ ಸೆ ಮೀ ಉದ್ದದ ಹೋಳುಗಳಾಗಿ ಕತ್ತರಿಸಿ. 
  4. ಈಗ ಬೇಳೆಯಿರುವ ಕುಕ್ಕರ್ ಗೆ ಕತ್ತರಿಸಿದ ಬೆಂಡೆಕಾಯಿ, ಸ್ವಲ್ಪ ಉಪ್ಪು, ಬೆಲ್ಲ, ಹುಣಿಸೆ ರಸ ಮತ್ತು ಸೀಳಿದ ಹಸಿರುಮೆಣಸಿನಕಾಯಿಯನ್ನು ಹಾಕಿ. ೨ ಕಪ್ ನೀರು ಸೇರಿಸಿ ಒಂದು ವಿಷಲ್ ಮಾಡಿ. 
  5. ಒತ್ತಡ ಇಳಿದ ನಂತರ ಮುಚ್ಚಳ ತೆರೆದು, ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಇನ್ನೆರಡು ಕಪ್ ನೀರು ಹಾಕಿ. ನೀರಿನ ಪ್ರಮಾಣವನ್ನು ನಿಮ್ಮಿಷ್ಟದ ಪ್ರಕಾರ ಬದಲಾಯಿಸಬಹುದು.
  6. ಒಂದು ಕುದಿ ಬರಿಸಿ ಸ್ಟವ್ ಆಫ್ ಮಾಡಿ.
  7. ಸಣ್ಣ ಬಾಣಲೆ ಅಥವಾ ಒಗ್ಗರಣೆ ಸೌಟಿನಲ್ಲಿ ತುಪ್ಪ , ಕೆಂಪು ಮೆಣಸಿನಕಾಯಿ, ಸಾಸಿವೆ, ಜೀರಿಗೆ, ಇಂಗು ಮತ್ತು ಕರಿಬೇವಿನ ಒಗ್ಗರಣೆ ಮಾಡಿ ಸಾಂಬಾರ್ಗೆ ಸೇರಿಸಿ. ಬಿಸಿಯಾದ ಅನ್ನದೊಂದಿಗೆ ಬಡಿಸಿ.

ಸೋಮವಾರ, ಮಾರ್ಚ್ 28, 2016

Menthe palle in Kannada | Menthe soppu bele palle | ಮೆಂತೆ ಪಲ್ಲೆ ಮಾಡುವ ವಿಧಾನ


menthe palle in kannada

Menthe palle in Kannada | ಮೆಂತೆ ಪಲ್ಲೆ ಮಾಡುವ ವಿಧಾನ

ಮೆಂತೆ ಪಲ್ಲೆ ಉತ್ತರ ಕರ್ನಾಟಕದ ಪ್ರಸಿದ್ಧ ಅಡುಗೆಯಾಗಿದ್ದು, ಇದನ್ನು ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ತಿನ್ನುತ್ತಾರೆ. ಮೆಂತೆ ಪಲ್ಲೆಯನ್ನು ಮೆಂತೆ ಸೊಪ್ಪು, ತೊಗರಿ ಬೇಳೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಇನ್ನು ಕೆಲವು ಮಸಾಲೆಗಳನ್ನು ಉಪಯೋಗಿಸಿ ಮಾಡಲಾಗುತ್ತದೆ. 
ಈ ಮೆಂತೆ ಪಲ್ಲೆಯನ್ನು ಎರಡು ರೀತಿಯಲ್ಲಿ ತಯಾರಿಸಲಾಗುತ್ತದೆ. ಮೊದಲನೆಯದು ಒಗ್ಗರಣೆಗೆ ತೊಗರಿ ಬೇಳೆ ಹಾಕಿ ಬೇಯಿಸುವುದು ಮತ್ತು ಇನ್ನೊಂದು ಒಗ್ಗರಣೆಗೆ ಮೊದಲೇ ಬೇಯಿಸಿಟ್ಟ ಬೇಳೆ ಹಾಕಿ ಮಾಡುವುದು. ನಾನು ಇಲ್ಲಿ ಮೊದಲನೇ ರೀತಿಯಲ್ಲಿ ವಿವರಿಸಿದ್ದೇನೆ.  
ಇದೊಂದು ರುಚಿಕರ ಮತ್ತು ಆರೋಗ್ಯಕರ ಅಡುಗೆಯಾಗಿದ್ದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಒಮ್ಮೆ ತಯಾರಿಸಿ ನೋಡಿ. ಇದು ನಿಮ್ಮನ್ನು ಖಂಡಿತ ನಿರಾಶೆ ಗೊಳಿಸುವುದಿಲ್ಲ. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 4 ಜನರಿಗೆ 


ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 1 ಕಟ್ಟು ಮೆಂತೆ ಸೊಪ್ಪು ಅಥವಾ 2 ಕಪ್ ಒತ್ತಿ ತುಂಬಿದ ಮೆಂತೆ ಸೊಪ್ಪು 
  2. 2 ಕಪ್ ತೊಗರಿಬೇಳೆ 
  3. 1/2 ಟೀಸ್ಪೂನ್ ಜೀರಿಗೆ 
  4. 1 ಕೆಂಪು ಮೆಣಸಿನಕಾಯಿ ( ಬೇಕಾದಲ್ಲಿ) 
  5. 1 - 2 ಹಸಿಮೆಣಸಿನಕಾಯಿ 
  6. 4 ಎಸಳು ಬೆಳ್ಳುಳ್ಳಿ 
  7. 1ಸೆಮೀ ಉದ್ದದ ಶುಂಠಿ 
  8. 1 ಈರುಳ್ಳಿ 
  9. 1 ಟೊಮೆಟೊ (ಬೇಕಾದಲ್ಲಿ) 
  10. 2 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು 
  11. 1/2 ಟೀ ಚಮಚ ಜೀರಿಗೆ ಪುಡಿ (ಬೇಕಾದಲ್ಲಿ) 
  12. ಉಪ್ಪು ರುಚಿಗೆ ತಕ್ಕಷ್ಟು 

ಮೆಂತೆ  ಪಲ್ಲೆ ಮಾಡುವ ವಿಧಾನ:

  1. ತೊಗರಿಬೇಳೆ ತೊಳೆದು ಪಕ್ಕಕ್ಕಿಡಿ. 
  2. ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸಿಟ್ಟು ಕೊಳ್ಳಿ.
  3. ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದು, ತೊಳೆದು, ಕತ್ತರಿಸಿಟ್ಟುಕೊಳ್ಳಿ.  ಟೊಮೇಟೊವನ್ನು ಕತ್ತರಿಸಿಟ್ಟು ಕೊಳ್ಳಿ. 
  4. ಒಂದು ಕುಕ್ಕರ್ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಜೀರಿಗೆಯನ್ನು ಹಾಕಿ.
  5. ಜೀರಿಗೆ ಸಿಡಿದ ಕೂಡಲೇ ಇಡೀ ಕೆಂಪು ಮೆಣಸಿನಕಾಯಿ, ಹಸಿರು ಮೆಣಸಿನಕಾಯಿ, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ ಮತ್ತು ಶುಂಠಿ ಸೇರಿಸಿ. ಸ್ವಲ್ಪ ಹೊತ್ತು ಹುರಿಯಿರಿ. 
  6. ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಮೆತ್ತಗಾಗುವವರೆಗೆ  ಹುರಿಯಿರಿ.
  7. ಕತ್ತರಿಸಿದ ಟೊಮ್ಯಾಟೊ ಮತ್ತು ಅರಿಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಹುರಿಯಿರಿ.
  8. ಕತ್ತರಿಸಿದ ಮೆಂತೆ ಸೊಪ್ಪು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 
  9. ಸುಮಾರು 4 ಕಪ್ ನೀರು ಸೇರಿಸಿ ಅಥವಾ ಬೇಳೆಯ ದುಪ್ಪಟ್ಟಿನಷ್ಟು ನೀರು ಸೇರಿಸಿ. 
  10. ತೊಳೆದಿಟ್ಟ ತೊಗರಿ ಬೇಳೆಯನ್ನು ಸೇರಿಸಿ. 
  11. ಒಮ್ಮೆ ಕಲಸಿ ಪ್ರೆಷರ್ ಕುಕ್ಕರ್ ನಲ್ಲಿ 3 - 4 ಸೀಟಿಗಳನ್ನು ಮಾಡಿ ಬೇಯಿಸಿ.  ಬೇಕಾದಲ್ಲಿ ಮೊದಲೇ  ಬೇಯಿಸಿದ ಬೇಳೆಯನ್ನು ಸೇರಿಸಬಹುದು. 
  12. ಪ್ರೆಷರ್ ಕುಕ್ಕರ್ ನ ಸೆಕೆ ಇಳಿದ ಮೇಲೆ ಬೇಳೆ ಮತ್ತು ಸೊಪ್ಪು ಚೆನ್ನಾಗಿ ಬೆನ್ದಿರುವುದನ್ನು ನೀವು ನೋಡಬಹುದು. ಆದರೆ ಬೇಳೆ ಮುದ್ದೆಯಾಗಿರುವುದಿಲ್ಲ.
  13. ಕತ್ತರಿಸಿದ ಕೊತ್ತುಂಬರಿ ಸೊಪ್ಪು, ಉಪ್ಪು ಮತ್ತು ಜೀರಿಗೆ ಪುಡಿ ಸೇರಿಸಿ. 
  14. ಅಗಲವಾದ ಸೌಟಿನ ಹಿಂಭಾಗದಿಂದ ಒತ್ತುತ್ತ ಚೆನ್ನಾಗಿ ಕಲಸಿ. 
  15. ಅಗತ್ಯವಿದ್ದಷ್ಟು ನೀರು ಸೇರಿಸಿ. ಜೋಳದ ರೊಟ್ಟಿ ಅಥವಾ ಚಪಾತಿಯ ಜೊತೆಗೆ ಬಡಿಸಬೇಕಾದಲ್ಲಿ ಸ್ವಲ್ಪ ಗಟ್ಟಿಯಾಗಿ ಮತ್ತು ಅನ್ನದ ಜೊತೆ ಬಡಿಸಲು ಸ್ವಲ್ಪ ತೆಳ್ಳಗೆ ಆಗುವಂತೆ ನೀರು ಸೇರಿಸಿ. ಒಂದು ಕುದಿ ಕುದಿಸಿ. ಬಿಸಿ ತುಪ್ಪ ಮತ್ತು ಮೆಂತೆ ಪಲ್ಲೆಯನ್ನು ಜೋಳದ ರೊಟ್ಟಿ ಅಥವಾ ಚಪಾತಿ ಅಥವಾ ಅನ್ನದೊಂದಿಗೆ ಬಡಿಸಿ.


ಬುಧವಾರ, ಮಾರ್ಚ್ 23, 2016

Ellu juice recipe in kannada | ಎಳ್ಳು ಜ್ಯೂಸು ಮಾಡುವ ವಿಧಾನ


ellu juice recipe in kannada

ಎಳ್ಳು ಜ್ಯೂಸು ಮಾಡುವ ವಿಧಾನ

ಎಳ್ಳು ಜ್ಯೂಸು ಮಾಡುವ ವಿಧಾನವನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಎಳ್ಳು ಜ್ಯೂಸನ್ನು ಎಳ್ಳು, ಬೆಲ್ಲ ಮತ್ತು ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಇದು ತುಂಬಾ ಸುಲಭ ಮತ್ತು ರುಚಿಕರವಾದ ಪಾನೀಯ ಆಗಿದೆ. ಈ ರೀತಿಯ ಜ್ಯೂಸನ್ನು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಬೇಸಿಗೆ ಕಾಲದಲ್ಲಿ ಅನೇಕ ಅಂಗಡಿಗಳಲ್ಲಿ ಮಾರಲಾಗುತ್ತದೆ.

ಎಳ್ಳನ್ನು ಉಷ್ಣ ಆಹಾರ ಎನ್ನುತ್ತಾರೆ. ಆದರೆ ಎಳ್ಳೆಣ್ಣೆ ಮತ್ತು ಈ ಎಳ್ಳಿನ ಜ್ಯೂಸನ್ನು ತಂಪು ಎನ್ನುತ್ತಾರೆ. ಹೇಗೆಂದು ನನಗೆ ಗೊತ್ತಿಲ್ಲ. ಯಾರಿಗಾದರೂ ಗೊತ್ತಿದ್ದರೆ ನನಗೆ ದಯವಿಟ್ಟು ತಿಳಿಸಿ.

ಎಳ್ಳು ಅನೇಕ ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಕ್ಯಾಲ್ಸಿಯಂ, ತಾಮ್ರ, ಮ್ಯಾಂಗನೀಸ್, ರಂಜಕ, ಮೆಗ್ನೀಷಿಯಂ, ಕಬ್ಬಿಣ, ಸತು, ಜೀವಸತ್ವ B1 ಮತ್ತು ಸೆಲೆನಿಯಮ್ ಹೇರಳವಾಗಿದೆ ಎನ್ನಲಾಗಿದೆ. ಆಸ್ತಮಾ, ರಕ್ತದೊತ್ತಡ, ಹೃದಯಾಘಾತ, ಪಾರ್ಶ್ವವಾಯು, ಕರುಳಿನ ಕ್ಯಾನ್ಸರ್, ಆಸ್ಟಿಯೊಪೊರೋಸಿಸ್, ಮೈಗ್ರೇನ್ ಮತ್ತು ಮಧುಮೇಹ ಹೃದಯ ರೋಗ ಚಿಕಿತ್ಸೆಯಲ್ಲಿ ಬಹಳ ಅನುಕೂಲಕರ ಎಂದು ಹೇಳಲಾಗುತ್ತದೆ. ಈಗ ಎಳ್ಳು ಜ್ಯೂಸು ಮಾಡುವ ವಿಧಾನವನ್ನು ನೋಡೋಣ.

ಎಳ್ಳು ಜ್ಯೂಸು ವಿಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 5 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

1/2 ಕಪ್ ಬಿಳಿ ಎಳ್ಳು
1/2 ಕಪ್ ಪುಡಿ ಮಾಡಿದ ಬೆಲ್ಲ
2 ಕಪ್ ನೀರು (ಅರೆಯಲು ಬೇಕಾದ ನೀರು ಸೇರಿಸಿ)
2 ಕಪ್ ಕುದಿಸಿ ಆರಿಸಿದ ಹಾಲು
ಒಂದು ಏಲಕ್ಕಿ

ಎಳ್ಳು ಜ್ಯೂಸು ಮಾಡುವ ವಿಧಾನ:

ಒಂದು ಬಾಣಲೆ ತೆಗೆದುಕೊಂಡು ಎಳ್ಳನ್ನು ಎಣ್ಣೆ ಹಾಕದೆ ಹುರಿಯಿರಿ. ಸ್ವಲ್ಪ ಹುರಿದರೆ ಅಂದರೆ ಎಳ್ಳು ಉಬ್ಬುವವರೆಗೆ ಹುರಿದರೆ ಸಾಕು. ಹುರಿದ ಎಳ್ಳು ತಣ್ಣಗಾಗುವವರೆಗೆ ಕಾಯಿರಿ.
ಈಗ ಎಳ್ಳು, ಬೆಲ್ಲ ಮತ್ತು ಏಲಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ.
ಅಗತ್ಯವಿರುವಷ್ಟು ನೀರು ಬಳಸಿಕೊಂಡು ನಯವಾಗಿ ಅರೆಯಿರಿ.
ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ಹಾಲು ಮತ್ತು ಉಳಿದ ನೀರು ಸೇರಿಸಿ ಚೆನ್ನಾಗಿ ಕಲಕಿ. ಫ್ರಿಜ್ ನಲ್ಲಿಟ್ಟು ತಂಪಾದ ಎಳ್ಳು ಜ್ಯೂಸನ್ನು ಸವಿಯಿರಿ.

ಮಂಗಳವಾರ, ಮಾರ್ಚ್ 22, 2016

Balehannu halwa in kannada | ಬಾಳೆ ಹಣ್ಣಿನ ಹಲ್ವಾ



banana halwa recipe in kannada

ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ 

ಬಾಳೆಹಣ್ಣಿನ ಹಲ್ವಾವನ್ನು ಬಾಳೆಹಣ್ಣು, ಸಕ್ಕರೆ ಮತ್ತು ತುಪ್ಪ ಉಪಯೋಗಿಸಿ ಮಾಡಲಾಗುತ್ತದೆ. ಇದೊಂದು ಸುಲಭವಾದ ಸಿಹಿತಿನಿಸಾಗಿದ್ದು, ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ ಮಾಡಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುತ್ತದೆ. ಸಮಯಕ್ಕಿಂತ ತುಂಬ ಹೊತ್ತು ಮಗುಚ ಬೇಕಾದ್ದರಿಂದ ಸ್ವಲ್ಪ ಶ್ರಮವೆನಿಸುತ್ತದೆ. 
ಈ ಹಲ್ವಾವನ್ನು ಸಾಧಾರಣವಾಗಿ ನೇಂದ್ರ ಬಾಳೆಹಣ್ಣು ಉಪಯೋಗಿಸಿ ಮಾಡುತ್ತಾ ರಾದರೂ, ಪುಟ್ಟ ಬಾಳೆ ಅಥವಾ ಯಾಲಕ್ಕಿ ಬಾಳೆ ಹಣ್ಣನ್ನು ಉಪಯೋಗಿಸಿ ಮಾಡುವುದು ಸಹ ಚಾಲ್ತಿಯಲ್ಲಿದೆ. ನಾನು ಏಲಕ್ಕಿ ಬಾಳೆಹಣ್ಣು ಉಪಯೋಗಿಸಿ ಮಾಡಿದ್ದೇನೆ. ರುಚಿಯಲ್ಲಿ ಬಹಳ ವ್ಯತ್ಯಾಸವಿಲ್ಲದಿದ್ದರೂ, ಏಲಕ್ಕಿ ಬಾಳೆಹಣ್ಣಿನ ಹಲ್ವಾದ ಬಣ್ಣ ಸ್ವಲ್ಪ ಕಪ್ಪಾಗಿರುತ್ತದೆ.  ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ತಯಾರಿಸುವ ಈ ಹಲ್ವಾವನ್ನು ನೀವೊಮ್ಮೆ ಮಾಡಿ ಆನಂದಿಸಿ. 

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 30 ನಿಮಿಷ
ಪ್ರಮಾಣ: 8 - 10 ಹಲ್ವಾ 

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 10 - 12 ಚೆನ್ನಾಗಿ ಹಣ್ಣಾದ ಏಲಕ್ಕಿ ಬಾಳೆಹಣ್ಣು (ಅಥವಾ 3 ನೇಂದ್ರ ಬಾಳೆಹಣ್ಣು)
  2. 2 - 3 ಕಪ್ ಸಕ್ಕರೆ (ನಿಮ್ಮ ರುಚಿಗೆ ತಕ್ಕಂತೆ)
  3. 1 ಕಪ್ ತುಪ್ಪ
  4. 2 ಟೇಬಲ್ ಸ್ಪೂನ್ ತುಂಡರಿಸಿದ ಗೋಡಂಬಿ
  5. ಒಂದು ಚಿಟಿಕೆ ಏಲಕ್ಕಿ ಪುಡಿ (ಬೇಕಾದಲ್ಲಿ)

ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ:

  1. ಮೊದಲಿಗೆ ತುಂಡರಿಸಿದ ಗೋಡಂಬಿಯನ್ನು ಹುರಿದು ಪಕ್ಕಕ್ಕಿಟ್ಟು ಕೊಳ್ಳಿ. ಹಾಗೇ ಒಂದು ಬಟ್ಟಲಿಗೆ ತುಪ್ಪ ಸವರಿಟ್ಟು ಕೊಳ್ಳಿ. ನಂತರ ಬಾಳೆ ಹಣ್ಣಿನ ಸಿಪ್ಪೆ ಸುಲಿದು ಕತ್ತರಿಸಿ. 
  2. ಸಿಪ್ಪೆ ಸುಲಿದ ಬಾಳೆಹಣ್ಣನ್ನು ಮಿಕ್ಸಿಗೆ ಹಾಕಿ ನುಣ್ಣನೆ ಅರೆದುಕೊಳ್ಳಿ.
  3. ಒಂದು ಬಾಣಲೆಗೆ ಅರೆದ ಬಾಳೆಹಣ್ಣು ಮತ್ತು ಸಕ್ಕರೆ ಹಾಕಿ. ಮದ್ಯಮ ಉರಿಯಲ್ಲಿ ಮಗುಚಲು ಪ್ರಾರಂಭಿಸಿ. 
  4. ಸ್ವಲ್ಪ ಸಮಯದ ನಂತರ ಸಕ್ಕರೆ ಕರಗಿ, ಸಕ್ಕರೆ ಮತ್ತು ಬಾಳೆಹಣ್ಣು ಚೆನ್ನಾಗಿ ಹೊಂದಿ ಕೊಂಡಿರುವುದನ್ನು ನೀವು ಕಾಣುವಿರಿ. ಆಗಾಗ್ಯೆ ಮಗುಚುತ್ತ ಇರಿ. 
  5. ಕೆಲವೇ ನಿಮಿಷಗಳಲ್ಲಿ ಬಾಳೆಹಣ್ಣು ಮತ್ತು ಸಕ್ಕರೆ ಕುದಿಯಲು ಪ್ರಾರಂಭಿಸುತ್ತದೆ.
  6. ಈಗ ಸ್ವಲ್ಪ ತುಪ್ಪ ಹಾಕಿ (ಸುಮಾರು 1/3 ಕಪ್) ಮಗುಚಲು ಪ್ರಾರಂಭಿಸಿ.
  7. ಆಗೊಮ್ಮೆ ಈಗೊಮ್ಮೆ ಸ್ವಲ್ಪ ಸ್ವಲ್ಪ ತುಪ್ಪ ಹಾಕುತ್ತಾ ಮಗುಚುತ್ತ ಇರಿ. ಸುಮಾರು ೧೦ - ೧೫ ನಿಮಿಷಗಳ ನಂತರ ಬಾಳೆಹಣ್ಣು-ಸಕ್ಕರೆ ಮಿಶ್ರಣದ ಬಣ್ಣ ಬದಲಾಗುವುದನ್ನು ನೀವು ಕಾಣುವಿರಿ. ಹಲ್ವದ ಪ್ರಮಾಣದ ಮೇಲೆ ಸಮಯ ಹೆಚ್ಚು ಕಡಿಮೆ ಆಗ ಬಹುದು. 
  8. ಬಣ್ಣ ಬದಲಾದ ಕೂಡಲೇ ಉಳಿದ ಎಲ್ಲ ತುಪ್ಪವನ್ನು ಹಾಕಿ. ಇಲ್ಲಿಂದ ನೀವು ನಿರಂತರವಾಗಿ ಮಗುಚಲು ಪ್ರಾರಂಭಿಸಬೇಕು. ನಿಮಗೆ ಚಮಚದಲ್ಲಿ ತಿನ್ನುವಂತೆ ಮೆತ್ತಗಿನ ಹಲ್ವಾ ಬೇಕಾದಲ್ಲಿ, ಸುಮಾರು ೫  ನಿಮಿಷಗಳ ಕಾಲ ಮಗುಚಿ ಸ್ಟವ್ ಆಫ್ ಮಾಡಿ. ಬಟ್ಟಲಿಗೆ ಹಾಕಿ ತುಂಡು ಮಾಡುವ ಹದ ಬೇಕಾದಲ್ಲಿ ಮಗುಚುವುದನ್ನು ಮುಂದುವರೆಸಿ.  
  9. ಸುಮಾರು ೧೦ ನಿಮಿಷದ ನಂತರ ಹಲ್ವಾ ತುಪ್ಪ ಬಿಡುವುದನ್ನು ನೀವು ಗಮನಿಸುವಿರಿ. ಕೂಡಲೇ ಹುರಿದ ಗೋಡಂಬಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಪುನಃ ೫ ನಿಮಿಷಗಳ ಕಾಲ ಮಗುಚಿ ಸ್ಟವ್ ಆಫ್ ಮಾಡಿ. 
  10. ತುಪ್ಪ ಸವರಿದ ಬಟ್ಟಲಿಗೆ ಸುರಿದು ತಣ್ಣಗಾಗಲು ಬಿಡಿ. ತಣಿದ ನಂತರ ಒಂದು ಚಾಕುವಿನ ಸಹಾಯದಿಂದ ಕತ್ತರಿಸಿ. 



ಶನಿವಾರ, ಮಾರ್ಚ್ 19, 2016

Southekayi idli in kannada | ಸೌತೆಕಾಯಿ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ



ಸೌತೆಕಾಯಿ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ 

ಸೌತೆಕಾಯಿ ಇಡ್ಲಿ ಒಂದು ದಿಡೀರ್ ಇಡ್ಲಿಯಾಗಿದ್ದು, ಇದರಲ್ಲಿ ಹಿಟ್ಟು ಹುದುಗ ಬೇಕಾಗಿಲ್ಲ. ಹಾಗಾಗಿ ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು. ಈ ಇಡ್ಲಿಯನ್ನು ತುರಿದ ಸೌತೆಕಾಯಿ, ತೆಂಗಿನಕಾಯಿ, ಹಸಿರು ಮೆಣಸಿನಕಾಯಿ ಮತ್ತು ಇಡ್ಲಿ ರವಾ ಉಪಯೋಗಿಸಿ ಮಾಡಲಾಗುತ್ತದೆ. ಇದೊಂದು ಹಳೆಯ ಕಾಲದ ಅಡುಗೆಯಾಗಿದ್ದು, ಮನೆಯಲ್ಲೇ ತಯಾರಿಸಿದ ಅಕ್ಕಿ ರವಾ ಉಪಯೋಗಿಸಿ ಮಾಡಲಾಗುತ್ತಿತ್ತು. ಆದರೆ ಈಗ ಇಡ್ಲಿ ರವಾ ಎಲ್ಲೆಡೆ ದೊರಕುವುದರಿಂದ ಕೆಲಸ ಸುಲಭ ಸಾಧ್ಯವಾಗಿದೆ. ಹಾಗೂ ಈ ಇಡ್ಲಿಯನ್ನು ಉಂಡೆಯ ರೂಪದಲ್ಲಿ ಅಥವಾ ಬಾಳೆ ಎಲೆಯಲ್ಲಿ ಕಟ್ಟಿ ಬೇಯಿಸುವುದು ರೂಢಿಯಲ್ಲಿದೆ.
ಈ ಅಡುಗೆ ಹೆಚ್ಚಿನ ಮಕ್ಕಳು ಇಷ್ಟ ಪಡುವ ಅಡುಗೆಯಾಗಿದ್ದು, ತರಕಾರಿ ತಿನ್ನಲು ಇಷ್ಟಪಡದ ಮಕ್ಕಳಿಗೆ ಒಳ್ಳೆಯ ಆಹಾರವೊಂದನ್ನು ತಿನ್ನಿಸಲು ಸಹಕಾರಿಯಾಗಿದೆ. ಈ ಇಡ್ಲಿಯನ್ನು ಬಿಸಿ ಬಿಸಿಯಾಗಿ ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಿದರೆ ಬಲು ರುಚಿ.
ನಾನು ಬೆಳಗ್ಗಿನ ತಿಂಡಿಗೆ ಇದನ್ನು ತಯಾರಿಸುವಾಗ, ಅದರೊಟ್ಟಿಗೆ ಚೀನಿಕಾಯಿ ಸಿಹಿ ಇಡ್ಲಿ ಸಹ ಮಾಡುತ್ತೇನೆ. ಈ ಎರಡು ಇಡ್ಲಿಗಳನ್ನು ಒಟ್ಟಿಗೆ ಮಾಡಿದರೆ ಚೆನ್ನಾಗಿ ಅನ್ನಿಸುತ್ತದೆ.


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 2 ಜನರಿಗೆ

ಬೇಕಾಗುವ ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 2 ಕಪ್ ತುರಿದ ಸೌತೆಕಾಯಿ
  2. 0.5 - 1 ಕಪ್ ತೆಂಗಿನ ತುರಿ
  3. 1 - 1.5 ಕಪ್ ಇಡ್ಲಿ ರವಾ (ಸೌತೆಕಾಯಿ ನೀರಿನಂಶ ಅವಲಂಬಿಸಿ)
  4. 1 - 2 ಹಸಿರು ಮೆಣಸಿನಕಾಯಿ 
  5. 2 ಟೇಬಲ್ ಸ್ಪೂನ್ ಹೆಚ್ಚಿದ ಕೊತ್ತಂಬರಿ ಸೊಪ್ಪು
  6. ಉಪ್ಪು ರುಚಿಗೆ ತಕ್ಕಷ್ಟು.

ಸೌತೆಕಾಯಿ ಇಡ್ಲಿ ಅಥವಾ ಕಡುಬು ಮಾಡುವ ವಿಧಾನ:

  1. ಒಂದು ಪಾತ್ರೆ ತೆಗೆದು ಕೊಂಡು ಅದರಲ್ಲಿ ತುರಿದ ಸೌತೆಕಾಯಿ ಹಾಕಿ.
  2. ಅದಕ್ಕೆ ಇಡ್ಲಿ ರವೆಯನ್ನು ಸೇರಿಸಿ. 
  3. ತೆಂಗಿನ ತುರಿ ಮತ್ತು ಹಸಿರು ಮೆಣಸಿನಕಾಯಿಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನೀರು ಹಾಕಬೇಡಿ.
  4. ಈಗ ಪುಡಿಮಾಡಿದ ತೆಂಗಿನ ತುರಿ ಮತ್ತು ಹಸಿಮೆಣಸಿನ ಕಾಯಿಯನ್ನು ಸೌತೆಕಾಯಿ ಮತ್ತು ರವೆ ಇರುವ ಪಾತ್ರೆಗೆ ಸೇರಿಸಿ. 
  5. ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. 
  6. ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ. 
  7. ಎಲ್ಲವನ್ನು ಚೆನ್ನಾಗಿ ಕಲಸಿ, 5 ನಿಮಿಷ ಹಾಗೆ ಬಿಡಿ. ಹಿಟ್ಟು ಸುಲಭವಾಗಿ ಬೀಳುವಷ್ಟು ನೀರಾಗಿರಬೇಕು  ಆದರೆ ಕೈಗಳಿಂದ ತೆಗೆದು ಹಾಕುವಷ್ಟು ಗಟ್ಟಿಯಾಗಿರಬೇಕು.   
  8. ಈಗ ಇಡ್ಲಿ ತಟ್ಟೆ ತೆಗೆದುಕೊಂಡು, ಸ್ವಲ್ಪ ಹಿಟ್ಟನ್ನು ಹಾಕಿ, ಕೈಯಲ್ಲಿ ಒತ್ತಿ, ಇಡ್ಲಿ ರೂಪಕ್ಕೆ ತನ್ನಿ.
  9. 15 ನಿಮಿಷ ಸೆಕೆ / ಆವಿಯಲ್ಲಿ ಬೇಯಿಸಿ. ಇಡ್ಲಿ ಬಿಸಿಯಾಗಿರುವಾಗಲೇ ಚಟ್ನಿಯೊಂದಿಗೆ ಬಡಿಸಿ.

ಗುರುವಾರ, ಮಾರ್ಚ್ 17, 2016

Doddapatre-ellu chutney in kannada | sambarballi-ellu chutney in kannada | ದೊಡ್ಡಪತ್ರೆ ಎಳ್ಳಿನ ಸಿಹಿ ಚಟ್ನಿ



ದೊಡ್ಡಪತ್ರೆ-ಎಳ್ಳಿನ ಸಿಹಿ ಚಟ್ನಿ ಮಾಡುವ ವಿಧಾನ 

ದೊಡ್ಡಪತ್ರೆ ಚಟ್ನಿಯನ್ನು ದೊಡ್ಡಪತ್ರೆ ಎಲೆ, ಹುರಿದ ಎಳ್ಳು, ಒಣಮೆಣಸಿನ ಕಾಯಿ, ಬೆಳ್ಳುಳ್ಳಿ, ತೆಂಗಿನ ತುರಿ, ಬೆಲ್ಲ ಮತ್ತು ಹುಣಿಸೆಹಣ್ಣು ಹಾಕಿ ತಯಾರಿಸಲಾಗುತ್ತದೆ. ಎಳ್ಳು ಮತ್ತು ಬೆಲ್ಲ ಹಾಕಿ ಮಾಡುವುದರಿಂದ ಈ ಚಟ್ನಿ ಒಂದು ವಿಶೇಷವಾದ ರುಚಿಯನ್ನು ಹೊಂದಿರುತ್ತದೆ. ಈ ಸರಳವಾದ ಚಟ್ನಿ ಅನ್ನದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.
ದೊಡ್ಡಪತ್ರೆ ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಿರುವ ಮತ್ತು ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದ್ದು, ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಸಸ್ಯದ ಬಗ್ಗೆ ಹೆಚ್ಚಿನ ಮಾಹಿತಿ, ವಿವಿಧ ಹೆಸರುಗಳು, ಔಷಧೀಯ ಗುಣಗಳು ಮತ್ತು ಇನ್ನಿತರ ಅಡುಗೆಗಳನ್ನು ಓದಲು ನಮ್ಮ "ದೊಡ್ಡಪತ್ರೆಯ ಹಲವಾರು ಅಡುಗೆಗಳು" ಪೋಸ್ಟನ್ನು ವೀಕ್ಷಿಸಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 15 ನಿಮಿಷ
ಪ್ರಮಾಣ : 3 ಜನರಿಗೆ

ಪದಾರ್ಥಗಳು: ( ಅಳತೆ ಕಪ್ = 120 ಎಂಎಲ್ )

  1. 15-20 ದೊಡ್ಡಪತ್ರೆ ಎಲೆಗಳು
  2. 2-4 ಒಣ ಮೆಣಸಿನಕಾಯಿ
  3. 1 ಟಿಸ್ಪೂನ್ ಎಳ್ಳು 
  4. 2 ಬೇಳೆ ಬೆಳ್ಳುಳ್ಳಿ 
  5. ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
  6. 1/2 ಟಿಸ್ಪೂನ್ ಬೆಲ್ಲ 
  7. 1 ಕಪ್ ತೆಂಗಿನ ತುರಿ
  8. ಉಪ್ಪು ರುಚಿಗೆ ತಕ್ಕಷ್ಟು.

ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:

  1. 1 ಒಣ ಮೆಣಸಿನಕಾಯಿ
  2. 1/2 ಟೀಸ್ಪೂನ್ ಸಾಸಿವೆ
  3. 1/2 ಟೀಸ್ಪೂನ್ ಉದ್ದಿನಬೇಳೆ
  4. 2 ಟೀಸ್ಪೂನ್ ಅಡುಗೆ ಎಣ್ಣೆ

ದೊಡ್ಡಪತ್ರೆ ಎಳ್ಳು ಚಟ್ನಿ ಮಾಡುವ ವಿಧಾನ:

  1. ದೊಡ್ಡಪತ್ರೆ ಎಲೆಗಳನ್ನು ತೊಳೆದು ಕತ್ತರಿಸಿಟ್ಟು ಕೊಳ್ಳಿ.
  2. ಒಂದು ಬಾಣಲೆ ಬಿಸಿಮಾಡಿ, ಅದಕ್ಕೆ ಕೆಂಪು ಮೆಣಸಿನಕಾಯಿ ಮತ್ತು ಎಳ್ಳನ್ನು ಹಾಕಿ ಹುರಿಯಿರಿ.
  3. ಎಳ್ಳು ಸ್ವಲ್ಪ ಉಬ್ಬಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಒಂದು ನಿಮಿಷದ ಕಾಲ ಅಥವಾ ಬೆಳ್ಳುಳ್ಳಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. 
  4. ಈಗ ಅದೇ ಬಾಣಲೆಗೆ ಕತ್ತರಿಸಿದ ದೊಡ್ಡಪತ್ರೆ ಎಲೆಗಳನ್ನು ಹಾಕಿ ಹುರಿಯಿರಿ. 
  5. ಎಲೆಗಳು ಬಾಡಿದ ಕೂಡಲೇ ಸ್ಟೋವ್ ಆಫ್ ಮಾಡಿ.
  6. ಹುರಿದ ಪದಾರ್ಥಗಳನ್ನು ತೆಂಗಿನತುರಿ, ಉಪ್ಪು, ಬೆಲ್ಲ ಮತ್ತು ಹುಣಿಸೆ ಹಣ್ಣಿನೊಂದಿಗೆ ನೀರು  ಸೇರಿಸಿ ಅರೆಯಿರಿ. 
  7. ಒಣಮೆಣಸು, ಸಾಸಿವೆ, ಉದ್ದಿನಬೇಳೆಯ ಒಗ್ಗರಣೆ ಕೊಡಿ. ಬಿಸಿ ಬಿಸಿ ಅನ್ನದೊಂದಿಗೆ ಬಡಿಸಿ.


ಬುಧವಾರ, ಮಾರ್ಚ್ 16, 2016

Mavina midi uppinakayi in kannada | Mavina kayi uppinakayi | ಮಾವಿನ ಮಿಡಿ ಉಪ್ಪಿನಕಾಯಿ


ಮಾವಿನ ಮಿಡಿ ಉಪ್ಪಿನಕಾಯಿ ಮಾಡುವ ವಿಧಾನ

ಮಾವಿನ ಮಿಡಿ ಉಪ್ಪಿನಕಾಯಿ ಪಾಕವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಇದೊಂದು ಕರ್ನಾಟಕದ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಆಗಿದೆ.  ಈ ಉಪ್ಪಿನಕಾಯಿಯಲ್ಲಿ ಮಾವಿನ ಮಿಡಿ, ಕೆಂಪು ಮೆಣಸಿನಕಾಯಿ ಮತ್ತು ಸಾಸಿವೆ ಮೂರು ಮುಖ್ಯ ಪದಾರ್ಥಗಳಾಗಿವೆ. ಅರಿಶಿನ, ಕರಿಮೆಣಸು ಮತ್ತು ಇಂಗು ಇತರೆ ಪದಾರ್ಥಗಳಾಗಿದ್ದು ಬೇಕಾದಲ್ಲಿ ಮಾತ್ರ ಉಪಯೋಗಿಸಬಹುದು. 
ಈ ಉಪ್ಪಿನಕಾಯಿ ನೈಸರ್ಗಿಕವಾಗಿ ಕಾಡಿನಲ್ಲಿ ಬೆಳೆಯುವ ಕಾಟು ಮಾವಿನ ಮಿಡಿಯನ್ನು ಉಪಯೋಗಿಸಿ ಮಾಡಲಾಗುತ್ತದೆ. ಅದು ಹೆಚ್ಚು ಹುಳಿ ಮತ್ತು ಪರಿಮಳವನ್ನು ಹೊಂದಿರುತ್ತದೆ.  ಸಾಧಾರಣವಾಗಿ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಈ ಮಾವಿನ ಮಿಡಿ ದೊರಕುತ್ತದೆ.  ನಾನು ಈ ಉಪ್ಪಿನಕಾಯಿ ಕಲಿತಿದ್ದು ನನ್ನ ಅಮ್ಮನಿಂದ. ನನ್ನತ್ತೆಯೂ ಕೂಡ ಇದೇ ರೀತಿಯಲ್ಲಿ ತಯಾರಿಸುತ್ತಾರೆ ಆದರೆ ಸಾಸಿವೆ ಪ್ರಮಾಣ ಸ್ವಲ್ಪ ಜಾಸ್ತಿಯಿರುತ್ತದೆ. ಉಪ್ಪಿನಕಾಯಿಯ ರುಚಿ ಮಾವಿನ ಮಿಡಿಯ ಗುಣಮಟ್ಟ ಮತ್ತು ಒಣಮೆಣಸಿನಕಾಯಿಯ ಗುಣಮಟ್ಟದ ಮೇಲೆ ಅವಲಂಬಿವಾಗಿರುತ್ತದೆ. 
ಈ ಉಪ್ಪಿನಕಾಯಿ ಮಾಡಲು ಸ್ವಲ್ಪ ಜಾಸ್ತಿ ಸಮಯ ಬೇಕಾಗುತ್ತದೆ. ಮತ್ತು ತಿನ್ನಲು ನೀವು ಕನಿಷ್ಠ ಒಂದು ತಿಂಗಳು ಕಾಯಬೇಕಾಗುತ್ತದೆ. ಸಾಮಾನ್ಯವಾಗಿ ಮಾವಿನ ಮಿಡಿ ಉಪ್ಪಿನಕಾಯಿ ದೊಡ್ಡ ಸಂಖ್ಯೆಯಲ್ಲಿ ತಯಾರಿಸಲಾಗುತ್ತದೆ. ಒಂದು ಸಮಯದಲ್ಲಿ 500 ಅಥವಾ 1000 ಅಥವಾ 2000 ಮಾವಿನಮಿಡಿಯಿಂದ ಉಪ್ಪಿನಕಾಯಿ ಮಾಡಲಾಗುತ್ತದೆ. ಈ ಉಪ್ಪಿನಕಾಯಿ ಬಹಳ ಕಾಲ ಕೆಡದೇ ಉಳಿಯುವ ಕಾರಣ ಉತ್ತಮ ಮಾವಿನ ಮಿಡಿ ಸಿಕ್ಕಿದಾಗ ದೊಡ್ಡ ಸಂಖ್ಯೆಯಲ್ಲಿ ಉಪ್ಪಿನಕಾಯಿ ತಯಾರಿಸಿ 1 ಅಥವಾ 2 ವರ್ಷಗಳ ಕಾಲ ಬಳಸಲಾಗುತ್ತದೆ. 


ತಯಾರಿ ಸಮಯ: 1 ತಿಂಗಳು 
ಅಡುಗೆ ಸಮಯ: 0
ಪ್ರಮಾಣ: ಬಳಸಲಾದ ಮಾವಿನ ಮಿಡಿ ಸಂಖ್ಯೆಯಷ್ಟು. 

ಬೇಕಾಗುವ ಪದಾರ್ಥಗಳು (ಜಾಸ್ತಿ ಸಂಖ್ಯೆಯಾದಲ್ಲಿ ):

  1. 1000 ಕಾಟು ಮಾವಿನ ಮಿಡಿಗಳು  (1 ರಿಂದ 1.5 " ಉದ್ದ)
  2. 3 ಕೆಜಿ ಕಲ್ಲುಪ್ಪು 
  3. 1 ಕೆಜಿ ಕೆಂಪು ಮೆಣಸಿನಕಾಯಿ / ಮೆಣಸಿನಪುಡಿ (ಮಧ್ಯಮ ಖಾರ )
  4. 1/2 ಕೆಜಿ ಸಾಸಿವೆ
  5. 10 ಗ್ರಾಂ ಇಂಗು
  6. 100 ಗ್ರಾಂ ಕರಿಮೆಣಸು (ಬೇಕಾದಲ್ಲಿ - ಹೆಚ್ಚಿನ ಖಾರ ಮತ್ತು ಜಾಸ್ತಿ ಸಮಯ ಕೆಡದೆ ಇರಲು)
  7. 50 ಗ್ರಾಂ ಒಣಗಿದ ಜೀರಿಗೆ ಮೆಣಸಿನಕಾಯಿ ( ಬೇಕಾದಲ್ಲಿ - ಹೆಚ್ಚಿನ ಖಾರ ಮತ್ತು ಜಾಸ್ತಿ ಸಮಯ ಕೆಡದೆ ಇರಲು)
  8. 4 ಬೆರಳುದ್ದ ಅರಿಶಿನ ಕೊಂಬು (ಬೇಕಾದಲ್ಲಿ) 

ಬೇಕಾಗುವ ಪದಾರ್ಥಗಳು (ಕಡಿಮೆ ಸಂಖ್ಯೆಯಾದಲ್ಲಿ ):

  1. 12 ಕಾಟು ಮಾವಿನ ಮಿಡಿಗಳು  (1 ರಿಂದ 1.5 " ಉದ್ದ)
  2. 6 - 8 ಟಿಸ್ಪೂನ್ ಕಲ್ಲುಪ್ಪು 
  3. 12 ಕೆಂಪು ಮೆಣಸಿನಕಾಯಿ / 6 ಟಿಸ್ಪೂನ್ ಮೆಣಸಿನಪುಡಿ (ಮಧ್ಯಮ ಖಾರ )
  4.  3 ಟಿಸ್ಪೂನ್ ಸಾಸಿವೆ
  5. ಒಂದು ಚಿಟಿಕೆ ಇಂಗು
  6. 2 - 4 ಕರಿಮೆಣಸು (ಬೇಕಾದಲ್ಲಿ - ಹೆಚ್ಚಿನ ಖಾರಕ್ಕಾಗಿ ಮತ್ತು ಜಾಸ್ತಿ ಸಮಯ ಕೆಡದೆ ಇರಲು)
  7. ಒಂದು ಚಿಟಿಕೆ ಅರಿಶಿನ ಪುಡಿ (ಬೇಕಾದಲ್ಲಿ) 

ಮಾವಿನ ಮಿಡಿ ಉಪ್ಪಿನಕಾಯಿ ಮಾಡುವ ವಿಧಾನ:

  1. ಒಂದು ಒಣ ಬಟ್ಟೆಯಿಂದ ಮಾವಿನ ಮಿಡಿಯನ್ನು ಒರೆಸಿಕೊಳ್ಳಿ. ಹಾಗೂ ನೀರಿನ ಪಸೆ ಇಲ್ಲದ ಒಂದು ಗಾಜಿನ ಬಾಟಲಿ ಅಥವಾ ಪಿಂಗಾಣಿ ಜಾಡಿಯನ್ನು  ತೆಗೆದುಕೊಳ್ಳಿ. 
  2. ಈಗ ನಡುವೆ ಉಪ್ಪಿನ ಪದರ ಬರುವಂತೆ ಬಾಟಲಿ ಅಥವಾ ಜಾಡಿಯಲ್ಲಿ ಮಾವಿನ ಮಿಡಿ ಮತ್ತು ಉಪ್ಪನ್ನು ಹಾಕಿ.  ನೀವು ಬೇಕಾದಷ್ಟು ಉಪ್ಪನ್ನು ಬಳಸಬಹುದು. ಏಕೆಂದರೆ ಹೆಚ್ಚಿನ ಉಪ್ಪು ಬಾಟಲಿಯ ತಳದಲ್ಲಿ ಹಾಗೆ ಉಳಿಯುತ್ತದೆ. ಮುಚ್ಚಳವನ್ನು ಮುಚ್ಚಿ  ಸುಮಾರು 10 - 15 ದಿನಗಳ ಕಾಲ ಇಡಿ. 
  3. 10 - 15 ದಿನಗಳ ನಂತರ ಮಾವಿನ ಮಿಡಿ ಉಪ್ಪು ನೀರು ಬಿಟ್ಟಿರುವುದನ್ನು ನೀವು ನೋಡಬಹುದು. ಹೆಚ್ಚುವರಿ ಉಪ್ಪು  ತಳದಲ್ಲಿ ಶೇಕರಣೆಯಾಗಿರುವುದನ್ನು ಸಹ ನೋಡಬಹುದು. 
  4. ಈಗ ಮಾವಿನ ಮಿಡಿ ಮತ್ತು ಉಪ್ಪು ನೀರನ್ನು ಬೇರ್ಪಡಿಸಿ. ಕೆಲವು ಮಾವಿನ ಮಿಡಿಗಳು ಹೆಚ್ಚು ನೀರು ಬಿಟ್ಟರೆ ಕೆಲವು ಮಾವಿನ ಮಿಡಿಗಳು ಹೆಚ್ಚು ನೀರು ಬಿಡುವುದಿಲ್ಲ.  
  5. ಈಗ ಬೇರ್ಪಡಿಸಿದ ಉಪ್ಪು ನೀರನ್ನು ಕುದಿಸಿ. ತಣಿಯಲು ಬಿಡಿ. 
  6. ಈಗ ಅಳತೆಯ ಪ್ರಕಾರ ಕೆಂಪು ಮೆಣಸಿನಕಾಯಿ ಅಥವಾ ಮೆಣಸಿನ ಪುಡಿ, ಸಾಸಿವೆ, ಅರಿಶಿನ, ಕರಿಮೆಣಸು ಮತ್ತು ಇಂಗು ತೆಗೆದುಕೊಳ್ಳಿ. ದಯವಿಟ್ಟು ಗಮನಿಸಿ ಕರಿಮೆಣಸು ಬೇಕಾದಲ್ಲಿ ಮಾತ್ರ ಹಾಕಿ.
  7. ಒಮ್ಮೆ ಉಪ್ಪು ನೀರು ತಣ್ಣಗಾದ  ಕೂಡಲೇ ಆ ಉಪ್ಪು ನೀರನ್ನು ಬಳಸಿಕೊಂಡು ಮೇಲೆ ಹೇಳಿದ ಪದಾರ್ಥಗಳನ್ನು ಅರೆದು ಕೊಳ್ಳಿ. ನೀವು ಕೇವಲ ಕುದಿಸಿ ಆರಿಸಿದ ಉಪ್ಪು ನೀರನ್ನು  ಬಳಸಬೇಕು. ಉಪ್ಪು ನೀರು ಜಾಸ್ತಿ ಎನಿಸಿದರೆ ಚೆಲ್ಲಬಹುದು ಅಥವಾ  ಕಡಿಮೆ ಆದಲ್ಲಿ ಸ್ವಲ್ಪ ಉಪ್ಪು ಮತ್ತು ನೀರನ್ನು ಕುದಿಸಿ ಆರಿಸಿ ಬಳಸಬಹುದು.  
  8. ಈಗ ತೆಗೆದಿಟ್ಟ ಮಾವಿನ ಮಿಡಿಗೆ ಅರೆದ ಮಸಾಲೆ ಸೇರಿಸಿ. ಮುಚ್ಚಳವನ್ನು ಮುಚ್ಚಿ ಮತ್ತು ಒಂದು ತಿಂಗಳು ಅಥವಾ ಎರಡು ತಿಂಗಳುಗಳ ಕಾಲ ಹಾಗೇ ಬಿಡಿ. ಗಮನಿಸಿ ಗಾಳಿಯಾಡಬಾರದು. 
  9. ಉಪಯೋಗಿಸುವ ಮೊದಲು ಮಾವಿನ ಮಿಡಿಯನ್ನು ಸಣ್ಣ ತುಂಡು ಗಳಾಗಿ ಕತ್ತರಿಸಿ ಕೊಳ್ಳಿ. ಕತ್ತರಿಸಿದ ಮೇಲೆ ಒಂದೆರಡು ದಿನಗಳ ನಂತರ ಬಳಸಿ. ಹಳೆಯ ಉಪ್ಪಿನಕಾಯಿ ಆದಲ್ಲಿ ಕತ್ತರಿಸಿದ ಕೂಡಲೇ ಬಳಸಬಹುದು.


ಸೋಮವಾರ, ಮಾರ್ಚ್ 14, 2016

Chitranna recipe in Kannada | ಚಿತ್ರಾನ್ನ ಮಾಡುವ ವಿಧಾನ | ಮಲೆನಾಡಿನ ಕಾಯಿ-ಸಾಸುವೆ ಚಿತ್ರಾನ್ನ


ಮಲೆನಾಡಿನ ಕಾಯಿ-ಸಾಸುವೆ ಚಿತ್ರಾನ್ನ 

ಮಲೆನಾಡು ಶೈಲಿಯ ಕಾಯಿ-ಸಾಸುವೆ ಚಿತ್ರಾನ್ನ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಕರ್ನಾಟಕದಲ್ಲಿ ಮುಖ್ಯವಾಗಿ ನಿಂಬೆಹಣ್ಣು ಬಳಸಿಕೊಂಡು ಎರಡು ರೀತಿಯ ಚಿತ್ರಾನ್ನ ತಯಾರಿಸಲಾಗುತ್ತದೆ. ಒಂದು ಈರುಳ್ಳಿ ಹಾಕಿ ಮಾಡುವ ಚಿತ್ರಾನ್ನ ಇನ್ನೊಂದು ಈರುಳ್ಳಿ ಹಾಕದೇ ಮಾಡುವ ಚಿತ್ರಾನ್ನ. ಈಗ ಇಲ್ಲಿ ವಿವರಿಸುವ ಚಿತ್ರಾನ್ನ ಈರುಳ್ಳಿ ಇಲ್ಲದೆ ಮಾಡುವುದಾಗಿದೆ. ಈ ರೀತಿಯ ಚಿತ್ರಾನ್ನ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಆಚರಣೆಯಲ್ಲಿದೆ.
ನನ್ನ ಪ್ರಕಾರ ಈ ರೀತಿಯ ಚಿತ್ರಾನ್ನ ಹೆಚ್ಚು ರುಚಿಕರವಾಗಿರುತ್ತದೆ. ಇದನ್ನು ನಾನು ಕನಿಷ್ಠ ವಾರಕ್ಕೊಮ್ಮೆಯಾದರೂ ತಯಾರಿಸುತ್ತೇನೆ. ಕಡಲೆಕಾಯಿ ಮತ್ತು ನಿಂಬೆಹಣ್ಣು ಉಪಯೋಗಿಸಿ ಮಾಡುವ ಈ ಚಿತ್ರಾನ್ನ ಬಹಳ ಆರೋಗ್ಯಕರ ಎನ್ನಲಾಗಿದೆ. ಯಾವುದಕ್ಕೂ ನೀವು ಒಮ್ಮೆ ಮಾಡಿ ನೋಡಿ.

ಚಿತ್ರಾನ್ನ ವಿಡಿಯೋ

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ: 30 ನಿಮಿಷ
ಪ್ರಮಾಣ: 4 ಜನರಿಗೆ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 120 ಎಂ ಎಲ್)
  1. 2 ಕಪ್ ಅಕ್ಕಿ (ಸೋನಾ ಮಸೂರಿ)
  2. 1 ಕಪ್ ತೆಂಗಿನ ತುರಿ
  3. 2 - 4 ಹಸಿರು ಮೆಣಸಿನಕಾಯಿಗಳು
  4. 1 ಟೀಸ್ಪೂನ್ ಸಾಸಿವೆ
  5. 2 ಟೇಬಲ್ ಸ್ಪೂನ್ ಶೇಂಗಾ / ಕಡಲೆಕಾಯಿ
  6. 2 ಟೀಸ್ಪೂನ್ ಉದ್ದಿನ ಬೇಳೆ
  7. 2 ಟೀಸ್ಪೂನ್ ಕಡ್ಲೆಬೇಳೆ
  8. 2 ಟೀಸ್ಪೂನ್ ಉಪ್ಪು (ಅಥವಾ ನಿಮ್ಮ ರುಚಿ ಪ್ರಕಾರ)
  9. 5 - 6 ಕರಿಬೇವಿನ ಎಲೆ
  10. 2 ಟೀ ಚಮಚ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು
  11. 1/4 ಟೀಸ್ಪೂನ್ ಅರಿಶಿನ ಪುಡಿ
  12. 1 ದೊಡ್ಡ ನಿಂಬೆ ಹಣ್ಣು
  13. 4 ಟೇಬಲ್ ಸ್ಪೂನ್ ಅಡುಗೆ ಎಣ್ಣೆ 


ಚಿತ್ರಾನ್ನ ಮಾಡುವ ವಿಧಾನ: 
  1. ಒಂದು ಕುಕ್ಕರ್ ನಲ್ಲಿ  2 ಕಪ್ ಅಕ್ಕಿ ತೆಗೆದುಕೊಂಡು ತೊಳೆಯಿರಿ. ಅನ್ನ ಮಾಡಲು ಬೇಕಾದಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ದಯವಿಟ್ಟು ಗಮನಿಸಿ ಈ ರೀತಿಯ ಚಿತ್ರಾನ್ನ ಮಾಡಲು ಅನ್ನ ಸ್ವಲ್ಪ ಮೆತ್ತಗೆ ಬೆಂದಿರಬೇಕು. ಬೇಕಾದಲ್ಲಿ ಅಕ್ಕಿಯೊಂದಿಗೆ ನೆನೆಸಿದ ಬಟಾಣಿ ಕಾಳನ್ನು ಸೇರಿಸಿ ಬೇಯಿಸಿಕೊಳ್ಳಿ.
  2. ಅನ್ನ ಬೇಯುವ ಸಮಯದಲ್ಲಿ ಚಿತ್ರಾನ್ನಕ್ಕೆ ಒಗ್ಗರಣೆ ಮಾಡಿಕೊಳ್ಳೋಣ. ಒಗ್ಗರಣೆ ಪ್ರಾರಂಭಿಸುವ ಮೊದಲು, ಒಂದು ಮಿಕ್ಸಿ ಜಾರಿನಲ್ಲಿ 1 ಕಪ್ ತೆಂಗಿನ ತುರಿ, 2 ಹಸಿರು ಮೆಣಸಿನಕಾಯಿ ಮತ್ತು 1/2 ಚಮಚ ಸಾಸಿವೆ ಹಾಕಿ.
  3. ಅದನ್ನು ನೀರು ಹಾಕದೇ ಪುಡಿ ಮಾಡಿ ಪಕ್ಕಕ್ಕಿಡಿ. ಇದನ್ನು ಒಗ್ಗರಣೆ ಮಾಡುವಾಗ ಮುಂದೆ ಉಪಯೋಗಿಸಲಾಗುತ್ತದೆ.
  4. ಈಗ ಒಂದು ದೊಡ್ಡ ಬಾಣಲೆಯನ್ನು ತೆಗೆದುಕೊಂಡು ಎಣ್ಣೆ ಹಾಕಿ ಕಾಯಲು ಇಡಿ. ಮೊದಲಿಗೆ ಶೇಂಗಾ ಅಥವಾ ಕಡಲೆಕಾಯಿಯನ್ನು ಹಾಕಿ.
  5. ಕಡಲೆಕಾಯಿ ಸ್ವಲ್ಪ ಕಾದು ಸಿಡಿಯಲು ಪ್ರಾರಂಭಿಸಿದ ಕೂಡಲೇ ಸಾಸಿವೆ, ಕಡ್ಲೆಬೇಳೆ ಮತ್ತು ಉದ್ದಿನ ಬೇಳೆಯನ್ನು ಸೇರಿಸಿ.
  6. ಸಾಸಿವೆ ಸಿಡಿದ ಕೂಡಲೇ ಅರಿಶಿನ ಪುಡಿ ಮತ್ತು ಕರಿಬೇವು ಸೇರಿಸಿ. ಈ ಹಂತದಲ್ಲಿ ಸ್ಟೋವ್ ಆಫ್ ಮಾಡಿ.
  7. ನಂತರ ಪುಡಿಮಾಡಿದ ತೆಂಗಿನ ತುರಿ, ಸಾಸಿವೆ ಮತ್ತು ಹಸಿಮೆಣಸಿನ ಮಿಶ್ರಣವನ್ನು ಸೇರಿಸಿ. ಚೆನ್ನಾಗಿ ಕಲಸಿ.
  8. ಕೂಡಲೇ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಕಲಸಿ.
  9. ಕೊನೆಯಲ್ಲಿ ದೊಡ್ಡ ರಸಭರಿತವಾದ ನಿಂಬೆಹಣ್ಣಿನಿಂದ ತೆಗೆದ  ರಸವನ್ನು ಸೇರಿಸಿ. ಗಮನಿಸಿ ಈ ರೀತಿಯ ಚಿತ್ರಾನ್ನವು ಸ್ವಲ್ಪ ಹುಳಿ-ಹುಳಿಯಾಗಿರಬೇಕು. 
  10. ನಂತರ ಬೇಯಿಸಿದ ಅನ್ನ ಸೇರಿಸಿ.
  11. ಎಚ್ಚರಿಕೆಯಿಂದ ಒಂದು ಚಪ್ಪಟೆಯಾದ ಸಟ್ಟುಗ ಬಳಸಿ ಚಿತ್ರಾನ್ನವನ್ನು ಕಲಸಿ.
  12. ಈರುಳ್ಳಿ ಇಲ್ಲದೆ ಮಾಡಿದ ರುಚಿಕರ ಕಾಯಿ ಸಾಸುವೆ ನಿಂಬೆಹಣ್ಣಿನ ಚಿತ್ರಾನ್ನ ಸಿದ್ಧವಾಗಿದೆ. ಬಿಸಿ-ಬಿಸಿ ಯಾಗಿರುವಾಗಲೇ ಬಡಿಸಿ.


To read more and to see step by step pictures click here (ಈ ಅಡುಗೆ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮಾರ್ಚ್ 9, 2016

Palak soup recipe in Kannada | ಪಾಲಕ್ ಸೂಪ್ ಮಾಡುವ ವಿಧಾನ

Palak soup recipe in Kannada | ಪಾಲಕ್ ಸೂಪ್ ಮಾಡುವ ವಿಧಾನ


ಪಾಲಕ್ ಸೂಪ್ ಒಂದು ಆರೋಗ್ಯಕರ ಅಡುಗೆಯಾಗಿದ್ದು ಬಹಳ ರುಚಿಕರವಾಗಿರುತ್ತದೆ. ಈ ಪಾಲಕ್ ಸೂಪನ್ನು ಪಾಲಕ್ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಟೊಮಾಟೊ ಮತ್ತು ಹಾಲನ್ನು ಉಪಯೋಗಿಸಿ ಮಾಡಲಾಗುತ್ತದೆ. ಇದು ಮಕ್ಕಳಿಗೆ ಬಹಳ ಪ್ರಿಯವಾದ ಅಡುಗೆಯಾಗಿದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮತ್ತು ಕಬ್ಬಿಣಾಂಶಗಳು ಹೇರಳವಾಗಿದೆ. ಅಲ್ಲದೆ ಅನೇಕ ಔಷಧೀಯ ಗುಣಗಳನ್ನೂ ಹೊಂದಿದೆ. ಹಾಗಾಗಿ ಪಾಲಕ್ ಸೊಪ್ಪಿನ ನಿಯಮಿತ ಸೇವನೆ ಮಾಡಲು ಮರೆಯದಿರಿ.

ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 20 ನಿಮಿಷ
ಪ್ರಮಾಣ: ಇಬ್ಬರಿಗೆ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 250 ಎಂಎಲ್ )
  1. 1/2 ಕಟ್ಟು ಪಾಲಕ್ ಸೊಪ್ಪು
  2. ಎಸಳು ಬೆಳ್ಳುಳ್ಳಿ
  3. 1 ಈರುಳ್ಳಿ
  4. 1 ದೊಡ್ಡ ಟೊಮೆಟೊ
  5. 2 ಟೀಸ್ಪೂನ್ ಬೆಣ್ಣೆ
  6. 1/4 ಟೀಸ್ಪೂನ್ ಕರಿಮೆಣಸು (ಅಥವಾ ನಿಮ್ಮ ರುಚಿ ಪ್ರಕಾರ)
  7. 1/4 ಟೀಸ್ಪೂನ್ ಉಪ್ಪು ( ಅಥವಾ ನಿಮ್ಮ ರುಚಿ ಪ್ರಕಾರ)
  8. 1 ಕಪ್ ನೀರು 
  9. 1/2 ಕಪ್ ಹಾಲು


ಪಾಲಕ್ ಸೂಪ್ ಮಾಡುವ ವಿಧಾನ:

  1. ಪಾಲಕ್ ಸೊಪ್ಪನ್ನು ತೊಳೆದು ಕತ್ತರಿಸಿ. ಅಲ್ಲದೆ ಬೆಳ್ಳುಳ್ಳಿ, ಈರುಳ್ಳಿ ಮತ್ತು ಟೊಮೆಟೊಗಳನ್ನು ಸಹ ಕತ್ತರಿಸಿಟ್ಟುಕೊಳ್ಳಿ. ಮೊದಲಿಗೆ ಪಾಲಕ್ ಸೂಪ್ ಮಾಡಲು ಒಂದು ಬಾಣಲೆಯಲ್ಲಿ 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿಮಾಡಿ.
  2. ಬೆಣ್ಣೆ ಕರಗಿದ ಕೂಡಲೇ ಕತ್ತರಿಸಿದ ಬೆಳ್ಳುಳ್ಳಿ ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಸುಡದಂತೆ ನೋಡಿಕೊಳ್ಳಿ.
  3. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಮಧ್ಯಮ ಜ್ವಾಲೆಯಲ್ಲಿ ಹುರಿಯಿರಿ.
  4. ಈಗ ಅದೇ ಬಾಣಲೆಗೆ ಕತ್ತರಿಸಿದ ಟೊಮೆಟೊ ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಪುನಃ ಹುರಿಯಿರಿ.
  5. ಟೊಮೆಟೊ ಮೆತ್ತಗಾದ ಕೂಡಲೇ ಕತ್ತರಿಸಿದ ಪಾಲಕ್ ಸೊಪ್ಪನ್ನು ಹಾಕಿ  ಹಸಿ ವಾಸನೆ ಹೋಗುವವರೆಗೆ ಹುರಿಯಿರಿ.
  6. ಉಪ್ಪು ಮತ್ತು ಕರಿ ಮೆಣಸು ಸೇರಿಸಿ, ಒಮ್ಮೆ ಮಗುಚಿ ಸ್ಟೌವ್ ಆಫ್ ಮಾಡಿ. ಹುರಿದ ಪದಾರ್ಥಗಳು ತಣ್ಣಗಾಗುವವರೆಗೆ ಕಾಯಿರಿ.
  7. ಹುರಿದ ಪದಾರ್ಥಗಳು ತಣ್ಣಗಾದ ಕೂಡಲೇ ಅದನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ಅರೆದು ಕೊಳ್ಳಿ.
  8. ಅರೆದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ 1 ಕಪ್ ನೀರು ಸೇರಿಸಿ ಕುದಿಯಲು ಇಡಿ. ನೀರಿನ ಪ್ರಮಾಣವನ್ನು ನಿಮ್ಮ ಇಷ್ಟದ ಪ್ರಕಾರ ಬದಲಾಯಿಸಬಹುದು. ನಿಮಗೆ ಬೇಕಾದಷ್ಟು ದಪ್ಪ ಅಥವಾ ತೆಳುವಾಗುವಷ್ಟು ನೀರು ಸೇರಿಸಿ.
  9. ಸೂಪ್ ಕುದಿಯಲು ಪ್ರಾರಂಭವಾದ ಕೂಡಲೇ 1/2 ಕಪ್ ಹಾಲು ಸೇರಿಸಿ ಪುನಃ  ಒಂದು ಕುದಿ ಬರಿಸಿ.
  10. ಕುದಿಯಲು ಪ್ರಾರಂಭವಾದ ಕೂಡಲೇ ಸ್ಟೋವ್ ಆಫ್ ಮಾಡಿ. ಗಮನಿಸಿ ಹಾಲು ಹಾಕಿದ ಮೇಲೆ ಹೆಚ್ಚು ಸಮಯ ಕುದಿಸ ಬೇಡಿ. ರುಚಿಕರ ಪಾಲಕ್ ಸೂಪನ್ನು ಬಿಸಿಯಾಗಿರುವಾಗಲೇ ಬಡಿಸಿ, ಸವಿದು, ಆನಂದಿಸಿ.




ಗುರುವಾರ, ಮಾರ್ಚ್ 3, 2016

Molake kaalu maduva vidhana in Kannada | ಮೊಳಕೆ ಕಾಳು ಮಾಡುವ ವಿಧಾನ:

ಮೊಳಕೆ ಕಾಳು ಮಾಡುವ ವಿಧಾನ

ಮೊಳಕೆ ಕಾಳು ಮಾಡುವ ವಿಧಾನ:

  1. ಹೆಸರು ಕಾಳನ್ನು ಒಳ್ಳೆಯ ನೀರಿನಲ್ಲಿ ಒಂದೆರಡು ಬಾರಿ ತೊಳೆದು, 5 - 6 ಘಂಟೆಗಳ ಕಾಲ ನೆನೆಸಿಡಿ. ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ನೆನೆಸುತ್ತೇನೆ.
  2. ನೆನೆದ ನಂತರ ನೀರನ್ನು ಬಗ್ಗಿಸಿ ಪುನಃ ಒಮ್ಮೆ ಒಳ್ಳೆಯ ನೀರಿನಲ್ಲಿ ತೊಳೆಯಿರಿ. ನೀರನ್ನು ಸಂಪೂರ್ಣ ಬಗ್ಗಿಸಿ ತೆಗೆಯಿರಿ.
  3. ಈಗ ಒಂದು ಶುದ್ಧವಾದ ಬಟ್ಟೆಯಲ್ಲಿ ನೆನೆಸಿದ ಕಾಳನ್ನು ಸುರಿಯಿರಿ.
  4. ಕಾಳನ್ನು ಬಟ್ಟೆಯಲ್ಲಿ ಗಂಟು ಕಟ್ಟಿ ಶುದ್ಧವಾಗಿರುವ ಪಾತ್ರೆಯೊಳಗೆ ಇಡಿ.
  5. ಮೇಲಿನಿಂದ ಒಂದು ಕಲ್ಲು ಅಥವಾ ಇನ್ನಾವುದೇ ಭಾರದ ವಸ್ತುವೊಂದನ್ನು ಇಡಿ. ಹೀಗೆ ಮಾಡುವುದರಿಂದ ಮೊಳಕೆ ಚೆನ್ನಾಗಿ ಬರುತ್ತದೆ.
  6. ಸುಮಾರು 12 - 14 ಘಂಟೆಗಳ ನಂತರ ಬಟ್ಟೆ ಬಿಡಿಸಿ ನೋಡಿದಲ್ಲಿ ಕಾಳು ಚೆನ್ನಾಗಿ ಮೊಳಕೆಯೊಡೆಡಿರುತ್ತದೆ. ನಿಮಗೆ ಉದ್ದ ಮೊಳಕೆ ಬೇಕಾದಲ್ಲಿ ಹೆಚ್ಚು ಸಮಯ ಇಡಿ. ಈಗ ಈ ಮೊಳಕೆ ಕಾಳನ್ನು ಪಲ್ಯ, ಕೋಸಂಬರಿ ಅಥವಾ ಇನ್ನಾವುದೇ ಅಡುಗೆಯಲ್ಲಿ ಉಪಯೋಗಿಸಿ. 
  7. ಒಂದು ಸುಲಭ ಕೋಸಂಬರಿ ಮಾಡಲು, ಒಂದು ಸಣ್ಣ ಸೌತೆಕಾಯಿ ಮತ್ತು ಒಂದು ಕ್ಯಾರೆಟ್ ತುರಿದುಕೊಳ್ಳಿ. ಒಂದು ಟೊಮ್ಯಾಟೋ ವನ್ನು ಸಣ್ಣಗೆ ಹೆಚ್ಚಿ ಕೊಳ್ಳಿ. ಸ್ವಲ್ಪ ಉಪ್ಪು, ಕಾಳು ಮೆಣಸಿನ ಪುಡಿ ಮತ್ತು ಲಿಂಬೆಹಣ್ಣಿನ ರಸವನ್ನು ಸಿದ್ಧ ಮಾಡಿಟ್ಟು ಕೊಳ್ಳಿ.
  8. ಈಗ ಎಲ್ಲ ಪದಾರ್ಥಗಳನ್ನು 1 ಕಪ್ ಹೆಸರು ಕಾಳು ಮೊಳಕೆಯೊಂದಿಗೆ ಬೆರೆಸಿ ಸವಿಯಿರಿ.


To see step by step pictures click here (ಹಂತ ಹಂತವಾದ ಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ)

ಬುಧವಾರ, ಮಾರ್ಚ್ 2, 2016

Stuffed menasinakai bajji or Mirchi bajji | ತುಂಬಿದ ಮೆಣಸಿನಕಾಯಿ ಬಜ್ಜಿ ಅಥವಾ ಬೋಂಡಾ


ತುಂಬಿದ ಮೆಣಸಿನಕಾಯಿ ಬಜ್ಜಿ ಅಥವಾ ಬೋಂಡಾ

ತುಂಬಿದ ಮೆಣಸಿನಕಾಯಿ ಬಜ್ಜಿ ಅಥವಾ ಮೆಣಸಿನಕಾಯಿ ಬೋಂಡಾ ಮಾಡುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ತುಂಬಿದ ಮೆಣಸಿನಕಾಯಿ ಬಜ್ಜಿ ಸಾಧಾರಣ ಬಜ್ಜಿಗಿಂತ ವಿಭಿನ್ನವಾಗಿದ್ದು, ಬಜ್ಜಿ ಕಾಯಿಸುವ ಮೊದಲು ಮತ್ತು ಆಮೇಲೆ ಮಸಾಲೆಯನ್ನು ತುಂಬಲಾಗುತ್ತದೆ. ಮೊದಲಿಗೆ ಜೀರಿಗೆ ಮತ್ತು ಉಪ್ಪು ಹಾಗೂ ಕಾಯಿಸಿದ ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ತುಂಬಿಸಲಾಗುತ್ತದೆ.
ಈ ಬಜ್ಜಿ ಹೊರಗಿನಿಂದ ಗರಿಗರಿ ಇದ್ದು ಒಳಗೆ ಮೃದುವಾಗಿರುತ್ತದೆ.  ಹಾಗೂ ದಪ್ಪನಾದ ಹಿಟ್ಟು ಒಳಗೆ ಮತ್ತು ಹೊರಗೆ ಅಂಟಿಕೊಂಡಿರುತ್ತದೆ. ಈ ರುಚಿಕರವಾದ ಬಜ್ಜಿಯನ್ನು ಮಾಡಿನೋಡಿ.


ತಯಾರಿ ಸಮಯ: 10 ನಿಮಿಷ
ಅಡುಗೆ ಸಮಯ : 10 ನಿಮಿಷ
ಪ್ರಮಾಣ: 8 ಬಜ್ಜಿ

ಬೇಕಾಗುವ ಪದಾರ್ಥಗಳು:( ಅಳತೆ ಕಪ್ = 120 ಎಂಎಲ್ )

  1. 3 ಕಪ್ ಕಡ್ಲೆಹಿಟ್ಟು
  2. 3 ಟೇಬಲ್ ಸ್ಪೂನ್ ಅಕ್ಕಿ ಹಿಟ್ಟು
  3. 8 ಬಜ್ಜಿ ಮೆಣಸಿನಕಾಯಿ
  4. 1/2 - 1 ಟೀಸ್ಪೂನ್ ಅಚ್ಚ ಖಾರದ ಪುಡಿ
  5. 2 ಟೀಸ್ಪೂನ್ ಜಜ್ಜಿದ ಜೀರಿಗೆ ಅಥವಾ ಜೀರಿಗೆ ಪುಡಿ
  6. 1/4 ಟೀಸ್ಪೂನ್ ಇಂಗು
  7. ಚಿಟಿಕೆ ಅಡುಗೆ ಸೋಡಾ
  8. ಎಣ್ಣೆ ಬಜ್ಜಿ ಕಾಯಿಸಲು
  9. ಉಪ್ಪು ರುಚಿಗೆ ತಕ್ಕಷ್ಟು.


ತುಂಬಲು ಬೇಕಾದ ಪದಾರ್ಥಗಳು:
  1. 1 ಸಣ್ಣದಾಗಿ ಕೊಚ್ಚಿದ ಈರುಳ್ಳಿ (ನೀವು ತುರಿದ ಕ್ಯಾರೆಟ್ ಮತ್ತು ಮೊಳಕೆ ಕಾಳನ್ನು ಸೇರಿಸಬಹುದು)
  2. 2 ಟೀ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು
  3. 1 ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ / 1/2 ಚಮಚ ಅಚ್ಚ ಖಾರದ ಪುಡಿ
  4. 1/4 ಟೀಸ್ಪೂನ್ ಚಾಟ್ ಮಸಾಲಾ (ಬೇಕಾದಲ್ಲಿ)
  5. ಉಪ್ಪು ರುಚಿಗೆ ತಕ್ಕಷ್ಟು.

ತುಂಬಿದ ಮೆಣಸಿನಕಾಯಿ ಬಜ್ಜಿ ಮಾಡುವ ವಿಧಾನ:

  1. ಮೆಣಸಿನ ಕಾಯಿಗಳನ್ನು ತೊಳೆದು, ಉದ್ದವಾಗಿ ಸೀಳಿ ಬೀಜ ತೆಗೆಯಿರಿ.
  2. ಒಂದು ಬಟ್ಟಲಿನಲ್ಲಿ 2 ಚಮಚ ಜಜ್ಜಿದ ಅಥವಾ ಪುಡಿಮಾಡಿದ ಜೀರಿಗೆ ಮತ್ತು 1 ಚಮಚ ಉಪ್ಪು ತೆಗೆದುಕೊಂಡು ಕಲಸಿ.
  3. ಈಗ ಸುಮಾರು 1/4 ಚಮಚದಷ್ಟು ಜೀರಿಗೆ ಮತ್ತು ಉಪ್ಪಿನ ಮಿಶ್ರಣವನ್ನು ಸೀಳಿದ ಮೆಣಸಿನಕಾಯಿಯೊಳಗೆ ಹಚ್ಚಿ.
  4. ಒಂದು ಪಾತ್ರೆಯಲ್ಲಿ ಕಡ್ಲೆಹಿಟ್ಟು, ಅಕ್ಕಿಹಿಟ್ಟು, ಅಚ್ಚಖಾರದ ಪುಡಿ, ಇಂಗು, ಸೋಡಾ ಮತ್ತು ಉಪ್ಪನ್ನು ಹಾಕಿ. ನೀರು ಹಾಕಿ ದಪ್ಪಗಿನ ಹಿಟ್ಟು ಸಿದ್ಧಪಡಿಸಿಕೊಳ್ಳಿ. ಹಿಟ್ಟು ಇಡ್ಲಿ ಹಿಟ್ಟಿನಷ್ಟು ದಪ್ಪವಾಗಿರಲಿ. 
  5. ತುಂಬಿದ ಮೆಣಸಿನಕಾಯಿ ಬಜ್ಜಿಯಲ್ಲಿ ದಪ್ಪನಾದ ಹಿಟ್ಟು ಅಂಟಿಕೊಂಡಿರಬೇಕು. ಹಾಗಾಗಿ ಬಜ್ಜಿ ಕಾಯಿಸುವಾಗ ಹಿಟ್ಟು ತೆಳ್ಳಗೆ ಎನಿಸಿದಲ್ಲಿ ಹಿಟ್ಟನ್ನು ಸರಿಮಾಡಿಕೊಳ್ಳಿ. 
  6. ಸಿದ್ಧ ಪಡಿಸಿದ ಹಿಟ್ಟಿನಲ್ಲಿ ಮೆಣಸಿನಕಾಯಿಗಳನ್ನು ಒಂದೊಂದಾಗಿ ಅದ್ದಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಾಯಿಸಿ. ಮೆಣಸಿನಕಾಯಿ ಒಳಗೂ ಸಹ ಹಿಟ್ಟು ತುಂಬಿರಬೇಕು.
  7. ಈಗ ಕಾಯಿಸಿದ ಬಜ್ಜಿಗಳನ್ನು ಪುನಃ ಸೀಳಿ, ಅದರೊಳಗೆ ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಮತ್ತು ಚಾಟ್ ಮಸಾಲದ ಮಿಶ್ರಣವನ್ನು ತುಂಬಿಸಿ. ಹಸಿರು ಮೆಣಸಿನಕಾಯಿಯ ಬದಲಾಗಿ ಅಚ್ಚಖಾರದ ಪುಡಿಯನ್ನೂ ಉಪಯೋಗಿಸಬಹುದು. ಚಾಟ್ ಮಸಾಲಾ ಬೇಕಾದಲ್ಲಿ ಮಾತ್ರ ಸೇರಿಸಿ. 2 ಭಾಗಗಳಾಗಿ ಕತ್ತರಿಸಿ ಬಿಸಿ ಚಹಾದೊಂದಿಗೆ ಬಡಿಸಿ.
davanagere menasinakai or mirchi bajji recipe
Related Posts Plugin for WordPress, Blogger...